
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಗಣಿ-ರಾಜಕಾರಣಿ
ಕುದುರೆಮುಖ ಆಂದೋಲನ ಪರಾಕಾಷ್ಟೆಯಲ್ಲಿದ್ದಾಗ ಸ್ಥಳೀಯ ಪರಿಸರ ಸಂವೇದಿ ಸಂಸ್ಥೆಯಾದ ನಮ್ಮ ನೇಚರ್ ಕ್ಲಬ್ನಿಂದ ಗಣಿಗಾರಿಕೆಯನ್ನು ವಿರೋಧಿಸಿ ಹಸ್ತಾಕ್ಷರ ಅಭಿಯಾನವನ್ನು ಪ್ರಾರಂಭಿಸಿದೆವು. ನಮ್ಮ ಸಂಸ್ಥೆಯ ಹಿರಿಯ ಸದಸ್ಯರಾದ ತೇಜಸ್ವಿಯವರ ಹಸ್ತಾಕ್ಷರದಿಂದಲೇ ಪ್ರಾರಂಭಿಸಿದ ನಾವು ಸುಮಾರು 5೦೦೦ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಾಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಲ್ಲದೇ ಚಿಕ್ಕಮಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ ತೇಜಸ್ವಿಯವರನ್ನು ಭಾಗವಹಿಸುವಂತೆ ಆಹ್ವಾನಿಸಿ ಯಶಸ್ವಿಯೂ ಆದೆವು. ನಮ್ಮ ಮನವಿಗೆ ಸಹಿ ಹಾಕುವ ಮುಂಚೆ ತೇಜಸ್ವಿ ನಮ್ಮನ್ನು ಕೇಳಿದ ಪ್ರಶ್ನೆ, “ಕುದುರೆಮುಖ ಪ್ರದೇಶದ ಗ್ರಾಮೀಣ ಜನರು ಇದಕ್ಕೆ ಸಹಿ ಹಾಕಿದ್ದಾರಾ?” ಎಂದು.
ಯಾವುದನ್ನೂ ಇದು ಹೀಗೇ, ಅದು ಹಾಗೇ ಎಂದು ತೀರ್ಮಾನಿಸುವ ಗೋಜಿಗೇ ಹೋಗದೆ ಅಡ್ಡಗೋಡೆಯ ಮೇಲೆ ದೀಪವಿಟ್ಟು ನಮ್ಮಂತ ಹಲವರನ್ನು ಯೋಚನೆಗೆ ಹಚ್ಚುತ್ತಿದ್ದರು. ಪರಸ್ಪರ ವಿರುದ್ಧವಾದ ಐಡಿಯಾಲಜಿಗಳು ಸದಾ ತಿಕ್ಕಾಟದಲ್ಲಿಯೇ ಇರಬೇಕು, ಅಲ್ಲಿಯೇ ಸರಿ ತಪ್ಪುಗಳು ನಿರ್ಧಾರವಾಗುತ್ತಾ ಹೋಗುತ್ತವೆ ಎನ್ನುತಿದ್ದ ತೇಜಸ್ವಿ ಈ ದೇಶದ ರಾಜಕಾರಣವನ್ನು ಪ್ರಸ್ತಾಪಿಸುತ್ತಾ “ಸಿಂಹಾಸನ ಖಾಲಿ ಇದೆ ಎಂದು ಆಚೀಚೆ ಕಳ್ಳನಂತೆ ಗಮನಿಸಿದ ಕಾವಲುಗಾರನೇ ಸಿಂಹಾಸನವೇರಿ ಕೂರುವುದು, ಆ ಸಮಯಸಾಧಕನನ್ನು ಕೆಳಗಿಳಿಸದೇ ನನಗೂ ಎಂದಾದರೂ ಅದೇ ರೀತಿಯ ಲಾಟರಿ ಹೊಡೆಯಬಹುದೆಂದು ಕಾಯುತ್ತಾ ಕುಳಿತಿರುವವ ಸಿಂಹಾಸನದ ಅಯೋಗ್ಯನಿಗೆ ಪರಾಕ್ ಹೇಳುವುದು, ಎಂಥಾ ಆಡಳಿತನಯ್ಯಾ?” ಎಂದು ಹೇಸಿಗೆ ವ್ಯಕ್ತಪಡಿಸುತ್ತಿದ್ದರು.
ಸರ್ಕಾರದ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಅನಿವಾರ್ಯ ಆಯ್ಕೆಯೆಂದು ಪ್ರತಿಪಾದಿಸುವ ತೇಜಸ್ವಿ “ರಾಜಕಾರಣಿಗಳು ಮತಗಳಿಗಾಗಿ ಹುಚ್ಚರಿಗೆ, ಬೆಪ್ಪರಿಗೆ ಕಡೆಗೆ ಕಳ್ಳರಿಗೂ ನಮಸ್ಕಾರ ಮಾಡುವುದನ್ನು ನೋಡಿ ಅಯ್ಯೋ ಅನ್ಸುತ್ತೆ ಮಾರಾಯ ಎಲ್ಲಾ ಅವರವರ ಕರ್ಮ” ಎಂದು ಗೇಲಿ ಮಾಡುತ್ತಿದ್ದರು.
ತೋಟದ ಬೇಲಿಗೆ ಹಂದಿ ಹಿಡಿಯಲೆಂದು ಯಾರೋ ಹಾಕಿದ ಕೇಬಲ್ ಉಳ್ಳಕ್ಕೆ ಆಕಸ್ಮಿಕವಾಗಿ ಸಿಕ್ಕಿಬಿದ್ದ ನರಿಯನ್ನು ಕುತೂಹಲಕ್ಕೆ ತೂಕಮಾಡಿದ ತೇಜಸ್ವಿ ತಾವೇ ಸಾಕಿದ ನಾಯಿಯನ್ನು ಪೋಸ್ಟ್ ಮಾರ್ಟಮ್ ಮಾಡಿನೋಡಿದ್ದು ಸಹಾ ತಮ್ಮ ಜ್ಞಾನಾನ್ವೇಷಣೆಯ ಭಾಗವೆಂದೇ ತಿಳಿದಿದ್ದರು. ಮನೆಗೆ ನುಗ್ಗುತಿದ್ದ ಹಾವನ್ನು ಗುಂಡುಹೊಡೆದು ಸಾಯಿಸಿದ್ದು ಆತ್ಮರಕ್ಷಣೆಯ ಅನಿವಾರ್ಯತೆಯಿಂದ ಮಾತ್ರ.
ಹೀಗಿದ್ದಾಗೊಮ್ಮೆ ಪಕ್ಕದ ಹಳ್ಳಿಯ ಯುವಕನೊಬ್ಬ ತೇಜಸ್ವಿಯವರ ಮನೆಗೆ ಬಂದ. ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದವರನ್ನು ನೋಡಿ ಹೇಗಪ್ಪಾ ಮಾತನಾಡಿಸುವುದೆಂದು ಗೊಂದಲದಲ್ಲಿ ಹಿಂಜರಿಯುತಿದ್ದಾಗ ಅವರೇ ಗಮನಿಸಿ “ಏನಯ್ಯಾ ಏನ್ ಸಮಾಚಾರ? ಏನು ಬಂದಿದ್ದು?” ಎಂದರು.
ಆತ ‘ಸಾರ್ ಸಾರ್’ ಎಂದು ಸಂಕೋಚಪಡುತ್ತಲೇ ಕೇಳೋದೋ ಬೇಡವೋ ಎಂದು ನಿಂತಲ್ಲೇ ನುಲಿಯತೊಡಗಿದ. ಇದರಿಂದ ಕಿರಿಕಿರಿಗೊಳಗಾದ ತೇಜಸ್ವಿ ‘ಏನಂತ ಬಾಯ್ಬಿಟ್ಟು ಹೇಳಯ್ಯಾ ಸುಮ್ನೆ ನನ್ನ ಸಮಯ ಹಾಳು ಮಾಡ್ಬೇಡ’ ಎಂದು ಗದರಿಸಿದರು. ಆಗ ಬಂದವ ‘ಸರ್ ನನ್ ಹೆಂಡ್ತಿಗೆ ಹೆರಿಗೆಯಾಗಿದೆ……’ ತೇಜಸ್ವಿ ಮನಸ್ಸಿನಲ್ಲೇ ಇವನ್ಹೆಂಡ್ತಿಗೆ ಹೆರಿಗೆಯಾದ್ರೆ ನಾನೇನು ಮಾಡ್ಬೇಕಪ್ಪಾ ಈಗ ಎಂದುಕೊಂಡು ‘ಸರಿ ಒಳ್ಳೇದಯ್ಯಾ ಮುಂದೇನು ಹೇಳು’.
‘ಸರ್ ಅದೂ ಅದೂ’
‘ಥಥ್ ನಿನ್ನ, ಏನ್ ಹೇಳಲಿಕ್ಕಿದೆಯೋ ಹೇಳಿ ಮುಗಿಸೋ ಮಾರಾಯ’
‘ಸರ್ ನನ್ ಹೆಂಡ್ತಿಗೆ ಹೆರಿಗೆಯಾಗಿದೆೆ’
‘ಹೆರಿಗೆಯಾಗಿದೆ ಸರಿ, ಮುಂದೇನು ಹೇಳು’
‘ಮಗೀಗೊಂದು ಒಳ್ಳೆ ಹೆಸರು ಹುಡುಕಿ ಕೊಡ್ತೀರಾ?’
ಅವನ ಸುತ್ತು ಬಳಸು ಮಾತಿನಿಂದ ಸಿಟ್ಟು ಮಾಡಿಕೊಂಡ ತೇಜಸ್ವಿ “ಮಕ್ಳು ಹುಟ್ಟಿಸೋಕಾಗುತ್ತೆ ಹೆಸರು ಇಡೋಕಾಗಲ್ವಾ? ಹೋಗಯ್ಯಾ ನನಗೆ ಬೇರೆ ಕೆಲಸ ಇದೆ” ಎಂದರು.
ಮೂರ್ಖತನದಿಂದ ಅಪಮಾನಿತನಾದ ಆ ಯುವಕ ಬಂದ ದಾರಿಗೆ ಸುಂಕವಿಲ್ಲವೆದು ಹಿಂದಿರುಗುತಿದ್ದಾಗ ತೇಜಸ್ವಿ ‘ಬಾರಯ್ಯ ಇಲ್ಲಿ’ ಎಂದು ಕರೆದು ಅವನ ಹೆಸರು ಕೇಳಿ ಪರಿಚಯ ಮಾಡಿಕೊಂಡು, ಕಾಫಿ ಕುಡಿಸಿ, ಒಂದು ನಾಲ್ಕು ದಿನ ಬಿಟ್ಟು ಬಂದು ಹೆಸರು ಕೇಳಿಕೊಂಡು ಹೋಗೆಂದು ಕಳುಹಿಸಿದರು.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
