ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ದುಡ್ಡು ಕೇಳದಿದ್ದರೆ ಸಾಕು ಗುರೂ….!!!
ಒಂದೊಮ್ಮೆ “ನಾಳೆ ಭಾನುವಾರ ಅಲ್ವಾ? ನಿನಗೆ ರಜೆ ಇರುತ್ತೆ, ಮನೆ ಹತ್ರ ಬಾ. ಬೆಳಗ್ಗೆ 9-೦೦ ಗಂಟೆಗೆ” ಅಂದ್ರು.
“ಏನು ವಿಚಾರ ರೆಡಿಯಾಗೇ ಬರ್ಬೇಕಲ್ವಾ ಅಂದೆ.
“ಕ್ಯಾಮರಾ ಹಿಡ್ಕೊಂಡು ಬಾ, ಸುಮ್ನೆ ಬರೋಕ್ಕೆ ಏನು ದಾಡಿ ನಿಂಗೆ? ಎಕ್ಸ್ಪ್ಲೇನೇಷನ್ ಬೇರೆ ಕೇಳ್ತಾನೆ ಅಯೋಗ್ಯ!” ಅಂದರು.
ಬೆಳಗ್ಗೆ ಸರಿಯಾಗಿ ಹೋದ್ರೆ ಇನ್ನೂ ಹೊರಡುವ ಸಿದ್ಧತೆಯಲ್ಲಿದ್ದರು.
ಹೊಸ ಮನೆಯ ನವೀಕರಣ ಕೆಲಸ ನಡೆಯುತ್ತಿದ್ದರಿಂದ ಸ್ಟೋರ್ರೂಂನಲ್ಲಿ ತಾತ್ಕಾಲಿಕವಾಗಿ ವಾಸವಿದ್ದರು.
“ತಿಂಡಿ ಆಗಿದೆಯೇನಯ್ಯಾ?’
“ಆಗಿದೆ’.
‘ಆದ್ರಾಗ್ಲಿ ನನ್ಜೊತೆ ಸ್ವಲ್ಪ ತಿನ್ನುವಿಯಂತೆ’ ಎಂದು ರೊಟ್ಟಿ ಜೊತೆ ಬೆಂಡೇಕಾಯಿ ಪಲ್ಯ ಕೊಟ್ಟರು.
‘ನಡಿ ಟವರ್ ಹತ್ತಬೇಕು’ ಎಂದರು. `ಯಾವ ಟವರ್’ ಎಂದೆ. `ಸುಮ್ನೆ ನಡಿ’ ಎಂದವರೇ ಸ್ಕೂಟರ್ ನಿಲ್ಲಿಸಿದ್ದು ಹ್ಯಾಂಡ್ಪೋಸ್ಟ್ನ ಮೈಕ್ರೋವೇವ್ ಟವರ್ ಮುಂದೆ. ಅಲ್ಲಿ ಗೆಳೆಯರಾದ ಬಿಎಸ್ಎನ್ಎಲ್ನ ಬಸವರಾಜ್ ಮೊದಲೇ ಬಂದು ನಮಗಾಗಿ ಕಾಯುತ್ತಿದ್ದರು. ಸುಮಾರು 2೦೦ ಅಡಿ ಎತ್ತರದ ಟವರ್ನ್ನು ನಮಗಿಂತ ಚುರುಕಾಗಿ ಹತ್ತಿದ ತೇಜಸ್ವಿ ತುದಿ ತಲುಪಿದೊಡನೆ ಹೈಸ್ಕೂಲ್ ಹುಡುಗನಂತೆ ಪುಳಕಗೊಂಡು ಸುತ್ತಲಿನ ವಾತಾವರಣವನ್ನು ಅಚ್ಚರಿಯಿಂದ, ಅಷ್ಟೆತ್ತರದಿಂದ, ಅಧಿಪತಿಯ ಗಂಭೀರತೆಯಿಂದ ಗಮನಿಸತೊಡಗಿದರು. ಮೇಲೆಯೇ ಅದು ಇದು ಮಾತಾಡುತ್ತಾ ಜೀಕುತ್ತಾ ಜೀಕುತ್ತಾ ಇಡೀ ಟವರ್ನ್ನೇ ನೆಲದತ್ತ ಬಾಗಿಸುವ ಸಾಧ್ಯತೆಯ ಬಗ್ಗೆ ವಿವರಣೆ ನೀಡಿದರು. ಅವರದೇ ಫೋಟೋಗ್ರಾಫಿಕ್ ಭಾಷೆಯಲ್ಲಿ ಹೇಳುವಂತೆ ಹೇಝ್ ಇದ್ದುದರಿಂದ ವಿಶೇಷವಾಗಿ ಫೋಟೋಗಳನ್ನೇನೂ ತೆಗೆಯದೆ ಇನ್ನೆಂದಾದರೂ ವಾತಾವರಣ ಅನುಕೂಲವಾಗಿದ್ದರೆ ಮೇಲೇರಿ ಪ್ರಯತ್ನಿಸೋಣ ಎಂದುಕೊಂಡು ಹಿಂದಿರುಗಿದೆವು.
ನನ್ನ ಅಭಿಪ್ರಾಯದಂತೆ ತೇಜಸ್ವಿಯವರ ಸಾಹಿತ್ಯ ಕೃಷಿ ಕನ್ನಡ ಸಾಹಿತ್ಯದ ಮಟ್ಟಿಗೆ ಅದ್ವಿತೀಯ. ಪಿಯುಸಿಗೆ ತೇಜಸ್ವಿಯವರ ಕರ್ವಾಲೋ ಕಾದಂಬರಿ ಪಠ್ಯವಾಗಿ ಅನುಮೋದನೆಗೊಂಡದ್ದು ಕನ್ನಡ ಸಾಹಿತ್ಯದ ಮುಂದಿನ ದಿನಗಳ ಹಣೆಬರಹ ಬರೆದಂತಹ ಪ್ರಮುಖ ಘಟ್ಟ. ಈಗ ನಾವೇನಿದ್ದೇವೆ, 25 ರಿಂದ 45 ವರ್ಷ ವಯಸ್ಸಿನ ಯುವಜನತೆ ನಾವೇ ಸಮಾಜದಲ್ಲಿ ಅಭಿಪ್ರಾಯ ಸೃಜಿಸುವ ಹಾಗೂ ಮನಗಂಡದ್ದನ್ನು ಕಾರ್ಯರೂಪಕ್ಕಿಳಿಸುವ ಸರ್ವ ಸಾಧ್ಯತೆಯುಳ್ಳ ಪೀಳಿಗೆ.
ಪಿಯುಸಿ ಹಂತದಲ್ಲಿದ್ದಾಗ ಯಾರದ್ದೇ ಮನಸ್ಥಿತಿಯು ಕಥೆ, ಕವನ, ಕಾದಂಬರಿಯನ್ನು ವಿಶೇಷ ಪ್ರೀತಿಯಿಂದ ಆಸ್ಥೆಯಿಂದ ಓದಿಕೊಳ್ಳುವಂತದ್ದು. ಇದು ಎಲ್ಲಾ ಕಾಲಘಟ್ಟ, ಜನ, ದೇಶಗಳಿಗೂ ಅತ್ಯಂತ ಸ್ವಾಭಾವಿಕ. ಆ ಸಂದರ್ಭದಲ್ಲಿ ನಮ್ಮ ಮೇಲೆ ತಮ್ಮ ಅಪೂರ್ವ ನಿರೂಪಣಾ ಶೈಲಿಯಿಂದ, ಅಸಾಧಾರಣ ಕಥಾ ಹಂದರದಿಂದ ನಮ್ಮ ಮುಂದಿನ ಓದಿಗೆ, ಸಾಹಿತ್ಯಿಕ ಕಲ್ಪನೆಗೆ ಸಾರಸ್ವತ ಲೋಕದಲ್ಲಿ ಸಿಗಲು ಸಾಧ್ಯವಿರಬಹುದಾದ ಒಬ್ಬ ಐಕಾನ್ನಂತೆ ತೇಜಸ್ವಿ ಎಂಬ ಕಾಡು ಸಂತರೊಬ್ಬರು ದೊರಕಿಬಿಟ್ಟರು. ಇಟ್ ಮೇಡ್ ಆಲ್ ದ ಡಿಫರೆನ್ಸ್.
ಪ್ರಥಮ ಪುಸ್ತಕವೇ ಸಮಾಜವನ್ನು, ಪರಿಸರವನ್ನು, ಬದುಕನ್ನು ನೋಡುವ ನಮ್ಮ ದೃಷ್ಟಿಕೋನವನ್ನೇ ಬದಲಿಸಿಬಿಟ್ಟಿತಲ್ಲ ಎಂದು ಆನಂತರ ತೇಜಸ್ವಿಯವರ ಎಲ್ಲಾ ಕೃತಿಗಳನ್ನು ಶ್ರದ್ಧೆಯಿಂದ, ಪ್ರೀತಿಯಿಂದ, ಕುತೂಹಲದಿಂದ ಅವಲೋಕಿಸಿದ್ದು ಅವರ ಅಪಾರ ಅಭಿಮಾನಿವೃಂದದಲ್ಲಿ ನಮ್ಮ ವಯೋಮಾನದವರ ಪ್ರಮಾಣ ಗಣನೀಯವಾಗಿ ಇರುವುದಕ್ಕೆ ಕಾರಣ. ಇದರಿಂದ ಕನ್ನಡದ ಇತರೆಲ್ಲಾ ಲೇಖಕರಿಗಿಂತ ತೀರಾ ವಿಭಿನ್ನರಾಗಿ ಶಾಶ್ವತವಾಗಿ ನಮ್ಮೆಲ್ಲರೊಡನೆ ನಿರಂತರವಾಗಿ ನೆಲೆಯೂರಲು ಸಾಧ್ಯವಾಯಿತು.

ಕರಾವಳಿಯಿಂದ ಪ್ರಕಟವಾಗುವ ನಿಯತಕಾಲಿಕ ಒಂದರಲ್ಲಿ ತೇಜಸ್ವಿಯವರನ್ನು ಕುರಿತಾದ ಬರಹವೊಂದು ಪ್ರಕಟವಾಯಿತು. ಆ ಸಂಚಿಕೆಯ ಪ್ರತಿಗಳಿಗೆ ಎರಡೇ ದಿನಗಳಲ್ಲಿ ಮರುಮುದ್ರಣಕ್ಕೆ ಬೇಡಿಕೆ ಬಂತು. ಪ್ರಸರಣದ ಸಂಖ್ಯೆ ಪತ್ರಿಕಾ ಸಂಪಾದಕ ಮಂಡಳಿಗೇ ಅಚ್ಚರಿಯಾಗುವಂತೆ ಇದ್ದಕ್ಕಿದ್ದಂತೆ ನಭೋಮಂಡಲಕ್ಕೆ ಜಿಗಿಯಿತು. ಹಾಗೂ ಹೀಗೂ ವಿತರಣೆಯನ್ನು ನಿಬಾಯಿಸಿದ ಪತ್ರಿಕೆಯವರಿಗೆ ಮನದಲ್ಲಿ ಮೂಡಿದ ಪ್ರಶ್ನೆ “ಈ ತೇಜಸ್ವಿಯೆಂದರೆ ಯಾರೋ ಫಿಲಂಸ್ಟಾರ್ ಇರಬಹುದಾ?” ಎಂಬುದು.
ಹೀಗೇ ಒಮ್ಮೆ ಮಾತನಾಡುವಾಗ ಲಂಕೇಶರ ಬಗ್ಗೆ ಪ್ರಸ್ತಾಪವಾಯಿತು. “ನಾನೂ ಒಂದೆರಡು ಬಾರಿ ಪತ್ರಿಕೆ ಮಾಡಿ ಕೈಚೆಲ್ಲಿದ್ದು ಇದೆ ಮಾರಾಯ. ಇಲ್ಲಿ ಮೂಡಿಗೆರೆಯಲ್ಲಿ ಸಣ್ಣ ಪತ್ರಿಕೆಗಳು ಹೇಗೆ ನಡೀತಿವೆ ಹೇಳು? ನಿನ್ನ ಪ್ರೆಂಡ್ ಅಂತ ಪರಿಚಯ ಮಾಡ್ಸಿದೆಯಲ್ಲ, ಎಂತದಯ್ಯ ಅವರ ಹೆಸರು. ನೆನಪೇ ಆಗ್ತಿಲ್ವಲ್ಲಯ್ಯ.”
“ಹಾ… ಪ್ರಸನ್ನ ಹೇಗಯ್ಯಾ ಮೇನೇಜ್ ಮಾಡ್ತಿದ್ದಾನೆ, ಲಾಸಾಗಿಲ್ಲ ತಾನೆ?. ಪತ್ರಿಕೆ ನಿರಂತರವಾಗಿ ಪೋಸ್ಟಲ್ಲಿ ಬರ್ತಾನೆ ಇದೆ ಪುರುಸೊತ್ತೇ ಆಗ್ತಿಲ್ಲ ಓದೋಕೆ. ಹೇಗೆ? ಚೆನ್ನಾಗಿ ಬರೀತಾನೇನಯ್ಯಾ? ಏನನ್ಸುತ್ತೆ ನಿನಗೆ. ದುಡ್ಡು ತಗೋಳೋಕು ಬರ್ತಿಲ್ಲ. ಪೇಪರ್ ನಡ್ಸೋ ಕಷ್ಟ ಏನೂಂತ ನಂಗೊತ್ತು. ದುಡ್ಡು ತಗೊಂಡ್ಹೋಗ್ಲಿಕ್ಕೆ ಹೇಳು. ಏನೇ ಹೇಳು ಜನಾನ ತಲುಪೊದಿಕ್ಕೆ ಪತ್ರಿಕೆಗಳೇ ಸರಿಯಾದ ಮಾರ್ಗ ಕಣಯ್ಯ. ಏನನ್ನಾದ್ರೂ ಕನ್ವಿನ್ಸಿಂಗ್ ಆಗಿ ಬರೆದು ಗಮನ ಸೆಳೆದ್ರೆ ಜನ ಖಂಡಿತ ಅದರ ಬಗ್ಗೆ ಯೋಚನೆ ಮಾಡೋಕೆ ಶುರೂ ಮಾಡ್ತಾರೆ. ಪ್ರತಿಕ್ರಿಯೆ ಸಿಗ್ತು ಅಂತ ಗೊತ್ತಾದ ಕೂಡ್ಲೆ ಬಿಟ್ಟೂಬಿಡದೆ ಪ್ರಸ್ತಾಪ ಮಾಡ್ತಿರ್ಬೇಕು ನೋಡು. ಒಂದು ಹಂತದಲ್ಲಿ ನಾವು ನಿರೀಕ್ಷೆ ಮಾಡಿದ ರಿಝಲ್ಟ್ ಕೊಡೋಕೆ ಶುರು ಮಾಡುತ್ತೆ. ಸಮಾಜವನ್ನು ರಿಪೇರಿ ಮಾಡೋಕೆ ಇದೊಂದು ಸೂಕ್ಷ್ಮವಾದ ಇನ್ಸ್ಟ್ರೂಮೆಂಟ್ ನೋಡು.”
`ಗೆಳೆಯರೇ, ಪತ್ರಿಕೆ ಪ್ರಾರಂಬಿಸಲು ಸಹಾಯ ಮಾಡಿ, ಪತ್ರಿಕೆಗೆ ಲೇಖನ ಬರೆಯಿರಿ ಮತ್ತು ಪತ್ರಿಕೆ ಬೆಳೆಯಲು ಹೆಗಲು ನೀಡಿ, ಕೈ ಜೋಡಿಸಿ’ ಎಂದು ಲಂಕೇಶ್ ಪ್ರಸ್ತಾಪಿಸಿದಾಗ, ಅವತ್ತಿಗಾಗಲೇ `ಲಹರಿ’ ಮುಂತಾದ ಪತ್ರಿಕೆ ಪ್ರಕಟಣೆಯ ಜಂಜಾಟದಲ್ಲಿ ಅನುಭವಿಸಿದ್ದ ವೈಫಲ್ಯವನ್ನು ನೆನಪಿಸಿಕೊಂಡು “ಬರೆದಿದ್ದಕ್ಕೆ ದುಡ್ಡು ಕೊಡದಿದ್ದರೂ ಪರವಾಗಿಲ್ಲ, ನಮ್ಮ ಬಳಿಯೇ ದುಡ್ಡು ಕೇಳದಿದ್ದರೆ ಸಾಕು ಗುರೂ” ಎಂದು ಲಂಕೇಶರ ಪ್ರಾರಂಭದ ಪತ್ರಿಕಾ ಹುಂಬತನಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು ತೇಜಸ್ವಿ.
ತಮ್ಮ ಬಹುಕಾಲದ ಗೆಳೆಯರಾದ ಲಂಕೇಶರ ಲಂಕೇಶ್ ಪತ್ರಿಕೆಯಲ್ಲಿ ಬರೆಯುವ ಮೂಲಕ ನಾಡಿನ ಮೂಲೆಮೂಲೆಯನ್ನು ತಲುಪಿದ ತೇಜಸ್ವಿ ನಂತರದ ದಿನಗಳಲ್ಲಿ ರಾಮಾಯಣ ದರ್ಶನಂ ಹಸ್ತಪ್ರತಿಯ ಪುಸ್ತಕರೂಪ ಪ್ರಕಟಣೆಯ ಸಂಬಂಧವಾಗಿ ಲಂಕೇಶರೊಡನೆ ಮನಸ್ತಾಪ ಮಾಡಿಕೊಂಡಿದ್ದರೂ ಸಹಾ, “ಲಂಕೇಶ್ ಹಾಗೂ ಲಂಕೇಶ್ ಪತ್ರ್ರಿಕೆಯಿಲ್ಲದಿದ್ದರೆ ನಾನು ನನ್ನೆಲ್ಲ ಲೇಖನಗಳನ್ನು ಬರೆಯುವ ಯೋಚನೆಯನ್ನೂ ಮಾಡುತ್ತಿರಲಿಲ್ಲ ಮತ್ತು ನಾನೀ ಮಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ಜನರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ.” ಎಂದು ತೇಜಸ್ವಿಯವರು ತಮ್ಮ ಅಂತರಂಗವನ್ನು ತೆರೆದಿಡುತ್ತಾರೆ.
ಈ ರೀತಿ ವಾಸ್ತವವನ್ನು ಮರೆಮಾಚದೇ ಕೃತಜ್ಞತೆಯನ್ನು ಸಲ್ಲಿಸುವ ಸಲ್ಲಿಸುವ ಮನಸ್ಥಿತಿ ತೀರಾ ಕೆಲವರಲ್ಲಿ ಮಾತ್ರ ಕಾಣಬಹುದಾಗಿದೆ. ಯಾವುದೇ ಲೇಖಕನಿಗೆ ತನ್ನೊಳಗಿನ ತುಡಿತ, ಆಲೋಚನೆಗಳ ಒದೆತ ಎಷ್ಟೇ ಇದ್ದರೂ ಅದನ್ನು ಓದುಗರಿಗೆ ತಲುಪಿಸುವ ಮಾಧ್ಯಮ ಮುಖ್ಯವಾಗಿರುತ್ತದೆ. ಲೇಖಕ-ಓದುಗನ ನಡುವಿನ ಕೊಡು-ಕೊಳ್ಳುವಿಕೆಗೆ ಸೂಕ್ತ ತಾವನ್ನು ಒದಗಿಸುವ ಜವಾಬ್ದಾರಿಯು ಪತ್ರಿಕೆಗಳದ್ದಾಗಿರುತ್ತದೆ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

