ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
“ನನಗೆ ಇಷ್ಟು ವರ್ಷ ಕಂಪನಿ ಕೊಟ್ಯಲ್ಲೇ ಮಹರಾಯಿತಿ”
ಕೊಂಚ ಮಟ್ಟಿನ ಸಲಿಗೆ ನೀಡಿದ ತೇಜಸ್ವಿಯವರಿಗೆ ಒಮ್ಮೆ ಅಧಿಕ ಪ್ರಸಂಗದ ಪ್ರಶ್ನೆ ಕೇಳಿ ಅವರ ಕೋಪಕ್ಕೆ ತುತ್ತಾಗಿದ್ದೆ. ಅವತ್ತು ತಮಾಷೆಯಾಗಿ ಮಾತನಾಡುತ್ತಾ ಒಳ್ಳೆಯ ಲಹರಿಯಲ್ಲಿದ್ದರು. ತಲೆಹರಟೆಯ ನಾನು “ ರಾಜೇಶ್ವರಿ ಆಂಟಿ ನಿಮ್ಮ ಫಸ್ಟ್ ಚಾಯಿಸ್ಸಾ?” ಎಂದೇಬಿಟ್ಟೆ. “ಛೂಸ್ ಮಾಡಿದ್ದೂ ಆಯ್ತು, ಮದುವೆ ಆಗಿದ್ದು ಆಯಿತು. ನಿನ್ನಷ್ಟೇ ದೊಡ್ಡ ಮಕ್ಕಳೂ ಇದ್ದಾರೆ” ಎಂದು ಮಾತನ್ನು ಅಲ್ಲಿಗೆ ಮುಗಿಸಿದರು.
ತೀರಾ ಇತ್ತೀಚೆಗೆ ನಾನೂ ಮತ್ತು ನನ್ನ ಹೆಂಡತಿ ನಾಗಮಣಿ ಇಬ್ಬರೂ ರಾಜೇಶ್ವರಿ ಆಂಟಿಯನ್ನು ಮಾತನಾಡಿಸಿಕೊಂಡು ಬರಲುಹೋಗಿದ್ದೆವು. ನಮ್ಮ ಸಂಸಾರ, ಉದ್ಯೋಗ, ಸಾಹಿತ್ಯ, ರಾಜಕೀಯಗಳೆಲ್ಲವನ್ನು ಮಾತನಾಡಿದೆವು. ನಂತರ ತೀರಿ ಹೋಗುವ ಕೆಲ ದಿನಗಳ ಹಿಂದೆ ತೇಜಸ್ವಿಯವರು ರಾತ್ರಿ ಊಟದ ನಂತರ ನಿದ್ದೆಗೆ ಹೋಗುವ ಸಮಯದಲ್ಲಿ “ನನಗೆ ಇಷ್ಟು ವರ್ಷ ಕಂಪನಿ ಕೊಟ್ಯಲ್ಲೇ ಮಹರಾಯಿತಿ” ಎಂದಿದ್ದರು ಎಂದು ರಾಜೇಶ್ವರಿ ಆಂಟಿ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ತೀರಾ ಭಾವುಕರಾಗಿದ್ದಂತೆ ಕಂಡ ಅವರನ್ನು ಹೆಚ್ಚು ಬಳಲಿಕೆಗೆ ಒಳಗಾಗದಂತೆ ಸಾಂತ್ವನ ಹೇಳಿ ಬೀಳ್ಕೊಂಡೆವು.

ಅರವತ್ತು, ಎಪ್ಪತ್ತು ಹಾಗೂ ಎಂಬತ್ತರ ದಶಕಗಳ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಕಣ್ಣಾರೆ ಕಂಡಿದ್ದ ತೇಜಸ್ವಿ, ಜೇಪಿಯವರ ವಿಚಾರಧಾರೆ ಮತ್ತು ಸಮಾಜವಾದಿ ಸಿದ್ಧಾಂತಗಳ ಪ್ರಭಾವದಿಂದ ಪ್ರಗತಿರಂಗದ ರಚನೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರ್ಕಾರದ ಸಮಾಜ ವಿರೋಧಿ ನೀತಿಗಳನ್ನು ಖಂಡಿಸುತ್ತಿದ್ದ ಪ್ರಗತಿ ರಂಗದ ಸಭೆಯೊಂದರಲ್ಲಿ ನಾಯಕರುಗಳ ಉಗ್ರ ಮಾತಿನ ಪ್ರವಾಹದಿಂದ ಪ್ರೇರಿತನಾದ ಕಾರ್ಯಕರ್ತನೊಬ್ಬ ಸೀಮೆಎಣ್ಣೆ ಡಬ್ಬ ಹಿಡಿದುಕೊಂಡು “ಸುಟ್ಟುಕೊಂಡು ಸತ್ತು ಹೋಗ್ತೀನಿ! ಈ ಸರ್ಕಾರಕ್ಕೆ ಧಿಕ್ಕಾರ!!” ಎಂದು ತಿಣುಕಾಡಿದ್ದ. ತೇಜಸ್ವಿಯವರೇ ಅವನನ್ನು ಗದರಿಸಿ “ನಮಗೆ ಓಟ್ ಹಾಕಲಿಕ್ಕೆ ಇರುವವರೇ ಮೂರು ಮತ್ತೊಂದು ಜನ. ನೀನೂ ಸತ್ತು ಹೋದ್ರೆ ಅಷ್ಟೇ ಮತ್ತೆ. ನಮ್ಮ ಕಥೆ ಮುಗಿದ ಹಾಗೇ” ಎಂದದ್ದನ್ನು ನೆನಪಿಸಿಕೊಂಡು ಬಹಳ ತಮಾಷೆಯಾಗಿ ಹೇಳಿದ್ದರು.
ಕೆಲವೊಮ್ಮೆ ತೇಜಸ್ವಿಯವರ ರಾಜಕೀಯ ವಿಚಾರಧಾರೆಗಳು ಅಪ್ರಭುದ್ಧ ಎಂಬ ಟೀಕೆಗೂ ಒಳಗಾಗಿವೆ. ತೇಜಸ್ವಿಯವರೂ ನಮ್ಮ ನಿಮ್ಮೆಲ್ಲರ ಹಾಗೆ ಹತ್ತಾರು ಮಿತಿಗಳಿರುವ ಮನುಷ್ಯ. ಇಂದಿಗೆ ಪ್ರಸ್ತುತವೆನಿಸಿದ್ದು ನಾಳೆಗೂ ಅನ್ವಯಿಸಬೇಕಿಲ್ಲ. ಜಾಗತೀಕರಣ, ತೆರೆದ ಮಾರುಕಟ್ಟೆ, ಮಾಹಿತಿಕ್ರಾಂತಿ ನಮ್ಮ ಅನೇಕ ಹಿರಿಯರ ಅನೇಕ ಚಿಂತನೆಗಳನ್ನು ಪ್ರಶ್ನಾರ್ಹವನ್ನಾಗಿಸಿವೆ. ಈ ವಿಶ್ವದಲ್ಲಿ ಯಾರ ಅಭಿಪ್ರಾಯವೂ ಅಂತಿಮವಲ್ಲ, ಹಾಗಾಗಲೂ ಕೂಡದು .
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

