
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸೂರ್ಯಂಗೇ ಟಾರ್ಚು
ಒಮ್ಮೆ ಚಾರ್ಮಾಡಿಯಲ್ಲಿ ಫೋಟೋಗ್ರಫಿ ಮಾಡಲು ಹೋಗಿದ್ದಾಗ ನಾನು ಪದೇ ಪದೇ “ಇದು ಚೆನ್ನಾಗಿದೆ ಇದನ್ನು ಫೋಟೋ ತೆಗೆಯಿರಿ. ಅದು ಈ ಕಡೆಯಿಂದ ಒಳ್ಳೆ ವ್ಯೂವ್ ಸಿಗುತ್ತೆ, ಈ ಅ್ಯಂಗಲ್ನಲ್ಲಿ ತೆಗೆಯಿರಿ, ಮೇಲಿನ ಮೋಡಗಳನ್ನೂ ಕವರ್ ಮಾಡಿಕೊಂಡು ಫ್ರೇಮ್ನೊಳಗೆ ಸೇರಿಸಿಕೊಂಡು ಬಿಡಿ” ಎಂದೆಲ್ಲಾ ಕಿರಿಕಿರಿ ಮಾಡುತ್ತಿದ್ದೆ.
“ಬಾ ಇಲ್ಲಿ” ಎಂದು ಕರೆದರು.
“ನಿನಗೆಷ್ಟು ವಯಸ್ಸು?”
“ ಇಪ್ಪತ್ತೆಂಟು”ಎಂದೆ.
“ನಾನು ನಲವತ್ತು ವರ್ಷದಿಂದ ಫೋಟೋ ತೆಗೆತಿದ್ದೀನಿ. ಸುಮ್ನೆ ಬಂದ್ರೆ ಸರಿ ಇಲ್ಲಾಂದ್ರೆ ನಿನ್ನ ಕಾಲು ಮುರಿತೀನಿ” ಎಂದರು.
ಬಹಳ ಹುಮ್ಮಸ್ಸಿನಲ್ಲಿ ಇದ್ದ ನನಗೆ ಪಿಚ್ ಎನಿಸಿತು.
ಅಪಮಾನಿತನಾಗಿ ಒಳಗೇ ಕುಸಿದು ಹೋದೆ. ಪುಗಸಟ್ಟೆ ಸಲಹೆ ಕೊಡುವುದರಲ್ಲಿ ಅನೇಕರಿಗಿರುವಂತೆ ನನಗೂ ವಿಶೇಷ ಹುಮ್ಮಸ್ಸು. ಸ್ಕೂಟರ್ ಓಡಿಸಲು ನನಗೆ ನೀಡಿ ತಾವು ಹಿಂದೆ ಕುಳಿತರು. ನನ್ನ ಚಾಲನೆಯ ವೈಖರಿಯಲ್ಲಿಯೇ ನನ್ನ ಮನಸ್ಸಿನ ಭಾವನೆ ಗ್ರಹಿಸಿದ ತೇಜಸ್ವಿ, ಎತ್ತರದ ದೂಪದ ಮರದ ಬಳಿ ಸ್ಕೂಟರ್ ನಿಲ್ಲಿಸಲು ಹೇಳಿ “ಅಲ್ಲಾ ಕಣಯ್ಯಾ ಧನಂಜಯ ನಾವಿಲ್ಲಿ ನಿಂತಾಗ ಇಲ್ಲಿನ ತಣ್ಣಗಿನ ಗಾಳಿ, ಸುತ್ತಲಿನ ಶುಭ್ರ ವಾತಾವರಣ, ಗಿಡಗಂಟಿಗಳ ಪರಿಮಳ ಇವೆಲ್ಲವೂ ಸೇರಿ ನಮಗೆ ಕಂಡದೆಲ್ಲವೂ ಸುಂದರವಾಗೇ ಕಾಣುತ್ತೆ. ಫೋಟೋ ತೆಗೆದ ಮೇಲೆ ಅದನ್ನು ನಾವು ನಾಲ್ಕು ಗೋಡೆಗಳ ನಡುವಿನ ಒಂದು ಪೇಪರ್ ತುಂಡಿನಂತೆ ನೋಡ್ತೀವಿ. ಈ ವಾತಾವರಣ ನಮಗಿಲ್ಲಿ ಯಾವ ಅನುಭವವನ್ನು ಕೊಡುತ್ತೋ ಅದೇ ಅನುಭೂತಿಯನ್ನು ಅಲ್ಲಿಯೂ ನೀಡಬೇಕು. ಯಾವುದು ಸರಿ ಯಾವುದು ತಪ್ಪು ಅಂತ ನೀನು ಫೋಟೋ ತೆಗೀತ ತೆಗೀತಾ ತಿಳ್ಕೋತೀಯ. ಇದು ನನ್ನ ಇಷ್ಟು ವರ್ಷದ ಅನುಭವ ತಿಳೀತಾ. ಇಲ್ಲಿಯ ಗಾಳಿ, ಬೆಳಕು, ತೇವಾಂಶ, ಸುವಾಸನೆ, ನಿಶ್ಯಬ್ಧತೆ, ಜೈವಿಕ ಚಲನಶೀಲತೆ, ಮಣ್ಣಿನ ವಾಸನೆ, ನಿನ್ನ ಮನಸ್ಥಿತಿ, ಇವುಗಳಿಗೆ ನಿನ್ನ ಪಂಚೇಂದ್ರಿಯಗಳ ಪ್ರತಿಕ್ರಿಯೆ ಇವೆಲ್ಲದರ ಸಮ್ಮಿಲನ ಈಗ ನೋಡುತ್ತಿರುವ ದೃಶ್ಯ. ಇದೇ ಫೋಟೋ ಆಗಿ ಪ್ರಿಂಟ್ ಆದಾಗ ನಿನ್ನ ಕಣ್ಣು ಮಾತ್ರ ಇವೆಲ್ಲವನ್ನೂ ಗ್ರಹಿಸಬೇಕಾಗಿರುತ್ತದೆ. ಅದೇ ಫೋಟೋದ ಲಿಮಿಟೇಶನ್ ತಿಳಿತಾ.” ಎಂದು ತಿಳಿಹೇಳಿದರು.
“ಬೇಜಾರು ಮಾಡಿಕೊಳ್ಳಬೇಡಯ್ಯ ಕಣ್ಣಿಗೆ ಕಂಡದೆಲ್ಲವೂ ಫೋಟೋದಲ್ಲಿ ಹಾಗೆಯೇ ಬರುವುದಿಲ್ಲ. ತಿಳ್ಕೋ”.
ಮಾತಿನ ಲಹರಿ ಗದರಿಕೆಯಿಂದ ಕೂಡಿದ್ದರೂ, ಅದರ ಹಿಂದಿನ ಮಾರ್ಮಿಕತೆ, ಗಂಭೀರ ಚಿಂತನೆಗಳು ನಮ್ಮನ್ನು ನಾವೇ ಅವಲೋಕಿಸಿಕೊಳ್ಳಲು ಪ್ರೇರಿಸುತ್ತಿದ್ದುದು ವಾಸ್ತವ. ಸದಾ ಪರ್ಫೆಕ್ಷನ್ ಅನ್ನು ನಿರೀಕ್ಷಿಸುತ್ತಿದ್ದರೂ ಜೊತೆಯವರು ಸರಿ ಹೋಗದಿದ್ದರೆ ಅಸಹನೆಯಿಂದಲೇ ಬೇಸರವಾಗದಂತೆ “ಹೋಗ್ಲಿ ಬಿಡಯ್ಯಾ” ಎಂದು ಸಹಾನೂಭೂತಿ ವ್ಯಕ್ತಪಡಿಸುತ್ತಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946