ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಕೈಮಾ ವಡೆ!!!
ಮೈಸೂರು, ಬೆಂಗಳೂರು, ಶಿವಮೊಗ್ಗವನ್ನು ಬಿಟ್ಟು ತಾವು ನೆಲೆಸಲು ಮೂಡಿಗೆರೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂಬ ಅನೇಕರ ಪ್ರಶ್ನೆಗೆ, “ಮೂಡಿಗೆರೆಯವರ ತಂಟೆಗೆ ನಾವು ಹೋಗದಿದ್ದರೆ, ಅವರು ನಮ್ಮ ತಂಟೆಗೆ ಬರೋಲ್ಲ. ಕೆಲಸ ಮಾಡೋದಿಕ್ಕೆ ಏಕಾಂತ ಬೇಕು ಮತ್ತು ತುಂಬಾ ಕಾನ್ಸಂಟ್ರೇಶನ್ ಬೇಕು, ಅದಕ್ಕೆ ಮೂಡಿಗೆರೆ ತುಂಬಾ ಐಡಿಯಲ್ ಕಣ್ರಯ್ಯ.’’ ಎಂದಿದ್ದರು ತೇಜಸ್ವಿ.
“ಬೆಂಗಳೂರಿನಲ್ಲಿ ಒಂದು ಹೆಣ ರಸ್ತೆಯಲ್ಲಿ ಬಿದ್ದರೆ ಸಾವಿರಾರು ಜನ ಅನೂಚಾನವಾಗಿ ದಾಟಿಕೊಂಡು ಹೋಗುತ್ತಾರೆ. ಅದೇ ಮೂಡಿಗೆರೆಯಲ್ಲಿ ಹಾಗೆಲ್ಲಾದರೂ ಹೆಣ ಬಿದ್ದರೆ ನೂರು ಜನ ಸೇರುತ್ತಾರೆ. ಮುನ್ನೂರು ಕಥೆ ಹುಟ್ಟಿಕೊಳ್ಳುತ್ತವೆ. ಬೇಕಿದ್ದರೆ ನೀನೊಂದು ಎತ್ತಿಕೋ, ಇಲ್ಲವೇ ನೀನೇ ಒಂದನ್ನು ಸೃಷ್ಟಿಸು.” ಎನ್ನುತ್ತಿದ್ದರು. ಮೈಸೂರು, ಶಿವಮೊಗ್ಗದಂತಹ ಸಾಹಿತ್ಯಿಕ ವಾತಾವರಣವನ್ನು ಬಿಟ್ಟುಬಂದು ಹೊರ ಜಗತ್ತಿಗೆ ನಿಗೂಢ ಮನುಷ್ಯನಾಗೇ ಉಳಿದು, ಮೂಡಿಗೆರೆಯನ್ನು ಜಗತ್ತಿನ ಮೂಲೆಮೂಲೆಗೆ ಪರಿಚಯಿಸಿದ ಕೀರ್ತಿ ತೇಜಸ್ವಿಯವರಿಗೆ ಸಲ್ಲುತ್ತದೆ. ಇವತ್ತಿಗೂ ಕರ್ನಾಟಕದ ಯಾವುದೇ ಮೂಲೆಗೆ ಹೋಗಿ ನಾನು ಮೂಡಿಗೆರೆಯವನು ಅಂದರೆೆ “ಓ, ಅದೇ ಪೂರ್ಣಚಂದ್ರ ತೇಜಸ್ವಿಯವರಿರುವ ಮೂಡಿಗೆರೆನಾ?” ಎಂದು ಕೇಳುವುದು ಸಹಜವೇ. ಯಾವುದೇ ಸಹಜವಾದ, ಸರಳವಾದ ಸಂಗತಿಯನ್ನು ಅತೀವ ಆಸಕ್ತಿಯಿಂದ, ಕುತೂಹಲದಿಂದ ತಮ್ಮದೇ ವಿಶಿಷ್ಟ ದೃಷ್ಟಿಕೋನದಿಂದ ನಿರೂಪಿಸುತ್ತಿದ್ದ ತೇಜಸ್ವಿ ಏನನ್ನೇ ಆದರೂ ಸ್ವಂತ ಅನುಭವದಿಂದಲೇ ಮನವರಿಕೆ ಮಾಡಿಕೊಳ್ಳುತ್ತಿದ್ದರು.
ಪೇಟೆ ನಿಮ್ಮಲ್ಲಿ ಹುಟ್ಟಿಸುವ ಕುತೂಹಲಕ್ಕೊಂದು ಕೊನೆಯಿದೆ, ಆದರೆ ಪ್ರಕೃತಿ, ಕಾಡು, ಹೊಳೆ, ಪರ್ವತಗಳಲ್ಲಿ ಆ ಕೊನೆಯಿಲ್ಲ ಎಂದು ನಂಬಿದ್ದ ತೇಜಸ್ವಿಯವರಿಗೆ ಪರಿಸರ ತಿಳಿದಿತ್ತು, ಮತ್ತದನ್ನು ಇತರರಿಗೆ ತಿಳಿಸುವ ಬಗೆಯೂ ಗೊತ್ತಿತ್ತು. ಹಾಗಾಗಿ ಕಾಡು ಬೆಳೆಸಲು ಏನು ಮಾಡಬೇಕು ಎಂದರೆ, ಏನೂ ಮಾಡದೇ ಸುಮ್ಮನಿರಬೇಕು ಎಂದೇ ಉತ್ತರಿಸುತ್ತಿದ್ದರು. ಕಾಡಿನ ಸಾಮಿಪ್ಯದಲ್ಲಿ ವಾಸಿಸುತಿದ್ದ ತೇಜಸ್ವಿಗೆ ಯೌವನದಲ್ಲಿ ಸಹಜವಾಗೇ ಶಿಕಾರಿಯೆಡೆಗೆ ಒಲವು ಮೂಡಿತು. ಅಭೇದ್ಯವಾದ ಕಾಡು, ಈಗಿನಂತೆ ಶಿಕಾರಿಗೆ ಕಾನೂನಿನ ನಿರ್ಬಂಧವಿಲ್ಲದಿದ್ದುದು ಕೋವಿ ಹಿಡಿದು ಕಾಡು ನುಗ್ಗಲು ಪ್ರೇರಣೆಯಾಯ್ತು. ಹುಮ್ಮಸ್ಸಿನಿಂದ ಹಾರುವ ಹಕ್ಕಿಗೆ ಗುಂಡುಹೊಡೆದು ಶಿಕಾರಿ ಮಾಡುತಿದ್ದ ತೇಜಸ್ವಿ ಪಕ್ಷಿಯ ಪುಕ್ಕ ತರೆದು ಕೈಮಾ ಮಾಡಿ ಮಾಂಸದ ವಡೆ ಮಾಡಿ ಚಪ್ಪರಿಸುತ್ತಿದ್ದುದನ್ನು ನೆನೆಸಿಕೊಂಡು ಹೇಳುತ್ತಾ ಎಂತೆಂಥಾ ಅನರ್ಥಗಳನ್ನು ನಮಗರಿವಿಲ್ಲದಂತೆ ಮಾಡಿಬಿಟ್ಟೆವು ಎಂದು ವಿಷಾದಿಸುತಿದ್ದರು.

ಕಾಫಿ ತೋಟದ ಲಾಭಕ್ಕಾಗಿಯಾಗಲೀ, ಹಳ್ಳಿ ಜೀವನದ ಆದರ್ಶಕ್ಕಾಗಲೀ, ಕೃಷಿಯ ಮೇಲಿನ ಪ್ರೀತಿಯಿಂದಾಗಲೀ ಅಲ್ಲದೆ ತಮ್ಮಲ್ಲಿ ಸ್ವಾಭಾವಿಕವಾಗಿ ಬಂದಿದ್ದ ಕಾಡಲೆದು ನೋಡಿ ತಿಳಿವ ವ್ಯಕ್ತಿತ್ವದಿಂದಾಗಿ ಮೂಡಿಗೆರೆಯಲ್ಲಿ ತೋಟ ಕೊಂಡರು. ಉದ್ದೇಶಪೂರ್ವಕವಾಗಿ ಹಳ್ಳಿಯಲ್ಲಿ ನೆಲೆಸಿ, ಅಲ್ಲಿನ ವೈರುಧ್ಯಗಳನ್ನು ತಮ್ಮ ಬರವಣಿಗೆಗಳಲ್ಲಿ ಶೋಧಿಸುತ್ತಾ ಹೊರಟರು. ವಿಜ್ಞಾನದ ಪದವೀಧರನಲ್ಲದಿದ್ದರೂ ಪಶು-ಪಕ್ಷಿ, ಕ್ರಿಮಿ-ಕೀಟ ಇತರೆ ಜೈವಿಕ ವಸ್ತುಗಳ ವ್ಯಕ್ತಿತ್ವವನ್ನು ತಿಳಿಯಲು ಮಾನವ ಸಹಜ ಕುತೂಹಲದಿಂದ ಅಭ್ಯಾಸ ಮಾಡಿದ ತೇಜಸ್ವಿ ತನ್ನರಿವಿಗೆ ಬಂದದ್ದನ್ನು ಹೆಚ್ಚು ಜನರಿಗೆ ತಲುಪಿಸಲಿಕ್ಕಾಗಿ ಸಾಹಿತ್ಯವನ್ನು ಮಾಧ್ಯಮವನ್ನಾಗಿ ಆಯ್ದುಕೊಂಡರು.
ತೇಜಸ್ವಿಯವರ ಅನೇಕ ಓದುಗರಿಗೆ ಈ “ನಿರುತ್ತರ’’ ಎಂಬ ಹೆಸರನ್ನು ತಮ್ಮ ಮನೆಗೆ ಯಾಕೆ ಇಟ್ಟುಕೊಂಡಿದ್ದಾರೆ ಎಂಬು ಕುತೂಹಲವಿದೆ. ನಾನೇ ಒಮ್ಮೆ ಈ ಬಗ್ಗೆ ಕೇಳಿದಾದ ” ಅಪ್ಲೇ ಅಪ್ಲೇ ನೋ ರಿಪ್ಲೇ ಕಣಯ್ಯಾ, ಈ ಕೃಷಿಯ ಹಣೇಬರಹ. ನಮ್ಮ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ತಾರ್ಕಿಕ ಉತ್ತರವೇ ಸಿಗದ್ದರಿಂದ ಇದು ನಿರುತ್ತರ’’ ಎಂದು ಮಾರ್ಮಿಕವಾಗಿ ಹೇಳಿದ್ದರು.
ತೇಜಸ್ವಿಯವರ ಮನೆಗೆ ಸಂಶೋಧನ ವಿದ್ಯಾರ್ಥಿಗಳು, ಶಾಲಾ ಸಾಂಸ್ಕೃತಿಕ ತಂಡಗಳು, ಸಾಹಿತ್ಯಾಸಕ್ತರು ಆಗಾಗ ಭೇಟಿನೀಡುತಿದ್ದರು. ತೇಜಸ್ವಿ ಅನ್ನುವವರು ಹೇಗಿರ್ತಾರೆ, ಅವರ ಕಥೆಗಳಲ್ಲಿ ಗೋಚರಿಸುವಂತೆಯೆ ಜೀವಿಸಿದ್ದಾರಾ? ಅಲ್ಲಿನ ಕಾಡು ಅದೇ ನಿಗೂಢತೆಯನ್ನು ಉಳಿಸಿಕೊಂಡಿದೆಯಾ? ಎಂಬ ಕುತೂಹಲದಿಂದ ಹೋದರೆ ಹೇಗೆ ಪ್ರತಿಕ್ರಿಯಿಸುತ್ತಾರೋ ಎಂಬ ಅಭದ್ರತೆಯ ಭಂಡಧೈರ್ಯದಿಂದಲೇ ಅವರ ಮನೆಗೆ ಎಡತಾಕುತಿದ್ದರು. ಮೂಡಿಯಾಗಿದ್ದ ತೇಜಸ್ವಿಯವರ ಬಳಿ ಹೀಗೇ ಶಾಲಾ ತಂಡದೊಂದಿಗೆ ಬಂದಿದ್ದ ಯುವತಿಯೊಬ್ಬಳು ಏನು ಮಾತನಾಡಬೇಕೆಂಬ ಗೊಂದಲದಲ್ಲಿಯೇ `ನಿಮಗೆ ಎಷ್ಟು ವಯಸ್ಸು?’ ಎಂದಳು. ಹುಬ್ಬೇರಿಸಿ ಯುವತಿಯನ್ನೊಮ್ಮೆ ತುಂಟತನದಿಂದ ನಿರುಕಿಸಿದ ತೇಜಸ್ವಿ ಮನೆಯ ಮಾಡಿನೆಡೆಗೆ ಕೊಂಚ ಸಮಯ ದಿಟ್ಟಿಸಿದ ನಂತರ ಅವಳೆಡೆಗೆ ತಿರುಗಿ “ಸುಮಾರು ವರ್ಷಗಳಾಗಿವೆ ಕಣಮ್ಮಾ ಹುಟ್ಟಿ’’ ಎಂದಿದ್ದರು.
ಮೂಡಿಗೆರೆಯ ಬಳಿಯ ಜನ್ನಾಪುರದ ಹೊಯ್ಸಳಲಿನಲ್ಲಿ ಕಾಡು ಕಡಿದು ತೋಟ ಮಾಡಲು ಪ್ರಾರಂಭಿಸಿದ ತೇಜಸ್ವಿಯವರಿಗೆ ಅಗ ಮೂಲಭೂತ ಸೌಕರ್ಯದ ಅನುಕೂಲಗಳಿರಲಿಲ್ಲ. ವಿದ್ಯುತ್ ಸಂಪರ್ಕ ಇಲ್ಲದ ಮನೆಯಲ್ಲಿ ವಾಸವಿದ್ದಾಗ ಸೀಮೆಯೆಣ್ಣೆ ದೀಪದ ಬೆಳಕಿನಲ್ಲಿ ಕರ್ವಾಲೋ ಕೃತಿಯನ್ನು ಸೃಷ್ಠಿ ಮಾಡಿದ್ದು ಮತ್ತು ಕನ್ನಡದ ಕೆಲ ಉತ್ತಮ ಸೃಜನಶೀಲ ಕೃತಿಗಳಲ್ಲಿ ಒಂದಾದ ಕರ್ವಾಲೋ ಬರೆದಾಗ ಅದನ್ನು ಪ್ರಕಟಿಸಲು ಸಾಹಸ ಪಟ್ಟಿದ್ದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಆಗಿನ ನಿಯತಕಾಲಿಕೆಗಳಿಗೆ ಪ್ರಕಟಣೆಗಾಗಿ ಕಳಿಸಿದಾಗ, ಕರ್ವಾಲೋ ಅನ್ನು ಇದು ಯಾವ ಪ್ರಕಾರದ ಸಾಹಿತ್ಯ? ಇದನ್ನು ಪ್ರಕಟಿಸಲು ಸಾಧ್ಯವಿಲ್ಲವೆಂದು ತಿರಸ್ಕರಿಸಿದ್ದರು. ನಂತರ ತುಷಾರ ಮಾಸಿಕದ ಶ್ರೀ ಈಶ್ವರಯ್ಯನವರು ಪರಿಶೀಲಿಸಿ ಪ್ರಕಟಿಸಿದಾಗ ಕರ್ವಾಲೋ ಲಕ್ಷಾಂತರ ಓದುಗರನ್ನು ತಲುಪಿತು.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

