ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಮುಂದೆ ಹೋಗಬೇಡಿ, ಹೋಗ್ಲೇಬೇಡಿ
ಗಾಳಿಯ ವೇಗ, ದಿಕ್ಕು, ಏರೋಡೈನಮಿಕ್ಸ್, ವಿಮಾನ ತಂತ್ರಜ್ಞಾನ, ಪಕ್ಷಿಗಳ ದೇಹ ರಚನೆ, ಮೀನುಗಳ ಚಲನೆ, ಸಬ್ಮೆರೈನ್, ಯುದ್ಧ, ಉಗ್ರವಾದ, ರಾಜಕೀಯ, ಬೆಲೆ ಏರಿಕೆ, ಆಹಾರ ಸಮಸ್ಯೆ ಕಡೆಗೆ ಊಟದ ವಿಚಾರವಾಗಿಯೂ, ತರಾವರಿ ಟಾಪಿಕ್ಸ್ ಗಳು ಚರ್ಚೆಯಲ್ಲಿ ಸುಳಿದಾಡಿದವು. ಅಷ್ಟರಲ್ಲಿ ಊಟ ಸಿದ್ಧವಾಗಿ ಕೊರೆಯುವ ಚಳಿಯಲ್ಲಿ ಬಿಸ್ಸಿಬಿಸೀ ಅನ್ನ, ಸಾಂಬಾರ್, ಉಪ್ಪಿನಕಾಯಿ! ಅದರ ರುಚಿ ಏನು ಹೇಳುತ್ತೀರಿ, ಅದ್ಭುತವಾದ ಊಟ! ಚಪ್ಪರಿಸಿ ಬಾರಿಸಿದ ನಂತರ ಮತ್ತೆ ಎಲ್ಲರೂ ಕ್ಯಾಂಪ್ ಫೈರಿನ ಮುಂದೆ ಗುಡ್ಡೆಯಾದೆವು.
ಅಷ್ಟರಲ್ಲಿ ರಾಯಚೂರಿನ ಆನಂದ್ “ಓ ಫಿರ್ ನಯೀ ಆತೇ” ಎಂದು ಹಿಂದಿ ಹಾಡಿನ ಬಾಣ ಬಿಡಬೇಕೇ? ಪ್ರತ್ಯುತ್ತರವಾಗಿ ಹಾಸನದ ಬಾಸ್ಕರ್ “ಚಲ್ತೇ ಚಲ್ತೇ…….. ಕಭಿ ಅಲ್ವಿದ ನಾ ಕೆಹೆನಾ” ಎಂದು ಝಳಪಿಸಿದ. ನಂತರ ನಡೆದದ್ದು ಸಂಗೀತದ ಜುಗಲ್ಬಂದಿ. ನನ್ನದೊಂದು ವೀಕ್ನೆಸ್. ನನಗೆ ಸುಮ್ನೆ ಅಟೆಂಷನ್ನಲ್ಲಿ ನಿಂತು ಹಾಡು ಹೇಳಲಾಗುವುದಿಲ್ಲ. ಕೈಕಾಲು ಆಡಿಸುತ್ತಾ, ಓವರ್ ಆ್ಯಕ್ಟಿಂಗ್ ಮಾಡುತ್ತಾ, “ನನ್ನ ನೀನು ಗೆಲ್ಲಲಾರೆ, ತಿಳಿದೂ ತಿಳಿದೂ…….” ಎಂದು ಓತಪ್ರೋತವಾಗಿ ಬಿಡತೊಡಗಿದೆ.
“ರೀ ಅಶೋಕ್! ಪಕ್ಕದಲ್ಲೇ ನಿಂತಿದೀರಲ್ಲಾ ಹಿಡ್ಕಳ್ರೀ ಅವನ ಕೈ ಕಾಲುಗಳನ್ನ ಗಟ್ಟಿಯಾಗಿ, ಏಯ್ ಧನಂಜಯ! ಬಂದ್ರೆ ಕಾಲ್ ಮುರೀತೀನಿ ನೋಡ್ತಿರು, ಕೈಕಾಲು ಆಡಿಸದೇ ಹಾಡು ಹೇಳಲು ಬರುವುದಿಲ್ಲವಾ ನಿನಗೆ” ಎಂದು ಎಚ್ಚರಿಸಿದರು ತೇಜಸ್ವಿ. ಅಷ್ಟರಲ್ಲಿ ಮಹಿಳೆರ್ಯಾರೋ “ಮಲಗೂ ಮಲಗೆನ್ನಾ ಮಗುವೇ ಜೋ……….ಜೋ…………ಜೋ………….ಜೋ……………” ಎಂದು ಶುರುಮಾಡಿದರು. ವಾಚಿನೆಡೆಗೆ ನೋಡಿದರೆ ರಾತ್ರಿ ಹನ್ನೆರಡು ಗಂಟೆ ದಾಟಿದೆ! ಬೆಳಗಿನ ಚಾರಣವನ್ನು ಕಲ್ಪಿಸಿಕೊಂಡು ಥ್ರಿಲ್ ಆಗಿ, ಮಲಗಲು ಟೆಂಟ್ಗಳೊಳಗೆ ನುಸುಳಿದೆವು.
ದಿನವೂ ಮನೆಯ ಬೆಚ್ಚನೆಯ ವಾತಾವರಣದಲ್ಲಿ ಮುದುರಿ ಮಲಗಿ ಯಾವುದೋ ಒಂದು ದಿನಚರಿಗೆ ಹೊಂದಿಕೊಂಡಂತೆ ಅನೂಚಾನವಾಗಿ ಬೆಳಗಿನ ಕೆಲಸಕಾರ್ಯಗಳಿಗೆ ಸ್ಪಂದಿಸುತಿದ್ದವರು ಹೊಸ ಜಾಗದ ಮುಂಜಾವನ್ನು ವಿಶಿಷ್ಟವಾದ ಸಡಗರದಿಂದಲೇ ಅನುಭವಿಸಿದೆವು. ಎಚ್ಚರವಾಗಿ ಹೊದಿಕೆಗೋ, ದಿಕ್ಕುತಪ್ಪಿದ ದಿಂಬಿಗೋ ತಡಕಾಡಿದರೆ ಸಿಕ್ಕಿದ್ದು ಪಕ್ಕ ಮಲಗಿದ್ದವರ ಮೊಣಕೈಗಳೋ ಅಥವಾ ದಿಂಬಾಗಿ ಬಳಕೆಯಾಗಿದ್ದ ಲಗೇಜು ಚೀಲಗಳೋ.

ಇದೇನಿದು! ಎಂದು ಗಡಬದಿಸಿ ಮೇಲೆದ್ದವರಿಗೆ ನಿನ್ನೆ ನಾವು ಬಂದ ಹಾದಿ, ರಾತ್ರಿಯ ಚರ್ಚೆ, ಸಂಗೀತ ಕಛೇರಿ, ಇಂದಿನ ಚಾರಣ ಎಲ್ಲ ಸ್ಮೃತಿಪಟಲದಲ್ಲಿ ಮೂಡಿ ಥ್ರಿಲ್ ಆದೆವು. ಲಗುಬಗೆಯಿಂದ ನಿತ್ಯಕರ್ಮಗಳನ್ನು ಮುಗಿಸಿದ ನಮಗೆ ಬಿಸಿಬಿಸಿ ಉಪ್ಪಿಟ್ಟು, ಕಾಫಿ ಹೊಸ ಲವಲವಿಕೆಯನ್ನು ತುಂಬಿತು. ಚರ್ಚೆ, ಮಾತು, ಕೇಕೆಗಳೊಂದಿಗೆ ಕಡಿದಾದ ಏರನ್ನು ದಾಟಿ ಅಲೆಅಲೆಯಂತೆ ಎದುರಾಗುತಿದ್ದ ಶೋಲಾಗಳ ಮರುಕಳಿಕೆಯನ್ನು ಕಣ್ತುಂಬಿಕೊಳ್ಳತೊಡಗಿದೆವು. ಏರಿ ಬಂದ ದಾರಿಯನ್ನು ಹಿಂದಿರುಗಿ ನೋಡಿ ಹೆಮ್ಮೆಪಡತೊಡಗಿದೆವು. ದೂರದ ದಿಗಂತದವರೆಗೆ ಅನಂತ ಕಡಲಿನಂತೆ ಹಬ್ಬಿ ಮೆರೆಯುತಿದ್ದ ಈ ಗಿರಿ ಶ್ರೇಣಿಯನ್ನು ಉಳಿಸಿಕೊಳ್ಳುವ ಭಾಗ್ಯ ನಮಗಿದೆಯಾ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡೆವು.
ಮಧ್ಯಾಹ್ನ ಮೂರು ಗಂಟೆಗೇ ಚಾರಣ ಮುಗಿಯಿತು. ಮಧ್ಯಾಹ್ನದ ಊಟದ ನಂತರ ಬೆಟ್ಟದ ಒಂದು ಬದಿಯಲ್ಲಿ ಕುಳಿತ ತೇಜಸ್ವಿ ದೂರದಲ್ಲಿ ಕಾಣುತ್ತಿದ್ದ ಇನ್ನೊಂದು ಪರ್ವತಾಗ್ರವನ್ನು ತೋರಿಸಿ “ನೋಡಲ್ಲಿ ಅದರಾಚೆಯ ಮಗ್ಗುಲಿನಲ್ಲೇ ಮಾಣಿಕ್ಯ ಧಾರಾ ಇರೋದು. ಈಗ್ಗೆ ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತರೊಡನೆ ಅಲ್ಲಿಗೆ ಹೋಗಿದ್ದಾಗ ತಮಾಷೆಯೊಂದು ನಡೆಯಿತು ಮಾರಾಯ.
ನಾವು ನೀರಿನ ಝರಿ ಬೀಳುವುದನ್ನು ಹತ್ತಿರದಿಂದ ನೋಡೋಣ ಎಂದು ಕಡಿದಾದ ಪ್ರಪಾತವನ್ನು ಇಳಿದು ಸಾಹಸ ಮಾಡುತ್ತಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೆವು. ಸರಕ್ಕನೇ ಜಾರುವ ನೆಲ, ಆಧಾರಕ್ಕೆಂದು ಹಿಡಿದಿದ್ದ ಹುಲ್ಲಿನ ಜೊಂಪೆಯೇ ಪುಸ್ಸಕ್ಕೆಂದು ಕೈಗೇ ಬರುತ್ತಿತ್ತು. ಮಂಡಿ ಚಿಪ್ಪಿನಲ್ಲಿ ಟಕಟಕ ಎಂದು ನಡುಗು. ಸುತ್ತಾ ದಟ್ಟವಾದ ಕಾಡು, ಜೀ………ಜೀ……… ಎನ್ನುವ ಜೀರುಂಡೆಗಳು. ನೀರಿನ ಧಾರೆಯೊಂದು ನಿರಂತರವಾಗಿ ಧೋ ಎಂದು ಸಾವಿರಾರು ವರ್ಷಗಳಿಂದ ಸುರಿಯುತ್ತಿರುವಂತೆಯೇ ಸುರಿಯುತ್ತಿತ್ತು.
ನಿರ್ಜನವಾಗಿದ್ದ ಆ ಅಪರೂಪದ ಪರಿಸರದಲ್ಲಿ ಇದ್ದಕ್ಕಿದ್ದಂತೆ ಯಾರೋ “ಸಾರ್ ಅಲ್ಲಿಗೆ ಹೋಗಬೇಡಿ. ಹೋಗ್ಬೇಡಿ” ಎಂದು ಅರಚಿದಂತಾಯಿತು. ಕಾಡಿನ ಒಡಲೇ ಬಿರಿಯುವಂತೆ ಅಶರೀರವಾಗಿ ಹೊರಟ ಗಂಡುದನಿಯಿಂದ ತಬ್ಬಿಬ್ಬಾದ ನಾವು ಕೈತಪ್ಪಿ ಕಾಲುಜಾರಿ ಪ್ರಪಾತಕ್ಕೆ ಬೀಳದಿದ್ದುದೇ ಒಂದು ಪವಾಡ. ಇವನ್ಯಾವನೋ ಯಡವಟ್ಟು ಗಿರಾಕಿ ಎಂದುಕೊಂಡು ನಾವು ಸಾವರಿಸಿಕೊಂಡು ಮುಂದಡಿ ಇರಿಸತೊಡಗಿದೆವು. ಗಿಡಮರಗಳ ಸಂದಿಯಿಂದ ಹೊರನೆಗೆದ ಮನುಷ್ಯನೊಬ್ಬ “ಸಾರ್ ಮುಂದೆ ಹೋಗಬೇಡಿ, ಹೋಗ್ಲೇಬೇಡಿ” ಎಂದು ಗೋಗರೆದು ಎಚ್ಚರಿಸಿದ.
“ ಓ ಎಲ್ಲೋ ಕಾಳಿಂಗ ಸರ್ಪ ಇರಬಹುದು, ಇಷ್ಟು ದೂರ ಬಂದು ಅಂತಹ ಅಪರೂಪದ ಜೀವಿಯನ್ನು ನೋಡಿ, ಫೋಟೋ ತೆಗೆಯದೇ ಹೋಗುವುದೇ? ಎಂದುಕೊಂಡು ನಾವು ಮುಂದಡಿ ಇರಿಸಿದೆವು. ತಾಳ್ಮೆ ಕಳೆದುಕೊಂಡ ಆ ಅಪರಿಚಿತ “ಸಾರ್! ಅಲ್ಲಿ ನನ್ನ ಹೆಂಡ್ತಿ ಸ್ನಾನ ಮಾಡ್ತಾ ಇದ್ದಾಳೆ! ಮುಂದಕ್ಕೆ ಹೋಗ್ಬೇಡಿ” ಎಂದು ಅಂಗಲಾಚತೊಡಗಿದ. ಥತ್! ಎಂತಾ ಯಡವಟ್ಟಾಯಿತು ಎಂದುಕೊಂಡು ವಾಪಾಸ್ ಬಂದೆವು. ಆದ್ರೂ ಅಷ್ಟಕ್ಕೆಲ್ಲಾ ಅವನು ಅಷ್ಟೊಂದು ಕೂಗಾಡುವ ಅಗತ್ಯವಿರಲಿಲ್ಲ ಎನಿಸಿತು ನನಗೆ. ಅಲ್ವೇನಯ್ಯಾ?” ಎಂದರು.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

