ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ವಿಶೇಷವಾದ ಮೀನು
ನಾವು ಸಂಘಟಿಸುತ್ತಿದ್ದ ಕಾರ್ಯಕ್ರಮಗಳಿಗೆ ಸಮಯ ಮಾಡಿಕೊಂಡು ನಮಗೇ ತಿಳಿಯದಂತೆ ಹಾಜರಾಗಿ ಹಿಂದಿನ ಸಾಲಿನ ಮೂಲೆ ಕುರ್ಚಿಯಲ್ಲಿ ಕುಳಿತೋ, ಸಭಾಂಗಣ ತುಂಬಿದ್ದರೆ ಅಲ್ಲೇಲ್ಲೊ ನಿಂತೇ ಕಾರ್ಯಕ್ರಮ ವೀಕ್ಷಿಸುತ್ತಿದ್ದರು ತೇಜಸ್ವಿ. ಅವರ ಆಗಮನ ತಿಳಿದು ಆಸನ ವ್ಯವಸ್ಥೆ ಮಾಡಿ ಔಪಚಾರಿಕತೆ ತೋರಿಸುತ್ತಿದ್ದಂತೆ ಸಿಟ್ಟು ಮಾಡಿಕೊಳ್ಳುತ್ತಿದ್ದರು.
“ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಹೋಗ್ ಹೋಗಿ” ಎಂದು ಗದರಿಸುತ್ತಿದ್ದರು. “ವೇದಿಕೆಗೆ ಬನ್ನಿ ನಾಲ್ಕು ಮಾತನಾಡಿ” ಎಂದು ಕೇಳಿಕೊಂಡರೆ “ಕುಳಿತು ಕಾರ್ಯಕ್ರಮ ನೋಡಬೇಕಾ ಅಥವಾ ಎದ್ದು ಮನೆಗೆ ಹೋಗಬೇಕಾ. ನನಗೆ ಬೇಕಾದಷ್ಟು ಕೆಲಸವಿದೆ” ಎನ್ನುತ್ತಿದ್ದರು. ನಾವೂ ಮಾನ ಮಾರ್ಯಾದೆ ಬಿಟ್ಟು ತೀರಾ ಒತ್ತಾಯ ಮಾಡಿದರೆ ರಪ್ ಅಂತ ಎದ್ದು ಜೇಬೊಳಗೆ ಕೈ ಹಾಕಿಕೊಂಡು ಬಾಗಿಲು ದಾಟಿ ಸ್ಕೂಟರ್ ಹತ್ತಿ ಮಾಯವಾಗುತ್ತಿದ್ದರು. ನಿಧಾನವಾಗಿ ನಾವೂ ರಿಪೇರಿಯಾದೆವೆನ್ನಿ.
ಸಭಿಕರ ನಡುವೆ ಹಿಂದಿನ ಸಾಲಿನಲ್ಲೆಲ್ಲೋ ಕುಳಿತು ವೇದಿಕೆ ಮೇಲಿನ ಭಾಷಣವನ್ನು ಆಲಿಸುವ ತೇಜಸ್ವಿಯವರನ್ನು “ಸಾರ್! ಇದೇನು ಇಲ್ಲಿ ಕುಳಿತಿದ್ದೀರಿ?’’ ಎಂದು ಅಚ್ಚರಿ ವ್ಯಕ್ತಪಡಿಸಿದರೆ ” ಇನ್ನೆಲ್ಲಿ ಕುಳಿತಿರಬೇಕಿತ್ರೀ? ಇಲ್ಲಿ ಕುಳಿತು ಕೇಳುವ ಆರಾಮ ವೇದಿಕೆಯ ಮೇಲೆ ಇರೋದಿಲ್ಲ’’ ಎಂದಿದ್ದರು. ಅನಗತ್ಯ ಸಭಾ ಔಪಚಾರಿಕತೆ ಹಾಗೂ ಅಸಹನೀಯ ಹೊಗಳುಭಟತನಕ್ಕೆ ಹೇವರಿಕೆಗೊಳ್ಳುತಿದ್ದ ತೇಜಸ್ವಿ ¨ರೀ ಭಾಷಣದಿಂದ ಎಂದಿಗೂ ಕ್ರಾಂತಿ ಸಾಧ್ಯವಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದರು. ತಮ್ಮದೇ ಆದ ಸಹಜ ನಡವಳಿಕೆಯಿಂದ ಫಾರ್ಮಾಲಿಟಿಗಳಿಗೆ ಅವಕಾಶವೇ ಇಲ್ಲದಂತೆ ಎಲ್ಲವನ್ನೂ ಗೇಲಿಗೊಳಪಡಿಸಬಹುದಾದ ವ್ಯಕ್ತಿತ್ವ ಹೊಂದಿದ್ದರು.
ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಅದರಲ್ಲೂ ಸ್ವಯಂಪ್ರೇರಣೆಯಿಂದ ವಿರಳವಾಗಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ತೇಜಸ್ವಿ ಚಿಕ್ಕದಾಗಿ ಚೊಕ್ಕವಾಗಿ ಸಂವಾದ ನಡೆಸುತ್ತಿದ್ದರು. ತೀರಾ ಕ್ಲಿಷ್ಠಕರವಾದ ಸನ್ನಿವೇಶವನ್ನೂ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಹಾಗೂ ಸ್ವಾರಸ್ಯಕರವಾಗಿ ಮನವರಿಕೆ ಮಾಡಿಕೊಡುತಿದ್ದರು. ನಾನಿಲ್ಲಿ ವೇದಿಕೆಯ ಮೇಲೆ ನಿಲ್ಲದೇ ನಿಮ್ಮೊಡನೆಯೇ ಇದ್ದರೆ ಇನ್ನೂ ಚೆನ್ನಾಗಿ ಮಾತನಾಡಬಹುದು ಎಂದು ಎಲ್ಲರೊಳಗೊಂದಾಗುವ ತಮ್ಮ ಸಹಜವಾದ ತುಡಿತವನ್ನು ಹೊರಹಾಕುತಿದ್ದರು.

ವೇದಿಕೆಯ ಮೇಲಿನ ನಾಜೂಕಿನ ಸ್ಥಿತಿಗಿಂತ ಹೆಚ್ಚು ಸಾರ್ವಜನಿಕವಾದ ಪ್ರೇಕ್ಷಕ ಮನೋಭೂಮಿಕೆಯನ್ನು ತಮ್ಮ ಸಾಹಿತ್ಯ ಸೃಷ್ಠಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಈಗಿನ 25-55 ವಯೋಮಾನದ ಓದುವ ಗೀಳಿನ ಸಾಹಿತ್ಯಾಸಕ್ತರಲ್ಲಿ ಬಹುಪಾಲು ಜನರು ಒಂದಲ್ಲ ಒಂದು ರೀತಿಯಲ್ಲಿ ತೇಜಸ್ವಿ ಎಫೆಕ್ಟ್ ಗೆ ಒಳಗಾಗಿದ್ದಾರೆ. ನಮ್ಮ ಪಕ್ಕದಲ್ಲಿಯೇ ಕುಳಿತು ಯಾವುದೊ ಸನ್ನಿವೇಶವನ್ನು ವಿವರಿಸುತಿದ್ದಾರೇನೋ ಈ ಲೇಖಕ ಎನ್ನು ಮಟ್ಟಿಗೆ ತೇಜಸ್ವಿ ನಿರೂಪಿಸುತ್ತಾ ಹೋಗುತ್ತಾರೆ. ಅದೆ ಅವರ ಸ್ಪೆಷಾಲಿಟಿ.
ನನಗೆ ಮೀನು ಮಾರುವ ಅಂಗಡಿ ಮುಂದೆ ನಿಂತು ಮಾರಾಟಕ್ಕೆ ಇಟ್ಟಿರುವ ಮೀನುಗಳನ್ನು ಸುಮ್ಮನೆ ನೋಡುತ್ತಾ ನಿಲ್ಲುವುದು ಇಷ್ಟದ ಕೆಲಸ. ಡ್ಯಾಂನವಿರಬಹುದು, ಹೊಳೆ-ಕೆರೆಗಳದ್ದಿರಬಹುದು, ಸಮುದ್ರದವಿರಬಹುದು ನೀರಿನೊಳಗಿನ ಪ್ರಪಂಚದ ಬಗ್ಗೆ ಚಿಕ್ಕಂದಿನಿಂದಲೂ ಬೇರೆಲ್ಲರಿಗೂ ಇರುವಂತೆ ವಿಶಿಷ್ಟವಾದ ಕುತೂಹಲ. ಏಡಿ, ಕಪ್ಪೆಚಿಪ್ಪು, ಸಿಗಡಿ, ಆಮೆ, ಮಳಲಿಮೀನಿನಿಂದ ಹಿಡಿದು ಹದಿನೆಂಟು ಇಪ್ಪತ್ತು ಕೆ.ಜಿ. ಗಾತ್ರದ ಮೀನಿನವರೆಗೆ ಇರಬಹುದಾದ ವೈವಿಧ್ಯತೆಗಳನ್ನು ನೋಡುತ್ತಾ ಅವುಗಳ ವರ್ಣರಂಜಿತ ಬದುಕನ್ನು ಕಲ್ಪಿಸಿಕೊಳ್ಳುವುದೇ ಒಂದು ರೋಮಾಂಚಕ ಅನುಭವ.
ಹೀಗೆ ಒಮ್ಮೆ ಭಾನುವಾರ ಬಿಡುವಾಗಿದ್ದರಿಂದ ರಾಶಿ ರಾಶಿ ಬಂದಿದ್ದ ಜಲಚರ ವೈವಿಧ್ಯವನ್ನು ನೋಡುತ್ತಾ ನಿಂತಿದ್ದೆ. ಅಂಗಡಿಯವನು “ತೇಜಸ್ವಿಯವರೂ ಹೀಗೇ ನಿಂತು ಮೀನುಗಳನ್ನು ನೋಡಿ ಮಜಾ ತಗೋತಾರೆ ಸಾರ್” ಎಂದ. “ಅವರು ಮಜಾ ತಗೋಳೋದಲ್ಲ ಮಾರಾಯ, ತಮ್ಮ ಜ್ಞಾನ ಭಂಡಾರವನ್ನು ತಿರುವಿ ಹಾಕುತ್ತಿರುತ್ತಾರೆ ಅಷ್ಟೇ. ಆದ್ರೂ ಇವುಗಳನ್ನು ನೋಡ್ತಾ ನಿಲ್ಲೋ ಥ್ರಿಲ್ಲೇ ಬೇರೆ” ಎಂದೆ.
ಅವತ್ತು ಗೊಜಲೆ ಎಂಬ ವಿಶಿಷ್ಟ ಜಾತಿಯ ಮೀನು ಮಾರುಕಟ್ಟೆಗೆ ಬಂದಿತ್ತು. ಚಪ್ಪಟೆ ದೇಹದ, ಮೂತಿ ಮುಂದಿನಿಂದ ನೀಳವಾದ ಮೀಸೆ ಹೊಂದಿರುವ ಈ ಮೀನು ಮೂಡಿಗೆರೆಯ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಸಿಗುತ್ತದೆ. ನಾನೊಂದು ಕೆಜಿ. ತಗೊಂಡೆ. ಅವತ್ತು ತೇಜಸ್ವಿಯವರ ಮನೆಗೆ ಹೋಗುವ ಕಾರ್ಯಕ್ರಮವಿದ್ದುದ್ದರಿಂದ “ಇನ್ನೊಂದು ದೊಡ್ಡ ಸೈಜಿನದ್ದು ಕೊಡು ಮಾರಾಯ” ಎಂದೆ.
ಮೀನನ್ನು ಸ್ಕೂಟರಿನ ಬಾಕ್ಸ್ನಲ್ಲೇ ಇಟ್ಟುಕೊಂಡು ತೇಜಸ್ವಿಯವರ ಮನೆಗೆ ಹೋದರೆ ಯಾರೋ ಸಂದರ್ಶಕರಿದ್ದರು. ಅವರೆದುರು ಮೀನು ಕೊಡಲು ಮುಜುಗರವಾಯಿತು. ಹತ್ತು-ಹದಿನೈದು ನಿಮಿಷ ಅದೂ ಇದೂ ಮಾತನಾಡಿದ ಮೇಲೆ ಸರಿ, ಹೊರಡುವೆನೆಂದು ಹೊರಬಂದೆ. ಅವರ ಮನೆಯ ಹಿಂಬದಿಯಿಂದ ಹೋಗಿ ರಾಜೇಶ್ವರಿ ಆಂಟಿಯವರನ್ನು ಕರೆದು, “ವಿಶೇಷವಾದ ಮೀನು ಬಂದಿತ್ತು , ತಗೊಂಡು ಬಂದಿದ್ದೀನಿ ತಗೋಳಿ” ಎಂದು ಕೊಟ್ಟೆ. ಮೆಲುದನಿಯಲ್ಲೇ ಮಾತನಾಡುತ್ತಿದ್ದರೂ ತೇಜಸ್ವಿಯವರು ಯಾರಿರಬಹುದೆಂದು ಮನೆ ಹಿಂದೆ ಬಂದರು.
“ಏನಯ್ಯಾ ಹೋಗ್ತೀನಿ ಅಂತ ಬಂದು ಇಲ್ಲಿ ನಿಂತಿದ್ದೀಯಲ್ಲಾ” ಎಂದರು. ಮೀನಿನ ಕಥೆ ಹೇಳಿದೆ. ತೇಜಸ್ವಿಯವರ ಇಂದ್ರಿಯಗಳಿಗಿದ್ದ ಸೂಕ್ಷ್ಮತೆ ಅಸಾಧಾರಣವಾದುದ್ದು. ಮುಂದೆ ಅವರು ಅಕ್ಯುಪಂಕ್ಚರ್ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಚುಚ್ಚಿದ್ದ ಸೂಜಿಗಳೇ ಪಠಾರನೇ ಹಾರಿ ಇದನ್ನು ದೃಢಪಡಿಸಿದ್ದವು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946


[…] https://vicharavisthara.com/dhananjay-jeevala-puchanthe-thejaswi-story-part-44/ […]