
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿಪುಸ್ತಕದ ಪರಿಷ್ಕೃತ ಆವೃತ್ತಿ)
ಸಂವಾದ
ಮೂಡಿಗೆರೆಯ ಜನರು ನೇರವಾಗಿ ತೇಜಸ್ವಿಯವರೊಡನೆ ಸಂವಾದ ನಡೆಸಲಿ ಎಂದು ನಮ್ಮ ನೇಚರ್ ಕ್ಲಬ್ನಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಕನ್ನಡ ಸಾಹಿತ್ಯ ಪರಿಷತ್ನ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳೂ ಭಾಗವಹಿಸಿದ್ದರು.
ಕಾರ್ಯಕ್ರಮ ಆರಂಭವಾಗುವ ಮುಕ್ಕಾಲು ಗಂಟೆಗೂ ಮುಂಚೆಯೇ ಇಡೀ ಸಭಾಂಗಣ ಕಿಕ್ಕಿರಿದು ತುಂಬಿ ಹೋಗಿತ್ತು. ನಾವು ಆಯೋಜಕರೇ ಒಳ ಹೊರಗೆ ಓಡಾಡಿ ಕಾರ್ಯಕ್ರಮ ವ್ಯವಸ್ಥೆ ಮಾಡಿಕೊಳ್ಳಬೇಕಾದರೆ ಸಾಕುಸಾಕಾಗಿ ಹೋಯ್ತು. ನಮ್ಮ ನಿರೀಕ್ಷೆ ಮೀರಿ ಸೇರಿದ್ದ ಜನರಿಗೆ ಸ್ಥಳಾವಕಾಶವಿಲ್ಲದೇ ಹಲವರು ಸಭಾಂಗಣದ ಹೊರಗೆ ರಸ್ತೆಯಲ್ಲಿ ನಿಂತು ನೋಡಬೇಕಾಯ್ತು.
ಪ್ರಶ್ನೋತ್ತರ ಮಾದರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೇಜಸ್ವಿ ಮಾತನಾಡುತ್ತಾ,
` ಸಾಹಿತ್ಯ ರಚನೆಗೆ ಇಂತದ್ದೆ ಸನ್ನಿವೇಶ-ಪ್ರದೇಶ ಇರಬೇಕೆಂದೇನೂ ಇಲ್ಲ.’
`ಉತ್ತಮ ಸಾಹಿತ್ಯ ಜನಸಾಮಾನ್ಯರಿಗೆ ತಲುಪಬೇಕಿದ್ದಲ್ಲಿ ಅಧಿಕಾರಿಗಳು ಮತ್ತು ಪ್ರಕಾಶಕರ ನಡುವಿನ ಅಪವಿತ್ರ ಮೈತ್ರಿ ಕೊನೆಗೊಳ್ಳಬೇಕು.’
`ಎಲ್ಲಾ ಮಠಗಳು ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳ ಕಛೇರಿಯಂತೆ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿವೆ.’
`ಸಾಹಿತ್ಯ ನನ್ನ ಎಲ್ಲಾ ಅನುಭವಗಳ ಮಿಶ್ರಣ.’
`ಎಲ್ಲಾ ಸರ್ಕಾರಿ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯುತ್ತಮ ಹಾಗೂ ಅನಿವಾರ್ಯ ಅಯ್ಕೆ.’
`ಯಾರನ್ನೋ ಮೆಚ್ಚಿಸಲು ಸತ್ಯಕ್ಕೆ ಅಪಚಾರ ಮಾಡುವುದು ಬೇಡ. ಪ್ರಾಮಾಣಿಕರಾಗಿರೋಣ.’
`ಕಲಾತ್ಮಕ ಸಿನಿಮಾ ಮತ್ತು ಕಮರ್ಷಿಯಲ್ ಸಿನಿಮಾ ಇರುವಂತೆ ಪ್ರಶಸ್ತಿ ಸಾಹಿತ್ಯ ಎಂಬ ಪ್ರಕಾರವೂ ಪ್ರಾರಂಭವಾಗುವ ಅಪಾಯವಿದೆ.’
ʼ ಕಾಲಿಲ್ಲದೇ ನಡೆಯೋ ಹಾವಿಗೆ ಕಿವಿಯಿಲ್ಲದೇ ಕೇಳಲಾಗದೇ?ʼ
ʼಬಂದು ನೋಡುವರಿಗಾಗಿ ಎಲ್ಲಿಯಾ ಯಾವುದೂ ಕಾದು ಕುಳಿತಿರುವುದಿಲ್ಲ.ʼ
ʼಇವನ್ನೆಲ್ಲಾ ನೋಡಲು ಎಲ್ಲಿಗಾದರೂ ಹೋಗಬೇಕಾದ ಅಗತ್ಯವೂ ಇಲ್ಲ. ನಾವು ಎಲ್ಲಿದ್ದೇವೋ ಅಲ್ಲೇ ಅತ್ತಿತ್ತ ಕಣ್ಣುಬಿಟ್ಟು ನೋಡಿದರೆ ಸಾಕು.ʼ
ಹೀಗೆ ಅನೇಕ ವಿಚಾರಗಳ ಬಗ್ಗೆ ನೂರಾರು ಜನರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ ನುಡಿದರು.

“ಯಾಕೆ ಸಾರ್? ಲಕ್ಷ್ಮ ಣ ಗೌಡರು, ಕರೀಗೌಡರು, ಚಂದ್ರೇಗೌಡರು, ಸಿಲ್ವಾ, ಬುಡನ್ ಸಾಹೇಬರು ಎಲ್ಲಾ ನಿಮ್ಮ ಬಗ್ಗೆ ಬಹಳಾ ಮಾತಾಡ್ತಾರೆ.”ಎಂದೆ.
ಕರ್ವಾಲೋ ಆತ್ಮೀಯತೆಯಿಂದ ನನಗೆ ಕೊಂಚ ಸಲುಗೆ ಬಂದಿತ್ತು.
ಕರ್ವಾಲೋ “ಆಹಾ ಹೌದಾ, ಆದರೆ ಅವರು ಯಾರೂ ನನಗೆ ಗೊತ್ತೇ ಇಲ್ಲ ನೋಡಿ. ಯಾವುದೋ ಫಂಕ್ಷನ್ ಗಳಲ್ಲಿ ಮೀಟ್ ಮಾಡರ್ತಾರೆ. ನನಗೆ ಮರೆತೇ ಹೋಗಿರುತ್ತೆ. ನನಗೂ ಅವರಿಗೂ ಒಂದು ಸಮಾನ ಮಾಧ್ಯಮ ಇಲ್ಲೇ ಇಲ್ಲ.”
ದೊಡ್ಡ ದೊಡ್ಡ ಕಾಫಿ ಪ್ಲಾಂಟರುಗಳ ಸಭೆ-ಮದುವೆ ಮುಂತಾದುವುಗಳು ನಡೆದಾಗ ತಮ್ಮ ದೊಡ್ಡಸ್ತಿಕೆಯನ್ನು ಸಂಭಾಷಣೆಯಲ್ಲಿ ತೋರಿಸಿಕೊಳ್ಳಲು ಕರ್ವಾಲೋ ತಮಗೆ ಗೊತ್ತು ಎಂದೋ ಅಥವಾ ಕರ್ವಾಲೋ ಹಾಗೆ ಹೇಳಿದರು, ಹೀಗೆ ಹೇಳಿದರು ಎಂದೋ ಮಾತನಾಡುತ್ತಿದ್ದರು. ಅಂತೂ ಈ ಎಲ್ಲದರಿಂದ ನಾನು ಈ ಕರ್ವಾಲೋ ಎಂದರೆ ಭಾರೀ ದೊಡ್ಡ ಮನುಷ್ಯರೆಂದು ತಿಳಿದಿದ್ದೆ. (ಕರ್ವಾಲೋ – ಪುಟ ೧೩-೧೭).
ಕರ್ವಾಲೋ ಪಾತ್ರವನ್ನು ನಾವು ಸ್ವತಃ ತೇಜಸ್ವಿಯವರಿಗೆ ಸಮೀಕರಿಸಿ ನೋಡಿದಾಗ ಈ ಮೇಲಿನ ಸಾಲುಗಳನ್ನು ಮುಂದಿನ ತಮ್ಮ ಬದುಕಿನಲ್ಲಿ ಸಂಭವಿಸಬಹುದಾದ ಘಟನೆಗಳೆಂದೇ ತಿಳಿದಿದ್ದರೋ ಅಥವಾ ನಾವು ಅವುಗಳನ್ನು ಹಾಗೆ ಅರ್ಥೈಸಿಕೊಳ್ಳುತ್ತಿದ್ದೇವೆಯೋ ಗೊಂದಲವಾಗುತ್ತಿದೆ. ಒಂದಂತೂ ಸ್ಪಷ್ಟ ಎರಡರಲ್ಲಿ ಒಂದಾದರೂ ವಾಸ್ತವ.
ತೇಜಸ್ವಿ ಜನರೊಳಗೊಂದಾಗಿದ್ದು, ನೀರೊಳಗಿನ ಎಣ್ಣೆಯಂತೆ, ಕೆಸುವಿನೆಲೆ ಮೇಲಿನ ನೀರ ಹನಿಯಂತೆ ಬದುಕಿದ್ದವರು. ಸೆಲೆಬ್ರಿಟಿಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು ಯಾವುದೇ ದೇಶಗಳ, ಯಾವುದೇ ಕಾಲಘಟ್ಟಗಳಿಗೂ ಸರ್ವಕಾಲಿಕ ಸತ್ಯ. ಹಾಗೆಯೇ ತೇಜಸ್ವಿಯಂತಹ ಮೇರು ವ್ಯಕ್ತಿಯೊಂದಿಗೆ ಸಂಪರ್ಕ, ಒಡನಾಟ, ಮೂಡಿಗೆರೆೆಯಂತಹ ಪುಟ್ಟ ಊರಿನಲ್ಲಿ ನೂರಾರು ಜನರಿಗೆ ಸಾಧ್ಯವಿತ್ತು. ನಮಗಾರಿಗೂ ಇಲ್ಲದ, ನಾವ್ಯಾರೂ ಪ್ರಯತ್ನವನ್ನೂ ಪಡದಂತಹ ಸಂವಹನವನ್ನು ತೇಜಸ್ವಿಯವರು ಮೀನು ಮಾರುವವರೊಡನೆ, ಗ್ಯಾರೇಜಿನ ಹುಡುಗರೊಂದಿಗೆ, ಪೇಪರ್ ಹಂಚುವವರೊಡನೆ, ತರಕಾರಿ ಅಂಗಡಿಯವರೊಡನೆ, ಬೀಡಾ ಶಾಪಿನವರೊಡನೆ, ಟೈರ್-ಟ್ಯೂಬ್ ಪಂಚರಿನವರೊಡನೆ ಅತ್ಯಂತ ಯಶಸ್ವಿಯಾಗಿ ಸಾಧಿಸಿಬಿಟ್ಟಿದ್ದರು.
ನಾನು ಕಂಡ ಯಶಸ್ವೀ ಕೌನ್ಸೆಲ್ಲರ್ಗಳಲ್ಲಿ ಒಬ್ಬರಾದ ತೇಜಸ್ವಿಯವರು ತಮ್ಮ ಕಷ್ಟ ದುಮ್ಮಾನಗಳನ್ನು ಹೇಳಿಕೊಂಡು ಬರುತ್ತಿದ್ದ ಗೃಹಿಣಿಯರಿಗೆ, ಮದುವೆಯ ನಿರೀಕ್ಷೆಯಲ್ಲಿರುವ ಹುಡುಗಿಯರಿಗೆ, ಜೀವನ ಸಂಗ್ರಾಮದಲ್ಲಿ ಸೋತು ದಿಕ್ಕೆಟ್ಟವರಿಗೆ, ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಧೈರ್ಯ ಹೇಳುತ್ತಿದ್ದರು. ಬದುಕಿನ ಸಾಧ್ಯತೆಗಳನ್ನು ತೆರೆದಿಟ್ಟು ಭರವಸೆಗಳನ್ನು ಮೂಡಿಸಿ ಕಳುಹಿಸುತ್ತಿದ್ದರು. ದಗಲ್ಬಾಜಿಗಳು, ದುರುಳರು, ಅಪರಾಧಿಗಳು, ಮೋಸಗಾರರನ್ನೂ ಸಹ ಕರುಣೆಯಿಂದ ನೋಡಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ ಅಸಹಾಯಕರೆಂಬಂತೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದರು.
– ಮುಂದುವರೆಯುವುದು
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
