ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸಮುದ್ರದ ನಡುವಿನ ಲಕ್ಷದ್ವೀಪ
ನೇಚರ್ಕ್ಲಬ್ನಿಂದ ನಾವು ಮೂವರು ಕೇರಳ ತೀರದ ಪಶ್ಚಿಮದಲ್ಲಿದ್ದ ಅರಬ್ಬಿ ಸಮುದ್ರದ ನಡುವಿನ ಲಕ್ಷದ್ವೀಪಕ್ಕೆ ಹೊರಟಿದ್ದೆವು. ಗಿರೀಶ್, ಸಂದೀಪ್ ಮತ್ತು ನಾನು ತಿಂಗಳ ಮುಂಚೆಯೇ ಸಿಕ್ಕಿದವರಿಗೆಲ್ಲಾ ಲಕ್ಷದ್ವೀಪಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿಕೊಂಡು ತಿರುಗಲಾರಂಭಿಸಿದೆವು.
“ಆ ಟೈಂನಲ್ಲಿ ಎಂತಕ್ಕೇ ಹೋಗ್ತೀರಿ, ಬಾರೀ ರಶ್ ಇರುತ್ತೆ ಇನ್ಯಾವಾಗಾದ್ರೂ ಹೋಗಿ, ಎಲ್ಲಾನ್ನೂ ಚೆನ್ನಾಗಿ ನೋಡಿಕೊಂಡು ಬರಬಹುದು ಮತ್ತೆ ಅದೇನೂ ಬಹಳ ದೂರದ ಪ್ರದೇಶನಾ? ಮೂಡಿಗೆರೆಯಿಂದ ಎರಡೂವರೆ ಗಂಟೆ ಜರ್ನಿ. ಅದನ್ನು ಹೇಳಿಕೊಂಡು ತಿರುಗ್ತಾ ಇದ್ದಿರಲ್ಲಾ. ಮುಡಿಯೇನಾದ್ರೂ ಕೊಡ್ತೀದ್ದಿರಾ?” ಎಂದು ಸಲಹೆ ಮತ್ತು ಪ್ರಶ್ನೆಗಳ ಸುರಿಮಳೆಗೈದರು. ಓ! ಇವರು ಧರ್ಮಸ್ಥಳದ ಲಕ್ಷದೀಪ ಅಂತ ತಿಳ್ಕೊಂಡಿದ್ದಾರೆ ಅಂತ ನನಗೆ ಆಗ ತಿಳಿಯಿತು. ಇದು ಸಮುದ್ರದ ನಡುವಿನ ಲಕ್ಷದ್ವೀಪ ಎಂದು ವಿವರಿಸಿ ಹೇಳಬೇಕಾದ್ರೆ ಸಾಕುಸಾಕಾಯಿತು ಎನ್ನಿ.
ಮಿನಿಕಾಯ್, ಕಾವರಟ್ಟಿ, ಕಾಲ್ಪೆನಿ, ಅಗಟ್ಟಿ ಮುಂತಾದ ದ್ವೀಪಗಳಲ್ಲಿ ಫೋಟೋಗ್ರಫಿ ಮಾಡಲೆಂದೇ ರಜಾ ಹಾಕಿ ಮೂವರೂ ಹೊರಟೆವು. ಇನ್ನು ಹೊರಡುವ ಮುಂಚೆ ತೇಜಸ್ವಿಯವರಿಗೆ ತಿಳಿಸುವ ಎಂದು ಹೋದೆ. “ವೆರ್ರಿಗುಡ್ ದೊಡ್ಡ ಕೆಪಾಸಿಟಿಯ ಮೆಮೊರಿ ಕಾರ್ಡ್ಗಳು ಬೇಡ ಮಾರಾಯ, ಕರಪ್ಟ್ ಆದರೆ ಕಷ್ಟ! ಎಲ್ಲಾ ಕಿತ್ಕೊಂಡು ಹೋಗುತ್ತೆ.
ವಾಪಾಸ್ ಬಂದ ಮೇಲೆ ಫೋಟೋಗಳನ್ನು ತಂದು ತೋರಿಸು” ಎಂದು ಹೇಳಿದರು. ನನ್ನಂಥ ಯಡವಟ್ಟನಿಗೆ ಎಷ್ಟು ಹೇಳಿದ್ರೂ ಅಷ್ಟೇ, ಕುಂಡಿ ಹಿಂಭಾಗದ ಜೇಬಿನಲ್ಲಿನ ಪರ್ಸ್ನಲ್ಲಿ ಇಟ್ಟುಕೊಂಡಿದ್ದ ಮೆಮೊರಿ ಕಾರ್ಡ್ಗಳು ನಾಡ ದೋಣಿಗಳಲ್ಲಿ ದ್ವೀಪಗಳ ನಡುವೆ ಸಂಚರಿಸುವಾಗ ಮುರಿದು ನೂರಾರು ಫೋಟೋಗಳು ಸಮುದ್ರ ಪಾಲಾದವು.
ಈ ಸಂದರ್ಭದಲ್ಲಿ ಒಂದು ದಿನ ಸಾಗರದ ಅಲೆಗಳ ನಡುವೆ ಸಿಕ್ಕಿಹಾಕಿಕೊಂಡ ನಾವಿದ್ದ ತೆಪ್ಪ ಹೆದ್ದೆರೆಗಳ ನಡುವೆ ಹೊಯ್ದಾಟಕ್ಕೆ ನಲುಗಿ ಯಾಕಾದ್ರೂ ಪ್ರವಾಸಕ್ಕೆ ಬಂದೆವೋ ಎನಿಸಿತ್ತು. ಸಂಜೆ ಆರರ ಸಮಯದಲ್ಲಿ ಇದ್ದಕ್ಕಿದ್ದಂತೆ ಪ್ರಕ್ಷಬ್ದ್ಧ ಗೊಂಡ ಸಮುದ್ರ , ಸ್ಥಳೀಯ ತೆಪ್ಪ ಚಾಲಕರನ್ನೂ ದಿಗ್ಬ ಮೆಗೊಳಿಸಿದ್ದಲ್ಲದೇ ಸುಮಾರು ಒಂದು ಗಂಟೆ ಆತಂಕದ ದುಗುಡವನ್ನು ಸೃಷ್ಟಿಸಿತ್ತು.
ನಮ್ಮ ತಲೆಯ ಮೇಲೇ ಕವುಚಿದಂತೆ ಎರಗುತ್ತಿದ್ದ ಭಾರೀ ತೆರೆಗಳು, ಮುಂದಿನ ನಿಮಿಷದಲ್ಲಿ ತೆರೆಯ ತಲೆಯ ಮೇಲೆ ನಾವು ಕುಳಿತಿದ್ದ
ತೆಪ್ಪ! ನಿಜವಾಗಿಯೂ ಸಾವಿನ ದವಡೆಯಿಂದ ಹೊರಬಂದ ಅನುಭವ. ಊರಿಗೆ ಮರಳಿದ ನಂತರ ಇದನ್ನೆಲ್ಲಾ ತೇಜಸ್ವಿಯವರಿಗೆ ಹೇಳಿದಾಗ ತಮ್ಮ ಅಂಡಮಾನ್ ಪ್ರವಾಸದ ಅನುಭವದ ಕೆಲ ತುಣುಕುಗಳನ್ನು ಮೆಲುಕು ಹಾಕಿದ್ದರು.

ಸಣ್ಣ ಬೆಳೆಗಾರರ ಅಸಂಘಟಿತ ವಿದ್ಯಮಾನ, ವ್ಯಾಪಾರಸ್ಥರ ದಗಲ್ಬಾಜಿತನ, ಕಾಫಿ ಬೋರ್ಡ್ನ ಬೇಜವಾಬ್ದಾರಿತನ, ದೊಡ್ಡ ಬೆಳೆಗಾರರ ಸೋಗಲಾಡಿತನದಿಂದ ರೋಸಿ ಹೋದ ತೇಜಸ್ವಿ ತಾವು ಬೆಳೆದ ಕಾಫಿಯನ್ನು ಮೂಡಿಗೆರೆಯ ಸಂತೆಯಲ್ಲಿ ಮಾರುವ ಕ್ರಾಂತಿಕಾರಕ ತೀರ್ಮಾನ ತೆಗೆದುಕೊಂಡರು. ಅವ್ಯವಸ್ಥೆ, ಸೋಮಾರಿತನ, ಕಳ್ಳನೆಪ ಹುಡುಕುವ ಭಂಡತನ ಕಂಡರೆ ಸಿಡಿಮಿಡಿಗೊಂಡು ಮುಖಮೂತಿ ನೋಡದೇ ಮಂಗಳಾರತಿ ಮಾಡುತ್ತಿದ್ದ ತೇಜಸ್ವಿಯವರದ್ದು ಸಾತ್ವಿಕ ಸಿಟ್ಟು.
ತೇಜಸ್ವಿ ಸಹವಾಸ ಅಲ್ಲ ಮಾರಾಯ ಎಂದುಕೊಂಡು ಎಚ್ಚರಿಕೆಯಿಂದ ಮುಂದಡಿಯಿಡುತ್ತಿದ್ದವರಿಗೆ ಮೂಗುದಾರವಾಗಿದ್ದ ತೇಜಸ್ವಿ ಭೌತಿಕವಾಗಿ ನಮ್ಮೊಡನೆ ಇಲ್ಲದಿರುವುದು ಮರಳು ಗಣಿಗಾರಿಕೆ, ಅರಣ್ಯದ ಮೇಲಿನ ಆಕ್ರಮಣ, ಕಲ್ಲ್ಲುಗಣಿಗಾರಿಕೆ ಮುಂತಾದವುವನ್ನು ಅವ್ಯಾಹತವಾಗಿ ಮನಸ್ಸಿಗೆ ಬಂದಂತೆ ಮುಂದುವರೆಸಲು ಇಂಬು ನೀಡಿದೆ.
ಚಾರ್ಮಾಡಿ ರಸ್ತೆಯಲ್ಲಿ ಕಾಲ್ನೆಡುಗೆಯಲ್ಲಿಯೇ ಸಾಗುತ್ತಿದ್ದೆವು. ಬೆಳಗ್ಗೆ ಒಂಭತ್ತು ಗಂಟೆ ಇರಬಹುದು. ಬರ್ರ್!! ಎಂದು ಪಕ್ಷಿಯೊಂದು ನಮ್ಮ ತಲೆಯ ಮೇಲೇ ಹಾರಿ ಹೋಯಿತು. “ಹಿಂದೆ ಹೀಗೆಯೇ ತಿರುಗಾಡಲಿಕ್ಕೆ ಬರ್ತಿದ್ದೆವು ಬೆಳ್ಳಂಬೆಳಗ್ಗೆ ಕಾಡುಕೋಳಿಗಳ ಹಿಂಡುಹಿಂಡುಗಳೇ ರಸ್ತೆಯಲ್ಲಿ ಸೇರಿರುತ್ತಿದ್ದವು.
ಅರೇ ಇದೇನು ಕೋಳಿ ಜಾತ್ರೆನಾ? ಎಂದು ನೋಡಿದರೆ ದಾರಿಯಲ್ಲೆಲ್ಲಾ ಯಾರೋ ಎರಚಿ ಹೋದಂತೆ ಬಿದ್ದಿದ್ದ ಭತ್ತದ ಕಾಳುಗಳು! ರಾತ್ರಿಯಾದಂತೆ ಕೊಟ್ಟಿಗೆಹಾರದ ಮಾರ್ಗವಾಗಿ ಚೀಲಗಟ್ಟಲೆ ಭತ್ತ ಮಂಗಳೂರಿಗೆ ಕುಚುಲಕ್ಕಿ ಮಾಡಲು ರವಾನೆಯಾಗುತ್ತಿದ್ದಾಗ ತೂತು ಬಿದ್ದ ಮೂಟೆಗಳಿಂದ ಅಲ್ಲಲ್ಲಿ ಸುರಿದಿದ್ದ ಭತ್ತ.
ಬೆಳಗಿನ ಮಂಜು ಹರಿದು ಚುಮುಚುಮು ತಿಳಿ ಬಿಸಿಲಿಗೆ ರೆಕ್ಕೆ ಮುರಿದು, ಪುಕ್ಕ ಚದುರಿಸಿ, ಕಾಲು ನೀವಿ ಮೈ ಕೊಡವಿಕೊಂಡ ಕಾಡುಕೋಳಿಗಳು ಟಾರು ರಸ್ತೆಯ ಮೇಲೆ ಸಿದ್ಧವಾಗಿದ್ದ ಭತ್ತದ ಭೋಜನಕ್ಕೆ ಸಡಗರದಿಂದ ಸೇರುತ್ತಿದ್ದುದ್ದನ್ನು ಗತವೈಭವ ಎನ್ನುವಂತೆ ತೇಜಸ್ವಿ ವರ್ಣಿಸಿದ್ದರು. “ನಮ್ಮ ಕಣ್ಣೆದುರಿಗೇ ಏನೇನು ಬದಲಾವಣೆಗಳು ಆದುವಲ್ಲ್ಲ ಮಾರಾಯ!” ಎಂದು ಚಕಿತಗೊಂಡಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

