
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಟೀಂ ವರ್ಕ್
ಒಂದು ಕಾರ್ಯಯೋಚನೆಯನ್ನು ತಯಾರಿಸಿ ಶ್ರೀ ಬಿ.ಎಲ್. ಶಂಕರ್ ಮತ್ತು ಶ್ರೀ ಗಂಗಯ್ಯ ಹೆಗ್ಗಡೆಯವರ ಗಮನಕ್ಕೆ ತಂದು ಸಲಹೆ ಸೂಚನೆಗಳನ್ನು ಪಡೆದೆವು. ಮೂಡಿಗೆರೆಯ ಹಿರಿಯರು, ತೇಜಸ್ವಿಯವರ ಅಭಿಮಾನಿಗಳು, ಪರಿಣಿತರುಗಳು ಮತ್ತು ಸಾಮಾಜಿಕ ಕಾರ್ಯಕರ್ತರುಗಳನ್ನು ಸಂಪರ್ಕಿಸಿ ವಿಚಾರ ವಿನಿಮಯ ನಡೆಸಿದೆವು. ಮೂರುನಾಲ್ಕು ಸಭೆಗಳನ್ನು ನಡೆಸಿ ಹತ್ತು ಹಲವಾರು ವರ್ಷಗಳಿಂದ ತೇಜಸ್ವಿಯವರೊಡನೆ ಹತ್ತಿರದ ಸಂಪರ್ಕದಲ್ಲಿದ್ದ ಶ್ರೀ ಗಂಗಯ್ಯ ಹೆಗ್ಗಡೆ ಮತ್ತು ಶ್ರೀ ಬಿ.ಎಲ್. ಶಂಕರ್ರವನ್ನು ನಮ್ಮ ಕಾರ್ಯಪಡೆಯ ನೇತೃತ್ವವಹಿಸಿಕೊಳ್ಳಲು ಕೇಳಿಕೊಂಡೆವು. ವಿಸ್ಮಯ ಪ್ರತಿಷ್ಠಾನ ರೂಪುಗೊಂಡಿತು. ಈ ಇಬ್ಬರೂ ನಮ್ಮೆಲ್ಲರ ಆಲೋಚನೆಗಳಿಗೆ ತಮ್ಮ ಅನುಭವ ಮತ್ತು ಸಂಪರ್ಕದ ಧಾರೆ ಎರೆದು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಮಸ್ತರಿಗೆ ತಲುಪಿಸುವ ಆಶಯವನ್ನು ಹೊಂದಿದ್ದಾರೆ.
ತೇಜಸ್ವಿಯವರ ಕಾಲಾನಂತರ ನೀನಾಸಂನ ನಿರ್ದೇಶಕ ಶ್ರೀ ಗಣೇಶ್ರವರ ನೇತೃತ್ವದ ತಂಡದಿಂದ ರಹಸ್ಯ ವಿಶ್ವ ಮತ್ತು ತಬರನ ಕಥೆ ನಾಟಕವನ್ನು ಮೂಡಿಗೆರೆಯಲ್ಲಿ ನಡೆಸಿಕೊಟ್ಟದ್ದು ಒಂದು ವಿಶೇಷ ಘಟನೆ. ತೇಜಸ್ವಿಯವರು ತೀರಿಹೋಗಿ ಒಂದು ವರ್ಷದ ನಂತರ “ತೇಜಸ್ವಿ – ಒಂದು ಅವಲೋಕನ “ಎಂಬ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮೂಡಿಗೆರೆಯಲ್ಲಿ ನಮ್ಮ ಕಲಾಕುಟೀರ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಸಿದೆವು.
ಹಿರಿಯ ವಿಮರ್ಶಕರಾದ ಜಿ.ಹೆಚ್. ನಾಯಕ್, ಕಲಾವಿದರಾದ ಕೆ.ಟಿ. ಶಿವಪ್ರಸಾದ್, ಪ್ರಕಾಶಕರಾದ ಶ್ರೀರಾಮ್, ಪರಿಸರವಾದಿಗಳಾದ ಸೇನಾನಿ ಮತ್ತು ಕೃಪಾಕರ, ಪತ್ರಿಕೋದ್ಯಮಿಗಳಾದ ಗಿರಿಜಾಶಂಕರ್, ಸಾಹಿತಿ ಜಯಂತ್ ಕಾಯ್ಕಿಣಿ, ಬರಹಗಾರರಾದ ಎಲ್.ಸಿ. ಸುಮಿತ್ರಾ, ಸಂಶೋಧಕರಾದ ಕೆ.ಸಿ. ಶಿವಾರೆಡ್ಡಿ, ಚಲನಚಿತ್ರ ನಿರ್ದೇಶಕರಾದ ಯೋಗರಾಜ್ ಭಟ್, ರಾಜಕಾರಣಿ ಮೋಟಮ್ಮ ಮುಂತಾದವರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಹಲವರು ತೇಜಸ್ವಿಯವರೊಂದಿಗಿನ ತಮ್ಮ ಒಡನಾಟವನ್ನು ತೆರೆದಿಟ್ಟರು. ಅದೇ ದಿನ ಸಂಜೆ ಮೈಸೂರಿನ ರಂಗಾಯಣ ಕಲಾವಿದರಿಂದ “ಕೃಷ್ಣೇಗೌಡರ ಆನೆ” ನಾಟಕ ಪ್ರದರ್ಶನವನ್ನು ಏರ್ಪಡಿಸಿದ್ದೆವು. ಇದೇ ಸಂದರ್ಭದಲ್ಲಿ ಪ್ರದರ್ಶಿಸಿದ ತೇಜಸ್ವಿಯವರ ಹಕ್ಕಿ ಫೋಟೋಗಳು ಸಾವಿರಾರು ಜನರ ಮನ ಸೂರೆಗೊಂಡವು.
ಸಂಗೀತದೆಡೆಗೆ ವಿಶೇಷ ಆಸಕ್ತಿ ಇದ್ದ ತೇಜಸ್ವಿಯವರಿಗೆ ಶ್ರದ್ಧಾಂಜಲಿಗಾಗಿ ಶಿವಮೊಗ್ಗ ಸುಬ್ಬಣ್ಣನವರನ್ನೇ ಕರೆಸಿ ಸಂಗೀತ ಕಛೇರಿ ಏರ್ಪಡಿಸಿದ್ದೆವು. ಸುಬ್ಬಣ್ಣನವರೊಡನೆ ಆಗಮಿಸಿದ್ದ ಮುದ್ದುಕೃಷ್ಣರವರು ಹತ್ತಾರು ಗೀತೆಗಳನ್ನು ಭಾವತುಂಬಿ ಹಾಡಿದರು. ಅದೇ ದಿನ ನೀನಾಸಂ ಕಲಾವಿದರಿಂದ ಕಂಬಾರರ “ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ” ನಾಟಕ ಪ್ರದರ್ಶನವನ್ನು ಏರ್ಪಡಿಸಿ ನಮ್ಮ ಸಾಧ್ಯತೆಯ ಮಿತಿಯಲ್ಲಿ ಹಿರಿಯ ಪ್ರೇರಣಾ ಚೇತನಕ್ಕೆ ಗೌರವ ಸಲ್ಲಿಸಿದೆವು.
“ಯಾವ ಕಾಲದಲ್ಲಿಯೂ ಇಲ್ಲದಷ್ಟು ಪ್ರಶಸ್ತಿಗಳು ಇತ್ತೀಚೆಗೆ ಸೃಷ್ಠಿಯಾಗಿವೆ. ಅನೇಕ ಹಿರಿಯ ಸಾಹಿತಿಗಳು ಯಾವ ಪ್ರಶಸ್ತಿಯೂ ಇಲ್ಲದೇ ತಮ್ಮ ಸೃಷ್ಠಿಶೀಲ ಕೆಲಸ ಮಾಡಿಕೊಂಡು ಹೋಗಿದ್ದಾರೆ. ಈ ಪ್ರಶಸ್ತಿಗಳ ಜಾಲದಲ್ಲಿ ಸಿಲುಕಿ ಸಾಹಿತ್ಯದ ನಿಜ ಸಂವೇದನೆ ನರಳುತ್ತಿದೆ. ಪ್ರತೀ ಊರಲ್ಲಿ, ಜಿಲ್ಲೇಲಿ, ಗಲ್ಲೀಲಿ ಪ್ರಶಸ್ತಿ ಕೊಡೋರ ಗುಂಪೇ ಹುಟ್ಟಿಕೊಂಡಿದೆ. ಪ್ರಶಸ್ತಿ ಕೊಡೋದು, ಪಡೆಯೋದೇ ಒಂದು ವ್ಯವಹಾರವಾಗಿಬಿಟ್ಟಿದೆ. ಕೆಲ ಪ್ರಶಸ್ತಿಗಳು ಸನ್ಮಾನಿತರಿಂದಲೇ ಗೌರವ ಪಡೆಯುತ್ತವೆ. ಉದಾಹರಣೆಗೆ ಕುವೆಂಪು, ಕಾರಂತರಿಗೆ ಪಂಪ ಪ್ರಶಸ್ತಿ ಬಂದ ಹಾಗೆ. ಪ್ರಶಸ್ತಿಗೆ ಅಷ್ಟೆಲ್ಲಾ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ. ಒಬ್ಬ ಲೇಖಕ ಸಾಹಿತ್ಯ ರಚನೆಮಾಡಿ, ಪ್ರಕಟಿಸಿದಾಗ ಅಷ್ಟು ಪ್ರತಿಕ್ರಿಯಿಸದೇ ಸುಮ್ಮನಿರೋ ಜನ ಪ್ರಶಸ್ತಿ ಸಿಕ್ಕಿದ ಕೂಡಲೇ ಆಹಾ! ಓಹೋಹೋ! ಎಂದು ಬಂಬಡಾ ಬಾರಿಸಲು ಶುರೂ ಮಾಡುತ್ತಾರೆ’’ ಎನ್ನುತ್ತಾರೆ ತೇಜಸ್ವಿ.
ಸಾಹಿತ್ಯವನ್ನು ಸಂತೋಷಕ್ಕಾಗಿಯೂ ಓದುವವರನ್ನು ಕಡೆಗಣಿಸಬಾರದೆಂಬ ವಿವೇಚನೆಯಲ್ಲಿ ವ್ಯಕ್ತಿಗಳ ಕಥೆ ಹೇಳುವ ಮೂಲಕ ಸಮುದಾಯದ ಕಥೆ ಹೇಳಿದರು ತೇಜಸ್ವಿ. ಕಾದಂಬರಿಯ ಕುರಿತು ವರ್ಕ್ ಮಾಡ್ತಿದ್ದೀನಿ ಎಂದು ಹೇಳುತಿದ್ದ ಕೆಲವೇ ಕನ್ನಡದ ಲೇಖಕರಲ್ಲಿ ತೇಜಸ್ವಿ ಒಬ್ಬರು. ಒಂದು ಸಾಹಿತ್ಯ ಕೃತಿ ಅಂತಿಮವಾಗಿ ಓದುಗನ ಕೈಗೆ ಸೇರುವ ಮೊದಲು ಹಲವಾರು ಬಾರಿ ಪರಿಷ್ಕರಣೆ ಆಗುವ ಅಗತ್ಯವನ್ನು ಅರಿತಿದ್ದ ತೇಜಸ್ವಿ ತಾವು ಓದುಗರ ಸ್ಥಾನದಲ್ಲಿ ನಿಂತು ತಮ್ಮ ಬರಹಗಳನ್ನು ವಿಮರ್ಶಿಸುತಿದ್ದರು.
ಅವರ ಬರಹದ ಶೈಲಿ ಮತ್ತು ನಿರೂಪಣೆಯ ವೈವಿಧ್ಯತೆಯನ್ನು ಓದುಗರು ಪ್ರಸ್ತಾಪಿಸಿ ಮಾತಿಗೆಳೆದಾಗ , `ಭಿನ್ನವಾಗಿ ಬರೆಯಬೇಕೆಂದು ಎಂದೂ ಪ್ರಜ್ಞಾಪೂರ್ವಕವಾಗಿ ಪ್ರಯತ್ನಪಟ್ಟವನಲ್ಲ ನಾನು. ಅದು ನಮ್ಮ ವ್ಯಕ್ತಿತ್ವದಲ್ಲಿ ಮತ್ತು ಬದುಕಿನ ಬಗೆಯಲ್ಲಿ ಅನೂಚಾನವಾಗಿ ಮೂಡಿರುತ್ತದೆ. ಯಾರನ್ನೂ ಮಾದರಿಯಾಗಿಟ್ಟುಕೊಳ್ಳದೇ ತಮ್ಮದೇ ನೈಜ ಅನುಭವವನ್ನು ಕಥೆಯೋ, ಕಾದಂಬರಿಯೋ ಅಥವಾ ಇನ್ಯಾವುದೇ ಸೃಜನಶೀಲ ಸಾಹಿತ್ಯದ ರೂಪದಲ್ಲಿ ಹೊರಗೆಡಹುತ್ತಾ ಹೋದಂತೆಲ್ಲ ನೂತನಲೋಕವೊಂದು ಅಕ್ಷರರೂಪದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಾಮಾಜಿಕ ಕಳಕಳಿ ಮತ್ತು ಕಲೆಗಾರಿಕೆ ಒಂದನ್ನೊಂದು ಬಿಟ್ಟು ತಮ್ಮತಮ್ಮ ಹಾದಿಯಲ್ಲಿ ಮುನ್ನಡೆದರೆ ಅದು ಸಾಹಿತ್ಯದ ಅದಃಪತನದ ಸಂಕೇತ.’ ಎನ್ನುತಿದ್ದ ತೇಜಸ್ವಿಯವರಿಗೆ ಸರಳವಾಗಿ ಬರೆಯುವ ಮೂಲಕವೂ ಗಹನವಾದ ವಿಷಯ ಹೇಳುವ ಸಾಹಿತ್ಯಿಕ ಹಿಡಿತ ಸಿದ್ಧಿಸಿತ್ತು.
ಪಂಪ ಪ್ರಶಸ್ತಿಯನ್ನು ಸ್ವೀಕರಿಸಲು ಹೋಗದೆ ಕಡೆಗೆ ಸರ್ಕಾರವೇ ಮನೆಗೆ ಬಂದು ಒಪ್ಪಿಸಿಹೋಗಬೇಕಾಗಿ ಬಂದದ್ದು ಎಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಯಾಕೆ ನೀವೇ ಹೋಗಲಿಲ್ಲ ಎಂದಾಗ “`ಪ್ರಶಸ್ತಿ ಮುಖ್ಯವಲ್ಲ, ಓದುಗರನ್ನು ಗೆಲ್ಲಬೇಕು, ಪ್ರಶಸ್ತಿಯನ್ನಲ್ಲ. ಓದುಗನಿದ್ದಾನೆ ಎಂಬು ಅರಿವಿನಿಂದ ಬರೆಯಬೇಕು. ಸಾಹಿತ್ಯದ ಅನುಭವ ಪ್ರತಿಯೊಬ್ಬ ಓದುಗನ ಸ್ವಂತ ಪ್ರಕ್ರಿಯೆ. ಒಬ್ಬೊಬ್ಬನಲ್ಲೂ ಪ್ರತೀ ಪಾತ್ರ ಮತ್ತು ಸನ್ನಿವೇಶ ತನ್ನದೇ ಆದ ಪ್ರಪಂಚವನ್ನು ಸೃಷ್ಠಿಸಿರುತ್ತದೆ. ಪ್ರಶಸ್ತಿಗೆ ಹಾತೊರೆಯಬಾರದು. ಹಾಗೆಲ್ಲಾದರೂ ಆದರೆ ಬಂಡಾಯ, ನವ್ಯ, ನವೋದಯ, ಸಾಹಿತ್ಯದಂತೆ ಪ್ರಶಸ್ತಿ ಸಾಹಿತ್ಯವೆಂಬ ಪ್ರಕಾರವೊಂದು ಹುಟ್ಟಿಕೊಳ್ಳುತ್ತದೆ. ಆ ವೇದಿಕೆ, ಪರಾಕು, ಕಿರೀಟ, ಗಲಾಟೆ ಸನ್ಮಾನ, ಶಾಲು ಹೊದಿಸುವುದು, ಹಾರ ಹಾಕುವುದು; ನಾಚಿಕೆಯಾಗುತ್ತೆ ಮಾರಾಯ, ಥೂ ಅದನ್ನೆಲ್ಲಾ ಸಹಿಸ್ಕೊಳ್ಳೋಕಾಗಲ್ಲ.
ಅದಕ್ಕಿಂತ ಮುಖ್ಯವಾದ ಕೆಲಸ ಸಾಕಷ್ಟು ಬಾಕಿ ಉಳಿದಿದೆ ಇಲ್ಲಿ ಗೊತ್ತಾ? ಕೆಲವರಿಗೆ ಈ ಪ್ರಶಸ್ತಿ ಪೂಜೇನೆ ಇಷ್ಟ ಆಗುತ್ತೆ. ಗೊತ್ತೇ ಇಲ್ಲದ ಸಂಸ್ಥೆಗಳು ಕೊಡೋ ಹೆಸರೇ ಕೇಳದ ಪ್ರಶಸ್ತಿಗಳಿಗೆ ಅರ್ಜಿ ಹಾಕಿ ಶಿಫಾರಸ್ಸು ಮಾಡಿಸಿ ಕುರ್ಚಿ ಮೇಲೆ ಕೂರಿಸಿಸಿಕೊಂಡು ಹಾರ ತುರಾಯಿ ಹಾಕಿಸಿಕೊಳ್ತಾರೆ ಮಾರಾಯ, ನನಗಂತಹ ಹುಚ್ಚೂ ಇಲ್ಲ, ಪುರುಸೊತ್ತು ಮೊದಲೇ ಇಲ್ಲ. ಅವರಿಗೆ ಪೇಪರಲ್ಲಿ ಹೆಸರು, ಫೋಟೋ ಬರಬೇಕು. ಏನಾದ್ರೂ ಮಾಡ್ಕೊಂಡು ಸಾಯ್ಲಿ ಬಿಡು”
ಜೊತೇಲಿದ್ದ ಆಪ್ತರೊಬ್ಬರನ್ನು ತೋರಿಸಿ ‘ನೋಡು ಇವನಿಗೆ ಪ್ರಶಸ್ತಿ, ಸನ್ಮಾನ ಅಂದ್ರೆ ಬಾಳ ಇಷ್ಟ. ಬೇಕಿದ್ರೆ ಇವನಿಗೇ ಕೊಡ್ಲಿ. ನೀನೇ ಹೋಗಿ ಇಸ್ಕಳಯ್ಯ ಬೇಕಿದ್ರೆ’ ಎಂದಿದ್ದ ತೇಜಸ್ವಿಯವರಿಗೆ ಔಪಚಾರಿಕತೆ ಒಂದು ಹಾಸ್ಯಾಸ್ಪದದ ವಿಷಯವಾಗಿತ್ತು.
ಇತ್ತೀಚೆಗೆ ಪ್ರಶಸ್ತಿ ಪಡೆದವರೊಬ್ಬರು ಖಾಸಗಿಯಾಗಿ ನನ್ನ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡದ್ದಿಷ್ಟು. ಸ್ವಯಂಸೇವಾ ಸಂಸ್ಥೆಯೊಂದು ಪ್ರಶಸ್ತಿಗಾಗಿ ನಿಮ್ಮನ್ನು ಆಯ್ಕೆ ಮಾಡಿದ್ದೇವೆ, ಇಪ್ಪತ್ತೆöÊದು ಸಾವಿರ ಕೊಡಿ, ಬೆಂಗಳೂರಿನಲ್ಲಿ ನಡೆಯುವ ಸಮಾರಂಭಕ್ಕೆ ಖರ್ಚಿದೆ ಎಂದರಂತೆ. ಬೆಂಗಳೂರಿನಲ್ಲಿ ಕೊಡುವ ಪ್ರಶಸ್ತಿ ಎಂದರೆ ರಾಜ್ಯ ಮಟ್ಟದ ಪ್ರಶಸ್ತಿ ಎಂದು ಹೇಳಿಕೊಳ್ಳಬಹುದೆಂದು ಸಡಗರದಿಂದ ಹಣ ಹೊಂದಿಸಿ ನೀಡಿ, ಸ್ಥಳೀಯವಾಗಿ ಭಾರೀ ಸುದ್ಧಿ ಹಬ್ಬಿಸಿದರಂತೆ.
ಸನ್ಮಾನದ ದಿನ ಬೆಂಗಳೂರಿಗೆ ಹೋಗಿ ನೋಡಿದರೆ, ಇವರೊಡನೆ ಸುಮಾರು ಹದಿನೈದು ಜನರಿಗೆ ಸನ್ಮಾನ! (೨೫೦೦೦*೧೫=೩೭೫೦೦೦) ಸಮಾರಂಭದ ಒಟ್ಟು ಖರ್ಚು ಸುಮಾರು ಒಂದೂವರೆ ಲಕ್ಷ. ಪ್ರಶಸ್ತಿ ನೀಡಿದ ಸಂಸ್ಥೆಗೆ ಪ್ರಶಸ್ತಿ ಪಡೆದವರಿಗಿಂತ ಹೆಚ್ಚು ಸಂತೋಷವಾಗಿತ್ತು. ಸಂಸ್ಥೆ ತನ್ನನ್ನು ತಾನೇ ಗೌರವಿಸಿಕೊಳ್ಳುವುದೆಂದರೆ ಹೀಗೇ ಅಲ್ಲವೇ? ಪಾಪ ಇವರು ಪ್ರಶಸ್ತಿ ಫಲಕ ಪಡೆದು, ಸಮಾರಂಭದ ಫೋಟೋಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿಸಿ ನಿಟ್ಟುಸಿರು ಬಿಟ್ಟರಂತೆ. ಪ್ರಶಸ್ತಿ-ಪುರಸ್ಕಾರಗಳು ತಮ್ಮ ಘನತೆ-ಗೌರವವನ್ನು ಕಳೆದುಕೊಂಡಿರುವುದಕ್ಕೆ ಇದೊಂದು ವಿಷಾದಮಯ ಉದಾಹರಣೆ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
