
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಲೈಫ್ ಕಾನ್ಸೆಪ್ಟ್ ಫೋಟೋ
ಒಂದೊಮ್ಮೆ ಮೂಡಿಗೆರೆಯ ಸಂತೆಯಲ್ಲಿ ಲೈಫ್ ಕಾನ್ಸೆಪ್ಟ್ ಫೋಟೋ ತೆಗೆಯೋಣ ಎಂದು ತೇಜಸ್ವಿ ಮತ್ತು ನಾನು ಹೋದೆವು. ಸಂತೆಯಲ್ಲಿದ್ದವರಿಗೆಲ್ಲ ಒಂದು ತರ ಥ್ರಿಲ್. ಮೀನು ಮಾರುವ ಮೋಣುವಿನಿಂದ ಹಿಡಿದು, ಮಡಕೆ ಮಾರುವ ಗಂಗಮ್ಮನವರೆಗೆ ಎಲ್ಲರೂ ವಿವಿಧ ಬಗೆಯಲ್ಲಿ ಪೋಸು ಕೊಡುತ್ತಾ ನಮ್ಮ ಉದ್ದೇಶವನ್ನೇ ಹಾಳು ಮಾಡಿದರು.
ಅಲ್ಲಿ ಕೆಲ್ಸ ಹತ್ತೋಲ್ಲ ಎಂದು ಬಸ್ಸ್ಟಾಂಡಿಗೆ ಬಂದ್ರೆ ದಾವಣಗೆರೆಗೆ ವಾಪಾಸ್ ಹೊರಟಿದ್ದ ಹದಿನಾರು ಕೆಲ್ಸದವರು ತಮ್ಮತಮ್ಮಲ್ಲೇ ಹೊಡೆದಾಟ ಶುರು ಮಾಡಿಕೊಳ್ಳಬೇಕೇ? ಯಾಕೋ ಇವತ್ತು ನಮ್ಮ ಗ್ರಹಚಾರ ಸರಿಯಿಲ್ಲವೆಂದು ಚಿಕನ್ ತೆಗೆದುಕೊಂಡು ಸೀದಾ ಮನೆಗೆ ವಾಪಾಸ್ ಬಂದೆವು.
ಇದನ್ನು ಪಲ್ಯ ಮಾಡು ಎಂದು ತಮ್ಮ ಶ್ರೀಮತಿಯವರಿಗೆ ನೀಡಿ, ನನ್ನೆಡೆಗೆ ತಿರುಗಿದ ತೇಜಸ್ವಿ `ಬಾ ಇಲ್ಲಿ ನಿನಗೊಂದು ವಿಶೇಷ ತೋರಿಸ್ತೀನಿ’ ಎಂದವರೇ “ಸಿತಾರ್ ನೋಡಿದ್ದೀಯಾ?” ಎಂದರು. (ನಿಜ ಹೇಳ್ತೀನಿ ನನಗೆ ಈ ಕ್ಷಣದ ವರೆಗೂ ಸಿತಾರ್ಗೂ ವೀಣೆಗೂ ಸರಿಯಾದ ವ್ಯತ್ಯಾಸ ಕೂಡ ಗೊತ್ತಿಲ್ಲ) ಒಳಮನೆಯ ಡೈನಿಂಗ್ ಹಾಲಿನಲ್ಲಿ ದಿವಾನ್ ಮೇಲೆ ಚಕ್ಕಳಂಬಕ್ಕಳ ಹಾಕಿಕೊಂಡ ತೇಜಸ್ವಿ ತನ್ಮಯತೆಯಿಂದ ಸಿತಾರ್ ನುಡಿಸಲಾರಂಭಿಸಿದರು.
ಎಲ್ಲಿತ್ತೋ ಸ್ಫೂರ್ತಿ ಯಾವುದೋ ಅಗೋಚರ ಪ್ರೇರಣೆಯಿಂದ ಸಿತಾರ್ಅನ್ನು ನುಡಿಸಿದ್ದು ಈ ಕ್ಷಣದಲ್ಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. ಸಿತಾರ್ ಎಂಬ ವಾದ್ಯವನ್ನು ಇಷ್ಟು ಚೆನ್ನಾಗಿ, ಮನೋಜ್ಞವಾಗಿ ನುಡಿಸಲು ಸಾಧ್ಯವಿದೆ ಎಂದು ನನಗೆ ಆಗಲೇ ಗೊತ್ತಾದದ್ದು. ಕೋಳಿ ಪಲ್ಯ ಮಾಡಲು ಒಳ ಹೋಗಿದ್ದ ಶ್ರೀಮತಿ ರಾಜೇಶ್ವರಿಯವರು ಸಹ ಹೊರಬಂದು ಬಾಗಿಲಿಗೆ ಒರಗಿಕೊಂಡು ಸಂಗೀತವನ್ನು ಆಸ್ವಾದಿಸುತ್ತಿದ್ದುದು ಸಿತಾರ್ ವಾದನವನ್ನು ನಿಲ್ಲಿಸಿದ ಮೇಲೆಯೇ ನಮ್ಮ ಗಮನಕ್ಕೆ ಬಂತು.
‘ಬಹಳ ಚೆನ್ನಾಗಿ ಬಾರಿಸ್ತೀರಿ’ ಎಂದೆ.
“ಬಾರಿಸೋದಲ್ಲ ಮಾರಾಯ, ನುಡಿಸೋದು ಗೊತ್ತಾಯ್ತ?”
`ಸರಿ ಯಾವಾಗ? ಎಲ್ಲಿ? ಯಾರ ಬಳಿ ಕಲಿತಿರಿ?’ ಎಂದದ್ದಕ್ಕೆ “ಪಂಡಿತ್ ರವಿಶಂಕರ್ ಹೆಸರು ಕೇಳಿದ್ದೀಯಾ? ಅವರು ನುಡಿಸುತಿದ್ದ ಸಿತಾರ್ ಇದು. ರಾಜೀವ್ ತಾರಾನಾಥ್ ಗೊತ್ತಾ? ಸರೋದ್ ನುಡಿಸ್ತಾರಲ್ಲ ಅವರು. ಅವರೇ ನನ್ನ ಸಂಗೀತದ ಗುರುಗಳು” ಎಂದಾಗ ಅವಾಕ್ಕಾಗಿ ಕುಳಿತೆ.
ಬರೆಯೋದೆಲ್ಲ ಅಲ್ಲಿರಲಿ ಸಂಗೀತವನ್ನೇ ಸೀರಿಯಸ್ಸಾಗಿ ಪ್ರಾಕ್ಟೀಸ್ ಮಾಡು ಎಂದಿದ್ದರಂತೆ ರಾಜೀವ್ ತಾರಾನಾಥ್. ಹೋಗಿದ್ದರೆ ಅಲ್ಲೂ ದಾಖಲೆಗಳ ಮೇಲೆ ದಾಖಲೆಗಳನ್ನ ಕುಟ್ಟಿ ಕೆಡವಿಬಿಡುತ್ತಿದ್ದರೇನೋ ತೇಜಸ್ವಿ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
