
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಪೋಲೀಸ್ ಇಟ್ಕೊಂಡ್ ಹಬ್ಬ ಮಾಡ್ಬೇಕಾ?
ಒಮ್ಮೆ ಗೆಳೆಯ ಬಾಪೂ ದಿನೇಶ್ರೊಂದಿಗೆ ಎಂದಿನಂತೆ ಮೂಡಿಗೆರೆ ಪೇಟೆಗೆ ಬಂದಿದ್ದ ತೇಜಸ್ವಿ ಬೀದಿ ಬದಿಯಲ್ಲಿ ಪೋಲೀಸರು ನಿಂತಿದ್ದು, ವಿಪರೀತ ಜನಸಂದಣಿ ಇದ್ದುದನ್ನು ನೋಡಿ “ಏನಯ್ಯಾ ಇದು ಇಷ್ಟೊಂದು ಗಡಿಬಿಡಿ, ಸೆಕ್ಯುರಿಟಿ. ಮಂತ್ರಿ ಮಹೋದಯರೇನಾದ್ರೂ ಇತ್ತ ಕಡೆ ಪಾದ ಬೆಳೆಸುತ್ತಿದ್ದಾರೋ ಹೇಗೆ?’’ ಎಂದು ವಿಚಾರಿಸಿದರು. ಅಲ್ಲೇ ನಿಂತಿದ್ದ ಪೇಪರ್ ಮಾರುವ ಜಹೀರ್ ‘ಅಣ್ಣಾ ಇವತ್ತು ನಮ್ಮ ಈದ್ ಮಿಲಾದ್ ಅಲ್ವಾ? ಪ್ರೊಸೆಷನ್ ಇರುತ್ತೆ, ಅದಕ್ಕೆ ಪೋಲೀಸ್’’ ಎಂದರು.
ಕೊಂಚಹೊತ್ತು ಮೌನವಾಗಿ ಜಹೀರ್ ಮತ್ತವರ ಬಂಧುಗಳ ಮುಖವನ್ನೇ ಸಹಾನುಭೂತಿಯಿಂದ ನೋಡಿದ ತೇಜಸ್ವಿ “ತುಥ್ ಪೋಲೀಸ್ ಇಟ್ಕೊಂಡ್ ಹಬ್ಬ ಮಾಡ್ಬೇಕಾ? ನಾಚ್ಕೆಯಾಗುತ್ತೆ ಅಲ್ವಾ?’’ಎಂದವರೇ ಜಿಗುಪ್ಸೆಯಿಂದ ಮನೆಕಡೆಗೆ ಹೊರಟರು.
ಕೆಲ ದಿನಗಳ ನಂತರ ಸಂಜೆಯ ಹರಟೆಯಲ್ಲಿ “ಈ ದೇಶ ದೇವರ ದಯೆಯಿಂದ ನಡೀತಿದೆ ಕಣಯ್ಯಾ. ಆ ತಾಲಿಬಾನಿಗಳ ಅಂತಂರ ರಾಷ್ಟ್ರೀಯ ಮಟ್ಟದ ಆಟಾಟೋಪಗಳೂ, ಈ ಭಜರಂಗಿಗಳ ಲೋಕಲ್ ತಂಟೆ-ತಕರಾರುಗಳೂ ಸೇರಿಕೊಂಡು ಎಲ್ಲಾ ಗೋಜಲುಗೋಜಲು ಆಗ್ಹೋಗಿದೆ. ಮುಲ್ಲಾನ ಗಡ್ಡದಷ್ಟೇ ಈ ಸನಾತನಿಗಳ ಜುಟ್ಟು ಕೂಡಾ ಅಪಾಯಕಾರಿಯಾಗ್ತಿದೆ. ಯಾರಯ್ಯಾ ಇವರಿಗೆಲ್ಲಾ ಕೂರಿಸಿ ಬುದ್ಧಿ ಹೇಳೋದು? ಹೇಳಿದ್ರೂ ಈ ಅಯೋಗ್ಯರು ಕೇಳ್ತಾರಾ? ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಹಿಂದೂಗಳೂ, ಮುಸ್ಲೀಮರೂ ಒಂದೇ. ರಾಮ ಮಂದಿರ ಕಟ್ಟದೇ ಹೋದರೆ ಯಾರದ್ದಾದ್ರೂ ಪ್ರಾಣ ಹೋಗುತ್ತಾ?” ಎಂದು ಹರಿಹಾಯ್ದಿದ್ದರು. “ಇಸಂ”ಗಳ ಬಗ್ಗೆ ಮಾತನಾಡುತ್ತಾ `ತೆಪ್ಪಗೆ ಬದುಕೋದಕ್ಕೆ ಯಾವ ವಾದವೂ ಬೇಕಿಲ್ಲ ಕಣ್ರಯ್ಯಾ’ ಎಂದಿದ್ದರು ತೇಜಸ್ವಿ.
ಒಮ್ಮೆ ಮೂಡಿಗೆರೆಯಲ್ಲಿ ಸರ್ವಧರ್ಮ ಸಮ್ಮೇಳನವೊಂದನ್ನು ಸ್ಥಳೀಯ ಧಾರ್ಮಿಕ ಸಂಸ್ಥೆಗಳು ಸೇರಿ ಆಯೋಜಿಸಿದ್ದವು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ವಿದ್ವಾಂಸರನ್ನು ಕರೆದು ವಿಚಾರಮಂಡನೆಗೆ ಅವಕಾಶ ಮಾಡಿಕೊಡಲಾಗಿತ್ತು. ತೇಜಸ್ವಿಯವರಿಗೂ ಆಹ್ವಾನ ಹೋಗಿತ್ತು. ಎಲ್ಲರನ್ನೂ ಅಚ್ಚರಿಗೊಳಿಸುವಂತೆ ತೇಜಸ್ವಿಯವರು ಆ ಸಭೆಗೆ ಭಾಷಣಕಾರರಾಗಿ ಬಂದಿದ್ದರು. ಪಾದರಿಯಿಂದ ಹಿಡಿದು ಮೌಲ್ವಿ-ಜೋಯಿಸರವರೆಗೆ ಎಲ್ಲರೂ ತಮ್ಮತಮ್ಮ ಧರ್ಮಗಳ ಹಾಗೂ ಮತಗಳ ¨ಬಗ್ಗೆ ಹಾಗೂ ಸಹಿಷ್ಣುತೆ ಕುರಿತು ಅವರವರ ಮಿತಿಯಲ್ಲಿ ಸಾಕಷ್ಟು ಮಾತನಾಡಿದರು.
ಕಡೆಗೆ ತೇಜಸ್ವಿಯವರ ಸರದಿ. ತಮ್ಮದೇ ಆದ ಅಸಡ್ಡಾಳ ಶೈಲಿಯಲ್ಲಿ ಮಾತನಾಡಲು ಹೋಗಿ ನಿಂತವರೇ ಈವರೆಗೆ ಮಾತನಾಡಿದವರನ್ನೆಲ್ಲಾ ಒಂದು ಕಡೆಯಿಂದ ದಿಟ್ಟಿಸುತ್ತಾ “ಕೇಳಲು ಕುಳಿತವರು ಬಾಯ್ಮುಚ್ಚಿಕೊಂಡು ಕೇಳ್ತಾರೇಂತ ಏನ್ ಸುಳ್ ಸುಳ್ಳೇ ಬೊಗಳ್ತೀರಲ್ರೀ’’ ಎಂದು ಬಿಡೋದೇ. ಗಣ್ಯ ವಿಧ್ವಾಂಸರೆಲ್ಲಾ ದಿಗ್ಮೂಢರಾದರು. ಸಭೆಗೆ ಬಂದಿದ್ದ ಮೂಡಿಗೆರೆಯ ಸುತ್ತಮುತ್ತಲಿನ ಸಜ್ಜನರಾದಿಯಾಗಿ ಸಭಿಕರೆಲ್ಲರೂ ಅಚ್ಚರಿಯಿಂದ ಆತಂಕಿತರಾದರು.
`ಧರ್ಮ ಎಂಬುದು ತನ್ನ ಮತ್ತು ದೇವರ ನಡುವಿನ ವೈಯಕ್ತಿಕ ಸಂಬಂಧ ಎಂದು ಭಾವಿಸುವುದೇ ನಿಜವಾದ ಸೆಕ್ಯುಲರಿಸಂ. ಎಲ್ಲ ಮತಧರ್ಮಗಳೂ ಮಿಲಿಟೆನ್ಸಿಯಿಂದಲೇ ಬಂದಿರೋದು. ಈಗ ನೀವು ನಿಮ್ಮ ಪೂರ್ವಜರು ಮಾಡಿರುವ ಅವಿವೇಕದ ಅನಾಚಾರಗಳನ್ನೆಲ್ಲ ಮರೆಮಾಚಲು ಈಗ ಧರ್ಮಸಹಿಷ್ಣುತೆ, ಅಹಿಂಸೆ, ಸಹಬಾಳ್ವೆ ಎಂದು ಬೊಗಳೆ ಬಿಡ್ತಿದ್ದೀರಲ್ರೀ. ಮನುಷ್ಯ ಮನುಷ್ಯನನ್ನು ಕೊಲ್ಲಬಾರದೂಂತ ಹೇಳೋಕ್ಕೆ ಕುರಾನು, ಭಗವದ್ಗೀತೆಗಳೇ ಬೇಕೇನ್ರೀ? ನಿಮ್ಮ ನಿಮ್ಮ ಇತಿಹಾಸದ ಪುಟಗಳನ್ನ ನೀವೇ ತಿರುವಿ ಹಾಕಿ ಹೋಗ್ರೀ’ ಎಂದು ತರಾಟೆಗೆ ತೆಗೆದುಕೊಂಡರು.
ಬೇರಾವುದೇ ವ್ಯಕ್ತಿ ಈ ರೀತಿ ಅನಿರೀಕ್ಷಿತವಾಗಿ ಧರ್ಮಗುರುಗಳನ್ನು, ವಿಧ್ವಾಂಸರನ್ನು , ಸೋಗಿನ ಧರ್ಮನಿರಪೇಕ್ಷತೆಯನ್ನು ತರಾಟೆಗೆ ತೆಗೆದುಕೊಂಡು ಬೆಂಡೆತ್ತಿದ್ದರೆ ನಾನಾ ಅನಾಹುತಗಳಿಗೆ ಕಾರಣವಾಗುತಿತ್ತು. ತೇಜಸ್ವಿಯವರಿಗಿದ್ದ ಇತಿಹಾಸದ ಜ್ಞಾನ, ವೈಚಾರಿಕ ನಿಲುವು ಹಾಗೂ ಆತ್ಮಸ್ಥೈರ್ಯ ಸಭೆಯಲ್ಲಿ ಸೇರಿದ್ದ ಎಲ್ಲರಿಗೂ ಆತ್ಮವಿಮರ್ಶೆ ಮಾಡಿಕೊಳ್ಳಲು ಪ್ರೇರಣೆ ನೀಡಿತು. ಮತಾಂತರ, ಕೋಮುವಾದ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ ಮುಂತಾದ ವಿಷಯಗಳ ಬಗ್ಗೆ ಕರಾರುವಕ್ಕಾಗಿ ಮಾತನಾಡಿ ಆಷಾಡಭೂತಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ ತೇಜಸ್ವಿಯವರನ್ನು ಸೂಡೋ ಸೆಕ್ಯುಲರಿಸ್ಟ್ಗಳು ಸುಲಭವಾಗಿ ಮರೆಯಲಿಕ್ಕಿಲ್ಲ.
ಯಾವ ದೊಡ್ಡ ಧರ್ಮವೇ ಆಗಿರಲಿ, ಸಹಜ ಟೀಕೆ- ವಿಮರ್ಶೆಗಳನ್ನ ಅರಗಿಸಿಕೊಳ್ಳುವಷ್ಟರ ಮಟ್ಟಿಗಿನ ಸಹಿಷ್ಣುವಾಗಿರಬೇಕು. ವಿಮರ್ಶೆಗೆ ತೆರೆದುಕೊಳ್ಳದೇ ಅಸಹನೆ ತೋರ್ಪಡಿಸುವ ಯಾವುದೇ ಧರ್ಮ ಸಾತ್ವಿಕ ತಳಹದಿಯ ಮೇಲೆ ನಿಂತಿರುವುದಿಲ್ಲ. ಅದು ಅಸಹಿಷ್ಣುತೆಯಿಂದ ತನ್ನೊಳಗೆ ತಾನೇ ಕುಸಿಯುತ್ತಾ ಅವಸಾನ ಹೊಂದುತ್ತಲೇ ಇಡೀ ಸಮಾಜದಲ್ಲಿ ಅಶಾಂತಿಯನ್ನುಂಟುಮಾಡುತ್ತದೆ.
ಸಹಜವಾಗಿ ಎದುರಾಗುವ ತಿರುವು, ಅಡೆತಡೆಗಳನ್ನು, ಕಂದಕ- ಕೊರಕಲುಗಳನ್ನು ನಿಬಾಯಿಸುವ ನದಿಯಂತೆ ನಿಜವಾದ ಧರ್ಮ ವರ್ತಿಸುತ್ತದೆ. ಹಾಗಾಗಿ ನಿರಂತರತೆಯನ್ನು ಮತ್ತು ಸಾರ್ಥಕತೆಯನ್ನು ಹೊಂದಿರುತ್ತದೆ. `ಇತರರನ್ನು ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಿದೆ ಈ ಪ್ರಪಂಚದಲ್ಲಿ ನೀನೇ ಹೇಳಯ್ಯಾ?’ ಎಂದಿದ್ದ ತೇಜಸ್ವಿ ಧರ್ಮಗಳು ಅಥವಾ ಮತಗಳ ಹಿಂದಿನ ಪ್ರೇರಣೆ ಮಿಲಿಟೆನ್ಸಿಯೇ ಆಗಿರುವ ಬಗ್ಗೆ ವಾಸ್ತವವನ್ನು ತೆರೆದಿಟ್ಟರು.
ಭಾರತದ ಮಧ್ಯಕಾಲೀನ ಇತಿಹಾಸವನ್ನು ವಿಷ್ಲೇಶಿಸಿ ದೇಶದ ಸಂಸ್ಕೃತಿಯ ಮೇಲಾದ ದಾಳಿಯನ್ನು ಪ್ರಸ್ತಾಪಿಸಿ, ಘಜ್ನಿ ಮೊಹಮ್ಮದ್ ಭಾರತದ ಮೇಲೆ ಏಳು ಬಾರಿ ದಂಡಯತ್ರೆ ಮಾಡಿದ, ಇಲ್ಲಿನ ಸಂಪತ್ತನ್ನು ಸೂರೆ ಹೊಡೆದ ಎಂದು ಅಂತರ್ ರಾಷ್ಟ್ರೀಯ ಮಟ್ಟದ ಸಹಾನುಭೂತಿ ಗಿಟ್ಟಿಸಲು ಭಾಷಣ ಮಾಡಿದವರಿಗೆ “ಇಲ್ಲಿನವರು ವೇದೋಪನಿಷತ್ ಓದಿಕೊಂಡು, ಮಡಿ-ಮೈಲಿಗೆ ಎಂದು ಪಾರಾಯಣ ಮಾಡಿಕೊಂಡುಕಾಲ ಕಳೆಯುತ್ತಿದ್ದರೆ, ಘಜ್ನಿ ಬಂದ , ಇವರ ಮುಕುಳಿ ಮೇಲೆ ಸರೀ ಒದ್ದ, ತನಗೆ ಬೇಕಾದುದ್ದನ್ನು ಕೊಂಡೋಯ್ದ. ತಮ್ಮ ಕೈಯ್ಯಲ್ಲಾಗದಿದ್ದುದಕ್ಕೆ ಪೆಟ್ಟು ತಿಂದು ಸಂಪತ್ತು ಕಳೆದುಕೊಂಡರು. ಅದಕ್ಕೆ ಅಯ್ಯೋ ಪಾಪ ಎನ್ನುವ ಅಗತ್ಯವಿಲ್ಲ’’ ಎಂದು ಲೇವಡಿ ಮಾಡಿದ್ದರು ತೇಜಸ್ವಿ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
