ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಬಚಾವಾದೆ ಮಾರಾಯ!
ನಮ್ಮ ಸಂಸ್ಥೆಯಿಂದ “ನೀರಿಂಗಿಸೋಣ ಬನ್ನಿ” ಕಾರ್ಯಕ್ರಮವನ್ನು ಯೋಜಿಸಿದ್ದೆವು. ಕಾಸರಗೋಡಿನ ಜಲಕೂಟದ ಶ್ರೀ ಪಡ್ರೆಯವರನ್ನು ಮೂಡಿಗೆರೆಗೆ ಕರೆಸಿದ ನಾವು ಮೂಡಿಗೆರೆಯಂಥ ಮಲೆನಾಡಿನಲ್ಲೂ ಕೃಷಿಗೆ, ದೈನಂದಿನ ಬಳಕೆಗೆ ನೀರಿಗುಂಟಾಗುತ್ತಿರುವ ಕೊರತೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೆವು.
ಮಳೆ ನೀರನ್ನು ಕೊಯ್ಲು ಮಾಡಿ ಕೆರೆ, ಬಾವಿ, ತೊರೆ ಮತ್ತು ಹಳ್ಳಗಳಿಗೆ ಮರುಪೂರಣ ಮಾಡಲು ಯೋಜಿಸುತ್ತಿದ್ದೆವು. ಓಡುವ ನೀರನ್ನು ನಡೆಯುವಂತೆ, ನಡೆಯವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ, ನಿಲ್ಲುವ ನೀರನ್ನು ಇಂಗುವಂತೆ ಮಾಡುವಲ್ಲಿ ಕಡಿಮೆ ಖರ್ಚಿನಲ್ಲಿ ಯಶಸ್ಸು ಪಡೆದ ನೂರಾರು ಜನರ ಪ್ರತಿನಿಧಿಯಾಗಿದ್ದ ಪಡ್ರೆಯವರನ್ನು ಮೂಡಿಗೆರೆಗೆ ಕರೆಸಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಕಾರ್ಯಕ್ರಮದ ಕುರಿತು ಸಮಾಲೋಚಿಸಲು ತೇಜಸ್ವಿಯವರಲ್ಲಿಗೆ ತೆರಳಿದೆ.
ಮನೆಯ ಹಿಂದಿನ ವರಾಂಡದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಸೀರಿಯಸ್ ಆಗಿ ಪುಸ್ತಕ ಓದುತ್ತಿದ್ದರು. ಓದುವುದರಲ್ಲಿ ಎಷ್ಟರ ಮಟ್ಟಿಗೆ ತಲ್ಲೀನರಾಗಿದ್ದರೆಂದರೆ ತೀರಾ ಚಿಕ್ಕ ಶಬ್ಧಕ್ಕೂ ಸರಕ್ಕನೆ ಪ್ರತಿಕ್ರಿಯಿಸುತ್ತಿದ್ದವರಿಗೆ ನಾನು ಅವರ ಹಿಂದೆ ಹೋಗಿ ನಿಂತಿದ್ದರೂ ಅದು ಅವರು ಗಮನಕ್ಕೆ ಬಂದಿರಲಿಲ್ಲ. ಅಷ್ಟರಲ್ಲಿ ಅವರ ಮನೆಯ ನಾಯಿಯೊಂದು ನನ್ನ ಬಳಿ ಬಂದು ನನ್ನ ಕಾಲನ್ನು ಮೂಸಿ ಕಚಗುಳಿ ಇಟ್ಟಿತು. ಆಗ ಮಿಸುಗಾಡಿದ ನನ್ನ ಚಲನೆಯಿಂದ ವಿಚಲಿತರಾದ ತೇಜಸ್ವಿ “ಯಾವಾಗ ಬಂದೆಯಯ್ಯಾ” ಎಂದರು. “ಐದು ನಿಮಿಷ ಆಯಿತು ಡಿಸ್ಟರ್ಬ್ ಮಾಡೋದು ಬೇಡ ಎಂದುಕೊಂಡೆ. ಅಷ್ಟರಲ್ಲಿ ಈ ನಾಯಿ ಬಂದು ಹೀಗಾಯಿತು” ಎಂದೆ.
“ಆ ಜುಗಾರಿಕ್ರಾಸ್ನ ಮುಂಚೇನೆ ಬರೆದು ಬದುಕಿದೆ ಮಾರಾಯ. ಇಲ್ಲಿ ನೋಡು, ಈ ಡಾ ವಿಂಚಿ ಕೋಡ್ ಎಲ್ಲೋ ಒಂಥರಾ ಪ್ಯಾರಲಲ್ ಟೆಕ್ನಿಕ್ ಅನ್ನಿಸುತ್ತೆ. ಈ ಪುಸ್ತಕ ಎಲ್ಲಾದರೂ ಜುಗಾರಿಕ್ರಾಸ್ಗಿಂತ ಮೊದಲೇ ಬಿಡುಗಡೆಯಾಗಿಬಿಟ್ಟಿದ್ದರೆ ಈ ವಿಮರ್ಶೆಯವರು ನನ್ನನ್ನು ಹುರಿದು ಮುಕ್ಕುತ್ತಿದ್ದರು. ಇವರುಗಳು ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡೋದಿಕ್ಕೆ ಯಾರಿಗೆ ಟೈಂ ಇದೆ ಹೇಳು? ಓದಿ ನೋಡಿದೀಯಾ ಈ ಪುಸ್ತಕವನ್ನ?” ಎಂದು ಡಾನ್ ಬ್ರೌನ್ ಬರೆದಿದ್ದ ಡಾ ವಿಂಚಿ ಕೋಡ್ ಪುಸ್ತಕವನ್ನು ಹಿಡಿದಿದ್ದ ಕೈಯನ್ನು ಮುಂದೆ ಮಾಡಿದರು. “ಇಲ್ಲ“ಎಂದೆ.

“ಕೆಂಜಿಗೆ ಪ್ರದೀಪ ಕಳಿಸಿದ್ದು ಈ ಪುಸ್ತಕ, ನಾನು ಓದಿದ ಮೇಲೆ ಕೊಡ್ತೀನಿ. ಓದಿ ನೋಡು.” ಎಂದರು. ಅವತ್ತಿಗಾಗಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಈ ಬೆಸ್ಟ್ ಸೆಲ್ಲರ್ ಪುಸ್ತಕವನ್ನು ಓದಬೇಕೆಂದು ನಾನೂ ಕಾತರಗೊಂಡಿದ್ದೆ. ಕೆಲ ದಿನಗಳ ನಂತರ ತೇಜಸ್ವಿಯವರಿಂದ ಎರವಲು ಪಡೆದು ಓದಿ ಸರಿಯಾದ ಸಮಯಕ್ಕೆ ಸುಸ್ಥಿತಿಯಲ್ಲಿ ವಾಪಾಸ್ ಕೊಡದಿದ್ದಕ್ಕೆ ಬೈಸಿಕೊಂಡಿದ್ದೂ ಆಯ್ತು. ಇದೇ ಕಥಾ ವಸ್ತುವಿನ ಸಿನಿಮಾವನ್ನು ನೋಡಿ ಜುಗಾರಿಕ್ರಾಸ್ನ ಕಥಾ ವೇಗಕ್ಕೂ, ಇದಕ್ಕೂ ಎಲ್ಲೋ ಒಂದು ಕಡೆ ನಿರೂಪಣಾ ತಾಂತ್ರಿಕತೆ, ಸಾಮ್ಯತೆ ಇದೆಯಲ್ಲಾ ಎಂದೆನಿಸಿತು.
ಜುಗಾರಿ ಕ್ರಾಸ್ ಬಿಡುಗಡೆಯಾಗಿ ಹಾಟ್ ಸೆಲ್ಲರ್ ಆಗಿತ್ತು. ಥ್ರಿಲ್ಲರ್ ಒಂದನ್ನು ಹೀಗೂ ಬರೆಯಬಹುದಾ? ಅಥವಾ ಸಾಮಾಜಿಕ ಸ್ಥಿತ್ಯಂತರಗಳನ್ನು ಥ್ರಿಲ್ಲಿಂಗ್ ಆಗಿ ಹೀಗೂ ಹೇಳಬಹುದಾ? ಎಂದು ಜನ ಅಚ್ಚರಿಗೊಂಡಿದ್ದರು. ಸಿನಿಮಾ ಮಂದಿ ಬೇರೆ ಬಿಟ್ಟರೆ ಕೆಟ್ಟೆ ಎಂದು ತೇಜಸ್ವಿಯವರ ದುಂಬಾಲು ಬಿದ್ದಿದ್ದರು. ಕಾಡಿ ತೇಜಸ್ವಿಯವರನ್ನು ಒಪ್ಪಿಸಿದ ನಿರ್ಮಾಪಕರು ಕೋಡ್ಲುರಾಮಕೃಷ್ಣರವರಿಗೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದರು. ಆಗಾಗ ಸುಳಿದಾಡುತ್ತಿದ್ದ ನನಗೆ “ಪಾತ್ರ ಮಾಡ್ತೀಯೆನಯ್ಯಾ ಜುಗಾರಿ ಕ್ರಾಸ್ನಲ್ಲಿ” ಎಂದರು ತೇಜಸ್ವಿ. ಮಂದಣ್ಣ, ಲಕ್ಷ್ಮಣರಂತೆ ಸಿನಿಮಾ ಪ್ರಪಂಚದೆಡೆಗೆ ಬೆರಗಿನಿಂದ ನೋಡುತ್ತಿದ್ದ ನಾನು ರೋಮಾಂಚಿತನಾದೆ.
ತೇಜಸ್ವಿಯವರ ತಬರನ ಕಥೆಯನ್ನು ಗಿರೀಶ್ ಕಾಸರವಳ್ಳಿ ಸಿನಿಮಾ ಮಾಡಿದ್ದಾಗ ಅದರಲ್ಲಿ ಸಂಭಾಷಣೆ ಸಹಿತ ಪಾತ್ರ ಮಾಡಿದ್ದ ನನಗೆ ಸಿನಿಮಾ ಪ್ರಪಂಚದೆಡೆಗೆ ಸಾಮಾನ್ಯ ಯುವಕರಿಗಿದ್ದಂತೆ ಸಹಜವಾದ ಆಕರ್ಷಣೆ ಇತ್ತು. ನೋಡುವುದಕ್ಕೆ ಸ್ವಲ್ಪ ಮಲೆಯಾಳಿಯಂತೆ ಕಾಣುತ್ತಿದ್ದ ನಾನು “ಅಮೋಫಾಸ್ ಮೂಟೆಯ ಕುಟ್ಟಿ ಪಾತ್ರ ಸಿಗೋದಾದ್ರೆ ಓಕೆ” ಎಂದೆ. “ನಿನಗೂ ಹಿಡೀತಾ ಸಿನಿಮಾ ಹುಚ್ಚು” ಎಂದು ಛೇಡಿಸಿದರು. ನಾನಾ ಕಾರಣಗಳಿಂದ ಚಿತ್ರೀಕರಣ ಪ್ರಾರಂಭವಾಗಲಿಲ್ಲ. ಆ ಥ್ರಿಲ್ಲರ್ ಕಥೆಗೆ ಎಂದು ಮೋಕ್ಷವೋ ಕಾಯ್ದು ನೋಡಬೇಕು.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

