
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ನಮ್ಮ ಸುತ್ತಲಿನ ವಿಸ್ಮಯ-ವಿಶೇಷ
ಬಳಕೆಯಾಗಿ ಹೊರಹೋಗುವ ನೀರೂ ಕಥೆಯ ವಸ್ತುವಾಗುವುದು, ಚರ್ಚೆಯ ಸಂಗತಿಯಾಗುವುದು ತೇಜಸ್ವಿಯವರಲ್ಲಿ ಮಾತ್ರ. ಮಳೆ ಹನುಕಲು ಶುರುವಾದೊಡನೆ ಓಡಿ ಹೋಗಿ ಮರದಡಿಯೋ, ಛಾವಣಿಯಡಿಯೋ ನಿಂತು ಥತ್ ಇದರ! ನೆನೆಯಬೇಕಾಯ್ತಲ್ಲಾ ಎಂದು ಶಪಿಸುವ ನಮಗೆ ಮೂಡಿಗೆರೆ ಬಸ್ಸ್ಟಾಂಡ್ನಲ್ಲಿ ಅಡಿಗಳ ಅಂತರದಲ್ಲಿ ಬೀಳುವ ಮಳೆ ಹನಿ ಯಾವ ಯಾವ ನದಿಯಲ್ಲಿ ಹರಿದು ಯಾವ ಸಾಗರ/ಸಮುದ್ರ ಸೇರುವುದೆಂಬ ಕಲ್ಪನೆಯೂ ಇರುವುದಿಲ್ಲ.
ಈ ಹನಿಗಳು ಯಾವ ರಾಜ್ಯದ ಜನರ ಅಗತ್ಯ ಪೂರೈಸಿ ಯಾವ ಸಾಗರ ಸೇರುವುದೆಂಬ ಖಚಿತ ಕುತೂಹಲಕಾರಿ ಮಾಹಿತಿ ತೇಜಸ್ವಿಯವರಲ್ಲಿತ್ತು. ನಮ್ಮ ಸುತ್ತಲೂ ಸಹಜವಾಗಿ ಘಟಿಸುವ ವಿದ್ಯಮಾನಗಳು ಎಂತಹ ಅಚ್ಚರಿಯ ಹಿನ್ನಲೆಯನ್ನು ಮತ್ತು ವಿಸ್ಮಯಕಾರಿ ಭವಿಷ್ಯವನ್ನು ಒಳಗೊಂಡಿರುತ್ತವೆ ಎಂದು ದಿಗ್ಮೂಢರನ್ನಾಗಿ ಮಾಡುತ್ತದೆ. ನೋಡುವ ಕಣ್ಣು, ಗಮನಿಸುವ ಮನಸ್ಸು ಬೇಕು ಅಷ್ಟೇ.
ಛತ್ರಿ ಹಿಡಿಯುವುದೇ ಲಗ್ಝುರಿಯಾಗಿದ್ದ ದಿನಮಾನಗಳಲ್ಲಿ ಛತ್ರಿ ಕಡ್ಡಿಯಿಂದಲೇ ಹೊಲಿಸಿಕೊಂಡ ಕರಿಕಂಬಳಿಯ ಮಳೆ ಹೊದಿಕೆಗಳು ಅಂದಿನ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳ ಸೂಚಕ ಶಕ್ತಿಯಾಗಿತ್ತು ಎಂಬುದನ್ನು ಸೂಚ್ಯವಾಗಿ ತೆರೆದಿಡುವ ಸೂಕ್ಷತೆ ಅವರ ಕೃತಿಗಳಲ್ಲಿ ಕಾಣಸಿಗುತ್ತವೆ. ವಿಷಾದದ ಸಂಗತಿಯೆಂದರೆ ಅವರ ಕಲಾಕೃತಿಗಳಲ್ಲಿ ಮೂಡಿ ಮೆರೆದ ಬೆಟ್ಟಗುಡ್ಡಗಳು ನಮ್ಮೆಲ್ಲರ ಆಕ್ರಮಣಕ್ಕೆ ಸಿಲುಕಿ ಬರೀ ಮಣ್ಣಿನ ದಿಬ್ಬಗಳಾಗಿ ನಿಂತಿವೆ. ಕಾಫಿ ತೋಟಗಳ ದಾಳಿ, ಟಿಂಬರ್ ಮಾಫಿಯಾ, ಸಾರಿಗೆ ನೆಪ ಮುಂತಾದುವು ವಿಕಾಸದ ಭಾಗವೇನೋ ಎಂಬಂತೆ ನಮ್ಯಾರ ಹಂಗೂ ಇಲ್ಲದೇ ಸಹಜವಾಗೇ ಜೈವಿಕ ಪ್ರಪಂಚದ ಅವಸಾನದ ಮರಣಗಾಥೆ ಬರೆಯುತ್ತಿವೆ
ಪ್ಲಾಸ್ಟಿಕ್ ವಸ್ತುಗಳಿಗೆ ಕಡಿವಾಣ ಹಾಕಬೇಕೆಂಬ ನಮ್ಮ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದ ತೇಜಸ್ವಿ `ಈ ಹಾಲಿನ ಕವರ್ಗಳಿಗೆ ಏನು ಮಾಡೋದು ಹೇಳು?’ ಎಂದಿದ್ದರು. ಹಾಲನ್ನು ಬಾಟಲಿಗಳಲ್ಲಿ ಸರಬರಾಜು ಮಾಡುವುದು. ಬಾಟಲಿ ಹಿಂದುರಿಗಿಸಿದವರಿಗೆ ಸಾಮಾನ್ಯ ದರ, ಹೊಸದಾಗಿ ಬಾಟಲ್ ಕೇಳಿದವರಿಗೆ ಐದು ರೂಪಾಯಿ ಹೆಚ್ಚು ಬೆಲೆ ನಿಗದಿಗೊಳಿಸಿದರೆ ಎಲ್ಲಾ ಸರಿಯಾಗುತ್ತೆ ಎಂದಾಗ ` ಹೌದು ಕಣಯ್ಯಾ, ಅದೇ ಸರಿ. ದಿನಾ ಐದು ರುಪಾಯಿ ಕಳ್ಕೊಳ್ಳಕ್ಕೆ ಯಾರು ರೆಡಿ ಇರ್ತಾರೆ ಹೇಳು’ ಎಂದಿದ್ದರು.
ಮಲೆನಾಡಿನ ಶಾಲೆಗಳಿಗೆ ಮುಂಗಾರಿನಲ್ಲಿ ರಜೆ ಕೊಡಬೇಕೆಂಬ ನನ್ನ ಮಾತಿಗೆ ತೇಜಸ್ವಿ ಸಹಮತ ವ್ಯಕ್ತಪಡಿಸಿದ್ದರು. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳು ಮುಂಗಾರಿನಲ್ಲಿ ಹೆಚ್ಚಿನ ಮಳೆಯನ್ನು ಪಡೆಯುತ್ತವೆ. ತೀವ್ರ ಮಳೆಗಾಳಿ, ನೆರೆಹಾವಳಿ, ಮರಗಳ ಪಲ್ಲಟ, ಸಂಚಾರದ ಸಮಸ್ಯೆಯಿಂದಾಗಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ವಾಸ್ತವವಾಗಿ ತೊಂದರೆಯಾಗುತ್ತದೆ. ಬೇಸಿಗೆಯಲ್ಲಿ ನೀಡುವ ರಜೆಯನ್ನು ರದ್ದುಮಾಡಿ ಅದನ್ನೇ ಮಳೆಗಾಲದಲ್ಲಿ ನೀಡಿದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲಕ್ಕೆ ಪರಿಹಾರ ಸಿಗುತ್ತದೆ ಎಂಬ ಸಲಹೆಯನ್ನು ಸಂಬಂಧಿಸಿದ ಇಲಾಖೆಗಳಿಗೆ ನಾವು ಬಹಳ ಹಿಂದೆಯೇ ನೀಡಿದ್ದರೂ ಇನ್ನೂ ಕಾರ್ಯರೂಪಕ್ಕೆ ಬಾರದಿರುವುದು ನಮ್ಮ ಆಡಳಿತ ವ್ಯವಸ್ಥೆಯು ಸಕಾರಾತ್ಮಕ ಬದಲಾವಣೆಗೆ ಸ್ಪಂದಿಸದಿರುವುದಕ್ಕೆ ಒಂದು ಚಿಕ್ಕ ಉದಾಹರಣೆ.
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
