ಮನುಷ್ಯನಿಗೆ ಅನುಷ಼ಂಗಿಕವಾಗಿ ಒಳ್ಳೆಯತನ ಇರಬೇಕು. ಅದು ಬಿಟ್ಟು ಧರ್ಮಗ್ರಂಥ ಹೇಳ್ತಿರೋದ್ರಿಂದ ಹೀಗಿರಬೇಕು ಅಂದ್ರೆ ಅದು ಧರ್ಮವೇ ಅಲ್ಲ. ನರಮನುಷ್ಯ ಅಂದರೆ ಮಾನವೀಯತೆ ಇರಬೇಕು ಅಷ್ಟೆ. ಬುದ್ಧಿಸಂ ಒಂದನ್ನು ಬಿಟ್ಟರೆ ಉಳಿದೆಲ್ಲಾ ಧರ್ಮಗಳೂ ಮಿಲಿಟೆನ್ಸಿಯಿಂದಲೇ ಬಂದಿರುವವು ಎಂದರೆ ಧರ್ಮಗಳ ಮೂಲ ಚಿಂತನೆಗಳನ್ನು ಕಲ್ಪಿಸಿಕೊಳ್ಳಿ. ತರ್ಕ, ಇತಿಹಾಸ, ಜೀವನದ ಸ್ವರೂಪ ಇವೆಲ್ಲಾ ಪ್ರತಿಯೊಬ್ಬನ ಜೀವನದ ಕೊಟ್ಟಕೊನೆಯಲ್ಲಿ ತೀರ್ಮಾನವಾಗುವಂಥದ್ದು. ಈ ಜಗತ್ತನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲದಿರಬಹುದು, ಆದರೆ ಅದನ್ನು ಅರಿಯುವುದೇ ಮನುಷ್ಯನ ಎಲ್ಲಾ ಕ್ರಿಯಾಶೀಲತೆಯ ನಿಜವಾದ ಪ್ರಯತ್ನ. ಲೋಕದ ನಡೆ ನಿಶ್ಚಿತಗತಿಯಲ್ಲಿ ಇರುವುದಿಲ್ಲ ಎಂಬ ನಿತ್ಯಸತ್ಯವನ್ನು ತನ್ನ ಕೃತಿಗಳಲ್ಲಿ ಸಾಧ್ಯವಿದ್ದಡೆಯಲ್ಲಿ ದೃಢಪಡಿಸಿದ್ದಾರೆ ತೇಜಸ್ವಿ.
“ಜಾತಿ ಪದ್ಧತಿ, ಕಂದಾಚಾರ, ಮೂಢನಂಬಿಕೆ ಈ ಅನಿಷ್ಟಗಳಿಂದ ಹೊರಬಂದು ಸೆಕ್ಯುಲರ್ ಸಮಾಜ ರೂಪುಗೊಳ್ಳಲು ಸಾಧ್ಯವಿರುವ ಈ ಸಂಕ್ರಮಣದ ಕಾಲದಲ್ಲಿ ಮುಸ್ಲಿಂ ಮೂಲಭೂತವಾದ ಹಿಂದೂ ಮೂಲಭೂತವಾದಕ್ಕೆ ಕಾರಣೀಭೂತವಾಗುತ್ತಿರುವುದು ಅಪಾಯಕಾರೀ ಸನ್ನಿವೇಶ. ಹಿಂದೂ ಮತಾಂಧರು ಮುಸ್ಲಿಂ ಅತಿರೇಕಗಳನ್ನೇ ಉಪಯೋಗಿಸಿಕೊಂಡು ಮತ್ತೆಲ್ಲಿ ಫ್ಯೂಡೆಲಿಸ್ಟಿಕ್ ಜಾತಿ ವ್ಯವಸ್ಥೆಯನ್ನು ಭದ್ರಪಡಿಸುತ್ತಾರೋ ಎಂಬುದು ದೊಡ್ಡ ತಲೆ ನೋವಾಗಿದೆ. ಮುಸ್ಲಿಂ ಮೂಲಭೂತವಾದ ಸುಧಾರಣವಾದೀ ಹಿಂದೂಗಳನ್ನು ಸಹಾ ಸನಾತನ ಧರ್ಮದ ಪುರೋಹಿತಶಾಹಿತ್ವವನ್ನು ಸಮರ್ಥಿಸುವಂತೆ ಮಾಡುತ್ತಿರುವುದು ವಿಪರ್ಯಾಸ.
ಮುಸ್ಲಿಮರು ಗೌರವದಿಂಧ ಬದುಕುವುದೇನಿದ್ದರೂ ಭಾರತೀಯ ಸೆಕ್ಯುಲರ್ ವ್ಯವಸ್ಥೆಯಲ್ಲಿಯೇ ಹೊರತು ಮೂಲಭೂತವಾದದ ಅವಿವೇಕದಿಂದಲ್ಲ. ಮುಲ್ಲಾಗಳ ಸನಾತನವಾದಕ್ಕೇ ಜೋತುಬಿದ್ದರೆ ಬೌದ್ಧಿಕವಾಗಿ ಅವರು ತೆರಬೇಕಾದ ದಂಡ ಮತ್ತು ಭಾರತದ ದುರಂತಮಯ ಭವಿಷ್ಯಕ್ಕೆ ಉತ್ತರವೇ ಇಲ್ಲದಂತಾಗುತ್ತದೆ. ಮತ್ತೊಬ್ಬರಿಗೆ ತೊಂದರೆಕೊಡಬಾರದು, ಅವರ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು, ತಲೆ ಒಡೆಯಬಾರದು, ಚೂರಿ ಹಾಕಬಾರದು ಅನ್ನೋದನ್ನ ತಿಳಿಯೋಕೆ ಭಗವದ್ಗೀತೆ, ಕುರಾನ್, ಬೈಬಲ್ ಅನ್ನೇ ಓದಬೇಕಾಗಿಲ್ಲ. ಹೊಟ್ಟೆಗೆ ಅನ್ನಾ ತಿನ್ನೋ ಯಾರಿಗಾದ್ರೂ ಇರಬೇಕಾದ ಸಾಮಾನ್ಯ ಪ್ರಜ್ಞೆ ಇದು. ಮನುಷ್ಯ ಬದುಕಬೇಕಾದ್ದೇ ಹಾಗಲ್ಲವೇ?” ಎಂದು ಖಂಡತುಂಡವಾಗಿ ಹೇಳಿದ್ದರು ತೇಜಸ್ವಿ.
ಯಾರಿಗೋ ತೊಂದರೆಯಾಗದಂತೆ ಬದುಕಿದೆ ಎಂದುಕೊಳ್ಳುವುದು ಅತಿಶಯೋಕ್ತಿಯಲ್ಲ. ಸಾಮಾಜಿಕ ಜವಾಬ್ದಾರಿಯಿಂದ ಸಹಜವಾಗಿ ಬದುಕೋದು ಮುಖ್ಯ. ಆ ಜವಾಬ್ದಾರಿ ನಮ್ಮ ಎಲ್ಲಾ ರೀತಿಯ ಸಾರ್ವಜನಿಕ ಬದುಕಿನಲ್ಲಿ ಪ್ರಕಟಗೊಳ್ಳುತ್ತದೆ.
ಯಾರಾದರೂ ಹೇಳದೇ ಕೇಳದೇ, ಮುಂಚಿತವಾಗಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳದೇ ಮನೆಗೆ ಬಂದರೆ ತೇಜಸ್ವಿಯವರಿಗೆ ವಿಪರೀತ ಇರುಸು-ಮುರುಸು ಆಗುತ್ತಿತ್ತು. ಅದು ಅವರ ಹಾವಭಾವಗಳಲ್ಲೇ ಹೋದವರ ಅರಿವಿಗೆ ಬರುತ್ತಿತ್ತು. ಹಾಗೆ ಬಂದವರನ್ನು ಕೆಲ ಸಮಯ ಮಾತನಾಡಿಸುತ್ತಲೇ ಇರಲಿಲ್ಲ. ನಂತರವೂ ಅಸಹಜವಾದ ನಿರ್ಲಕ್ಷ್ಯ ಧೋರಣೆಯೇ ಮುಂದುವರೆಯುತಿತ್ತು. ಸುಮ್ಮನೆ ಕಾಡು ಹರಟೆ ಹೊಡೆಯುತ್ತಾ ಕಾಲಯಾಪನೆ ಮಾಡುವ ಪರಿಯಂತೂ ಅವರನ್ನು ನಖಶಿಖಾಂತ ಅಸಹನೆಗೆ ಈಡು ಮಾಡುತ್ತಿತ್ತು. ಮುಖ್ಯವಾದ ಕೆಲಸಕ್ಕೆ ಅಡ್ಡಿಯಾದುದಕ್ಕೆ ಮುಲಾಜಿಲ್ಲದೆ ಪ್ರತಿಕ್ರಿಯಿಸುತ್ತಿದ್ದರು, ಎಂಥಾ ದೊಡ್ಡ ಮನುಷ್ಯರಾದರೂ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಭೇಟಿಯಾಗಲು ಬರಬಹುದಾ? ಯಾವ ಸಮಯಕ್ಕೆ? ಎಂದು ಅನುಮತಿ ಪಡೆದೇ ಭೇಟಿಯಾಗುತ್ತಿದ್ದರು. ಅವರ ಸರಳ ಸಜ್ಜನಿಕೆಯ ಆತಿಥ್ಯ ಸ್ವೀಕರಿಸುತ್ತಿದ್ದರು.
ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಜೆ. ಹೆಚ್. ಪಟೇಲರೇ ಒಮ್ಮೆ ತೇಜಸ್ವಿಯವರ ಈ ಸಮಯದ ಶಿಸ್ತುಪಾಲನೆಯನ್ನು ಅನುಸರಿಸದೇ ಅಸಹನೆಗೆ ಗುರಿಯಾಗಿದ್ದರು. ಬಹಳ ವರ್ಷಗಳ ಸ್ನೇಹ, ಸಮಾಜವಾದಿ ಚಿಂತನೆಯ ಸಾಹಚರ್ಯ, ಉನ್ನತ ಅಧಿಕಾರದ ಬಲ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ನಿಷ್ಠುರ ಸ್ವಭಾವದ ತೇಜಸ್ವಿ ನಿಗದಿತ ಸಮಯ ಕಳೆದ ನಂತರ ಯಾವುದೇ ಮುಲಾಜಿಲ್ಲದೆ ತಮ್ಮ ದೈನಂದಿನ ಕಾಯಕದಲ್ಲಿ ತೊಡಗಿಕೊಂಡಿದ್ದು ಅವರ ಸಮಯ ಪರಿಪಾಲನಾ ನಿಷ್ಠತೆಗೆ ಒಂದು ಉದಾಹರಣೆ.
ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಯಾವುದೋ ಕಾರ್ಯ ನಿಮಿತ್ತ ಮೂಡಿಗೆರೆಗೆ ಬಂದಿದ್ದರು. ತೇಜಸ್ವಿಯವರನ್ನು ಭೇಟಿಮಾಡಲು ಅಪೇಕ್ಷಿಸಿದ ದೇವೇಗೌಡರು ತೇಜಸ್ವಿಯವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ `ಬನ್ನಿ, ಬನ್ನಿ ಸಂತೋಷ ನಿಮ್ಮ ವಾನರ ಪಡೆಯನ್ನು ಮಾತ್ರ ಕರೆತರಬೇಡಿ’ ಎಂದು ಯಾವುದೇ ಮುಲಾಜಿಲ್ಲದೇ ಸಹಜವೆಂಬಂತೆ ಹೇಳಿದ್ದರು. ಯಾವುದೇ ಸೈದ್ಧಾಂತಿಕ ಮೌಲ್ಯವಿಲ್ಲದೇ ಸಾಂದರ್ಭಿಕ ಲಾಭಪಡೆಯುವ ಸ್ಥಳೀಯ ಪುಡಿಪುಡಾರಿಗಳ ಬಗ್ಗೆ ಹೇವರಿಕೆಯಿಂದ ಹೀಗೆಂದಿದ್ದರು.
ನಾನು ಮಾತ್ರ ಹೇಳದೇ, ಕೇಳದೇ, ಹೊತ್ತುಗೊತ್ತಿಲ್ಲದೆ ಹೋಗಿ ಕೋಪಕ್ಕೆ ತುತ್ತಾಗಿ, ನಿರ್ಲಕ್ಷ್ಯಕ್ಕೆ ಒಳಗಾಗಿ, ಬೈಗುಳಕ್ಕೆ ಗುರಿಯಾದದ್ದು ನೂರಾರು ಬಾರಿ. ದಿನಾ ಸಾಯುವವರಿಗೆ ಅಳೋರು ಯಾರು? ಎಂಬಂತೆ ಇವನ ಹಣೆಬರಹ ಯಾವಾಗಲೂ ಹೀಗೇನೆ ಎಂದುಕೊಂಡು ಯಾವೂರ ದಾಸಯ್ಯ ಎಂತಲೂ ಕೇರ್ ಮಾಡದೆ ಮೇಜಿನ ಮೇಲೆ ಇರೋ ಪುಸ್ತಕವನ್ನ ನನ್ನ ಕೆಲಸ ಮುಗಿಯುವವರೆಗೆ ಓದಿಕೊಂಡು ಬಿದ್ದಿರು ಎಂಬಂತೆ ತೇಜಸ್ವಿ ಉದಾಸೀನ ತೋರಿದ್ದೂ ಉಂಟು.
ವಿಧಾನ ಪರಿಷತ್ ಸದಸ್ಯತ್ವ ಮನೆ ಮುಂಬಾಗಿಲಿಗೇ ಬಂದು ನಿಂತಾಗಲೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲಿಲ್ಲ. ನನ್ನನ್ನು ಅಷ್ಟು ಸುಲಭವಾಗಿ ಯಾಮಾರಿಸಲು ಸಾಧ್ಯವಿಲ್ಲ ತಿಳ್ಕೊಳ್ಳಿ ಎಂಬುದನ್ನು ಸೂಚ್ಯವಾಗಿಯೇ ತಿಳಿಸುತ್ತಿದ್ದರು. ಹಿರಿಯ ರಾಜಕಾರಣಿಗಳೇ ಎಂ.ಎಲ್.ಸಿ.ಗಳಾಗಿ ಎಂದು ವಿನಂತಿಸಿಕೊಂಡರೂ. ವಿನಯಪೂರ್ವಕವಾಗಿ ನಿರಾಕರಿಸಿದ ತೇಜಸ್ವಿ ಇದಕ್ಕಿಂತಲೂ ಮುಖ್ಯವಾದ ಕೆಲಸವಿದೆ ಎಂದು ತಾವು ಮಾತ್ರ ಮಾಡಲು ಸಾಧ್ಯವಿದ್ದ ಕೆಲಸವನ್ನು ಮುಂದುವರೆಸಿದ್ದರು.
ಸಾಹಿತಿಗಳಾಗಿರುವುದೇ ಸರ್ಕಾರದಿಂದ ಸವಲತ್ತುಗಳನ್ನು ಹಿಂಬಾಗಿಲಿನಿಂದಲೋ, ಮುಂಬಾಗಿಲಿನಿಂದಲೋ ಪಡೆಯಲು ಇರುವ ರಹದಾರಿ ಎಂದುಕೊಂಡಿರುವವರ ನಡುವೆ ಮತ್ತು ಹಣವಂತರ ಜೀವನ ಚರಿತ್ರೆ ಬರೆದು ಪರಾಕ್ ಹಾಕುತ್ತಲೇ ಮನೆ ಮುಂದೆ ಖ್ಯಾತ ಸಾಹಿತಿಗಳು ಎಂದು ಬೋರ್ಡ್ ಹಾಕಿಕೊಳ್ಳುವ ಭಟ್ಟಂಗಿಗಳ ಸಾಮ್ರಾಜ್ಯದಲ್ಲಿ ತೇಜಸ್ವಿ ವಿಭಿನ್ನರಾಗಿ ಮತ್ತು ಆದರ್ಶಪ್ರಾಯರಾಗಿ ಕಾಣುತ್ತಾರೆ. ಯಾರಿಗಾದರೂ ಅರವತ್ತು ವರ್ಷವಾಗುವುದನ್ನೇ ಕಾಯುತ್ತಾ ಅಭಿನಂದನಾ ಗ್ರಂಥ ಬರೆಯಲು ಚಕ್ಕಳಂಬಕ್ಕಳ ಹಾಕಿಕೊಂಡು ಕುಳಿತಿರುವ ಸಾಹಿತಿಗಳ ಗುಂಪು ಅಲ್ಲಲ್ಲಿವೆ.