
ನಮ್ಮ ನೇಚರ್ ಕ್ಲಬ್ನಿಂದ ಹೊಯ್ಸಳ ಮೂಲಸ್ಥಾನದಲ್ಲಿ ಶ್ರಮದಾನ ಕಾರ್ಯಕ್ರಮ ಮಾಡಲು ಯೋಜಿಸಿದ್ದೆವು. ಸಂಸ್ಥೆಯ ಹಿರಿಯ ಸದಸ್ಯರಾಗಿದ್ದ ತೇಜಸ್ವಿಯವರಿಂದ ಕೆಲ ಸಲಹೆ ಪಡೆಯಲು ರಮೇಶ್ಚಂದ್ರ ದತ್ತರನ್ನು ಕರೆದುಕೊಂಡು ನನ್ನ ಸ್ಕೂಟರ್ನಲ್ಲಿ ತೇಜಸ್ವಿಯವರ ಮನೆಗೆ ಸಂಜೆ ನಾಲ್ಕರ ಸುಮಾರಿಗೆ ಹೋದೆ. ಕರೆಯದೇ ಬಂದ ನಮ್ಮನ್ನು`ನಕ್ಷತ್ರಿಕ ಧನಂಜಯ ಜೊತೆಗೆ ದತ್ತನ್ನ ಬೇರೆ ಕರ್ಕೊಂಡು ಬಂದಿದಾನೆ’ ಎಂದುಕೊಳ್ಳುತ್ತಲೇ `ಬನ್ರಯ್ಯಾ ಏನ್ ಸಮಾಚಾರ’ ಎಂದು ಕರೆದು ಕೂರಿಸಿದರು.
`ಏನಯ್ಯಾ ಸಮಾಚಾರ’ ಎಂದರೆ ಬಂದ ವಿಷಯವನ್ನು ಚಕಾಚಕ್ ಎಂದು ಹೇಳಿ ಮುಗಿಸು ಎಂದರ್ಥ. ಲಂಟಾನದ ನಡುವೆ ಹುದುಗಿ ಹೋಗಿ ಕಣ್ಮರೆಯಾದಂತಿದ್ದ ಕರಿಕಲ್ಲಿನ ದೇವಾಲಯದ ಸುತ್ತಲೂ ಶ್ರಮದಾನ ಮಾಡುವ ವಿಚಾರ ಹೇಳಿ ಮಾತನಾಡುತ್ತಿದ್ದಾಗ ಅದು ಪುರಾತತ್ವ ಇಲಾಖೆಗೆ ಸೇರಿದ್ದು, ಅಲ್ಲಿಯ ಡೂಸ್ ಮತ್ತು ಡೂನಾಟ್ಸ್ ಅನ್ನೆಲ್ಲಾ ಹೇಳಿದರು. ಮುಂದುವರೆದು `ನೀವೇನೋ ಕಾಡುಕಡಿದು ಲಂಟಾನ ಕೊಚ್ಚಿ ಶುಚಿ ಮಾಡ್ತೀರಿ ಸರಿ, ಒಂದು ಫೋಟೋನ ತೆಗೆಸಿಕೊಂಡು ಪೇಪರ್ಗೂ ಹಾಕಿಸಿಕೊಳ್ಳುತ್ತೀರಿ. ನೀವು ಕ್ಲೀನ್ ಮಾಡಿರೋ ಸುದ್ದಿ ಯಾರಾದರೂ ಕಂಟ್ರಾಕ್ಟರ್ಗೆ ತಿಳಿದರೆ ಅವನು ಬಿಲ್ ಮಾಡಿಸ್ಕೋತಾನೇ ಕಣ್ರಯ್ಯಾ, ಹುಷಾರ್!’’ಎಂದರು.
“ಓಹೋ ಸೇತ್ನಾ ಬರೋ ಸಮಯ ಆಯ್ತು” ಎಂದು ನಮ್ಮನ್ನು ಎಚ್ಚರಿಸಿದರು. ಸೇತ್ನಾ ಎಂಬ ವಯೋವೃದ್ಧರು ತೇಜಸ್ವಿಯವರ ಬಹುಕಾಲದ ಗೆಳೆಯರು. ಆಲ್ದೂರು ಸಮೀಪದ ಯಲಗುಡಿಗೆ ಎಂಬಲ್ಲಿ ತೋಟ ಮಾಡಿಕೊಂಡಿರೋ ಇವರು ಈ ಭಾಗದ ಖ್ಯಾತ ಪರಿಸರವಾದಿ. ಹಳೇ ಕಾಲದ ರೋವರ್ ಜೀಪ್ನಲ್ಲಿ ಈಗಲೂ ತಿರುಗುವ ಸೇತ್ನಾರವರನ್ನು ನೋಡಿದರೆ ಗಕ್ಕನೆ ನೆನಪಿಗೆ ಬರುವ ವ್ಯಕ್ತಿತ್ವ ಸಲೀಂ ಆಲಿಯವರದ್ದು. ಅಗಾಧ ಜೀಪಿನಲ್ಲಿ ರೊಯ್ಯನೇ ತಿರುಗುವ ಈ ಪುಟ್ಟ ಶರೀರವನ್ನು ನೋಡಿದರೆ ಅಬ್ಬಾ! ಎಂಥಾ ವಿಭಿನ್ನ ವ್ಯಕ್ತಿತ್ವ ಎಂದು ಅಚ್ಚರಿಯಾಗುತ್ತದೆ.
ಸೇತ್ನಾ ಬಂದೊಡನೇ ನಮ್ಮನ್ನು ಅವರಿಗೆ ಪರಿಚಯಿಸಿದ ತೇಜಸ್ವಿ ನಿಮ್ಮ ಸಮಯ ಆಯಿತು ಎಂಬಂತೆ ನಮ್ಮತ್ತ ನೋಡಿದರು. ನಾವಿಬ್ಬರೂ ಮರು ಮಾತಿಲ್ಲದೆ ಹೊರ ಬಂದೆವು. ಈ ರೀತಿಯ ನೇರ ನಡೆ ನುಡಿಯನ್ನು ರೂಢಿಸಿಕೊಳ್ಳದೇ ಹೋಗಿದ್ದರೆ ತೇಜಸ್ವಿ ಇಷ್ಟೆಲ್ಲಾ ಕೆಲಸ ಮಾಡುವುದಕ್ಕೆ ಆಗುತ್ತಲೇ ಇರಲಿಲ್ಲ. ನಾನು ಯಾವಾಗಲಾದ್ರೂ ಅಪ್ಪಿತಪ್ಪಿ ಫೋನ್ ಮಾಡಿ ಬರಲಾ ಎಂದರೆ, “ಸರಿ ಅಷ್ಟೊತ್ತಿಗೆ ಬಾ, ಇಲ್ಲವೇ ತೀರಾ ಅಗತ್ಯ ಇದ್ದರೆ ಮಾತ್ರ ಬಾರಯ್ಯಾ ಅಲ್ಲಿಂದಿಲ್ಲಿಗೆ ಸುಮ್ಮನೆ ಓಡಾಡಬೇಡ” ಎಂದು ಎಚ್ಚರಿಸುತ್ತಿದ್ದರು.
ಒಮ್ಮೆ ಬೀಡಾಡಿ ದನದಂತೆ ಸೀದಾ ಹೋದೆ. ಜೀನ್ಸ್ ಜೇಬಿಗೆ ಕೈ ಹಾಕಿಕೊಂಡು ಮುಂದಿನ ತೋಟವನ್ನು ಹಾಗೇ ಕಣ್ಣಾಡಿಸುತ್ತಾ ಮನೆ ಮುಂದಿನ ವರಾಂಡದಲ್ಲಿ ನಿಂತಿದ್ದರು. ಆ ದಿನಗಳಲ್ಲಿ ತಮ್ಮ ಛಾಯಾ ಚಿತ್ರಗಳನ್ನು ಗ್ರೀಟಿಂಗ್ ಕಾರ್ಡ್ಗಳನ್ನಾಗಿ ಪ್ರಕಟಿಸಲು ಸಿದ್ಧತೆ ನಡೆಸುತ್ತಿದ್ದರು. ಈಗ ಬರುತ್ತಿರುವ ಗ್ರೀಟಿಂಗ್ ಕಾರ್ಡ್ಗಳಲ್ಲಿ ಕನ್ನಡದ ವರ್ಡಿಂಗ್ಗಳೇ ಇಲ್ಲವಲ್ಲಯ್ಯಾ, ಏನಾದ್ರೂ ಮಾಡಿ ಕನ್ನಡವನ್ನು ಶುಭಾಶಯ ಹೇಳಲು ಬಳಸುವಂತೆ ಮಾಡಬೇಕೆಂದು ಹಿಂದೊಮ್ಮೆ ಹೇಳಿದ್ದರು. “ಒಂದಷ್ಟು ಕಾವ್ಯಾತ್ಮಕವಾಗಿರುವ ಸಾಲುಗಳನ್ನು ಬರೆದುಕೊಂಡು ಬಾರಯ್ಯಾ, ಸಾಧ್ಯವಾದರೆ ಕಂಪ್ಯೂಟರ್ನಲ್ಲಿ ಟೈಪ್ ಮಾಡಿಕೊಂಡೇ ಬಾ’’ ಎಂದಿದ್ದರು. ನಾನು ನನಗೆ ಗೊತ್ತಿರುವ ಕನ್ನಡವನ್ನು ಬಳಸಿ ಒಂದಷ್ಟು ಕಿರು ಕಾವ್ಯಗಳನ್ನು ಹೊಸೆದು ಟೈಪ್ ಮಾಡಿಕೊಂಡಿದ್ದೆ. ನನಗೆ ಆಗ ತಾನೇ ಮದುವೆ ಗೊತ್ತಾಗಿತ್ತು. ನನ್ನ ಹೆಂಡತಿಯಾಗಲಿದ್ದವಳು ನನಗೆ ಒಂದು ಕಾರ್ಡ್ ಕಳುಹಿಸಿದ್ದಳು. ಅಚ್ಚರಿಯೆಂಬಂತೆ ಆ ಕಾರ್ಡ್ನಲ್ಲಿ ಬರಹವೂ ಕನ್ನಡದಲ್ಲಿದ್ದು, ಕಾವ್ಯಾತ್ಮಕವಾಗಿಯೂ ಇತ್ತು. ಅದೇ ಮಾದರಿಯ ಕೆಲ ಕಾರ್ಡ್ಗಳನ್ನು ಹಾಸನದಿಂದ ತರಿಸಿದ್ದೆ. ಆ ಕಾರ್ಡ್ಗಳೊಂದಿಗೆ ನಾನು ಸೃಷ್ಟಿಸಿದ್ದ ಒನ್ಲೈನರ್ಗಳನ್ನು ಫ್ಲಾಪಿಗೆ ಹಾಕಿಕೊಂಡು ತೋರಿಸೋಣವೆಂದು ಹೋಗಿದ್ದೆ.
ನನ್ನನ್ನು ನೋಡಿದವರೇ “ಅಯ್ಯಯ್ಯೊ, ಯಾಕೆ ಬರೊಕ್ಕೆ ಹೋದೆ ಮಾರಾಯ?” ಎಂದರು. ನನಗೆ ಪಿಚ್ಚೆನಿಸಿತು. ”ದೂರ…… ದೂರ….. ಅಲ್ಲೇ ನಿಲ್ಲ್ಲು…… ಏನು ವಿಷಯ ಹೇಳು” ಎಂದರು. ನಾನು ನನ್ನ ಕೈಕಾಲು, ಬಟ್ಟೆಯನ್ನೆಲ್ಲಾ ಎರಡೆರಡು ಬಾರಿ ನೋಡಿಕೊಂಡೆ. ಏನಾದರೂ ಗಲೀಜು ಅಂಟಿಕೊಂಡಿದೆಯಾ? ಯಾಕೆ ಹೀಗೆ ದೂರ ನಿಲ್ಲಲು ಹೇಳುತ್ತಿದ್ದಾರೆ ಎಂದು ಗಲಿಬಿಲಿಯಾಯ್ತು. “ನನಗೆ ವೈರಲ್ ಫಿವರ್ ಮಾರಾಯ, ಎರಡು ದಿನ ಆಯ್ತು, ಔಷಧಿ ತಗೋಳ್ತಿದ್ದೀನಿ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಜ್ವರ. ದೂರದಲ್ಲೇ ಇರು ನಿನಗೆಲ್ಲಾದರೂ ದಾಟಿಕೊಂಡೀತು’’ ಎಂದರು. ಇತರರ ಬಗ್ಗೆ ಎಷ್ಟು ಕಾಳಜಿ ಇತ್ತೆಂಬುದಕ್ಕೆ ಇದೊಂದು ಉದಾಹರಣೆ.
ಮುಂದುವರೆಯುವುದು….