
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಹೊಯ್ಸಳನ ಹೆಸರಿಗೆ ಮಸಿ !
ಒಮ್ಮೆ ನನ್ನ ಮೇಲೊಂದು ದೂರು ಪೋಲೀಸ್ ಠಾಣೆಯಲ್ಲಿ ದಾಖಲಾಗುವುದರಲಿತ್ತು. ನಾನು ಊರಿನಲ್ಲೇ ಇರದ ದಿನ ನಾನು ರಾಷ್ಟ್ರನಾಯಕರ ಹೆಸರಿಗೆ ಮಸಿ ಬಳಿದೆನೆಂದೂ, ಅದಕ್ಕಾಗಿ ಶಿಕ್ಷೆಯಾಗಬೇಕೆಂದೂ ದೂರಿನಲ್ಲಿ ಕೋರಲಾಗಿತ್ತು.
ನಡೆದದ್ದಿಷ್ಟೇ ನಾನಾಗ ಅಂತಿಮ ಪದವಿ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೆ. ಜೊತೆಗೆ ನಮ್ಮ ಯುವ ಸಂಘಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಚಟುವಟಿಕೆಯಿಂದ ಓಡಾಡಿಕೊಂಡಿದ್ದೆ. ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ನಾವು ನಮ್ಮ ಯುವ ಸಂಘದಿಂದ ಆಯೋಜಿಸಿದ್ದೆವು. ಮೂಡಿಗೆರೆಯಲ್ಲಿ ಆಗಷ್ಟೇ ಚಿಕ್ಕದಾದ ಕ್ರೀಡಾಂಗಣವೊಂದನ್ನು ನಿರ್ಮಿಸಿದ್ದರು. ನಾವು ಆಯೋಜಿಸಿದ್ದ ಕ್ರೀಡಾಕೂಟವೇ ಆ ಕ್ರೀಡಾಂಗಣದ ಪ್ರಥಮ ಸಮಾರಂಭ. ಕ್ರೀಡಾಂಗಣದ ನಿರ್ಮಾಣದ ಹಿಂದೆ ನಮ್ಮೆಲ್ಲರ ಶ್ರಮವೂ ಸೇರಿದ್ದರಿಂದ ಕ್ರೀಡಾಂಗಣಕ್ಕೆ `ಹೊಯ್ಸಳ’ ಎಂದು ನಾಮಕರಣ ಮಾಡಲು ಮನವಿ ಸಲ್ಲಿಸಿದ್ದೆವು. ಕ್ರೀಡಾಕೂಟದ ದಿನ ಹತ್ತಿರ ಬಂದಿದ್ದರೂ ನಾಮಕರಣ ಮಾಡುವ ಸೂಚನೆ ಕಾಣಲಿಲ್ಲ. ನಮ್ಮ ಸಂಘದ ಹುಡುಗರು ನಿರಾಸೆಯಿಂದ ಸಿಡಿಮಿಡಿಗೊಂಡರು. ಕ್ರೀಡಾಕೂಟದ ಹಿಂದಿನ ದಿನ ಸಂಜೆ ಪೈಂಟ್ ಮತ್ತು ಬ್ರಷ್ ತಂದು ಕ್ರೀಡಾಂಗಣಕ್ಕೆ ಹೊಂದಿಕೊಂಡಿದ್ದ ಕಾಲೇಜಿನ ಗೋಡೆಯ ಮೇಲೆ ದೊಡ್ಡದಾಗಿ “ಹೊಯ್ಸಳ ಕ್ರೀಡಾಂಗಣ” ಎಂದು ಬರೆದರು. ಇದಕ್ಕೆ ನಮ್ಮೆಲ್ಲರ ಸಮ್ಮತಿಯೂ ಇತ್ತು.
ನಮ್ಮ ಗೆಳೆಯರು ಹೆಸರು ಬರೆದು ಬಂದ ಅರ್ಧ ಗಂಟೆಯಲ್ಲಿ ಮೂಡಿಗೆರೆಯ ಇವನ್ನೊಂದು ಗುಂಪು ಕಪ್ಪು ಪೈಂಟ್ನಲ್ಲಿ ಹೊಯ್ಸಳ ಹೆಸರನ್ನು ಅಳಿಸಿ ಹಾಕಿ ರಾಷ್ಟ್ರನಾಯಕರ ಹೆಸರನ್ನು ಬರೆದರು. ಅಲ್ಲೇ ಕ್ರೀಡಾಂಗಣದಲ್ಲಿ ಬಿಳಿ ಸುಣ್ಣದ ಟ್ರ್ಯಾಂಕ್ ಹಾಕುತ್ತಿದ್ದ ನಮ್ಮ ತಂಡದ ಹುಡುಗರಿಗೆ ಇದು ಸರಿ ಕಾಣಲಿಲ್ಲ. ಸಿಟ್ಟಿನಿಂದ ರಾಷ್ಟçನಾಯಕರ ಹೆಸರಿನ ಮೇಲೆ ಇಂಗ್ಲಿಷ್ನ ಎಕ್ಸ್ ಗುರುತು ಹಾಕಿ ಮತ್ತೆ ದೊಡ್ಡದಾಗಿ ಹೊಯ್ಸಳ ಎಂದು ಬರೆದರು.
ತಗೊಳ್ಳಿ, ವಿರೋಧೀ ಗುಂಪು ಪೋಲೀಸ್ ಠಾಣೆಗೆ ಧಾವಿಸಿ ರಾಷ್ಟ್ರನಾಯಕರಿಗೆ ಅವಮಾನವಾಗಿದೆ, ಕೂಡಲೇ ಧನಂಜಯ ಮತ್ತವರ ಸಂಗಡಿಗರನ್ನು ಬಂಧಿಸಿ ದೇಶದ ಸಾಮರಸ್ಯಕ್ಕೆ ಬಂದಿರುವ ಆಪತ್ತನ್ನು ಪರಿಹರಿಸಬೇಕೆಂದು ಕೂಗಾಡಿದರಂತೆ. ವಾಸ್ತವವಾಗಿ ಆ ದಿನ ಮತ್ತು ಆ ಘಟನೆ ನಡೆದ ಸಮಯದಲ್ಲಿ ನಾನು ಮೂಡಿಗೆರೆಯಲ್ಲಿ ಇರಲೇ ಇಲ್ಲ. ನಾಳಿನ ಕಾರ್ಯಕ್ರಮಕ್ಕೆ ಬೇಕಾದ ಪ್ರಶಸ್ತಿಗಳನ್ನು ತರಲು ಚಿಕ್ಕಮಗಳೂರಿಗೆ ಸಂಘದ ಕೆಲ ಕಾರ್ಯಕರ್ತರೊಡನೆ ಹೋಗಿದ್ದೆ. ಮಾರನೇ ದಿನ ಬೆಳಿಗ್ಗೆ ಪೋಲೀಸರು ಮನೆಗೆ ಬಂದು ನನ್ನನ್ನು ಕರೆದಾಗಲೇ ಈ ಸಂಗತಿ ನನಗೆ ತಿಳಿದದ್ದು. `ಬರುತ್ತೇನೆ ನೀವು ಹೋಗಿರಿ’ ಎಂದು ಪೋಲೀಸರಿಗೆ ತಿಳಿಸಿದೆ. ಆಗಿನ ಮೂಡಿಗೆರೆಯ ಶಾಸಕರಿಗೆ ವಿಷಯ ತಿಳಿಸಿದೆ, ಇವನ್ನೆಲ್ಲಾ ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದು ಎಲ್ಲಾ ಸರಿಯಾಗುತ್ತೆ ಎಂದು ಸಮಾಧಾನ ಹೇಳಿದರು. ದೂರುಕೊಟ್ಟರ್ಯಾರೆಂದು ನೋಡಿದರೆ, ನನ್ನಿಂದ ಪಠ್ಯಪುಸ್ತಕ, ನೋಟ್ಸನ್ನು ಪಡೆದು, ಓದಿ, ದಿನವೂ ಹಲೋ ಹೇಳುತ್ತಿದ್ದವರೇ! ನಮ್ಮ ಸಂಘದ ಹುಡುಗರು ಎಗರಾಡತೊಡಗಿದರು. `ನೀವು ಹೋಗಿ ಕ್ರೀಡಾಕೂಟದ ಉಸ್ತುವಾರಿ ನೋಡಿಕೊಳ್ಳಿ” ಎಂದು ಅವರನ್ನು ಕಳಿಸಿದೆ.
ಪೋಲೀಸ್ ಠಾಣೆಯ ದಾರಿಯಲ್ಲಿ ತೇಜಸ್ವಿ ಸಿಕ್ಕಿದರು. ವಿಷಯ ಹೇಳಿದೆ. “ರಾಷ್ಟ್ರನಾಯಕರ ಬಗ್ಗೆ ಎಲ್ಲರಿಗೂ ಇರುವಂತೆ ನಮಗೂ ಗೌರವ ಇದೆ, ಈ ನಾಯಕರು ಈ ದೇಶದ ಸಮಸ್ತರಿಗೂ ನಾಯಕರೇ ಆಗಿದ್ದಾರೆ. ಅವರಿಂದ ಈ ದೇಶದ ಜನರೆಲ್ಲರೂ ಗೌರವದಿಂದ ಬದುಕುತಿದ್ದಾರೆ. ಹುಡುಗಾಟಿಕೆಯಿಂದ ಈ ಅಚಾತುರ್ಯ ನಡೆದಿದೆ. ತಪ್ಪು ತಿಳುವಳಿಕೆಯ ಈ ಪ್ರಕರಣದಿಂದ ಬಗ್ಗೆ ನಮಗೆ ವಿಷಾದವಿದೆ. ಎಂದು ಹೇಳಿಕೆ ಕೊಡು” ಎಂದಿದ್ದರು. ಯಾರೂ ಹೆಚ್ಚು ಅತಿರೇಕಕ್ಕೆ ಹೋಗದ್ದರಿಂದ ಪ್ರಕರಣ ಅಲ್ಲಿಗೆ ಮುಕ್ತಾಯವಾಯಿತು. ಈಗ ಆ ಆಟದಂಗಳಕ್ಕೆ “ಹೊಯ್ಸಳ ಕ್ರೀಡಾಂಗಣ” ಎಂದೇ ನಾಮಕರಣವಾಗಿದೆ.
ನನಗಾಗ ಮೂಡಿಗೆರೆ ವರ್ಗವಾಗಿತ್ತಷ್ಟೇ. ತೇಜಸ್ವಿಯವರು ಭೇಟಿಯಾದಾಗ ‘ನೇಚರ್ ಕ್ಲಬ್ ಅಂತ ಒಂದು ಸಂಸ್ಥೆ ಪ್ರಾರಂಭಿಸಿದ್ದೇವೆ, ನಿಮ್ಮಂತ ಹಿರಿಯರು ಈ ವಿಚಾರದಲ್ಲಿ ಆಸಕ್ತಿ, ತಿಳುವಳಿಕೆ ಇದ್ದವರು ನಮ್ಮೊಡನೆ ಇದ್ದರೆ ನಮಗೆ ಸ್ಫೂರ್ತಿ ಸಿಗುತ್ತೆ, ನಿಮ್ಮ ಮಾರ್ಗದರ್ಶನವೂ ಇರುತ್ತೆ. ನಿಮಗೇನನ್ನಿಸುತ್ತೆ?’ ಎಂದೆ.
‘ನನಗೆಲ್ಲಿ ಪುರುಸೊತ್ತಿದೆಯಯ್ಯಾ ಯೋಚಿಸಿ ನೋಡ್ತೀನಿ’ ಎಂದು ಬಸ್ಸ್ಟಾಪ್ನೆಡೆಗೆ ಸ್ಕೂಟರ್ ತಿರುಗಿಸಿದ್ದರು.
ಮೂಡಿಗೆರೆಯ ಘಟಾನುಘಟಿ ಸ್ವಯಂ ಸೇವಾ ಸಂಸ್ಥೆಗಳು, ರಾಜ್ಯ ಮಟ್ಟದ ಸಂಘಟನೆಗಳು ತೇಜಸ್ವಿಯಂತಹ ತೇಜಸ್ವಿಯವರನ್ನು ತಮ್ಮೊಡನೆ ಗುರುತಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾದ ವಿಚಾರ ಗೊತ್ತಿದ್ದರಿಂದಲೇ ಅಳುಕಿನಿಂದಲೇ ಆದರೆ ಭರವಸೆಯಿಂದಲೇ ಪ್ರಸ್ತಾಪಿಸಿದ್ದೆ. ಮರ್ನಾಲ್ಕು ದಿನ ತೇಜಸ್ವಿಯವರ ದರ್ಶನ ಆಗಲೇ ಇಲ್ಲ.
ಒಂದು ದಿನ ಇದ್ದಕ್ಕಿದ್ದಂತೆ ಬ್ಯಾಂಕಿಗೆ ಬಂದವರೇ ‘ನಿಮ್ಮ ನೇಚರ್ ಕ್ಲಬ್ ಸೇರೋಕೆ ಏನ್ ಮಾಡ್ಬೇಕು ಮಾರಾಯ’ ಅಂದೇ ಬಿಡೋದೆ? ‘ಎನ್ರೋಲ್ಮೆಂಟ್ ಫಾರಂ ಇದೆ. ನೂರಾಐದು ರೂಪಾಯಿ ಸದಸ್ಯತ್ವ ಶುಲ್ಕ ಕೊಡಿ’ ಎಂದೆ. ‘ಹಾಗಾದ್ರೆ ಮೂರು ಫಾರಂ ಕೊಡು, ತಲುಪಿಸುತ್ತೇನೆ’ ಎಂದು ತೆಗೆದುಕೊಂಡು ಹೋದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಅನೇಕರಿಗೆ ಅಸಾಧ್ಯವಾದದ್ದು ನನಗೆ ಸಾಧ್ಯವಾಯಿತು ಎಂದು ಸಂತಸವಾಯಿತು. ಮಾರನೇ ದಿನವೇ ತೇಜಸ್ವಿಯವರ ನಿಕಟವರ್ತಿಯಾದ ರಾಘವೇಂದ್ರ ಮೂರು ತುಂಬಿದ ಫಾರಂಗಳನ್ನು ತಲುಪಿಸಿದರು. ಮೊದಲನೆಯದು ತೇಜಸ್ವಿಯವರದು, ಎರಡನೆಯದು ಶ್ರೀಮತಿ ತೇಜಸ್ವಿಯವರದು, ಮೂರನೆಯದು ರಾಘವೇಂದ್ರರದು.
ಯಾವುದೇ ಬಲವಾದ ಕಾರಣ, ಉದ್ದೇಶ, ದೂರದೃಷ್ಟಿ ಇಲ್ಲದೇ ತೇಜಸ್ವಿಯವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲವಾದ್ದರಿಂದ ಅವರ ಈ ಪ್ರತಿಕ್ರಿಯೆ ನನಗೆ ವಿಸ್ಮಯ ಉಂಟುಮಾಡಿತ್ತು. ಯುವಕರು ಸದುದ್ದೇಶದಿಂದ ಸಂಪರ್ಕಿಸಿದ್ದಲ್ಲಿ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಇಂರ್ಯಾಕ್ಟ್ ಮಾಡುತ್ತಿದ್ದುದು ಅವರ ಔದಾರ್ಯ.
ಅದೊಂದು ಗುರುವಾರ ಬ್ಯಾಂಕಿಗೆ ಬಂದವರೇ ‘ಏ ಧನಂಜಯ ಹೊರಗೆ ಯಾರದ್ದೋ ಹೊಸ ಸ್ಕೂಟರ್ ಇದ್ದಹಾಗಿದೆಯಲ್ಲಾ ಯಾರದ್ದು ಗೊತ್ತಾ?’ ಎಂದರು. ನನಗೆ ಗೊತ್ತಾಯ್ತು. ಅದು ನನ್ನ ಸ್ಕೂಟರ್ ಬಗ್ಗೆನೇ ಪ್ರಶ್ನೆ ಎಂದು.
‘ನನ್ನದೇ.’
‘ಯಾವಾಗ ತಗೊಂಡೋ ಮಾರಾಯ, ಕೀ ಕೊಡಿಲ್ಲಿ ಎಂದವರೇ ಬಿಳಗುಳದವರೆಗೆ ಟ್ರಯಲ್ ಹೋಗಿ ಬಂದು ‘ಬೊಂಬಾಟಾಗಿದೆ ಮಾರಾಯ? ಎಲ್ಲಿ ತಗೊಂಡೆ, ದುಡ್ಡೆಷ್ಟು ಕೊಟ್ಟೆ? ಎಂದೆಲ್ಲ ಕೇಳಿ, ತಿಳಿದುಕೊಂಡರು.
ಶನಿವಾರ ಬೆಳಗ್ಗೆ ಬ್ಯಾಂಕಿನ ಬಳಿ ಬಂದವರೇ ‘ಹೊರಗೆ ಬಂದು ನೋಡು ನಾನೊಂದು ಹೊಸ ಸ್ಕೂಟರ್ ತಂದಿದ್ದೀನಿ’ ಎಂದರು.
ಹೊರಗೆ ಹೋಗಿ ನೋಡಿದರೆ ನನ್ನ ಸ್ಕೂಟರ್ ಬಣ್ಣದ್ದೇ, ಅದೇ ಮಾಡಲ್ ಕಡೆಗೆ ಅದೇ ಬ್ಯಾಚ್ನ ಸ್ಕೂಟರ್ನ್ನು ತಂದು ನಿಲ್ಲಿಸಿದ್ದರು. ಆಗ ಅವರ ೪೦ ವರ್ಷದ ಗೆಳೆಯ ಸ್ಕೂಟರ್ನ ದುರಸ್ಥಿ ನಡೆಯುತ್ತಿತ್ತು. ಮನೆಯ ಬಳಿಯೇ ಬಿಚ್ಚಿ ಹಾಕಿ ಮೆಕಾನಿಕ್ ಕೇಶವನ ಕೈಯಲ್ಲಿ ಮೇಜರ್ ಸರ್ಜರಿ ಮಾಡಿಸಲಾಗುತ್ತಿತ್ತು. ಸುಮಾರು ಒಂದು ತಿಂಗಳ ಕಾಲ ನಡೆದ ರಿಪೇರಿಯಿಂದ ಅವರ ದೈನಂದಿನ ಓಡಾಟಕ್ಕೆ ತೊಂದರೆಯಾಗಬಾರದೆಂದು ತಾತ್ಕಾಲಿಕ ವ್ಯವಸ್ಥೆಯಾಗಿ ಹೊಸ ಸ್ಕೂಟರನ್ನೇ ತಂದು ರಿಪೇರಿ ಮುಗಿದ ಕೂಡಲೇ ಹೊಸ ಸ್ಕೂಟರನ್ನೇ ಮೆಡಿಕಲ್ ಶಾಪ್ನ ನಟರಾಜ್ಗೆ ಮಾರಿದರು. ಸತ್ತಮೇಲೆ ಇನ್ನೇನಿದೆ ವಿಶ್ರಾಂತಿ ತಾನೆ, ಅಲ್ಲಿಯವರೆಗೆ ನನಗೆ ಕೆಲಸವಿದೆ. ಮೈಲ್ಸ್ ಟು ಗೋ ಬಿಫೋರ್ ಐ ಸ್ಲೀಪ್ ಎಂದುಕೊಂಡು ಕೊನೆಯವರೆಗೂ ದುರಸ್ಥಿಗೊಂಡ ತಮ್ಮ ಹಳೆಯ ಸ್ಕೂಟರಿನಲ್ಲೇ ಓಡಾಡುತ್ತಿದ್ದರು.
– ಮುಂದುವರೆಯುವುದು
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946