
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ವಿಸ್ಮಯ ಪ್ರತಿಷ್ಠಾನದ ಮೂಲ ಪರಿಕಲ್ಪನೆ
ಕೊಟ್ಟಿಗೆಹಾರ ಸಮೀಪದ ಬಾಳೂರು ಮೀಸಲು ಅರಣ್ಯದ ನಡುವಿನ ಮಲಯಮಾರುತ ಪ್ರದೇಶದಲ್ಲಿ ಜೀವವೈವಿಧ್ಯ ತಾಣವೊಂದನ್ನು ಅಭಿವೃದ್ದಿಪಡಿಸಿ ಅಧ್ಯಯನಶೀಲ ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕೆಂದು 1999 ರಲ್ಲೇ ನಮ್ಮ ನೇಚರ್ ಕ್ಲಬ್ನಿಂದ ಯೋಜನೆಯೊಂದನ್ನು ತಯಾರಿಸಿದ್ದೆವು. ಸುಮಾರು 100ಎಕರೆ ಪ್ರದೇಶವನ್ನು ಈ ಉದ್ದೇಶಕ್ಕೆ ಪಡೆದು, ಪಶ್ಚಿಮ ಘಟ್ಟದ ಜೀವವೈವಿಧ್ಯವನ್ನು ಅಭ್ಯಸಿಸಿ, ಜ್ಞಾನ ಪ್ರಸರಣ ಮಾಡುವ ಸಂಕಲ್ಪದಿಂದ ವಿವರವಾದ ಕಾರ್ಯಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು. ಅಗತ್ಯ ಸ್ಥಳದ ಮಂಜೂರಿ ಮತ್ತು ಹಣಕಾಸಿನ ನೆರವನ್ನೂ ಕೋರಿದ್ದೆವು.
ಮರ ಕಡಿದು ಮಾರಲು, ಗಣಿಗಾರಿಕೆ ನಡೆಸಲು, ವಿಶ್ವ ಬ್ಯಾಂಕ್ನ ನೆರವಿನ ಹಣದ ಲೆಕ್ಕ ಟ್ಯಾಲಿ ಮಾಡಲು, ದಡದ ಮಣ್ಣು ಕೆರೆದು ಕೆರೆ ಹೂಳೆತ್ತಲು, ಕಾಡು ಸವರಿ, ಅನಗತ್ಯ ರಸ್ತೆ ಮಾಡಲು ಅನುಮತಿ ನೀಡುವ ತರಾತುರಿಯಲ್ಲಿದ್ದ ನಮ್ಮ ವ್ಯವಸ್ಥೆಗೆ ನಾವು ಕಳಿಸಿದ್ದ ಪ್ರಸ್ತಾವನೆ ಕಣ್ಣಿಗೆ ಬೀಳಲಿಲ್ಲವೋ ಏನೋ? ಆರು ತಿಂಗಳಾದರೂ ಮನವಿ ತಲುಪಿದ್ದಕ್ಕೆ ಹಿಂಬರಹವೂ ಬರಲಿಲ್ಲ. ಅದೇ ಆರ್ಥಿಕ ನೆರವಿನ ಮನವಿಯನ್ನು ಬ್ರಿಟಿಷ್ ಹೈಕಮಿಷನ್ಗೆ ಕಳುಹಿಸಿದೆ. ಯೋಜನೆಯ ಅಗತ್ಯತೆ ಹಾಗೂ ನಮ್ಮ ಸಂಸ್ಥೆಯ ಕಳಕಳಿಯನ್ನು ಗಮನಿಸಿದ ಆ ವಿದೇಶಿ ಸರಕಾರಿ ಅಂಗಸಂಸ್ಥೆ ಹದಿನೈದೇ ದಿನಗಳಲ್ಲಿ ಮೊದಲ ಹಂತದ ನೆರವನ್ನಾಗಿ ಅರವತ್ತು ಸಾವಿರ ಬ್ರಿಟಿಷ್ ಪೌಂಡ್ಗಳನ್ನು ಅಂಗೀಕರಿಸಿತ್ತು. ಜೊತೆಗೆ ಹಲವಾರು ದಾಖಲೆಗಳನ್ನು ಸಲ್ಲಿಸಲು ಸೂಚಿಸಿತ್ತು. ಎಫ್.ಸಿ.ಆರ್.ಎ. ಕಾಯ್ದೆಯನ್ವಯ ಸರಕಾರದ ಅನುಮತಿ ಪಡೆಯಲು ಅಗತ್ಯ ಪತ್ರ ವ್ಯವಹಾರ ಮಾಡಲಾರಂಭಿಸಿದೆ. ಈ ಹಂತದಲ್ಲಿ ತೇಜಸ್ವಿಯವರಿಗೆ ಯೋಜನೆಯ ವಿವರ, ವಿದೇಶೀ ನೆರವಿನ ವಿಚಾರವನ್ನು ತಿಳಿಸಿದೆ. ಹನ್ನೆರಡು ಪುಟಗಳ ಯೋಜನಾ ವರದಿ ಮತ್ತು ಆ ನಂತರದ ಪತ್ರ ವ್ಯವಹಾರಗಳನ್ನು ಪರಿಶೀಲಿಸಿದ ತೇಜಸ್ವಿಯವರು “ವೆರೀಗುಡ್! ಒಳ್ಳೆಯ ಕೆಲಸ ಮಾಡಿದ್ದೀಯಾ. ಇಷ್ಟೆಲ್ಲಾ ಆಗೋವರೆಗೂ ಬಾಯನ್ನೇ ಬಿಡ್ಲಿಲ್ಲವಲ್ಲ ಮಾರಾಯ! ಆದರೆ………….” ಎಂದು ಮೌನವಾದರು.
ಸುರಂಗದೊಳಗೆ ಹೋದ ರೈಲು ಹೊರಗೆ ಯಾವಾಗ ಹೊರಬರುವುದೆಂಬ ಆತಂಕದಲ್ಲಿ ಕಾಯುತ್ತಾ ಕುಳಿತೆ. ಸುಮಾರು ಐದು ನಿಮಿಷ ಮೌನವೇ ರಾಜ್ಯವಾಳಿತು. “ಸುಮಾರು ಜನ, ಸಂಘ-ಸಂಸ್ಥೆಗಳು ವಿದೇಶೀ ನೆರವನ್ನು ತರಿಸಿಕೊಂಡು ಯೋಜನೆ ಅಂತ ಏನೋ ಪ್ರಾರಂಭಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳ ಹಣಕಾಸಿನ ವ್ಯವಹಾರ ಸರಿಯಾಗಿಲ್ಲ ಕಣಯ್ಯ. ಈ ರೀತಿಯ ಕೆಲಸ ಮಾಡಬೇಕಾದರೆ ನೀನು ಆ ಜಾಗದ ಅಕ್ಕಪಕ್ಕದ ಒತ್ತುವರಿದಾರರ ಜೊತೆ ತಿಕ್ಕಾಡಲೇ ಬೇಕಾಗುತ್ತದೆ. ಇಲ್ಲಸಲ್ಲದ ತೊಂದರೆ ಕೊಡುತ್ತಾರೆ. ಎಷ್ಟೇ ಸರಿ ಇದ್ದರೂ ವಿನಾ ಕಾರಣ ಅರೋಪ ಮಾಡುತ್ತಾರೆ.”
ಸಿಗುವ ಅನುದಾನವನ್ನು ನಿರ್ದಿಷ್ಟ ಅವಧಿಯೊಳಗೆ ವಿನಿಯೋಗಿಸಬೇಕಾಗಿರುವುದರಿಂದ ಅಗತ್ಯ-ಅನಗತ್ಯ ಬಾಬುಗಳಿಗೆ ಬಿಲ್ ತಯಾರಿಸಿ ಖರ್ಚಾಯಿತೆಂದು ತೋರಿಸಿ, ಬ್ಯಾಲೆನ್ಸ್ ಷೀಟ್ ತಯಾರಿಸಿ ಕೊಡುವುದು, ಕೊಂಡ ವಸ್ತುಗಳಿಗೆ ಅವಾಸ್ತವಿಕ ಬೆಲೆ ನಮೂದಿಸುವುದು, ಸ್ವಯಂ ಸೇವಕರೆಂದು ಘೋಷಿಸಿಕೊಂಡರೂ ಯಾವುದೇ ಕಂಪನಿಯ ಕಾರ್ಯನಿರ್ವಾಹಕರಿಗೂ ಕಡಿಮೆಯಿಲ್ಲದಂತೆ ಗೌರವಧನ ಮತ್ತಿತರ ಭತ್ಯೆಗಳನ್ನು ವಸೂಲು ಮಾಡುವುದು ಇವೆಲ್ಲವೂ ನನ್ನ ಗಮನಕ್ಕೂ ಬಂದಿತ್ತು.
“ನೀನು ಪರಿಸರ ಅಧ್ಯಯನ ಮಾಡಿಸುತ್ತಿಯೋ ಇಲ್ಲಾ ಅಕ್ಕಪಕ್ಕದವರೊಡನೆ ಗುದ್ದಾಡುತ್ತ ಕೋರ್ಟು-ಕಛೇರಿ ಅಂತ ಅಲೀತಾ ಕಾಲ ಕಳೀತೀಯೋ? ಲಂಚ ಕೊಟ್ಕೊಂಡು, ಇನ್ಫ್ಲೂಯೆನ್ಸ್ ಮಾಡಿಸಿಕೊಂಡು ಅಲೀತ್ತೀಯಾ? ಆಯೋಗ್ಯ! ಎಲ್ಲಿಂದಲೋ ದುಡ್ಡು ತರಿಸಿಕೊಂಡು ನೇಚರ್ ಕ್ಲಬ್ನವರು ಜೀಪ್ನಲ್ಲಿ ತಿರುಗುತ್ತಾ ಮಜಾ ಮಾಡ್ತಿದ್ದಾರೆ ಅಂತ ಪೇಪರ್ನವರು ಬರೀಲಿಕ್ಕೆ ಶುರು ಮಾಡ್ತ್ರರೆ. ನಿನ್ನ ಉದ್ದೇಶ ಒಳ್ಳೆಯದ್ದೇ. ನಾನು ಹೇಳಿದನ್ನು ಯೋಚಿಸಿ ನೋಡು” ಎಂದರು. ಅಲ್ಲಿಗೆ ನಮ್ಮ ವಿದೇಶೀ ನೆರವಿನ ಎಪಿಸೋಡ್ ಕೊನೆಯುಸಿರೆಳೆಯಿತು.
ಅದೇ ಯೋಜನೆಯು ಈಗ ಪರಿಷ್ಕೃತಗೊಂಡು ತೇಜಸ್ವಿಯವರ ನಿಧನಾನಂತರ ಅವರದೇ ಹೆಸರಿನಲ್ಲಿ ಜೀವ ವೈವಿಧ್ಯ ಕೇಂದ್ರವಾಗಿ ಹೆಚ್ಚೂ ಕಡಿಮೆ ಅದೇ ಪರಿಸರದಲ್ಲಿ ರೂಪುಗೊಳ್ಳುತ್ತಿದೆ. ರಾಜ್ಯ ಸರ್ಕಾರದ ನೆರವಿನಲ್ಲಿ ತೇಜಸ್ವಿಯವರ ಬದುಕು, ಬರಹ, ಚಿಂತನೆಗಳನ್ನು ಸಾಕಾರಗೊಳಿಸುವ ಗುರುತರ ಜವಾಬ್ದಾರಿ ನಮ್ಮ ವಿಸ್ಮಯ ಪ್ರತಿಷ್ಠಾನದ ಮೇಲಿದೆ.

ಪೂರ್ಣಚಂದ್ರ ತೇಜಸ್ವಿಯವರು ಕನ್ನಡ ನಾಡು ನುಡಿಗಾಗಿ ಸಲ್ಲಿಸಿರುವ ಸೇವೆ ಹಾಗೂ ಇಲ್ಲಿನ ಜನ ಮಾನಸದ ಮೇಲೆ ಬೀರಿರುವ ಪ್ರಭಾವವು ಅದ್ವಿತೀಯವಾದುದು. ಕಲೆ, ಸಾಹಿತ್ಯ, ವೈಚಾರಿಕ ದೃಷ್ಟಿಕೋನ, ಸರಳ-ನೇರ ನಡವಳಿಕೆ, ಬಹುಮುಖೀ ಸಾಧನೆಯ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾದುದು.
ಸಾರ್ಥಕ ಸಾಹಸೀ ಬದುಕನ್ನು ಬಾಳಿದ ತೇಜಸ್ವಿಯವರು ತಮ್ಮ ಜೀವಿತಾವಧಿಯಲ್ಲಿ ನಂಬಿಕೊಂಡು ಬಂದಿದ್ದ ಹಾಗೂ ಅಳವಡಿಕೆಗೆ ಪ್ರಯತ್ನಿಸಿದ್ದ ವೈಜ್ಞಾನಿಕ ಸತ್ಯಗಳು, ವೈಚಾರಿಕ ಮೌಲ್ಯಗಳು, ಪರಿಸರಪ್ರಜ್ಞೆ, ಪ್ರಯೋಗಶೀಲ ಸಾಹಸಗಾಥೆಗಳು, ನಾಡು-ನುಡಿಯ ಬಗೆಗಿನ ನಿಖರ ಹಾಗೂ ವಾಸ್ತವವಾದೀ ನಿಲುವುಗಳನ್ನು ಅತ್ಯಂತ ಸಮರ್ಥವಾಗಿ ಹಾಗೂ ಸಮರ್ಪಕವಾಗಿ ಕಾರ್ಯರೂಪಕ್ಕಿಳಿಸುವ ಗುರುತರ ಹೊಣೆಗಾರಿಕೆ ಪ್ರತಿಷ್ಠಾನದ್ದಾಗಿದೆ.
ಈ ಪ್ರಯತ್ನವನ್ನು ತೇಜಸ್ವಿಯವರಿಗೆ ಸ್ಮಾರಕ ಎಂದು ಸೀಮಿತ ದೃಷ್ತಿಯಿಂದ ಕಾಣುವ ಅಗತ್ಯವಿಲ್ಲ. ತೇಜಸ್ವಿಯವರ ಕಾರ್ಯಕ್ಷೇತ್ರದ ಮುಂದುವರೆದ ಹಾಗೂ ಅಷ್ಟೇ ಜವಾಬ್ದಾರಿಯುತ ಹೊಣೆಗಾರಿಕೆಯೆಂದು ಮನವರಿಕೆ ಮಾಡಿಕೊಂಡು ಕಾರ್ಯತತ್ಪರರಾಗುವ ಸಂಕ್ರಮಣದ ಕಾಲ ಇದಾಗಿದೆ.
ತೇಜಸ್ವಿಯವರ ಕೃತಿಗಳು ಹಾಗೂ ವಿಚಾರ ಮಂಥನಗಳಲ್ಲಿ ಬಿಟ್ಟು ಬಿಡದೇ ಅವಿನಾಭಾವವಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಕೃತಿ, ಗ್ರಾಮೀಣ ಬದುಕು, ಸಾಹಸ ಶೀಲತೆ, ವಿಸ್ಮಯಗೊಳಿಸುವ ಸರಳ ವಿಜ್ಞಾನ, ಐತಿಹಾಸಿಕ ಸತ್ಯಗಳು, ಜೀವಜಗತ್ತಿನ ಕೌತುಕಗಳು, ಮಲೆನಾಡಿನ ಕಾಡಿನ ನಿಗೂಢತೆ, ಪ್ರಾಚೀನ ನಾಗರೀಕತೆಗಳು, ಬೆಚ್ಚಿಬೇಳಿಸುವ ಅಂತರಿಕ್ಷದ ವಿದ್ಯಮಾನಗಳು, ಚಕಿತಗೊಳಿಸುವ ಕೀಟಜಗತ್ತು, ಪಕ್ಷಿಲೋಕದ ಅದ್ಬುತ ಅನಾವರಣ, ಜಲಚರಗಳ ಬದುಕಿನ ವಿಧಾನ, ಜಗತ್ತಿನ ದಿಕ್ಕನ್ನೇ ಬದಲಿಸಿದ ಆವಿಷ್ಕಾರಗಳು, ದುರಂತಗಳು, ಮಹಾಯುದ್ಧಗಳು, ಹೀಗೆ ಕೈಯ್ಯಾಡಿಸದ ಕ್ಷೇತ್ರವೇ ಇಲ್ಲವೇನೋ ಎಂಬಂತೆ ತೇಜಸ್ವಿಯವರು ಬಿಡುವಿಲ್ಲದೇ ಸಾಹಿತ್ಯಿಕವಾಗಿ ದುಡಿದಿದ್ದಾರೆ.
ರಂಗಭೂಮಿ ಚಟುವಟಿಕೆ, ಪರಿಸರ ಸಂಬಂಧೀ ಹೋರಾಟಗಳು, ಕನ್ನಡ ಭಾಷೆಯ ಗಣಕೀಕರಣದ ಸಾಧ್ಯತೆಗಳು, ಇ-ಗವರ್ನೆಂಸ್, ವಿಶೇಷವಾಗಿ ಮಕ್ಕಳ ಜ್ಞಾನವರ್ಧನೆಗೆ ತೇಜಸ್ವಿಯವರು ನೀಡಿದ ಮನ್ನಣೆಯನ್ನು ನಾವಿಂದು ಮುಂದುವರೆಸಿಕೊಂಡು ಹೋಗುವ ಕವಲುದಾರಿಯಲ್ಲಿ ನಿಂತಿದ್ದೇವೆ.
ಈ ಉದ್ದೇಶಕ್ಕೆ ಮೂಡಿಗೆರೆಯ ಆಸುಪಾಸಿನಲ್ಲಿ ಒಂದು ಸರ್ವ ಸುಸಜ್ಜಿತ ಜೈವಿಕ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದ ಅವಶ್ಯಕತೆಯನ್ನು ಮನಗಂಡ ಮೂಡಿಗೆರೆಯ ನೇಚರ್ ಕ್ಲಬ್ (ತೇಜಸ್ವಿಯವರು ಹಿರಿಯ ಸದಸ್ಯರಾಗಿದ ಪರಿಸರ ಸಂವೇದಿ ಸಂಸ್ಥೆ) ನ ಅಧ್ಯಯನ ತಂಡ ಸದರಿ ಯೋಜನೆಯ ರೂಪು-ರೇಷೆಯನ್ನು ತಯಾರಿಸಿದೆ. ಕನಿಷ್ಟ ಮುನ್ನೂರು ಎಕರೆ ಅರಣ್ಯ ಪ್ರದೇಶ ಹಾಗೂ ಅದಕ್ಕೆ ಹೊಂದಿಕೊಂಡಂತೆ ಸುಮಾರು ಹದಿನೈದು ಎಕರೆ ಕಂದಾಯ ಭೂಮಿ ಅಗತ್ಯವಿದ್ದು, ಅಲ್ಲಿ ಜೈವಿಕ ಪರಿಸರ ಮಾಹಿತಿ ಕೇಂದ್ರದ ಸ್ಥಾಪನೆಯ ಯೋಜನೆಯನ್ನು ಸಮಾಲೋಚಿಸಿ, ಸಾಧ್ಯಾಸಾಧ್ಯತೆಗಳನ್ನು ಚರ್ಚಿಸಿ ಮಹತ್ವಾಕಾಂಕ್ಷೆಯ ಪ್ರಸ್ತಾವವನ್ನು ಸರ್ಕಾರದ ಮುಂದಿಡಲಾಗುತ್ತಿದೆ.
ವಿಶೇಷವಾಗಿ ಮಕ್ಕಳ ಕುರಿತು ಅಭಿಮಾನ, ಪ್ರೀತಿ, ಕಳಕಳಿ ಹೊಂದಿದ್ದ ತೇಜಸ್ವಿಯವರು ಜ್ಞಾನಾರ್ಜನೆಯನ್ನು ಆಕರ್ಷಣೀಯವನ್ನಾಗಿಸಿದ್ದು ಕರ್ನಾಟಕದ ಶೈಕ್ಷಣಿಕ ಮತ್ತು ಸಾಹಿತ್ಯಿಕ ವಲಯದಲ್ಲಿ ಒಂದು ಕ್ರಾಂತಿಯನ್ನೇ ಉಂಟು ಮಾಡಿದು ಈಗ ಇತಿಹಾಸ. ಕನ್ನಡ ನಾಡಿನ ಹಕ್ಕಿಗಳನ್ನು ಮಕ್ಕಳ ಅಂಗೈಗೆ `ಹಕ್ಕಿ-ಪುಕ್ಕ` ರೂಪದಲ್ಲಿ, ಜಗತ್ತಿನ ಕೌತುಕಗಳನ್ನು ಮಿಲೇನಿಯಂ ಸರಣಿಯಲ್ಲಿ, ಸಾಹಿತ್ಯದ ರಮ್ಯತೆಯನ್ನು ಕುವೆಂಪುರವರ `ಕಿಂದರಜೋಗಿ` ಪಾತ್ರದಿಂದ ಸುಲಭ ಬೆಲೆಗೆ ತಲುಪಿಸಿದ ಕೀರ್ತಿ ಶಾಶ್ವತವಾದುದು.ಕೀಟಗಳ ವಿಸ್ಮಯ ಲೋಕದ ಅನಾವರಣ ಮಾಡುವ ಮಾಹಿತಿಗಾಗಿ ಕೀಟ ಸಂಗ್ರಹ ಮತ್ತು ಪ್ರದರ್ಶನ, ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲು ವೀಡಿಯೋ ಥಿಯೇಟರ್ ನಿರ್ಮಾಣ, ಜೈವಿಕ ಜಗತ್ತಿನ ಮಾಹಿತಿ ಪಡೆಯಲು ವಿಧ್ಯಾರ್ಥಿಗಳು ಹಾಗೂ ಇನ್ನಿತರೆ ಆಸಕ್ತರಿಗೆ ಮಾರ್ಗದರ್ಶಕರೊಡನೆ ಚಾರಣ, ಪಶ್ಚಿಮಘಟ್ಟದ ವಿಶಿಷ್ಟವಾದ ಹಾಗೂ ಅಧ್ಯಯನಕ್ಕೆ ವಿಫುಲ ಅವಕಾಶವಿರುವ ಜಲಚರ, ಪಕ್ಷಿಸಂಕುಲ ಮತ್ತು ಕೀಟ ಪರಿವೀಕ್ಷಣೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಲ್ಲಿ ನಿಸರ್ಗದೆಡೆಗೆ ಅದಮ್ಯ ಉತ್ಸಾಹವನ್ನು ಉಂಟುಮಾಡಬಹುದು.
ಪಶ್ಚಿಮ ಘಟ್ಟದ ವಿಶಿಷ್ಟ ಆರ್ಕಿಡ್ ಸಸ್ಯಗಳ ಸಂಗ್ರಹ ಹಾಗೂ ಪ್ರ್ರಾತ್ಯಕ್ಷಿಕೆ, ಜೈವಿಕ ಇತಿಹಾಸದ ಸಮಗ್ರ ಚಿತ್ರಣ ನೀಡುವ ಮಾಹಿತಿ ಸಂಗ್ರಹಣೆ, ಅಂತರ್ಜಾಲ ಸಂಪರ್ಕವುಳ್ಳ ಮಾಹಿತಿ ಹಾಗೂ ಗ್ರಂಥಾಲಯ ಸೌಲಭ್ಯಗಳನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಮೊಬೈಲ್ ಮಾಹಿತಿ ಕೇಂದ್ರವನ್ನು ಸಿದ್ಧಪಡಿಸಿಕೊಂಡು ಚಲನಚಿತ್ರ ಪ್ರದರ್ಶನ ಹಾಗೂ ವಿಷಯತಜ್ಞರ ಸಹಕಾರದೊಂದಿಗೆ ಶೈಕ್ಷಣಿಕ ಮೌಲ್ಯವುಳ್ಳ ಸಂವಾದವನ್ನು ಪ್ರತೀ ಶಾಲೆಗಳಲ್ಲಿ ನಡೆಸಲಾಗುವುದು.
ಯುವಜನರಿಗೆ ಒಬ್ಬ ರೋಲ್ ಮಾಡೆಲ್ ಆಗಿದ್ದ ತೇಜಸ್ವಿ ತಮ್ಮ ಪ್ರಯೋಗಶೀಲ ಸಾಹಿತ್ಯವನ್ನು ಸತ್ಯಾನ್ವೇಷಣೆಗೆ ಬಳಸಿಕೊಂಡಿದ್ದು ಕನ್ನಡ ಸಾಹಿತ್ಯದ ದಿಕ್ಕನ್ನೇ ಬದಲಿಸಿತು. ಕನ್ನಡದ ಯಾವುದೇ ನಾಟಕಕಾರನ ನಾಟಕಗಳಿಗಿಂತ ತೇಜಸ್ವಿಯವರ ನಾಟಕ ವಾಸ್ತವಕ್ಕೆ ಅತ್ಯಂತ ಹತ್ತಿರವಾದದ್ದೆೆಂದರೆ ಅತಿಶಯೋಕ್ತ್ತಿಯಲ್ಲ. ರಂಗಪ್ರಯೋಗಕ್ಕೆ ಅಷ್ಟೇನೂ ಹೇಳಿ ಮಾಡಿಸಿದ ಕೃತಿಗಳಲ್ಲವೆಂದು ಯಾರಿಂದಲೋ ಅಪ್ರಭುದ್ಧ ವಿಮರ್ಶೆಗೊಳಗಾದ ತೇಜಸ್ವಿಯವರ ಕಥೆಗಳು, ಕಾದಂಬರಿಗಳು ರಂಗಮಂಚದ ಮೇಲೆ ಅಭೂತಪೂರ್ವ ಯಶಸ್ಸನ್ನು ಸಾಧಿಸಿವೆ. ಹಾಗಾಗಿ ಪ್ರಸ್ತುತ ಯೋಜನೆಯಲ್ಲಿ ರಂಗ ಶಿಕ್ಷಣ , ಸಂಗೀತ ಹಾಗೂ ಸಂಬಂಧಿತ ಚಟುವಟಿಕೆಗೆ ಪೂರಕ ಮೂಲ ಸೌರ್ಯಗಳ ನಿರ್ಮಾಣ, ಚಿತ್ರಕಲಾ ಶಿಬಿರಗಳು, ಫೋಟೋಗ್ರಫಿ ಕಾರ್ಯಾಗಾರಗಳು ಹಾಗೂ ಪ್ರದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.
ಜೈವಿಕ ಜಗತ್ತು, ವನ್ಯಜೀವಿಗಳ ಜೀವನ ಕ್ರಮ, ಮಾಲಿನ್ಯ ನಿಯಂತ್ರಣ, ಜಲಮೂಲಗಳ ಸಂರಕ್ಷಣೆ, ಔಷಧೀಯ ಸಸ್ಯಗಳು, ಜೈವಿಕ ಇತಿಹಾಸ, ಪೈಂಟಿಂಗ್, ಕಲಾ ಮಾಧ್ಯಮ, ಸಾಹಿತ್ಯ, ಗ್ರಾಮೀಣ ಆರ್ಥಿಕ ವ್ಯವಸ್ಥೆ, ಜಾಗತೀಕರಣ, ಸಹಜ ಕೃಷಿ, ಸಾವಯವ ಕೃಷಿ, ಉನ್ನತ ತಂತ್ರಜ್ಞಾನ, ಕನ್ನಡ ಭಾಷೆಯ ಬೆಳವಣಿಗೆ, ನೂತನ ಆವಿಷ್ಕಾರಗಳ ಕುರಿತು ಸಂಘಟಿತ ಚರ್ಚೆ, ಸಂವಾದ ಹಾಗೂ ಪೂರ್ಣ ಪ್ರಮಾಣದ ಸಂಶೋಧನೆಗೆ ಮೂಲ ಸೌಕರ್ಯ. ಸಂಶೋಧಕರಿಗೆ ವಾಸ್ತವ್ಯಕ್ಕಾಗಿ ಮೂಲಭೂತ ಸೌಲಭ್ಯಗಳುಳ್ಳ ಡಾರ್ಮಿಟರಿಗಳು.
ಹೀಗೆ 7-14 ವರ್ಷದ ವಯೋಮಾನದ ಮಕ್ಕಳಿಗೆ ಜೀವಜಗತ್ತಿನ ಕೌತುಕಗಳ ಪರಿಚಯ ಹಾಗೂ ಆಸಕ್ತಿ ಕೆರಳಿಸುವ ಯೋಜನೆಗಳು,15-22 ವರ್ಷದ ವಯೋಮಾನದ ಯುವ ಜನತೆಗೆ ಕಲೆ, ಪರಿಸರ, ಸಾಹಸ, ವಿಜ್ಞಾನ ಮುಂತಾದುವುಗಳ ಕುರಿತು ಅಧ್ಯಯನಕ್ಕೆ ಅವಕಾಶ ಹಾಗೂ ಸಂಶೋಧನೆಯ ಉದ್ದೇಶ ಉಳ್ಳವರಿಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಜೈವಿಕ ಜಗತ್ತಿನ ಅದ್ಭುತ ಅನಾವರಣವನ್ನು ಕಲ್ಪಿಸಿಕೊಡುವ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನಾಡಿನ ಹಲವಾರು ತಜ್ಞರ, ವಿಜ್ಞಾನಿಗಳ, ಬುದ್ಧಿಜೀವಿಗಳ, ಹಿರಿಯರ ಅಭಿಪ್ರಾಯ ಹಾಗೂ ನೆರವನ್ನು ಪಡೆಯಲಾಗುವುದು ಹಾಗೂ ಈ ಯೋಜನೆಯನ್ನು ಇನ್ನೂ ಉತ್ತಮಗೊಳಿಸಿ, ಪರಿಣಾಮಕಾರಿಯನ್ನಾಗಿ ಮಾಡಲು ಇರುವ ಸಾಧ್ಯತೆಗಳ ಬಗ್ಗೆಯೂ ವಿಶೇಷ ಕಾಳಜಿಯನ್ನು ಹೊಂದಲಾಗಿದೆ.
ಆಗಾಗ ಬಿಡುವಾದಾಗಲೆಲ್ಲ ಸಹವರ್ತಿಗಳೊಡನೆ ಪಶ್ಚಿಮ ಘಟ್ಟದ ಚಾರ್ಮಾಡಿಯ ಈ ಬಾಳೂರು ಮೀಸಲು ಅರಣ್ಯಕ್ಕೆ ಭೇಟಿ ನೀಡಿ ಪ್ರಕೃತಿಯ ಸತ್ಯದರ್ಶನ ಪಡೆಯುತ್ತಿದ್ದ ತೇಜಸ್ವಿಯವರಿಗೆ ನಾವು ಆಯ್ಕೆ ಮಾಡಿಕೊಂಡಿರುವ ಸ್ಥಳ ಅಪ್ಯಾಯಮಾನವಾದುದ್ದಾಗಿತ್ತು.
ಈ ಎಲ್ಲಾ ಚಟುವಟಿಕೆಗಳನ್ನು ಸಾಕಾರಗೊಳಿಸಲು ಸೂಕ್ತ ಸ್ಥಳದ ಅನ್ವೇಷಣೆಯಲ್ಲಿದ್ದ ತಂಡವು ಮೂಡಿಗೆರೆಯಿಂದ 19 ಕಿ. ಮೀ. ದೂರದ ಕಡೂರು-ಮಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಬಾಳೂರು ಮೀಸಲು ಅರಣ್ಯವನ್ನು ಸಂದರ್ಶಿಸಿ, ಪರಿಶೀಲಿಸಿ ಅದೇ ಸೂಕ್ತ ಸ್ಥಳವೆಂದು ಮನಗಂಡಿದೆ.
ನೈಸರ್ಗಿಕ ಸಾಧ್ಯತೆಗಳು, ಮೂಲಭೂತ ಸೌಕರ್ಯಗಳು, ಸಂಚಾರ ಸೌಲಭ್ಯ ಹಾಗೂ ಯೋಜಿತ ಕಾರ್ಯಗಳ ನಿರೀಕ್ಷಿತ ಸಾಫಲ್ಯದ ನಿಟ್ಟಿನಿಂದ ಬಾಳೂರು ಮೀಸಲು ಅರಣ್ಯದ ಈ ಪ್ರದೇಶ ಹಾಗೂ ಹೊಂದಿಕೊಂಡಿರುವ ಕಂದಾಯ ಭೂಮಿಯನ್ನು ಈ ಜೈವಿಕ ಅಧ್ಯಯನ ಕೇಂದ್ರದ ಯೋಜನೆಗೆ ಸರ್ಕಾರವು ನೀಡಿ ಸಹಕರಿಸಿದಲ್ಲಿ ತೇಜಸ್ವಿಯವರ ಬದುಕಿನ ಉದ್ದೇಶಗಳಿಗೆ ಒಂದು ಶಾಶ್ವತ ಮೂರ್ತರೂಪವನ್ನು ನೀಡಲು ಸಾಧ್ಯವಿದೆಯೆಂದು ಅಧ್ಯಯನ ತಂಡವು ಅಭಿಪ್ರಾಯಪಟ್ಟಿದೆ.
ನಾವಂದುಕೊಂಡಂತೆ ಎಲ್ಲವೂ ನೆರವೇರಿದರೆ ಕರ್ನಾಟಕದ ಮಟ್ಟಿಗೆ ಇದೊಂದು ಮಾದರಿ ಜೀವ ವೈವಿಧ್ಯ ತಾಣವಾಗಲಿದ್ದು, ಶಾಶ್ವತ ಜ್ಞಾನಪ್ರಸಾರ ಕೇಂದ್ರವಾಗಲಿದೆ. ಈ ಕಾರ್ಯದಲ್ಲಿ ಹಿರಿಯರಾದ ಶ್ರೀ ಗಂಗಯ್ಯ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಯುವ ಮುಂದಾಳಾದ ಶ್ರೀ ಬಿ.ಎಲ್. ಶಂಕರ್ರವರ ಸಾರಥ್ಯವಿರುವುದರಿಂದ ಜೊತೆಗೆ ಸರಕಾರದ ಸಹಯೋಗ ಮತ್ತು ಪ್ರಾಥಮಿಕ ಆರ್ಥಿಕ ನೆರವಿರುವುದರಿಂದ ಖಂಡಿತವಾಗಿಯೂ ಗುರಿ ತಲುಪುವ ಭರವಸೆ ಇದೆ. ವಿಸ್ಮಯ ಪ್ರತಿಷ್ಠಾನದಲ್ಲಿ ಪ್ರದೀಪ್ ಕೆಂಜಿಗೆ, ವಿನಯ ಪ್ರಸಾದ್, ರಾಘವೇಂದ್ರ, ಸಾತಿ ಸುಂದರೇಶ್, ಗಣೇಶ್ ಮತ್ತು ನನ್ನಂತಹ ಉತ್ಸಾಹಿಗಳ ಕಾರ್ಯಪಡೆ ಇರುವುದರಿಂದ ತೇಜಸ್ವಿಯವರ ಆಶಯಗಳು ಜನಮಾನಸವನ್ನು ತಲುಪಲು ಹಾದಿ ಸುಗಮವಾಗಬಹುದೆಂಬ ನಿರೀಕ್ಷೆ ಇದೆ.
ತೇಜಸ್ವಿಯವರ ಬಹುಕಾಲದ ಒಡನಾಡಿಗಳು ಮತ್ತು ಅಭಿಮಾನಿಗಳಾದ ಸೇನಾನಿ, ಬೆಳವಾಡಿ, ಗಿರೀಶ್, ಗಿರಿಜಾಶಂಕರ್, ದೀಪಕ್, ಮಹೇಶ್, ಕೃಪಾಕರ, ವಾಸುದೇವ್, ಮೋಟಮ್ಮ, ಕಡಿದಾಳ್ ಶಾಮಣ್ಣ, ಶ್ರೀರಾಮ್ ಮುಂತಾದವರ ಸಹೃದಯೀ ಪ್ರಯತ್ನಗಳು ಪ್ರತಿಷ್ಠಾನದ ಆಶಯಗಳು ಕಾರ್ಯರೂಪಕ್ಕೆ ಬರಲು ನೆರವಾಗುತ್ತಲಿವೆ.

ಆಗ ಕಾವೇರಿ ವಿವಾದ ಪರಾಕಾಷ್ಠೆಯಲ್ಲಿತ್ತು. ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವ ಕಾವೇರಿ ವಿವಾದ ಓಟಿನ ಗಳಿಕೆಗೆ ಇಂದಿಗೂ ಟ್ರಂಪ್ ಕಾರ್ಡ್. ತೇಜಸ್ವಿಯವರು ಎಷ್ಟು ವಸ್ತುನಿಷ್ಠರಾಗಿ ಪ್ರತಿಕ್ರಿಯೆ ನೀಡಿದರೆಂದರೆ ಯಾರಿಂದಲೂ ಅದಕ್ಕೆ ಪ್ರತ್ಯುತ್ತರವೇ ಬರಲಿಲ್ಲ. “ಯಾವುದೇ ಭೂಭಾಗಕ್ಕೆ ಅದರದ್ದೇ ಆಗ ಅನುಕೂಲ ಹಾಗೂ ಅನಾನುಕೂಲಗಳು ಇರುತ್ತವೆ. ಅಲ್ಲಿಯ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನಸಮುದಾಯದ್ದಾಗಿರುತ್ತದೆ. ಭೂಮಿಯೊಳಗಿನ ಖನಿಜ ಸಂಪತ್ತು, ಭೂಮಿ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತದೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಘವಿಸುತ್ತದೆ” ಎಂದು ಖಂಡಿತವಾಗಿ ಉತ್ತರಿಸಿದರು.
ಮೂಡಿಗೆರೆಯಂತಹ ಅತ್ಯಂತ ಸಾಧಾರಣ ಊರಿನಲ್ಲಿ ಇಂತಹ ಅಸಾಧಾರಣ ಚೇತನವೊಂದು ಜಗತ್ತೇ ಬೆರಗಾಗುವಂತೆ ಆಲೋಚಿಸಿ, ಸಾಹಿತ್ಯ ರಚಿಸಿ ವಿದ್ವತ್ಪೂರ್ಣ ಬದುಕನ್ನು ಬಾಳಿದರಾ? ಎಂದು ಅಚ್ಚರಿಯಾಗುತ್ತದೆ.
ಇವತ್ತಿಗೂ ತೇಜಸ್ವಿಯವರನ್ನು ಅವರು ಹಾಗಿದ್ದರು, ಹೀಗಿರಬೇಕಿತ್ತು, ಹಾಗೆ ಬದುಕಿದ್ದರು, ಹೀಗೆ ಯಾಕೆ ಬದುಕಲಿಲ್ಲ ಎಂದು ವಿಮರ್ಶೆ ಮಾಡುವವರು ನಾಡಿನ ಮೂಲೆಮೂಲೆಗಳಲ್ಲೂ ಸಿಗುತ್ತಾರೆ. ಒಂದಂತು ಸ್ಪಷ್ಠ, ಈ ದಿನ ಈ ಕ್ಷಣ ನಾವು ತೇಜಸ್ವಿಯವರನ್ನು ಪ್ರಸ್ತಾಪಿಸುತ್ತಿರುವುದು, ನಾಡಿಗೆ ನಾಡೇ ಚರ್ಚೆ ನಡೆಸುತ್ತಿರುವುದಕ್ಕೆ ಮೂಲ ಕಾರಣ ಬದುಕಿನೊಡನೆ ಅವರಿಗಿದ್ದ ವಿಶಿಷ್ಟ ಧೋರಣೆ, ಸಮಾಜದೊಡನೆ ಅವರಿಟ್ಟುಕೊಂಡಿದ್ದ ಸೂಕ್ಷ್ಮ ಸಂವೇದನೆ, ಪ್ರಕೃತಿಯೊಂದಿಗಿನ ಅವರ ಅವಿನಾಭಾವ ಒಡನಾಟ, ಸಾಮಾಜಿಕ ಸ್ಥಿತ್ಯಂತರಗಳೆಡೆಗೆ ಅವರ ವಸ್ತುನಿಷ್ಠ-ತೀಕ್ಷ್ನ ಪ್ರತಿ ಕ್ರಿಯೆ, ವಿಸ್ಮಯಗೊಳಿಸುವ ಚಿಕಿತ್ಸಕ ದೃಷ್ಟಿಕೋನ. ಅವರು ತೇಜಸ್ವಿಯಾಗಿ ನಮ್ಮೆಲ್ಲರಲ್ಲೂ ನೆಲೆ ನಿಂತಿರುವುದು ಅವರು ಹಾಗೆ ಬದುಕಿದ್ದರಿಂದಲೇ ಹೊರತು, ಬೇರಾವುದರಿಂದಲೂ ಅಲ್ಲ.
– ಮುಂದುವರೆಯುವುದು