ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಎದ್ದು ನಿಂತ ಗದ್ದೆ
ಒಂದು ದಿನ ಬೆಳಿಗ್ಗೆ ಎದ್ದವನೇ ಪ್ರಜಾವಾಣಿ ಪೇಪರ್ ಕೈಗೆ ತಗೊಂಡು ನೋಡ್ತೀನಿ, “ಸಕಲೇಶಪುರದ ಮಾರನಹಳ್ಳಿ ಬಳಿ ಗದ್ದೆ ಮೇಲೇರಿ ನಿಂತಿದೆ!” ಎಂಬ ಸುದ್ದಿ ಮುಖಪುಟದಲ್ಲಿಯೇ ಇತ್ತು. ಪ್ರಾಕೃತಿಕ ವಿಸ್ಮಯ! ಬಿಡಿಸಲಾಗದ ಕಗ್ಗಂಟು! ಹೀಗೆ ಹಲವಾರು ಪ್ರಶ್ನೆಗಳೊಂದಿಗೆ ಸುದ್ದಿ. ಕೂಡಲೇ ತೇಜಸ್ವಿಯವರಿಗೆ ಫೋನ್ ಮಾಡಿದೆ.
“ಹೀಗ್ ಹೀಗಂತೆ. ಪ್ರಜಾವಾಣೀಲಿ ಫ್ರ್ರಂಟ್ ಪೇಜ್ನಲ್ಲೇ ಹಾಕಿದ್ದಾರೆ. ನೋಡಿ ಬರೋಣವಾ?” ಎಂದೆ. “ಹೌದೇನಯ್ಯಾ? ಸರಿ ನಡಿ ನೋಡೇ ಬಿಡೋಣ” ಎಂದರು.
ತರಾತುರಿಯಲ್ಲಿ ತಿಂಡಿ ತಿಂದವನೇ ಮಾರುತಿ ವ್ಯಾನ್ ತಗೊಂಡು ಅವರ ಮನೆಗೆ ಬಂದೆ. ಕುತೂಹಲದಿಂದ ಚಕಿತರಾಗಿದ್ದ ತೇಜಸ್ವಿ ಸಿದ್ಧರಾಗಿದ್ದರು. ಅವರೊಡನೆ ಅವರ ಮಡದಿ ಮತ್ತು ತೋಟದ ರೈಟರ್ ಶಿವ ಕೂಡ ಹೊರಟು ತಯಾರಾಗಿದ್ದರು. ಹತ್ತಿರ ಹತ್ತಿರ ನಲವತ್ತು ಕಿಲೋಮೀಟರ್ ಪ್ರಯಾಣ. ವಾಹನ ಹೋಗುವವರೆಗೂ ಹೋಗಿ ನಂತರ ತೋಟ ದಾಟಿ, ಗದ್ದೆ ಏರಿಯ ಮೇಲೆ ನಡಿಗೆ. ಸುಮಾರು ಅರ್ಧ ಕಿ.ಮೀ. ನಡೆದ ನಂತರ ಎದುರಾದದ್ದು ನಾಲ್ಕು ದಿನದ ಹಿಂದೆ ನೆಟ್ಟಿ ಮಾಡಿದ್ದ ಗದ್ದೆಗಳು. ಮಳೆ ನಿರಂತರವಾಗಿ ಸುರಿಯುತ್ತಿತ್ತು.
ದಾರಿಯೆಲ್ಲಾ ಮಂಡಿಯುದ್ದ ಕೆಸರು. ಸದಾ ನೀರಿನಿಂದ ತುಂಬಿ ಸಪಾಟ್ ಆಗಿರುತ್ತಿದ್ದ ಗದ್ದೆಯ ಗಣ್ಣಗಳು ಅಡಿಯಿಂದ ಯಾರೋ ಕೈಹಾಕಿ ಎತ್ತಿದ್ದಂತೆ ಸುಮಾರು ಎರಡು-ಮೂರು ಅಡಿ ಮೇಲೆಕ್ಕೇರಿವೆ. ಎದುರಿನ ಈಚಲಹರ ಕಡಿದು ಬಿದ್ದಂತೆ ರ್ರಕ್ಕನೇ ನಲವತ್ತೆöÊದರಿಂದ-ಐವತ್ತಡಿ ಪ್ರಪಾತ. ಪ್ರಪಾತದ ಅಡಿಯಲ್ಲೇ ನೂರಾರು ಎಕರೆ ಗದ್ದೆಯ ಬಯಲು. ಪ್ರಪಾತದ ಅಂಚಿನಲ್ಲಿದ್ದ ಗದ್ದೆ ತಾನಿದ್ದ ಸ್ಥಳದಲ್ಲೇ ಪ್ರಮೋಷನ್ ಪಡೆದಂತೆ ಮೇಲೆದ್ದು ತನ್ನಲ್ಲಿದ್ದ ನೀರೆಲ್ಲವನ್ನೂ ಬಸಿದುಕೊಂಡು ಪೈರು ಸಮೇತ ಆಗಸಕ್ಕೆ ಮುಖಮಾಡಿಕೊಂಡು ಬಟಾಬಯಲಾಗಿತ್ತು. ಅಷ್ಟೊತ್ತಿಗಾಗಲೇ ನಲವತ್ತು-ಐವತ್ತು ಜನ ಸೇರಿದ್ದರು. ಟಿ.ವಿ., ಪತ್ರಿಕೆಯವರು ಅಲ್ಲಿ ಸೇರಿದ್ದವರ ಅಭಿಪ್ರಾಯ, ಅನಿಸಿಕೆಗಳನ್ನು ವಿಚಿತ್ರ ಆದರೂ ಸತ್ಯ! ಹೀಗೂ ಉಂಟೆ! ಮಾದರಿಯಲ್ಲಿ ಪಡೆದುಕೊಳ್ಳುತ್ತಿದ್ದರು.
ಕೆಲವರು ಶಂಖದ ದಾಸಯ್ಯನ ಕಥೆ ಹೇಳುತ್ತಿದ್ದರೆ, ಇನ್ನು ಕೆಲವರು ಭೂಗತವಾಗಿದ್ದ ಊರಿನ ಪಳೆಯುಳಿಕೆ (ಅಟ್ಲಾಂಟಿಸ್ ಮಾದರಿಯದ್ದು) ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದರು. ಶಿವ ಮತ್ತು ನಾನು ಮೇಲೆದ್ದ ಗದ್ದೆಯ ಅಂಚಿನಲೆಲ್ಲಾ ಓಡಾಡಿದೆವು. ತೇಜಸ್ವಿ ದಂಪತಿ ದೂರದಲ್ಲೇ ನಿಂತು ಅವಲೋಕಿಸುತ್ತಿದ್ದರು. ಹತ್ತಿರದಿಂದ ಗಮನಿಸಿದ ನನಗೆ ಅನಿಸಿದ್ದೇನೆಂದರೆ, ವಿಪರೀತ ಮಳೆಗೆ ಪ್ರಪಾತದ ಅಂಚು ಬೃಹತ್ ಪ್ರಮಾಣದಲ್ಲಿ ಕುಸಿದಿತ್ತು. ತೀರಾ ತೇವಾಂಶದ ಗದ್ದೆಯ ಭೂಮಿಯೊಳಗೆ ಸುಲಭವಾಗಿ ಇಳಿದಿದ್ದ ಕುಸಿದಿದ್ದ ಮಣ್ಣು ಗದ್ದೆಯ ಮೇಲೈಯನ್ನು ಮೇಲೇರುವಂತೆ ಮಾಡಿತ್ತು. ಸುಮಾರು ಅರ್ಧಗಂಟೆ ನಂತರ ಹೆದ್ದಾರಿ ಕಡೆಗೆ ನಡೆದೆವು. ಕೈಕಾಲಿನ ಕೆಸರು ತೊಳೆಯಲು ಹೆದ್ದಾರಿ ಪಕ್ಕದ ಬೋರ್ವೆಲ್ ಚಾಲನೆ ಮಾಡಿದರೆ ಬಂದದ್ದು ಕೆಸರಿನಂತಹ ಮಂದವಾದ ವಿಚಿತ್ರ ವಾಸನೆಯ ದ್ರವ!
ನಮ್ಮದೇ ಕುಡಿಯುವ ನೀರಿನ ಸಹಜ ಮೂಲಗಳನ್ನು ವ್ಯವಸ್ಥಿತವಾಗಿ ಹಾಳು ಮಾಡಿ ಖನಿಜಯುಕ್ತ ನೀರೆಂದು ಕುಡಿಯಲು ಯೋಗ್ಯವಲ್ಲದ ಆದರೆ ಶುದ್ಧೀಕರಿಸಿದ ನಲ್ಲಿ ನೀರನ್ನು ಬಾಟಲಿಗೆ ತುಂಬಿ ನಮಗೇ ಮಾರುತ್ತಿರುವವರಿಗೆ ನಮ್ಮ ಹಳ್ಳ, ತೊರೆ, ನದಿಗಳನ್ನು ಗುತ್ತಿಗೆ ನೀಡುತ್ತಿರುವುದರ ಬಗ್ಗೆ ನಾನು ತಕರಾರೆತ್ತಿದಾಗ ತೇಜಸ್ವಿ ನನ್ನೊಡನೆ ಸಹಮತ ವ್ಯಕ್ತಪಡಿಸಿದ್ದರು. ಪಿಕ್ನಿಕ್ ಹೋದಾಗ ಶುಭ್ರವಾದ ಜಾಗ ಹುಡುಕುವ ನಾವು ವಾಪಾಸ್ ಬರುವಾಗ ತಿಪ್ಪೆ ಸೃಷ್ಟಿಸಿರುತ್ತೇವೆ ಎಂದು ತೇಜಸ್ವಿ ವಿಷಾದಿಸಿದ್ದರು.

ಬರವಣಿಗೆ, ಡ್ರೈವಿಂಗ್, ಫೋಟೋಗ್ರಫಿ ಹೇಗಿರಬೇಕೆಂದು ಸಂದರ್ಭ ಸಿಕ್ಕಿದಾಗಲೆಲ್ಲಾ ತಿಳಿ ಹೇಳುತ್ತಿದ್ದ ತೇಜಸ್ವಿ ತಮ್ಮ ಕೊನೆಯ ಕೃತಿ ಮಾಯಾಲೋಕದಲ್ಲಿ ನಾನು ನನ್ನ ಕ್ಯಾಮರಾದಲ್ಲಿ ತೆಗೆದ ಮರ್ನಾಲ್ಕು ಚಿತ್ರಗಳನ್ನು ಬಳಸಿಕೊಂಡಿರುವುದು ನನ್ನ ಮೇಲಿನ ಅವರ ವಿಶ್ವಾಸದ ಪ್ರತೀಕ.
ಅಗತ್ಯವಿರುವ ಮೂಲ ಚಿತ್ರಗಳನ್ನು ಮೂಲ ಕರ್ತೃವಿಗೆ ತಿಳಿಯದಂತೆ ಬಳಸಿಕೊಂಡು ಬೀಗುವ ಕೆಲ ಲೇಖಕರ ಸಾಹಿತ್ಯ ಲೋಕದಲ್ಲಿ ತೇಜಸ್ವಿಯಂಥಾ ಹಿರಿಯ ಲೇಖಕರೂ ಸಹಾ ಮೂಲ ಕರ್ತೃವಿಗೆ ಮೌಖಿಕವಾಗಿಯಾದರೂ ತಿಳಿಸುವ ಕನಿಷ್ಠ ಸೌಜನ್ಯವನ್ನು ರೂಢಿಸಿಕೊಂಡಿದ್ದರು. ಕೃತಿಸ್ವಾಮ್ಯದ ವಿಚಾರದಲ್ಲಿ ತೇಜಸ್ವಿ ನಿಜಕ್ಕೂ ನಿಷ್ಠುರವಾಗಿದ್ದರು. ಇತರರ ಕೃತಿಸ್ವಾಮ್ಯವನ್ನು ಗೌರವಿಸುವ ದೊಡ್ಡಗುಣ ತೇಜಸ್ವಿಯವರಲ್ಲಿತ್ತು. ಹೂವಿನೊಡನೆ ಕೀಟವೂ ಸ್ವರ್ಗಕ್ಕೆ ಹೋದಂತಾಗಿದೆ. ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಶಿಕಾರಿ ಮಾಲಿಕೆಯನ್ನು ಓದಿ ಸಲಹೆ ನೀಡಿ ಬೆನ್ನು ತಟ್ಟಿದ ಸ್ಪರ್ಶ ಇನ್ನೂ, ಈಗಲೂ ಹಾಗೂ ಎಂದೆಂದಿಗೂ ನನ್ನೊಡನಿರುತ್ತದೆ.
ಬಿಟ್ಟೂ ಬಿಡದೆ ಕಾಡುವ ತೇಜಸ್ವಿ ಸಿಕ್ಕಿದಾಗಲೆಲ್ಲಾ “ನನ್ನ ಸಮಯ ಹಾಳು ಮಾಡ್ತಿದ್ರಲ್ಲಾ ಈಗೇನ್ಮಾಡ್ತೀರಾ? ಹಾಗ್ಮಾಡ್ತೀವಿ, ಹೀಗ್ಮಾಡ್ತೀವಿ ಅಂತಿದ್ರಲ್ಲಾ, ಈಗ ಪುರುಸೊತ್ತಿದೆ, ನೋಡ್ತಾನೆ ಇರ್ತೀನಿ ಏನ್ ಕಡಿದು ದಬ್ಬಾಕ್ತೀರಾ ” ಅಂತ ಎಂದಂತೆ ಭಾಸವಾಗುತ್ತಿದೆ.
ಅತ್ಯಂತ ಪ್ರಯೋಗಶೀಲರಾದ ತೇಜಸ್ವಿ ಸ್ಕೂಟರ್, ನೀರೆತ್ತುವ ಮೋಟಾರ್, ಕಂಪ್ಯೂಟರ್ನಂತ ಯಂತ್ರಗಳನ್ನು ತಾವೇ ದುರಸ್ಥಿ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದ್ದರು. ಆಗಾಗ ಕೈ ಕೊಡುತ್ತಿದ್ದ ನನ್ನ ಹಳೇ ನರ್ಮದಾ ಸ್ಕೂಟರ್ ರಿಪೇರಿಗಾಗಿ ವರ್ಕ್ಶಾಪ್ಗೆ ತಗೊಂಡು ಹೋಗ್ತೀನಿ ಎಂದರೆ `ಸ್ಕೂಟರ್ನಂತ ವೆಹಿಕಲ್ ಯೂಸರ್ ಫ್ರ್ರೆಂಡ್ಲಿ ಕಣಯ್ಯಾ, ಸರ್ವೇಸಾಮಾನ್ಯ ರಿಪೇರಿಗಳನ್ನೆಲ್ಲಾ ನಾವೇ ಮಾಡಿಕೊಳ್ಳಬಹುದು, ಅದನ್ನೂ ಗ್ಯಾರೇಜಿಗೆ ತಗೊಂಡು ಹೋಗ್ತೀಯಾ?’ ಎಂದು ಛೇಡಿಸಿದ್ದು ಇನ್ನೂ ಹಸಿರಾಗಿದೆ.
ಯಂತ್ರಗಳ ಬಗ್ಗೆ ವಿಶಿಷ್ಠ ವ್ಯಾಮೋಹವಿದ್ದ ತೇಜಸ್ವಿ ತಮ್ಮ ಸ್ಕೂಟರನ್ನು ಪೂರಾ ಬಿಚ್ಚಿ ಓವರ್ಹಾವ್ಲ್ (ನಮ್ಮ ಆಡುಮಾತಿನಲ್ಲಿ ಓರಾಯಿಲ್) ಮಾಡ್ತೀನಂತ ರಿಪೈರ್ಗೆ ಕುಳಿತಾಗ ಕುವೆಂಪುರವರು ಗಾಬರಿಗೆ ಬೀಳುತ್ತಾರೆ. ಪುನಃ ಜೋಡಿಸಿ ಮೊದಲಿನ ಸ್ಥಿತಿಗೆ ತರಬಲ್ಲನೇ? ಎಂಬು ಅನುಮಾನ ಕಾಡುತ್ತದೆ. ಕರಾರುವಾಕ್ಕಾಗಿ ಸ್ಕೂಟರ್ ಬಿಡಿಭಾಗಗಳನ್ನು ಜೋಡಿಸಿ ಸುಸ್ಥಿತಿಯಲ್ಲಿ ಚಲಾಯಿಸಲು ಸಾಧ್ಯವಾಗುವಂತೆ ಮಾಡುತ್ತಾರೆ ತೇಜಸ್ವಿ.
ಚಿಕ್ಕಪುಟ್ಟ ರಿಪೇರಿಗಳನ್ನು ಸಮಯಾವಕಾಶ ಹಾಗೂ ಕುತೂಹಲವಿರುವ ಎಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ಮಾಡಿರುತ್ತಾರೆ. ತಮ್ಮ ಕೆಲಸವನ್ನು ತಮಗೆ ತಿಳಿದಿರುವ ಮಟ್ಟಿಗೆ ಹಾಗೂ ತಮಗೆ ಅವಕಾಶವಿರುವವರೆಗೆ ಯಾರಾದರೂ ಮಾಡಿಕೊಳ್ಳುವುದು ಸಹಜ ನಡವಳಿಕೆಯೇ ಆಗಿರುತ್ತದೆ. ಕುತೂಹಲ, ಕನಿಷ್ಠ ಮೂಲಭೂತ ತಿಳುವಳಿಕೆ, ಸಮಯಾವಕಾಶ ಇರಬೇಕಷ್ಟೆ. ತೇಜಸ್ವಿ ಇದನ್ನು ಸಮಂಜಸವಾಗಿ ಬಳಸಿಕೊಂಡಿದ್ದಾರೆ. ಯಾವುದೇ ಅತಿಶಯೋಕ್ತಿಗೆ ಅವಕಾಶವಿಲ್ಲದಂತೆ ನಮ್ಮ ನಿಮ್ಮಂತೆಯೇ ಬದುಕಿದ್ದರು.
ಸಾಹಿತ್ಯಲೋಕದಲ್ಲಿ ಸೆಲೆಬ್ರಿಟಿಯಾಗಿದ್ದರಿಂದ ಸಕಾರಣ ಮತ್ತು ಸಹಜವಾಗಿಯೇ ಅವರ ಬಹಳಷ್ಟು ದೈನಂದಿನ ಕೆಲಸಗಳು ಸಾರ್ವಜನಿಕ ಕುತೂಹಲಕ್ಕೆ ಕಾರಣವಾದವು. ಆದ್ಯತೆಯ ಮೇರೆಗೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತಿದ್ದರು. ಆ ಸಂದರ್ಭಗಳನ್ನು ಸಾಹಿತ್ಯದಲ್ಲಿ ಸಂದರ್ಭೋಚಿತವಾಗಿ ದಾಖಲಿಸಿದ್ದರಿಂದ ಅವು ಅಮರವಾದವು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದೆಡೆಗೆ ತೀವ್ರವಾದ ಒಲವು ಮತ್ತು ಸೆಳೆತವಿದ್ದ ತೇಜಸ್ವಿಯವರ ಸಾಹಿತ್ಯದಲ್ಲಿ ಜೀಪು, ಕ್ಯಾಮೆರಾ, ಸೈಕಲ್ಲು, ಬಂದೂಕು, ಕುಕ್ಕರ್, ಕಾರು, ಬೈಕು, ಸ್ಕೂಟರ್, ನೀರಿನ ಮೋಟಾರ್ಗಳಾದಿಯಾಗಿ ಅನೇಕ ಯಂತ್ರಗಳೂ ಪಾತ್ರಧಾರಿಗಳಾದವು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

