
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ನ್ಯಾಯ ಪಡೆಯಲು ಕೋವಿಯನ್ನೇ ಕೈಗೆ ತಗೋಬೇಕೇನಯ್ಯಾ?
ನಕ್ಸಲ್ ನಾಯಕ ಸಾಕೇತ್ ರಾಜ್ ಎನ್ಕೌಂಟರ್ ಆಗಿದ್ದಾಗ ತೇಜಸ್ವಿಯವರನ್ನು ಸಂಪರ್ಕಿಸಿದ್ದ ಗೌರಿ ಲಂಕೇಶ್ರವರಿಗೆ ಅಗತ್ಯ ಲಾಯರ್ಗಳನ್ನು ಹುಡುಕಿಕೊಡಲು ನನ್ನನ್ನು ರೆಫರ್ ಮಾಡಿದ್ದರು ತೇಜಸ್ವಿ. ಮೂಡಿಗೆರೆಯ ಯುವ ವಕೀಲರಾಗಿದ್ದ ಜಯರಾಂ ಮತ್ತು ಸುಧೀರ್ರವರನ್ನು ನಾನು ಸೂಚಿಸಿದ್ದೆ. ನಕ್ಸಲರ ಹಾದಿ ತಪ್ಪಿದ ಹೋರಾಟದ ಬಗ್ಗೆ ಅಸಮ್ಮತಿ ಇದ್ದ ತೇಜಸ್ವಿ ಯುವಜನತೆ, ಸೌಲಭ್ಯ ವಂಚಿತರು, ಹತಭಾಗ್ಯರು, ಶೋಷಿತರು ಮತ್ತು ಆದಿವಾಸಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಚಿರಂಜೀವಿ ಸಿಂಗ್ರಂತಹ ಹಿರಿಯ ಅಧಿಕಾರಿಗಳೂ ಸಹ ಈ ವಿಚಾರದಲ್ಲಿ ತೇಜಸ್ವಿಯವರ ಅಭಿಪ್ರಾಯ ಪಡೆಯುತ್ತಿದ್ದರು.
ಕರಕೌಶಲ್ಯ ಮತ್ತು ಶ್ರಮವನ್ನು ನಿಜವಾದ ಪ್ರತಿಭೆಯೆಂದು ಪರಿಗಣಿಸದಿರುವುದೇ ಭಾರತದ ಅನೇಕ ಅನರ್ಥಗಳಿಗೆ ಕಾರಣ. ಅಸಾಧಾರಣ ಪ್ರಮಾಣದ ಜನಸಂಖ್ಯೆಯುಳ್ಳ ಭಾರತದಲ್ಲಿ ಪ್ರತಿಶತ 80 ಸಂಪತ್ತು ಜನಸಂಖ್ಯೆಯ ಶೇಖಡಾ 20 ಜನರು ಅನುಭವಿಸುತ್ತಿದ್ದು, ಉಳಿದ 20 ಅಂಶಂವು ಶೇಖಡಾ 8೦ ಜನರಲ್ಲಿ ಹಂಚಿಕೆಯಾಗಿರುವಂಥಾ ದೊಡ್ಡ ಏರುಪೇರಿನ ವಿರೋದಾಭಾಸವನ್ನು ಕಾಣುತ್ತೇವೆ.
ಇದೆಲ್ಲದರ ನಡುವೆ ತೇಜಸ್ವಿ ಡೈನಮಿಕ್ ಇನ್ ಈಕ್ವಾಲಿಟಿ ಎಂಬ ವಾದವನ್ನು ಮುಂದಿಟ್ಟು ನಮ್ಮನ್ನು ಚಕಿತಗೊಳಿಸುತ್ತಾರೆ. ಐಷಾರಾಮದ ಆಸೆ ಮತ್ತು ಬಡತನದ ಭಯ ಈ ಎರಡು ಅಂಶಗಳು ದುಡಿಮೆ ಮತ್ತು ಶ್ರಮವನ್ನು ಪ್ರೇರೇಪಿಸುತ್ತವೆ ಎಂದು ಅಭಿಪ್ರಾಯಿಸುತ್ತಾರೆ. ಅಸಮರ್ಪಕವಾಗಿ ಹಂಚಿಕೆಯಾಗಿರುವ ಸಂಪತ್ತು ಅಸಮಾನತೆಯನ್ನು ಹುಟ್ಟು ಹಾಕಿ, ಅಂತಿಮವಾಗಿ ಶೋಷಣೆಯಲ್ಲಿ ಪರ್ಯಾವಸಾನವಾಗುತ್ತದೆ ಮತ್ತು ವರ್ಗಸಂಘರ್ಷಕ್ಕೆ ನಾಂದಿ ಹಾಡುತ್ತದೆ.
ಭೂಮಾಲೀಕರು ನೆರೆಯ ಸಣ್ಣಪುಟ್ಟ ರೈತರಿಗೆ ಆಮಿಷ ಒಡ್ಡಿ, ಬೆದರಿಸಿ, ಇಲ್ಲಸಲ್ಲದ ತೊಂದರೆ ನೀಡಿ ಜಾಗ ಬಿಡಿಸಿ ಓಡಿಸುವುದು, ನೀರು ಸಿಗದಂತೆ ಮಾಡಿ, ದನ ನುಗ್ಗಿಸಿ ಬೆಳೆ ಹಾಳು ಮಾಡಿ, ಅಡ್ಡ ಬೇಲಿ ಹಾಕಿ, ಹಳ್ಳದ ನೀರು ತಿರುವಿ ಪ್ರವಾಹ ಸೃಷ್ಠಿಸಿ, ದಾರಿ ಬಂದ್ ಮಾಡಿ, ಹೆಂಗಸರು-ಮಕ್ಕಳಿಗೆ ಕಿರುಕುಳ ನೀಡಿ, ಕಳ್ಳಭಟ್ಟಿ-ಕಳ್ಳ ನಾಟಾದ ಹೆಸರಿನಲ್ಲಿ ಸುಳ್ಳು ಕೇಸು ಹಾಕಿಸಿ ಹೀಗೆ ಸಾಧ್ಯವಿರುವ ಎಲ್ಲಾ ರೀತಿಯ ತೊಂದರೆ ನೀಡಿದಾಗ ಬದುಕಿದರೆ ಸಾಕಪ್ಪಾ ಎಂದು ಸಣ್ಣ ಪುಟ್ಟ ಬೆಳೆಗಾರರು ಕೇಳಿದ ರೇಟಿಗೆ ಜಮೀನನ್ನು ತೊಂದರೆ ನೀಡಿದವರಿಗೇ ಮಾರಿ ಊರು ಬಿಟ್ಟು ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.
ಭೂಮಾಲೀಕರ ದರ್ಪ, ರಾಜಕಾರಣದ ಹೆಸರಿನಲ್ಲಿ ತೋರಿಸುವ ಸೋಗಿನ ಕಾಳಜಿ, ಜಾತಿ ಹೆಸರಿನಲ್ಲಿ ನಯವಾಗಿ ಮೆಟ್ಟಿ ಮೆರೆಯುವ ಧೂರ್ತಬುದ್ಧಿ, ಸಾರ್ವಜನಿಕವಾಗಿ ಸುಧಾರಣಾವಾದಿಯಂತೆ ತೋರ್ಪಡಿಸಿಕೊಳ್ಳುವ ಪ್ರಭಾವಿಗಳು ಖಾಸಗಿಯಾಗಿ ನಡೆಸುವ ಮಸಲತ್ತುಗಳು. ಸ್ವಹಿತಾಸಕ್ತಿಗಾಗಿ ಇತರರ ಮಾನವೀಯ ಹಕ್ಕುಗಳು ಮತ್ತು ಮೌಲ್ಯಗಳನ್ನು ಉಢಾಫೆಯಿಂದ ಮತ್ತು ತಿರಸ್ಕಾರದಿಂದ ಕಾಣುವುದರಿಂದಲೇ ಸಿಡಿದೆದ್ದು ದನಿಯೆತ್ತಿ ನಿಂತ ಯುವಕರು, ಹೋರಾಟಗಾರರನ್ನು ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ಮಟ್ಟ ಹಾಕುತ್ತಿರುವ ಸರ್ಕಾರದ ಕ್ರಮಗಳ ಕುರಿತಾದ ಪತ್ರಿಕಾ ವರದಿಗಳನ್ನು ನಾನು ಪ್ರಸ್ತಾಪಿಸಿದಾಗಲೆಲ್ಲ ತೇಜಸ್ವಿ “ನ್ಯಾಯ ಪಡೆಯಲು ಕೋವಿಯನ್ನೇ ಕೈಗೆ ತಗೋಬೇಕೇನಯ್ಯಾ?”ಎನ್ನುತಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946