
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸ್ವಯಂ ಚಿಕಿತ್ಸೆ
ಗ್ರೀಟಿಂಗ್ ಕಾರ್ಡ್ಗಳನ್ನು ನೋಡಿ, ಪ್ಲಾಫಿ ಇಸ್ಕೊಂಡು “ಪುರಸೊತ್ತು ಆದಾಗ ನೊಡ್ತೀನಿ. ನಿನ್ನ ಕಂಪ್ಯೂಟರ್ನಲ್ಲಿ ವೈರಸ್ ಏನೂ ಇಲ್ಲಾ ತಾನೇ? ಟೀ ಕುಡಿದು ಹೋಗು” ಎಂದು ಶ್ರೀಮತಿಯವರಿಂದ ಟೀ ಕೊಡಿಸಿ ಹಲಸಿನ ತೊಳೆ ತಿನ್ನಲು ಕೊಟ್ಟು ಕಳುಹಿಸಿದರು. ಆ ಗ್ರೀಟಿಂಗ್ ಕಾರ್ಡ್ಗಳನ್ನು ಪ್ರಕಟಿಸಿದಾಗ ಅವುಗಳಲ್ಲಿ ಕುವೆಂಪುರವರ ಕಾವ್ಯದ ಕೆಲ ಸಾಲುಗಳನ್ನು ಬಳಸಿಕೊಂಡಿದ್ದರು. ಸುಂದರವಾಗಿ ಮೂಡಿಬಂದಿದ್ದ ಆ ಶುಭಾಶಯ ಪತ್ರಗಳು ಈಗ ನಾಡಿನಾದ್ಯಂತ ಪ್ರಸರಣದಲ್ಲಿರುವುದು ಸಂತಸದ ಸಂಗತಿ.
ಅವರ ನಿಧನಾದ ನಂತರ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದ ನನಗೆ, ತೀರಾ ಇತ್ತೀಚೆಗೆ ಅವರ ಶ್ರೀಮತಿಯವರು ನಾನಂದು ಮಾದರಿಗಾಗಿ ನೀಡಿದ್ದ ಗ್ರೀಟಿಂಗ್ ಕಾರ್ಡ್ಗಳ ಲಕೋಟೆಯನ್ನು “ಇವು ನಿಮ್ಮವು ಎಂದು ಕಾಣಿಸುತ್ತೆ” ಎಂದು ಹಿಂದಿರುಗಿಸಿದರು. ಹಾಗಾಗಿ ಇವೆಲ್ಲಾ ನೆನಪಾಯ್ತು.
ನಾನು ಬದುಕುತ್ತಿರೋದೆ ಬೇರೆಯದಕ್ಕೆ ಎಂದು ತನ್ನನ್ನು ವಿಚಲಿತಗೊಳಿಸುತ್ತಿದ್ದವರನ್ನು ಬಾಯಿ ಮುಚ್ಚಿಸುತ್ತಿದ್ದ ತೇಜಸ್ವಿ ಇತರರೂ ತಮ್ಮ ಬದುಕಿನ ಉದ್ದೇಶವನ್ನು ಅರಿಯಲಿ ಎಂಬಂತೆ ಪರೋಕ್ಷವಾಗಿ ಸೂಚಿಸುತ್ತಿದ್ದರು.
ಮಲೆನಾಡಿನಲ್ಲಿ ದೂರ ದೂರದಲ್ಲಿ ವಾಸದ ಮನೆಗಳಿರುವುದು, ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಮತ್ತು ಬೆಳೆ ರಕ್ಷಣೆಗಾಗಿ ಬಂದೂಕನ್ನು ಹೊಂದುವುದು ಅನಿವಾರ್ಯ. ಆದರೆ ಚುನಾವಣೆಗಳ ಸಂದರ್ಭಗಳಲ್ಲಿ ಕಾನೂನಿನ ಪ್ರಕಾರ ಪರವಾನಿಗೆ ಇರುವ ಬಂದೂಕನ್ನು ಪೋಲಿಸ್ ಠಾಣೆಗೆ ಒಪ್ಪಿಸಲು ಸರ್ಕಾರ ಒಂದು ನೋಟಿಸನ್ನು ಜಾರಿಗೊಳಿಸುತ್ತದೆ. ಇತ್ತೀಚೆಗೆ ನಕ್ಸಲ್ ಚಟುವಟಿಕೆಯು ಹೆಚ್ಚಾಗಿರುವುದರಿಂದ ಕಳ್ಳಕಾಕರು, ಕಾಡು ಪ್ರಾಣಿ, ಆಸ್ತಿ ರಕ್ಷಣೆಯ ಜೊತೆಗೆ ನಕ್ಸಲ್ ಭೂತದ ಉಪಶಮನಕ್ಕೆ ಬಂದೂಕು ಅನಿವಾರ್ಯವಾಗಿದೆ.
ಆಯುಧಗಳಿಲ್ಲದವರ ಜೀವ ಮತ್ತು ಆಸ್ತಿಯ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಓಬಿರಾಯನ ಈ ಬಂದೂಕು ಶರಣಾಗತಿಯ ಸರ್ಕಾರಿ ಕಾನೂನಿನ ಬಗ್ಗೆ ತೇಜಸ್ವಿಯವರಿಗೆ ಸಹಮತವಿರಲಿಲ್ಲ. ಈ ಕುರಿತು ನನ್ನೊಡನೆಯೂ ಅನೇಕ ಬಾರಿ ಪ್ರಸ್ತಾಪಿಸಿದ್ದರು. “ಬಂದೂಕಿನ ಮುಖ್ಯ ಉದ್ದೇಶಕ್ಕೇ ವಿರುದ್ಧವಾಗಿ ಕಾನೂನು ಮಾಡಿದ್ದಾರಲ್ಲಯ್ಯ. ಹೋಗ್ಲಿ ಕೋವಿಗಳನ್ನು ಸ್ಟೇಷನ್ನಲ್ಲಿ ಹೇಗೆ ಬಿಸಾಕಿರುತ್ತಾರೆ ನೋಡಿದ್ದೀಯಾ? ನಾವಿಲ್ಲಿ ಉಜ್ಜಿ, ತಿಕ್ಕಿ, ಎಣ್ಣೆ ಮಾಲೀಶ್ ಮಾಡಿ ಒಪ್ಪ ಓರಣವಾಗಿ ಇಟ್ಟುಕೊಂಡಿದ್ರೆ ಅಲ್ಲಿ ಕೊಟ್ಟಿಗೆಯಲ್ಲಿ ಸೌದೆ ಒಟ್ಟಿದಂತೆ ಎಸೆದಿರುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ನಮ್ಮಲ್ಲಿ ಪರವಾನಿಗೆಯಿರುವ ಕೋವಿಗಳಿಗಿಂತ ಪರವಾನಿಗೆಯಿಲ್ಲದ ನಾಡಬಂದೂಕುಗಳೇ ಹೆಚ್ಚು. ಮದ್ದು-ಗುಂಡು ವ್ಯಾಪಾರಸ್ತರ ಸಹಯೋಗದೊಂದಿಗೆ ಈ ಅನಧಿಕೃತ ಕೋವಿ ಮಾಲೀಕರನ್ನು ಸುಲಭವಾಗಿ ಪತ್ತೆ ಹಚ್ಚಿ ವನ್ಯಜೀವಿಗಳ ಶಿಕಾರಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸಂಬಂಧಿತ ಇಲಾಖೆಗಳಿಗೆ ಇಛ್ಛಾಶಕ್ತಿ ಬೇಕಷ್ಟೇ.

ಹ್ಯಾಂಡ್ಪೋಸ್ಟ್ ಮುಖ್ಯರಸ್ತೆಯ ತಿರುವಿನಲ್ಲಿ ಮನೆಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ವಿದೇಶೀ ನಿರ್ಮಿತ ಪ್ರಾಣಿಜನ್ಯ ಹಾಗೂ ಗಿಡಮೂಲಿಕೆಗಳ ಮಸಾಜ್ ತೈಲಗಳನ್ನು ವಿತರಿಸುತಿದ್ದರು. ಹತ್ತಾರು ವರ್ಷಗಳಿಂದ ಅಲ್ಲಿಯೆ ವಾಸವಿದ್ದ ಅವರು ಸಹಜವಾಗಿಯೇ ತೇಜಸ್ವಿಯವರಿಗೆ ಪರಿಚಯವಾಗಿದ್ದರು. ಮೊದಲೇ ಔಷದಗಳ ಪ್ರಯೋಗದಲ್ಲಿ ಸ್ವಯಂಚಿಕಿತ್ಸೆಗೆ ಸದಾ ಸಿದ್ದವಾಗಿರುತಿದ್ದ ತೇಜಸ್ವಿ ಆ ಔಷದಗಳ ಏಜೆಂಟ್ಗೆ ಸುಲಭವಾಗಿಯೇ ಪಿಗ್ಗಿಬಿದ್ದರು. ಹೇಗೂ ದೇಹದ ಹೊರಭಾಗಕ್ಕೆ ತಾನೇ ಮಾಲೀಸ್ ಮಾಡುವುದು, ಹೆಚ್ಚೆಂದರೆ ಅಲರ್ಜಿಯಾದೀತು ಎಂದುಕೊಂಡಿದ್ದವರಿಗೆ ಪರಿಸ್ಥಿತಿ ಬಿಗಡಾಯಿಸಿದ ಮೇಲೆಯೇ ಅಪಾಯದ ಅರಿವಾಯಿತು. ಅವರಿಗಿದ್ದ ಇತರೇ ಆರೋಗ್ಯದ ಸಮಸ್ಯೆಗಳ ಜೊತೆ ಈ ಮಸಾಜ್ ಕಾರಣವೂ ಸೇರಿ ಇಳಿವಯಸ್ಸಿನಲ್ಲಿ ದೇಹಸ್ಥಿತಿ ಹದತಪ್ಪಿತ್ತು.
ಕಾಲಿನ ಮೇಲೆ ಔಷಧಿ ಪ್ರಯೋಗ ಮಾಡಿಕೊಂಡ ತೇಜಸ್ವಿಯವರು ತೀವ್ರವಾದ ಆರೋಗ್ಯದ ಸಮಸ್ಯೆಗೆ ಸಿಲುಕಿಕೊಂಡಿದ್ದರು. ಕುಟುಂಬದವರ, ಸ್ನೇಹಿತರ ಬಲವಂತಕ್ಕೆ ಆಸ್ಪತ್ರೆಗೆ ಸೇರಿ ಚಡಪಡಿಸಿದ ತೇಜಸ್ವಿ ಯಾವಾಗ ಅಲ್ಲಿಂದ ತಪ್ಪಿಸಿಕೊಂಡು ಬಂದೇನೆಂದು ಹಾತೊರೆಯುತ್ತಿದ್ದರು. ಕಾಡಿನ ಮೇಲಿನ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಪಕ್ಷಿಯನ್ನು ಹಿಡಿದು ಪಂಜರದೊಳಗೆ ಸೇರಿಸಿದಂತ ಅನುಭವ ಅವರಿಗೆ.
ಅವರು ಮೈಸೂರಿನ ಆಸ್ಪತ್ರೆಯಿಂದ ವಾಪಾಸ್ಸ್ ಬರುವುದನ್ನೇ ಕಾಯುತ್ತಿದ್ದ ನಾನು ಮಾತನಾಡಿಸಲು ಹೋಗಿದ್ದೆ. ತೀರಾ ಬಳಲಿದವರಂತೆ ಕಂಡು ಬಂದ ಅವರು ಮಾತುಕತೆಯಲ್ಲೂ ಮೆತ್ತಗಾಗಿದ್ದರು. “ಅಂತೂ ಆ ಡಾಕ್ಟ್ರು ಗಳ ಕೈಯಿಂದ ತಪ್ಪಿಸಿಕೊಂಡು ಬಂದೆ ಮಾರಾಯ! ಎಂಥದ್ದೋ ಎಣ್ಣೆಯಿಂದ ಇಷ್ಟೆಲ್ಲಾ ಅವಾಂತರ ಆಯಿತಲ್ಲಾ’’ ಎಂದು ಹಾಸ್ಯ ಮಾಡುತ್ತಲೇ ಮರುಗಿದರು. “ಬಾ ಇಲ್ಲಿ ಮುಟ್ಟಿನೊಡು, ಹೇಗಾಗಿದೆ ಅಂತ” ಎಂದು ಮುಂಗಾಲನ್ನು ಮುಂದಿರಿಸಿದರು. ಚಿಕಿತ್ಸೆಯಿಂದ ಅಗತಾನೇ ಗುಣಮುಖವಾಗುತಿದ್ದು, ಕೊಂಚ ಒರಟೊರಟಾಗಿದ್ದ ಮುಂಗಾಲಿನ ಮೀನಖಂಡವನ್ನು ಕೊಂಚ ಅಳುಕಿನಿಂದಲೇ ಮುಟ್ಟಿದೆ ಈ ವಯಸ್ಸಿನಲ್ಲಿ ತುಂಬಾ ಯಾತನೆಪಟ್ಟರಲ್ಲಾ ಎಂದು ಪಿಚ್ಚೆನಿಸಿತು.
ಮುಂದುವರೆಯುವುದು….