
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ತೇಜಸ್ವಿ ಮತ್ತೆ ಬಂದರೇ..!?
ಈ ಬರಹದಲ್ಲಿ ಬಳಸಿಕೊಂಡಿರುವ ತೇಜಸ್ವಿಯವರ ಸಾಹಿತ್ಯದ ಒನ್ಲೈನರ್ಗಳನ್ನು ಶ್ರೀಮತಿ ರಾಜೇಶ್ವರಿಯವರಿಗೆ ತೋರಿಸಿ ಅಭಿಪ್ರಾಯ ಪಡೆಯಲು ಒಮ್ಮೆ ಹೋಗಿದ್ದೆ. ಕುಶಲೋಪರಿ ಮಾತನಾಡಿದ ನಂತರ ರಾಜೇಶ್ವರಿ ಆಂಟಿ ಒಳ ಹೋದರು.
ನಿಶ್ಯಬ್ಧವಾಗಿದ್ದ ಕೊಠಡಿಯಲ್ಲಿ ಪ್ರತಿ ವಸ್ತುವನ್ನೂ ತೇಜಸ್ವಿಯವರು ಅಪೇಕ್ಷಿಸುತ್ತಿದ್ದ ರೀತಿಯಲ್ಲಿ ಅದರದ್ದೇ ಜಾಗದಲ್ಲಿ ಒಪ್ಪಓರಣವಾಗಿ ಜೋಡಿಸಿಟ್ಟಿದ್ದರು. ಗೋಡೆಯಲ್ಲಿದ್ದ ಗಡಿಯಾರ ಸರಿಯಾಗಿ ಒಂದು ಗಂಟೆ ನಲವತ್ತು ನಿಮಿಷವನ್ನು ತೋರಿಸುತ್ತಾ ತೇಜಸ್ವಿ ನಮ್ಮನ್ನು ಅಗಲಿದ್ದ ದಿನಗಳಿಂದ ಕಾಲವೇ ಘನೀಕರಿಸಿದಂತೆ ನಿಂತಿತ್ತು.
ನಮ್ಮ ಪಾಲಿಗೆ ಸಮಸ್ತವೂ ಸ್ಥಗಿತವಾದಂತೆ ಘಟಿಸಿದ್ದ ಆ ಸಮಯವನ್ನು ತೋರಿಸುತ್ತಿದ್ದ ಗಡಿಯಾರನ್ನೇ ನಿರುಕಿಸುತ್ತಿದ್ದ ನಾನು ಮೇಲಂತಸ್ಥಿನ ಕಿಟಕಿಯನ್ನು ಠಕ್!ಠಕ್! ಎಂದು ಯಾರೋ ಬಡಿದಿದ್ದನ್ನು ಕೇಳಿ ಬೆಚ್ಚಿ ಗಡಬಡಿಸಿದೆ.
ನನಗೆ ತಿಳಿದಂತೆ ಮನೆಯಲ್ಲಿ ಆಂಟಿ, ಮನೆಗೆಲಸದ ಹೆಂಗಸು ದೇವಕಿ ಮತ್ತು ನಾನು ಮಾತ್ರ ಇದ್ದದ್ದು. ತೇಜಸ್ವಿಯವರ ನಿರ್ಗಮನದ ನಂತರ ಅವರ ಕಾರ್ಯಚಟುವಟಿಕೆಯ ಕೊಠಡಿಯಲ್ಲಿ ಯಾರೂ ವಿಶೇಷವಾಗಿ ಇರುತ್ತಿರಲಿಲ್ಲ. ನನ್ನ ಕಿವಿ ಚುರುಕಾಗಿ ಎದೆ ಬಡಿದ ಹೆಚ್ಚಾಯಿತು.
ತೇಜಸ್ವಿ ಮತ್ತೆ ಬಂದರೇ!? ಅಲ್ಯಾಕೆ ಶಬ್ಧ ಮಾಡುತ್ತಿದ್ದಾರೆ, ಎದುರು ಬಾಗಿಲಿನಿಂದ ಬಾರದೆ. ಓ ಎಲ್ಲೋ ಬೆಳಗ್ಗೆಯೇ ಬಂದು ಅಂದು ನಿಲ್ಲಿಸಿದ್ದ ಕೆಲಸ ಮುಂದುವರೆಸುತ್ತಿರಬಹುದು. ಮೇಲೆ ಹೋಗಿ ನೋಡಿ ಮಾತನಾಡಿಸುವಾ ಎಂದು ತವಕಗೊಂಡೆ. ನನ್ನನ್ನು ಕಂಡು “ಯಾವಾಗ ಬಂದೆಯೋ ಅಯೋಗ್ಯ! ಕೆಳಗೇನು ಮಾಡುತಿದ್ದೆ? ನೋಡು ಎಷ್ಟು ಕೆಲಸ ಬಾಕಿ ಇದೆ! ಯಾವಾಗ ಮುಗಿಸೋದು ಮಾರಾಯ! ನೀನಿನ್ನೂ ಹುಡುಗರನ್ನು ಕಟ್ಟಿಕೊಂಡು ಕಾಡು ಸುತ್ತುತ್ತಾ ಇದ್ದಿಯಾ ಹೇಗೆ?” ಎಂದು ಖಂಡಿತ ಉಗೀತಾರೆ ಅಂದುಕೊಳ್ಳುತ್ತಾ ಬೈಸಿಕೊಳ್ಳಲು ಸಿದ್ಧನಾದೆ.
ಮೇಲೇ ಹೋಗಲೋ, ಅವರೇ ಇರ್ತಾರೋ, ಎಂಬ ಗೊಂದಲದಲ್ಲಿ ಬಿದ್ದೆ. ಎದೆ ಬಡಿತ ಹೆಚ್ಚಾಯಿತು. ಎಷ್ಟು ದಿನಗಳಾಯಿತಲ್ಲ ಮಾತನಾಡಿಸಿ ಬೈದರೆ ಬೈಲಿ ಎಂದು ಕುರ್ಚಿಯನ್ನು ಕೆಳಗೆ ಒತ್ತಿ ಎದ್ದು ನಿಂತೆ. ಮಂಡಿಯಲ್ಲಿ ಬಲವೇ ಇಲ್ಲದಂತೆ ಆಯಿತು.
ಅರೇ! ತೇಜಸ್ವಿಯವರನ್ನು ನಾವೆಲ್ಲರೂ ಕುಪ್ಪಳಿಗೆ ಕರೆದೋಯ್ದಿದ್ದೆವಲ್ಲ ಅದು ಹೇಗೆ ಇಲ್ಲಿಗೆ ಬಂದರು? ಎಲ್ಲಾದರೂ ಅವರ ಆತ್ಮ! ಎಂದು ಏನೇನೋ ಯೋಚಿಸಿ ಸ್ಥಂಭೀಭೂತನಾದೆ. ಅಷ್ಟರಲ್ಲಿ ಮತ್ತೆ ಠಕ್!ಠಕ್! ಎಂದು ಮುಂಚಿದಕ್ಕಿಂತಲೂ ಬಲವಾಗಿ ಕಿಟಕಿಯನ್ನೋ ಬಾಗಿಲನ್ನೋ ಕುಟ್ಟಿದರು. ಈಗಂತೂ ನನಗೆ ನಿಧಾನವಾಗಿ ವಿದ್ಯುತ್ ಸಂಚಾರ ಶುರು ಆಯಿತು. ಎರಡನೇ ಬಾರಿ ತೇಜಸ್ವಿಯವರನ್ನು ಭೇಟಿಯಾಗುವ ಅವಕಾಶ!
ಮೈಮನದಲ್ಲೆಲ್ಲಾ ಕಂಪನ ಶುರುವಾಯಿತು. ಅಷ್ಟರಲ್ಲಿ ಮತ್ತೊಮ್ಮೆ ಠಕ್!ಠಕ್! ಕಾತರ, ಆತಂಕ, ಉದ್ವೇಗಗಳಿಂದ ಎದೆಯೊಳಗಿನ ಗೂಡ್ಸ್ ರೈಲು ವೇಗ ಹೆಚ್ಚಿಸಿಕೊಳ್ಳುತ್ತಿತ್ತು.
ಅಷ್ಟರಲ್ಲಿ ಒಳಮನೆಯಿಂದ ಕಾಫಿ, ಸ್ವೀಟ್ನೊಂದಿಗೆ ಆಂಟಿ ಬಂದರು. “ಈಗ ಕಿಟಕಿ ಬಡಿದ ಶಬ್ಧ ಕೇಳಿದಿರಾ?” ಎಂದು ಸರಾಗವಾಗಿ ಕೇಳಿದರು. ನಾನಿನ್ನೂ ಗಾಬರಿಯಿಂದ ಹೊರಬಂದಿರಲಿಲ್ಲ.
ಆತಂಕದಿಂದ “ಈಗ ಮಾತ್ರ ಅಲ್ಲ ಮುಂಚಿನಿಂದಲೂ ಬರ್ತಾ ಇದೆ. ಯಾರಿದ್ದಾರೆ ಮೇಲೆ?” ಎಂದೆ. “ಶಬ್ಧ ಮಾಡಬೇಡಿ ಈ ರೇಲಿಂಗ್ ಪಕ್ಕದಲ್ಲೇ ನಿಧಾನವಾಗಿ ಗಮನಿಸಿ ಯಾರೆಂದು” ಎಂದರು. ಅರೇ! ನಾನಿಷ್ಟು ಉದ್ವೇಗಗೊಂಡಿದ್ದೇನೆ ಇವರು ನೋಡಿದರೆ ಸಲೀಸಾಗಿ ಏನೂ ನಡದೇ ಇಲ್ಲವೆಂಬಂತೆ ಕಾಡಿನಲ್ಲಿ ಪೊದೆಯ ಹಿಂದೆ ಆಟವಾಡುವ ಮೊಲವನ್ನು ಗಮನಿಸಲು ಹೇಳುವಂತೆ ಹೇಳುತ್ತಿದ್ದಾರಲ್ಲ ಎಂದೆನಿಸಿತು.
ಧೈರ್ಯಕ್ಕೆ ಹೇಗೂ ಇದ್ದ್ದಾರಲ್ಲಾ ಎಂದುಕೊಂಡು, ಮಹಡಿ ಏರುವ ರೈಲಿಂಗ್ ಸಂದಿಯಿಂದ ಅಡಗಿ ಕುಳಿತು ಮೇಲೆ ದೃಷ್ಟಿ ಹಾಯಿಸಿದೆ. ಠಕ್ಠಕ್ ಎಂದು ಕಿಟಕಿ ಗಾಜು ಒಡೆದೇ ಹೋಗುವಂತೆ ಕುಟ್ಟಿದ್ದ ಶಬ್ಧ ಕೇಳಿ ಒಮ್ಮೆಲೆ ಮಿಡುಕಿ ಬಿದ್ದೆ. ಅದಕ್ಯಾಕೆ ಗಾಬರಿ ಬೀಳ್ತೀರಿ. ದಿನಾ ಬರುತ್ತೆ. ಹೆಚ್ಚೂ ಕಡಿಮೆ ಇದೇ ಸಮಯಕ್ಕೆ ಎಂದರು. ಅಷ್ಟರಲ್ಲಿ ಬರ್ರ್!! ಎಂದು ಶಬ್ಧವಾಯಿತು. “ಹೆದರಿದ್ರಾ? ಅದೊಂದು ಮರಕುಟುಕ. ಅವರಿದ್ದಾಗ ಆಗಾಗ ಭೇಟಿ ನೀಡುತ್ತಾ ಇತ್ತು. ಈಗಲೂ ದಿನಕ್ಕೊಮ್ಮೆಯಾದರೂ ಬಂದು ಕಿಟಕಿ ಗಾಜನ್ನು ಕುಟ್ಟಿ ಒಳಬರಲು ಪ್ರಯತ್ನಿಸಿ ಸಾಧ್ಯವಾಗದೇ ಹಾರಿಹೋಗುತ್ತೆ. ಹೊಸಬರಿಗೆ ಮೊದಲ ಬಾರಿಗೆ ಗಾಬರಿಯಾಗುವುದು ಖಂಡಿತ!”ಎಂದರು.
ಪ್ರಕೃತಿಯಲ್ಲಿ ಲೀನರಾಗಿದ್ದ ತೇಜಸ್ವಿಯವರೇ ಮರಕುಟುಕದ ರೂಪದಲ್ಲಿ ಭೇಟಿ ನೀಡುತ್ತಿದ್ದಾರೋ ಎಂದು ಭಾಸವಾಯಿತು. ನಿಜವಾಗಿಯೂ ತೇಜಸ್ವಿಯವರೇ ಬಂದು ನಮ್ಮೆಲ್ಲರನ್ನೂ ತರಾಟೆಗೆ ತೆಗೆದುಕೊಂಡರೆ ಎಂಬ ರಮ್ಯ ಲೋಕವನ್ನು ಕಲ್ಪಿಸಿಕೊಂಡು ರೋಮಾಂಚಿತನಾದೆ. ಪಕ್ಷಿ, ಮರ, ಕೀಟ, ಕೆರೆ, ತೊರೆ ಹಾಗೂ ನಮ್ಮೆಲ್ಲರೊಳಗೆ ಪ್ರವಹಿಸುತ್ತಿರುವ ತೇಜಸ್ವಿ ಎಂಬ ಚೇತನ ಯಾವ ಕ್ಷಣದಲ್ಲೂ ಎದುರಾಗಿ ಮಾತನಾಡಿಸುವ ಸಂದರ್ಭದ ಪ್ರತೀಕ್ಷೆಯಲ್ಲಿದ್ದೇನೆ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ