ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಮರಗಳು ವೋಟ್ ಹಾಕಲ್ವಲ್ಲ ಅದೇ ಸಮಸ್ಯೆ ಕಣಯ್ಯಾ’
ಮೂಡಿಗೆರೆ ಪಶ್ಚಿಮ ಘಟ್ಟದನಡುವಿನ ಅಪ್ಪಟ ಮಲೆನಾಡಾದರೂ ಪಟ್ಟಣದ ನಡುವೆ ಬೆರಳೆಣಿಕೆಯಷ್ಟೂ ಮರಗಳಿಲ್ಲ. 10-20 ಮರ ಮಾತ್ರ ಮೂಡಿಗೆರೆ-ಬೇಲೂರು ರಸ್ತೆಯಲ್ಲಿ ಬಸ್ ಸ್ಟಾಂಡ್ ನಿಂದ ತಾಲೂಕು ಕಛೇರಿಯವರೆಗೆ ಅದು ಹೇಗೋ ಉಳಿದುಕೊಂಡಿದ್ದವು. ಅವೂ ಸಹಾ 1960 ರ ದಶಕದಲ್ಲಿ ಆಗಿನ ಮುನಿಸಿಪಲ್ನ ಶ್ರೀ ರಂಗರಾಜಯ್ಯ ಹಾಗೂ ಅವರ ಸಂಗಡಿಗರು ಉತ್ಸಾಹದಿಂದ ನೆಟ್ಟಿದ್ದು. ಆ ನಂತರ ಬಂದವರು ಆಸ್ಪತ್ರೆ, ಕ್ರೀಡಾಂಗಣ, ಶಾಲೆ, ಉದ್ಯಾನಗಳಿರಲಿ ಕಡೆಗೆ ಶೌಚಾಲಯಕ್ಕೂ ಜಾಗವಿಲ್ಲದಂತೆ ದಿಕ್ಕು ದೆಸೆ, ಗೊತ್ತುಗುರಿಯಿಲ್ಲದಂತೆ ಊರೆಲ್ಲಾ ಸೂರೆಹೋಗುತ್ತಿದ್ದರೂ ನನಗೇನೂ ಗೊತ್ತ್ತಿಲ್ಲ ಎಂಬಂತೆ ಬಂದರು ಹೋದರು. ಇದು ಮೂಡಿಗೆರೆ ಒಂದರ ಕಥೆಯಲ್ಲ, ಬಹುತೇಕ ಊರುಗಳಲ್ಲಿ ಇದೇ ಪರಿಸ್ಥಿತಿ ಇದೆ.
ಆ ಮರಗಳನ್ನು ವಿನಾಕಾರಣ ಅಥವಾ ಸೌದೆ ಮರ-ಮುಟ್ಟುಗಳಿಗಾಗಿ ಕಡಿಯಲು ತರಾತುರಿಯಲ್ಲಿ ಟೆಂಡರ್ ಕರೆಯಲಾಯ್ತು. ಅದು ಹೇಗೋ ನಮ್ಮ ಗಮನಕ್ಕೆ ಬಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆವು. ಅದರ ಹಿಂದೆಯೇ ನಮ್ಮ ತಂಡದ ಹುಡುಗರೆಲ್ಲಾ ಅಪ್ಪಿಕೋ ಚಳುವಳಿಗೆ ಸಿದ್ದರಾಗಿ ನಿಂತೆವು. ಅಂತೂ ಕಡೆಗೆ ಅಧ್ಯಕ್ಷ, ಮೇಸ್ತ್ರಿ ಗರಗಸ, ಕೊಡಲಿ, ಕತ್ತಿಗಳೆಲ್ಲಾ ಬರಿಗೈಲಿ ವಾಪಾಸ್ಸಾದವು.
ಪತ್ರಿಕೆಗಳ ಮೂಲಕ ಈ ವಿಚಾರ ತೇಜಸ್ವಿಯವರಿಗೆ ತಲುಪಿತು.ನ ಮ್ಮ ತಂಡದ ಸದಸ್ಯರೆಲ್ಲರನ್ನೂ ಅವರು ಪ್ರೀತಿಯಿಂದ ಅಭಿಮಾನದಿಂದ ಅಭಿನಂದಿಸಿದರು. “ಮರಗಳು ವೋಟ್ ಹಾಕಲ್ವಲ್ಲ ಅದೇ ಸಮಸ್ಯೆ ಕಣಯ್ಯಾ’’ಅಂದಿದ್ದರು. ಮೂರು ವರ್ಷ ಕಳೆಯಿತು, ಈ ಬಾರಿ ಮುನ್ಸಿಪಾಲಿಟಿಯವರು ರಾಜಕೀಯ ಹಾಗೂ ಆಡಳಿತಾತ್ಮಕ ದೂರಾಲೋಚನೆಗಳನ್ನು ಹೊಂದಿಸಿಕೊಂಡು ಸಕಲ ಸಿದ್ದತೆಗಳೊಂದಿಗೆ ಯಾವುದೇ ಸುಳಿವು ಹೊರಬಾರದಂತೆ ಮರಕಡಿಯಲು ಪ್ರಾರಂಬಿಸಿಯೇ ಬಿಟ್ಟರು. ತೀರಾ ಕುತ್ತಿಗೆಗೆ ಬಂದ ಸಮಯ. ಜನಪ್ರತಿನಿಧಿಗಳು ಔಟ್ ಆಫ್ ಕವರೇಜ್ ಏರಿಯಾ ಆಗಿದ್ದರು.

ಜಿಲ್ಲಾಮಟ್ಟದ ಅಧಿಕಾರಿಗಳು ಅಲ್ಲೇ ಸ್ವಲ್ಪ ಡಿಸ್ಕಷನ್ ಮಾಡಿಕೊಳ್ಳಿ ಎಂದರು. ಅಂತಿಮವಾಗಿ ತೇಜಸ್ವಿಯವರಿಗೆ ಫೋನ್ ಮಾಡಿ ನಿಮ್ಮಿಂದ ಏನಾದ್ರೂ ಪ್ರಯತ್ನ ಮಾಡೋಕ್ಕೆ ಸಾಧ್ಯ ಇದೆಯಾ? ಅಂದಾಗ ‘ಅಲ್ಲಾ ಆ ಹಣ್ಣಿನಂಗಡಿಯವರು, ಚಪ್ಪಲಿ ಅಂಗಡಿಯವರು ರಸ್ತೆಯ ಎರಡೂ ಬದಿ ಗುಡಾರಗಳನ್ನ ಹಾಕಿಕೊಂಡು ಏನ್ ರಗಳೆ ಮಾಡ್ತಿದಾರಲ್ಲಯ್ಯ, ರಸ್ತೆನಾದ್ರೂ ಅಗಲ ಆಗ್ಲಿ ಬಿಡಯ್ಯಾ ಮತ್ತೆ ಗಿಡಾ ನೆಡ್ತಾರಂತಲ್ಲ’ ಎಂದು ಹೇಳಿ ನಮ್ಮನ್ನೆಲ್ಲಾ ನಿರಾಸೆಗೊಳಿಸಿದ್ದು ನನಗಿನ್ನೂ ಅರ್ಥವಾಗದ ಚಿದಂಬರ ರಹಸ್ಯವಾಗೇ ಉಳಿದಿದೆ.
ಏನು ಮಾಡಿದ್ರೂ ಇಷ್ಟೇನೇ ಅನ್ನಿಸಿತ್ತೋ ಅಥವಾ ಪರಿಸರ ಚಳುವಳಿ ಒಂದು ಲೂಸಿಂಗ್ ಬ್ಯಾಟಲ್ ಎಂದು ಮನವರಿಕೆಯಾಗಿತ್ತೋ ಏನೋ ಆದರೆ ನಮಗಂತೂ ಇದ್ದದೊಂದು ಕೊನೆಯ ಸಾಧ್ಯತೆಯೂ ನೇಪಥ್ಯಕ್ಕೆ ಸರಿಯಿತಲ್ಲಾ ಎನಿಸಿತು.
ಈಟಿವಿಯಲ್ಲಿ “ರಸಋಷಿಗೆ ನಮಸ್ಕಾರ” (ಕುವೆಂಪು ಕುರಿತಾದದ್ದು) ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿತ್ತು. ಕಾರ್ಯಕ್ರಮದ ನಿರೂಪಕರಾದ ಜಯಂತ ಕಾಯ್ಕಿಣಿಯವರು ತೇಜಸ್ವಿಯವರ ಸಂದರ್ಶನ ಮಾಡುವ ಸಂದರ್ಭದಲ್ಲಿ ಕಾಯ್ಕಿಣಿಗೆ ತೇಜಸ್ವಿ “ಲಿಪ್ಸ್ಟಿಕ್ ಏನಾದ್ರೂ ಹಾಕಿದ್ರೆ ಕಾಲು ಮುರಿದು ಹಾಕುತ್ತೀನಿ” ಎಂದು ತಮಾಷೆಯಿಂದ ಗದರಿದ್ದರು.. ಆ ಸಂದರ್ಶನದಲ್ಲಿ ತೇಜಸ್ವಿ ವ್ಯಕ್ತಪಡಿಸಿದ್ದ ವಿಚಾರಗಳು ಸಾರ್ವಕಾಲಿಕ ಸತ್ಯವಾದವು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

