ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸವಲತ್ತುಗಳ ರುಚಿ
ಎಲ್.ಜಿ. ಹಾವನೂರ್ರವರು “ಜಾತಿಗಳು ಶಾಶ್ವತ” ಎಂದು ಪ್ರತಿಪಾದಿಸಿದ ಅಂಶದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದ ತೇಜಸ್ವಿ ಮೀಸಲಾತಿಯ ನೆಪದಲ್ಲಿ ಅಧಿಕೃತವಾಗಿ ತಲೆಎತ್ತಿದ ಜಾತಿ ಸಂಘಟನೆಗಳು, ಜಾತಿಗೊಂದು ಮಠ, ಮಠಕ್ಕೊಬ್ಬ ಜಗದ್ಗುರು ಮುಂತಾದ ಪರಿಕಲ್ಪನೆಗಳು ಸಮಾಜವನ್ನು ಒಡೆದು ತಮಾಷೆ ನೋಡುವ ರಾಜಕಾರಣಿಗಳ ಕೈಗೊಂಬೆಯಾದದ್ದು ಈ ಶತಮಾನದ ವ್ಯಂಗ್ಯಗಳಲ್ಲಿ ಒಂದೆಂದು ಕಿಡಿಕಾರಿದ್ದರು.
ಸಭೆ ಸಮಾರಂಭಗಳಲ್ಲಿ, ಸಾಹಿತ್ಯ ವೇದಿಕೆಗಳಲ್ಲಿ ಆರ್ಥಿಕ ಅಸಮಾನತೆ, ಜಾತ್ಯಾತೀಯತೆಯ ಬಗ್ಗೆ ಬೋಂಗು ಬಿಡುವ ಸ್ವಯಂ ಘೋಷಿತ ಬುದ್ಧಿ! ಜೀವಿಗಳು ಹೆಂಡ ಕುಡಿಯಲು ಒಂದೆಡೆ ಸೇರಿದಾಗ ಆಡುವ ಮಾತುಗಳು, ನಡೆದುಕೊಳ್ಳುವ ರೀತಿ ಬೇರೆ ಜಗತ್ತಿಗೆ ಸೇರಿದವಾಗಿರುತ್ತವೆ. ಸಾರ್ವಜನಿಕ ಜೀವನದಲ್ಲಿ ಎಷ್ಟು ದಿನ ಮೋಸ ಮಾಡಲು ಸಾಧ್ಯ? ವಾಸ್ತವ ಎಂದಾದರೂ ಒಂದು ದಿನ ಅನಾವರಣಗೊಳ್ಳುತ್ತದೆ. ”ಜಾತಿ ಹೆಸರಲ್ಲಿ ಓಟು ಗಿಟ್ಟಿಸಿರುವ ಈ ಅಯೋಗ್ಯರು ಜಾತಿಯನ್ನು ನಿರ್ಮೂಲಗೊಳಿಸುತ್ತಾರಾ? ನಿನಗೆಲ್ಲೋ ಭ್ರಾಂತಿ ಕಣಯ್ಯಾ. ಜಾತಿ ಜಾತಿಗಳ ನಡುವೆ ತಿಕ್ಕಾಟವಿದ್ದಷ್ಟು ದಿನವೂ ಈ ಕಂತ್ರಿಗಳು ಚಲಾವಣೆಯಲ್ಲಿರುತ್ತಾರೆ.
ತಾವು ಅನಗತ್ಯವಾಗಿ ಚಲಾವಣೆಯಲ್ಲಿರುವ ಸನ್ನಿವೇಶವನ್ನು ಸೃಷ್ಠಿಸುತ್ತಾ, ಸಮಸ್ಯೆಗಳನ್ನು ತಿಳಿಯಾಗದಂತೆ ಕೆದಕುತ್ತಾ, ಕಲಕುತ್ತಾ ಇರುತ್ತಾರೆ. ಜಾತ್ಯಾತೀತ ಸಮಾಜದ ನಿರ್ಮಾಣಕ್ಕಾಗಿಯೇ ಜಾತ್ಯಾಧಾರಿತ ಮೀಸಲಾತಿ ಪ್ರಾರಂಭಗೊಂಡಿದ್ದರಿಂದ ಜಾತಿ ಸಂಘಟನೆಗಳು ಪ್ರಾರಂಭವಾಗಿ ಹಿಂದುಳಿಯಲು ಪೈಪೋಟಿ ಶುರುವಾಯ್ತು. ಹಿಂದುಳಿದವರೆಂದು ಗುರುತಿಸಲ್ಪಡುವುದರಿಂದ ಲಾಭಗಳು ದೊರೆಯುತ್ತವಾದ್ದರಿಂದ ಜಾತಿ ಆಧಾರಿತ ಗುಂಪುಗಾರಿಕೆಗಳು ಅಸಂಬದ್ಧ ಬೇಡಿಕೆಗಳನ್ನು ಮುಂದಿಡಲಾರಂಭಿಸಿದವು. ವೈಯಕ್ತಿಕವಾಗಿ ಮುಂದುವರೆಯಲೋಸುಗ ಸಾರ್ವಜನಿಕವಾಗಿ ಹಿಂದುಳಿದವರೆಂಬ ಪಟ್ಟಪಡೆಯಲು ಹಾಸ್ಯಾಸ್ಪದವಾದ ಹೋರಾಟಗಳು ತಲೆಯೆತ್ತಿದವು.’’ ಪ್ರಪಂಚದಲ್ಲಿ ಹಿಂದುಳಿಯಲು ಸ್ಪರ್ದೆ ನಡೆದಿರುವುದು ಭಾರತದಲ್ಲಿ ಮಾತ್ರವೇ ಇರಬಹುದೆಂಬ ನನ್ನ ಅಭಿಪ್ರಾಯಕ್ಕೆ ಈ ರೀತಿ ಹೇಳಿದ್ದರು ತೇಜಸ್ವಿ. ವಕ್ಕಲಿಗರ ಸಂಘದ ಕಾರ್ಯಕ್ರಮಕ್ಕೆ ಪ್ರಚಾರ ಫಲಕಗಳಲ್ಲಿ ಕುವೆಂಪು ಮತ್ತು ಕೆಂಪೇಗೌಡರ ಚಿತ್ರಗಳನ್ನು ಹಾಕಿಕೊಂಡಾಗ ಕಸಿವಿಗೊಂಡ ತೇಜಸ್ವಿ, “ರನ್ನ, ಪಂಪ ಯಾವ ಜಾತಿಯವರೋ ಆ ಜಾತಿಯೊಂದಿಗೇ ಅವರು ಕಣ್ಮರೆಯಾಗುತಿದ್ದರು. ಅವರು ಇಂದಿಗೂ ನಮ್ಮೊಡನೆ ಜೀವಂತವಾಗಿರುವುದೇ ಅವರ ಕಾವ್ಯ ಮತ್ತು ವಿಚಾರಗಳಿಂದ’’ ಎಂದು ಸೂಚ್ಯವಾಗಿ ತಮ್ಮ ಅಸಮಾಧಾನವನ್ನು ಹೊರಗೆಡವಿದ್ದರು.

“ಹೋರಾಟದ ಹಿನ್ನೆಲೆಯಿಲ್ಲದೇ ಕೇವಲ ಬೌದ್ಧಿಕ ಚಿಂತನೆಯ ಮೂಲಕ ಪ್ರಭಾವಿಯಾಗಲು ಪ್ರಯತ್ನಿಸುವವರ ಕಾರಸ್ಥಾನವಾಗಿದ್ದ ಸನಾತನ ಧರ್ಮ ಎಲ್ಲಿಯವರೆಗೆ ಜಾತಿಪದ್ಧತಿ, ಅಸ್ಪೃಶ್ಯತೆ, ಸ್ತಿç ಅಸಮಾನತೆಯ ವಕ್ತಾರನಾಗಿರುತ್ತದೆಯೋ ಅಲ್ಲಿಯವರೆಗೆ ಶೋಷಿತರಿಂದ ತಿರಸ್ಕಾರ, ಪ್ರತಿಭಟನೆ ಇದ್ದೇ ಇರುತ್ತದೆ. ಪ್ರತಿಭಟನೆ, ತಿರಸ್ಕಾರ ಸ್ಪೋಟಕ ಸ್ಥಿತಿ ತಲುಪುವ ಮುಂಚೆ ಅದನ್ನು ವಾಸ್ತವ ನೆಲೆಗಟ್ಟಿನಲ್ಲಿ ತಾರ್ಕಿಕವಾಗಿ ಶಮನಗೊಳಿಸುವ ಜವಾಬ್ದಾರಿಯೂ ಆ ಶೋಷಕರದ್ದೇ ಆಗಿರುತ್ತದೆ. ಬ್ರಾಹ್ಮಣ್ಯವನ್ನು ಟೀಕಿಸಿದ ಮಾತ್ರಕ್ಕೆ ಬ್ರಾಹ್ಮಣ್ಯೇತರರು ಸಂಪನ್ನರೆಂದು ಭಾವಿಸಬೇಕಿಲ್ಲ.
ಅವಕಾಶ ಸಿಕ್ಕಿದರೆ ಎಲ್ಲರನ್ನೂ ಮೀರಿಸುವ ನೀಚತನವನ್ನು ತೋರಿ ತಮ್ಮ ನಂತರದ ಶ್ರೇಣಿಯ ಜಾತಿಯವರನ್ನು ಸಾಧ್ಯವಿದ್ದಡೆಯಲ್ಲೆಲ್ಲಾ ತುಳಿಯಲು ಪ್ರಯತ್ನಿಸುತ್ತಾರೆ. ಎಲ್ಲಾ ಜಾತಿಯಲ್ಲಿಯೂ ನೀಚರ ಪ್ರಮಾಣ ಸಮಾನವಾಗಿದ್ದು, ದೇಶವ್ಯಾಪಿ ಅಧಿಕಾರ ಮತ್ತು ನೆಟ್ವರ್ಕ್ನಿಂದಾಗಿ ಕೆಲ ಪಟ್ಟಭದ್ರರರು ಇತರರಿಗಿಂತಲೂ ಹೆಚ್ಚು ಅಪಾಯಕಾರಿಯಾಗಲು ಸಾದ್ಯವಿದೆ. ಶೂದ್ರರಿಗೂ, ದಲಿತರಿಗೂ ಇರಬಹುದಾದ ನಿಜವಾದ ಕೊರತೆಯೆಂದರೆ ಆತ್ಮಗೌರವ ಮತ್ತು ಆತ್ಮವಿಶ್ವಾಸ ಮಾತ್ರ. ಮುಂದುವರೆಯಲು ಮೀಸಲಾತಿಯ ಊರುಗೋಲು ಇಲ್ಲದೆ ಸಾಧ್ಯವೇ ಇಲ್ಲವೆಂದುಕೊಳ್ಳುವುದು ನಾಚಿಕೆಗೇಡಿನ ಮಾತು.
ಪ್ರತಿಭೆಯಲ್ಲಾಗಲೀ, ಕ್ರಿಯಾಶೀಲತೆಯಲ್ಲಾಗಲೀ ಮೇಲುಜಾತಿಯವರಿಗಿಂತ ಶೂದ್ರರೂ, ದಲಿತರೂ ಕಿಂಚಿತ್ತೂ ಕೀಳಾದವರಲ್ಲ ಎಂಬುದು ವಾಸ್ತವ ಮತ್ತು ಸತ್ಯ. ಕುತಂತ್ರ ಮತ್ತು ಸ್ವಜಾತಿಯ ಪಕ್ಷಪಾತವಿಲ್ಲದಿದ್ದರೆ ಯಾವುದೇ ಸ್ಪರ್ಧೆಯಲ್ಲಿ ನಾವು ಹಿಂದುಳಿಯುತ್ತೇವೆ ಎಂದೆನ್ನಿಸುವುದಿಲ್ಲ. ಮೀಸಲಾತಿಯಿಂದ ಆಗಿರುವ ಅನುಕೂಲಗಳು ಗುರುತರವೇ ಆಗಿದ್ದರೂ ಅದರಿಂದ ನಮ್ಮ ಆತ್ಮವಿಶ್ವಾಸ ಮತ್ತು ಆತ್ಮಗೌರವ ಕಡಿಮೆಯಾಗುವಂಥ ಸನ್ನಿವೇಶ ಸೃಷ್ಠಿಯಾಗಬಾರದು’’ ಎನ್ನುತ್ತಾರೆ ತೇಜಸ್ವಿ.
ಯಾವ ಸಮಸ್ಯೆಯನ್ನು ಪರಿಹರಿಸಲು ಸಂಘಟಿತರಾಗುತ್ತಾರೋ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆ ಸಮಸ್ಯೆಯನ್ನು ಪ್ರಜ್ಞಾಪೂರ್ವಕವಾಗಿ ಜೀವಂತವಾಗಿಡುತ್ತಾರೆ. ಉದಾಹರಣೆಗೆ ಜಾತಿ ಆಧಾರದಲ್ಲಿ ಮತ ಕೇಳುವ ರಾಜಕಾರಣಿಗಳೂ ಜಾತಿ ವಿನಾಶ ಮಾಡುತ್ತಾರೆ ಎಂದು ನಂಬುವುದು ಮೂರ್ಖತನವೇ ಸರಿ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

