
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಮೀನನ್ನು ಯಾರಾದ್ರೂ ಕೊಂಡು ತಿಂತಾರೇನಯ್ಯಾ..?
ನಿರುತ್ತರ ಮನೆಯ ಮುಂಭಾಗದ ಕೊರಕಲಿನ ಹನಾಲಿನಲ್ಲಿ ಹರಿಯುವ ಚಿಕ್ಕ ತೊರೆಯಲ್ಲಿ, ಗಾಣಕ್ಕೆ ಸಿಕ್ಕಿಸಲು ಬೇಕಾದ ಏಡಿಗಳನ್ನು ಹಿಡಿದು ತೆಗೆದಿಟ್ಟುಕೊಂಡು ರಾಘವೇಂದ್ರ, ಬಾಪುದಿನೇಶ್, ತೇಜಸ್ವಿಯವರು ಮತ್ತು ನಾನು ಸ್ಕೂಟರಿನಲ್ಲಿ ಗಾಣ ಹಿಡಿದುಕೊಂಡು ಖಾಂಡ್ಯದಲ್ಲಿನ ಭದ್ರಾ ನದಿ ದಂಡೆಯನ್ನು ಸೇರಿದೆವು. ನಿಸರ್ಗವೇ ಕಡೆದಿಟ್ಟ ಶಿಲ್ಪಗಳಾದ ಆ ಬೃಹತ್ ಕಲ್ಲುಗಳ ಆಕೃತಿಗಳನ್ನು ಮನಸಾರೆ ಪ್ರಶಂಸಿಸುತ್ತಾ ಗಾಣಗಳನ್ನು ಸಿದ್ಧ ಮಾಡಿಟ್ಟುಕೊಂಡೆವು.
ತೇಜಸ್ವಿಯವರ ಬಳಿ ವಿದೇಶಿ ತಂತ್ರದ ಪಳಪಳ ಹೊಳೆಯುವ ತುದಿಯ ಗಾಣವೊಂದಿತ್ತು. ಅದರ ವಿಶೇಷವನ್ನು ವಿವರಿಸಿ ಸುಂಯ್ ಎಂದು ಹೊಳೆಗೆ ಎಸೆದು `ನೋಡ್ತಿರು ಎಂತೆಂಥಾ ಮೀನು ಹೆಂಗ್ ಹೊಡೀತಾವೆ’ ಎಂದರು. ಒಂದ್ ಒಂದೂವರೆ ಗಂಟೆಯಾದರೂ ಏನೂ ಪ್ರಯೋಜನವಾಗಲಿಲ್ಲ. ಬಿಸಿಲು ಸರಸರನೆ ಏರುತ್ತಿತ್ತು. ಕಲ್ಲು ಬಂಡೆಗಳ ಬಿಸಿ, ನೇರವಾಗಿ ರಾಚುತ್ತಿದ್ದ ಬಿರುಬಿಸಿಲನ್ನು ತಾಳಲಾರದೆ ‘ಇಲ್ಲೇ ಸ್ವಲ್ಪ ಮುಂದೆ ಈ ಹಿಂದೆ ಗಾಣ ಹಾಕಿದ್ದ ಸ್ಥಳವಿದೆ. ನಡೀರಿ ಅಲ್ಲಿ ಸ್ವಲ್ಪ ನೆರಳಾದ್ರೂ ಇರುತ್ತೆ’ ಅಂದರು ತೇಜಸ್ವಿ.
ಅಲ್ಲಿಂದ ಸುಮಾರು 2 ಕಿ.ಮೀ. ದೂರದ ಹೊಳೆಯ ಕೆಳಭಾಗಕ್ಕೆ ಹೋಗಿ ಗಾಣ ಹಾಕಿಕೊಂಡು ಹೊಳೆಯ ಬದಿಯ ನೆರಳಿನಲ್ಲಿ ನಿಶ್ಚಲವಾಗಿ ಕುಳಿತೆವು. ಹೊಳೆಯ ಆಚೆ ಬದಿಯ ಬಿದಿರು ಮೆಳೆಗಳ ನೋಟ ಅಪ್ಯಾಯಮಾನವಾಗಿತ್ತು. ಹೊಳೆ ಅಲ್ಲಿ ಕಿರಿದಾಗಿ ರಭಸವಾಗಿ ಹರಿಯುತ್ತಿತ್ತು. ಆಚೆ ಬದಿಯಲ್ಲಿ ಹಿಂದಿನ ದಿನ ಆನೆಗಳು ಓಡಾಡಿದ ಚಹರೆ ಇತ್ತು. ತೇಜಸ್ವಿಯವರು ನಮ್ಮೆಲ್ಲರಿಗಿಂತ ಮುಂದೆ ಹೋಗಿ ಕೊಂಡಕ್ಕೆ ಗಾಣ ಎಸೆದು ಗಾಢ ಮೌನಕ್ಕೆ ಶರಣಾಗಿ ತಪಸ್ವಿಯಂತೆ ತದೇಕಚಿತ್ತರಾಗಿ ಹೊಳೆಯ ಹರಿವನ್ನೇ ನೋಡುತ್ತಾ ಬಂಡೆಗಳೊಂದಿಗೆ ಬಂಡೆಯಾಗಿಬಿಟ್ಟರು.
ಏನಕ್ಕೂ ಇರಲಿ ಎಂದು ನಾವು ಕೊಂಡೋಯ್ದಿದ್ದ ಪಾಕೆಟ್ ರೇಡಿಯೋದಲ್ಲಿ ನಾನು, ಬಾಪೂ ಯಾವ್ಯಾವುದೋ ಸ್ಟೇಷನ್ಗಳನ್ನು ತಿರುಗಾ ಮುರುಗಾ ಟ್ಯೂನ್ ಮಾಡುತ್ತಿದ್ದೆವು. ಕೇಳರಿಯದ ಭಾಷೆಯ ಸಂಭಾಷಣೆಗಳು, ಹಿಂದಿ ಗೀತೆಗಳನ್ನು ಕೇಳಲು ಸರ್ಕಸ್ ಮಾಡಲಾರಂಭಿಸಿದೆವು. (ಟೀವಿಗಳಿಲ್ಲದ ನೆಮ್ಮದಿಯ ಹಾಗೂ ಸಂತಸದ ದಿನಗಳಲ್ಲಿ ರೇಡಿಯೋ ಕೇಳಿ ಪ್ರಫುಲ್ಲಗೊಳ್ಳುತ್ತಿದ್ದ ಮನಸ್ಸುಗಳಿಗೆ ಈ ಹುಡುಕಾಟದ ನೆನಪು ಹಸಿರಾಗಿರಬಹುದು. ಮನುಷ್ಯನನ್ನು ಸೋಮಾರಿಯಾಗಲು ಬಿಡದೇ ಕೆಲಸವನ್ನು ಮಾಡುತ್ತಲೇ ಸಂಗೀತ ಮತ್ತು ಸುದ್ದಿ- ಸಮಾಚಾರವನ್ನು ಕೇಳಲು ಬಳಕೆಯಾಗುತ್ತಿದ್ದ ರೇಡಿಯೋ ಲಕ್ಷಾಂತರ ಜನರ ಸಂಗಾತಿಯಾಗಿದ್ದ ದಿನಗಳೆಂದೂ ಮರಳಿ ಬಾರದ ವಿಷಾದದಲ್ಲಿ ನಾವಿದ್ದೇವೆ.) ನಿಶ್ಯಬ್ದತೆಯ ನಿರೀಕ್ಷೆಯಲ್ಲಿದ್ದ ತೇಜಸ್ವಿಯವರಿಗೆ ಕಿರಿಕಿರಿಯಾಯ್ತೆಂದು ಕಾಣಿಸುತ್ತೆ. ನಮ್ಮೆಡೆಗೆ ತಿರುಗಿನೋಡಿದ್ದು ಕಾಣಿಸಿತು. ತಕ್ಷಣ ರೇಡಿಯೋದ ಜೊತೆಗೆ ನಮ್ಮ ಹಿಂದುಮುಂದೆಲ್ಲವನ್ನೂ ಬಂದು ಮಾಡಿಕೊಂಡು ನಾವೂ ಕೊರಡಾದೆವು.
ಯಾವುದೋ ಅನಂತ ವಿಶ್ವದ ಕಲ್ಪನೆಯಲ್ಲಿ ಗಾಢವಾದ ವಿಚಾರ ಲಹರಿಯನ್ನು ತೇಲಿಬಿಟ್ಟು ವಾಸ್ತವ ಜಗತ್ತಿನ ಮೂರ್ತತೆಯನ್ನು ಸಾಕಾರಗೊಳಿಸಿಕೊಳ್ಳುವ ಕಾಷ್ಠ ಮೌನ ಮತ್ತು ಅನುಭಾವದೊಂದಿಗೆ ಜೀವನ ದರ್ಶನದತ್ತ ಹೊರಟಿದ್ದ ತೇಜಸ್ವಿಯವರನ್ನು ನಾವು ಡಿಸ್ಟರ್ಬ್ ಮಾಡಲು ಹೋಗಲೇ ಇಲ್ಲ.
ಇದ್ದಕ್ಕಿದ್ದಂತೆ “ಈ ಕುದುರೆಮುಖದವರು ಈ ಹೊಳೇಲೆಲ್ಲ ಕೆಸರು ಕದಡಿ ಕಳುಹಿಸುತ್ತಿದ್ದಾರಲ್ಲಾ ನೋಡಿ, ನೀರಿನ ಬಣ್ಣ ಹೇಗಿದೆಯಂತ, ಹೀಗಾದ್ರ್ರೆ ಮೀನೆಲ್ಲರ್ತಾವೆ? ಸಾಯ್ಲಿ ನಡೀರಿ. ರಘು ಟೈಂ ಎಷ್ಟು?” ಎಂದರು ತೇಜಸ್ವಿ.
‘ಟೈಮೂ… ನಾಲಕ್ ಗಂಟೆ.’
“ಅರೆ ಎಷ್ಟು ಹೊತ್ತು ಆಯ್ತಲ್ಲಾ ಮಾರಾಯ್ರ. ಹೊಟ್ಟೆಗೂ ಏನೂ ಹಾಕಿಲ್ವಲ್ರೋ ನಡೀರಿ ಹೋಗೋಣ” ಎಂದು ಬೆಳಗ್ಗೆ ನಾವು ಬಂದಿದ್ದಾಗ ಏನು ಹುರುಪು, ಚೈತನ್ಯದಿಂದಿದ್ದರೋ, ಸಂಜೆ ನಾಲ್ಕು ಗಂಟೆಯಲ್ಲೂ ಖಾಲಿ ಹೊಟ್ಟೆಯಲ್ಲೂ ಅದೇ ತೇಜಸ್ಸು, ಹುಮ್ಮಸ್ಸಿನಿಂದ ನಮ್ಮನ್ನು ಹುರಿದುಂಬಿಸಿದರು.
ನಮ್ಮ ಮುಖವೆಲ್ಲ ಹೊಟ್ಟೆಗೆ ಹಿಟ್ಟಿಲ್ಲದೇ ಬಾಡಿ ಬೆಂಡೆದ್ದು ಹೋಗಿತ್ತು. ಸಾಹಸಿ ಕಾರ್ಯಗಳಲ್ಲಿ ಯುವಕರನ್ನೂ ನಾಚಿಸುವಂಥ ಚಿಲುಮೆಯಾಗಿದ್ದ ತೇಜಸ್ವಿಯವರು ಸ್ವಚಿಕಿತ್ಸೆ ಮಾಡಿಕೊಂಡು ಮೈಸೂರಿನ ಆಸ್ಪತ್ರೆ ಸೇರಿದ ನಂತರ ಹೊರಗೆ ತಿರುಗುವ ಮುಂಚಿನ ಕಸುವನ್ನು ಕಳೆದುಕೊಂಡಂತೆ ಕಾಣಿಸುತ್ತಿದ್ದರು. ದೇಹ ಸೋತಿದ್ದರೂ ಅವರ ಮನೋಬಲ ಅಗಾಧವಾದದ್ದು.
“ಮೀನನ್ನು ಯಾರಾದ್ರೂ ದುಡ್ಡು ಕೊಟ್ಟು ಕೊಂಡು ತಿಂತಾರೇನಯ್ಯಾ” ಎನ್ನುತ್ತಿದ್ದ ತೇಜಸ್ವಿ ತಿನ್ನುವ ಒಂದೇ ಕಾರಣಕ್ಕಾಗಿ ಮೀನು ಶಿಕಾರಿ ಮಾಡುತ್ತಿರಲಿಲ್ಲ. ಗಾಳ ಹಾಕಿಕೊಂಡು ಕುಳಿತಿದ್ದಾಗ ಆ ಮೌನ, ನಿಶ್ಚಲತೆ, ಏಕಾಗ್ರತೆ, ಆ ಜಂಗಮ ವಿಶ್ವದಲ್ಲಿ ಸ್ಥಾವರವಾಗಿ ಅನುಭವಿಸುವ ಅನಂತ ವಿಶ್ವದ ಕಲ್ಪನೆ, ಇವೆಲ್ಲವೂ ಘನೀಕರಿಸಿ ಮೂರ್ತರೂಪವಾಗಿ ಸಾಹಿತ್ಯವಾಗಿ ಸಂಭವಿಸಿದ್ದು ಈಗ ಇತಿಹಾಸ.
ಮೀನು ಹಿಡಿಕ್ಯಂಡ್, ಓತಿಕ್ಯಾತ ಹುಡಿಕ್ಯಂಡ್, ಫೋಟೋ ಹೊಡಿಕ್ಯಂಡ್, ಚಿತ್ರ ಬಿಡಿಸ್ಕ್ಯಂಡ್ , ಶಿಕಾರಿ ಮಾಡಿಕ್ಯಂಡ್ ತಿರುಗೋ ಈತ ಎಂಥ ಅಪ್ಪನಿಗೆ ಎಂಥ ಮಗನಾಗಿ ಹುಟ್ಟಿದ, ಆನೆ ಹೊಟ್ಟೇಲಿ ಲದ್ದಿ ಬಿದ್ದಾಂಗೆ ಆಯ್ತು ಎಂದು ಟೀಕಿಸಿದವರಿಗೆ ತಮ್ಮ ಕೆಲಸ ಕಾರ್ಯಗಳಿಂದಲೇ ಉತ್ತರ ಹೇಳಿದ, ಕನ್ನಡ ನಾಡಿನ ಮೇರು ವ್ಯಕ್ತಿತ್ವ ತೇಜಸ್ವಿ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
ಹೌದು ಸರ್ ತೇಜಸ್ವಿ ಅವರ ಸಣ್ಣ ಪುಟ್ಟ ವಿಷಯಗಳನ್ನು ಅನುಭವಿಸಿದ ರೀತಿಯನ್ನು ಓದುತ್ತಿದ್ದರೆ ಎಲ್ಲೋ ನಾವು ನಮ್ಮದೇ ಅಸಂಭದ್ದ ಆಲೋಚನೆಗಳಿಂದ ಸತ್ವ ಬರೀತ ಜೀವದ ರಸವನ್ನು ಆಸ್ವಾದಿಸದೆ ದೂರ ಹೋಗುತ್ತಿದ್ದೇವೆನು ಅನ್ನಿಸುತ್ತದೆ, ಜಗತ್ತಿನ ಎಲ್ಲ ಸಿದ್ಧಾಂತ ಹಾಗೂ ಅದಕ್ಕೆ ಅಂಟಿಕೊಂಡಿರು ಆಚಾರ ವಿಚಾರಗಳನ್ನು ಬಿಟ್ಟು ಸೃಷ್ಟಿಯ ಸಿದ್ಧಾಂತ (ಪ್ರಕೃತಿ ಸಿದ್ಧಾಂತ )ಒಂದೇ ಸತ್ಯ ಎಂದು ಬದುಕಿದ ತೇಜಸ್ವಿಯವರು ಒಂದು ಅದ್ಬುತವೇ ಸರಿ.