
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಪಕ್ಕಾ ಪೋಡು
ಹಲವಾರು ವರ್ಷಗಳ ಹಿಂದೆ ಒಮ್ಮೆ ತೇಜಸ್ವಿಯವರಿಗೆ ಭೂ ದಾಖಲಾತಿಗಳ ಅಗತ್ಯವುಂಟಾಯಿತಂತೆ. ತಹಶೀಲ್ದಾರರನ್ನು ಕಂಡು ಅಗತ್ಯವನ್ನು ಹೇಳಿಕೊಂಡಾಗ ಆ ಸೆಕ್ಷನ್, ಈ ವಿಭಾಗ, ಪಕ್ಕಾ ಪೋಡು, ಪಹಣಿ, ಖಾತೆ, ಮ್ಯುಟೇಷನ್, ಸ್ಕೆಚ್ಚು, ಸರ್ವೆ ಮುನ್ನರ್ಮೂವತ್ತಾರುಗಳನ್ನು ಹೇಳಿ ಇವೆಲ್ಲವನ್ನೂ ಜೋಡಿಸಿಕೊಂಡು ಬನ್ನಿ ಎಂದರಂತೆ. ಸರಿ ಎಂದು ಮನೆಗೆ ವಾಪಾಸ್ ಬಂದ ತೇಜಸ್ವಿ ಮೂರು ದಿನ ಬಿಟ್ಟು ಮತ್ತೆ ತಹಸಿಲ್ದಾರರ ಬಳಿ ತಮಗೆ ಬೇಕಿದ್ದ ಭೂ ದಾಖಲಾತಿಗಳ ಕುರಿತು ವಿಚಾರಿಸಿದರಂತೆ. “ನಿಮಗೆ ತರಲು ಹೇಳಿದ್ದ ಡಾಕ್ಯುಮೆಂಟ್ಗಳು ಎಲ್ಲಿ?” ಎಂದರಂತೆ ತಹಸಿಲ್ದಾರರು. ಅದಕ್ಕೆ ತೇಜಸ್ವಿ “ನೀವು ಹೇಳಿದ ದಾಖಲಾತಿಗಳ ಪಟ್ಟಿಯನ್ನು ಮನೆಯಲ್ಲಿ ಮಾತನಾಡುತ್ತಾ ಹೇಳಿದೆ, ಅವೆಲ್ಲವೂ ನಿಮ್ಮದೇ ಇದೇ ಆಫೀಸಿನಲ್ಲಿದೆಯಂತೆ ಎಂದು ಹೇಳಿದರು. ಮತ್ತೆ, ಅವೆಲ್ಲವನ್ನು ನಾವೆಲ್ಲಿಂದ ತಂದು ಕೊಡೋದು?” ಎಂದು ಪರೋಕ್ಷವಾಗಿ ಛೇಡಿಸಿದರಂತೆ. ಪರಿಸ್ಥಿತಿಯ ಅರಿವಾಗಿ ತಹಶೀಲ್ದಾರ ಸಂಬಂಧಿಸಿದ ನೌಕರರನ್ನು ಕರೆಯಿಸಿ ತೇಜಸ್ವಿಯವರಿಗೆ ಅಗತ್ಯವಿದ್ದ ದಾಖಲಾತಿಗಳನ್ನು ಒದಗಿಸಿಕೊಟ್ಟರಂತೆ.
ಇತ್ತೀಚೆಗೆ ಭೂಮಿ ದಾಖಲಾತಿಗಳಿಗಾಗಿ ತಾಲ್ಲೂಕು ಕಛೇರಿಗೆ ಭೇಟಿ ನೀಡಿದ್ದೆ. ಪಹಣಿಯಲ್ಲಿ ತಪ್ಪಾಗಿ ನಮೂದಾಗಿದ್ದ ಬೆಳೆಯ ಹೆಸರನ್ನು ಬದಲಾಯಿಸಲು ಕೇಳಿಕೊಂಡಾಗ ಅರ್ಜಿ ಕೊಡಿ, ಪ್ರೂಫ್ ತನ್ನಿ ಇನ್ನೇನೇನೋ ಕಂದಾಯ ಇಲಾಖೆಯ ಭಾಷೆಯಲ್ಲಿನ ಅಪೆಂಡಿಕ್ಸ್(ಅನುಬಂಧ)ಗಳನ್ನು ಹೇಳಿ ಮೊದಲೇ ಗೊಂದಲದಲ್ಲಿದ್ದ ನನ್ನನ್ನು ಗಲಿಬಿಲಿಗೊಳಿಸಿದರು. ಇದ್ದಕ್ಕಿದ್ದಂತೆ ನನಗೆ ತಬರನ ಕಥೆ ನೆನಪಾಯಿತು.
“ಅಲ್ಲಾ ರೀ, ನೀವು ಜಮೀನನ್ನು ನೋಡದೇ ಇಲ್ಲೇ ಕುಳಿತು ಇಂಥದ್ದೇ ಬೆಳೆ ಇದೆಯೆಂದು ಅದು ಹೇಗೆ ನಮೂದಿಸಿದ್ದೀರಿ. ಅಲ್ಲಿ ಕೃಷಿ ಮಾಡುತ್ತಿರುವುದು ನಾವು, ನಮಗೆ ಆ ಭೂಮಿಯಲ್ಲಿ ಏನಿದೆ ಎಂದು ಚೆನ್ನಾಗಿ ಗೊತ್ತಿರುತ್ತದೆ, ಅದಕ್ಕೆ ಪ್ರೂಫ್ ಎಲ್ಲಿಂದ ತರಲಿ, ನೀವೇ ಹೋಗಿ ನೋಡಿಕೊಂಡು ಬಂದು ಬರೆದುಕೊಡಿ” ಎಂದೆ. “ಆಗಲಿ ಸಾರ್, ಯಾವ ಬೆಳೆ ಇದೆ ಹೇಳಿ, ಒಂದು ವಾರ ಬಿಟ್ಟು ಬನ್ನಿ, ಪಹಣಿಯಲ್ಲಿ ನೀವು ಹೇಳಿದ ಬೆಳೆಯನ್ನೇ ನಮೂದು ಮಾಡಿಕೊಡುತ್ತೇವೆ.” ಎಂದರು.
“ಸರಿ, ಥ್ಯಾಂಕ್ಸ್ “ಎಂದು ಹೊರಬರುತ್ತ್ತಿದ್ದರೆ ಆ ಸೆಕ್ಷನ್ನಲ್ಲಿದ್ದವರಲ್ಲಿ ಯಾರೋ “ತೇಜಸ್ವಿ ಹೋಗೋವಾಗ ಈ ಮನುಷ್ಯನ ತಲೆ ಮೇಲೆ ಕೈಯಿಟ್ಟು ಹೋಗಿರಬೇಕು” ಎಂದದ್ದು ಕೇಳಿಸಿತು. ತಿರುಗಿ ಪ್ರಶ್ನಿಸಿದರೆ ಅಹಿತಕರವಾಗುತ್ತದೆ ಎಂದು ಮತ್ತು ನನಗೆ ತೀರಾ ತುರ್ತುಕೆಲಸವಿದ್ದುದರಿಂದ ಹೊರಬಂದೆ. ಹಾಗಾಗಿ ಇದೆಲ್ಲ ನೆನಪಾಯಿತು.
ನಮ್ಮ ವಿನಯಪ್ರಸಾದ್ ವಿಷಾದದಿಂದ ಹೇಳುತ್ತಿರುತ್ತಾರೆ “ ಈ ಸರ್ವೆ ಇಲಾಖೆ ಬೋರ್ಡ್ನೊಳಗೆ ಬ್ರಾಕೆಟ್ನಲ್ಲಿ `ಚಿತ್ರಹಿಂಸೆ’ ಎಂಬ ಸಫಿಕ್ಸ್ ಸೇರಿಸಬೇಕು” ಎಂದು.
ಸರ್ಕಾರೀ ಕಛೇರಿಯಲ್ಲಿನ ಕೆಲಸಗಳಿಗೆ ತನ್ನ ದೈನಂದಿನ ಗೇಯ್ಮೆ ಬಿಟ್ಟು, ಹೇಗ್ಹೇಗೋ ಉಳಿಸಿದ್ದ ನಾಲ್ಕು ಕಾಸು ಅಥವಾ ಯಾರಿಂದಲೋ ಕೈ ಸಾಲ ಮಾಡಿಕೊಂಡಿದ್ದ ಹಣ ಖರ್ಚು ಮಾಡಿಕೊಂದು ಜವಾನನಿಂದ ಹಿಡಿದು ಸಾಹೇಬನವರೆಗೆ ಡೊಗ್ಗು ಸಲಾಮು ಹೊಡೆಯುತ್ತಾ ಅಬ್ಬೇಪಾರಿಯಂತೆ ಅಲೆಯುವುದು ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ನೋಡಿರುವ ಸಂಗತಿಯೇ. “ಒಬ್ಬೊಬ್ಬ ಅಧಿಕಾರಿಯ ಒಂದೊಂದು ಸಣ್ಣ ರುಜುವಿನ ಹಿಂದೆಯೂ ನೂರಾರು ಲೀಟರ್ ಪೆಟ್ರೋಲ್ ವ್ಯಯದ ಒಂದೊಂದು ಮಹಾಭಾರತವೇ ಇರುತ್ತದೆ.’’ ಎನ್ನುತ್ತಾರೆ ತೇಜಸ್ವಿ. ಆ ದಿನದ ಕೆಲಸದಿಂದ ಗಳಿಸಬಹುದಾದ ದುಡಿಮೆಯನ್ನು ಕಳೆದುಕೊಳ್ಳುವುದರ ಜೊತೆಗೆ ಪೇಟೆಗೆ ಬಂದುಹೋದುದರ ಖರ್ಚನ್ನು ಸಹಾ ಈಗಾಗಲೇ ಬಾಗಿಹೋಗಿರುವ ತನ್ನ ಬೆನ್ನಿನ ಮೇಲೆ ಹೇರಿಕೊಳ್ಳುವ ರೈತ ಸರ್ಕಾರೀ ಕಛೇರಿಗಳಲ್ಲಿ ಅನಗ್ಯವಾಗಿ ಹಾಗೂ ಅಸಂಬದ್ಧವಾಗಿ ಘಟಿಸುವ ಶೋಷಣೆಯಿಂದ ತತ್ತರಿಸಿಹೋಗುತ್ತಾನೆ. ತನ್ನ ಮಾತನ್ನು ಯಾರೂ ಆಲಿಸದ ಹಾಗೂ ತನ್ನ ಗೋಳನ್ನು ಯಾರೂ ಪರಿಹರಿಸದ, ತನ್ನ ಸೇವೆ ಮಾಡಲಿಕ್ಕಾಗಿಯೇ ಸಂಬಳ ಪಡೆಯುವ ನೌಕರರ ನಿರ್ಲಜ್ಜ ನಿರ್ಲಕ್ಷ್ಯಕ್ಕೆ ಅಸಹಾಯನಾಗಿ ಕಣ್ಣೀರು ಮಿಡಿಯತ್ತಾ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ನಿಂತಿರುವ ನಮ್ಮೆಲ್ಲರವನೇ ಆದ ತಬರನನ್ನು ಕಲ್ಪಿಸಿಕೊಳ್ಳಿ. ನಮ್ಮೆಲ್ಲ ಅಧಿಕಾರಿ ನೌಕರರು ಗ್ರಾಮೀಣ ರೈತ ಸಮೂಹದಿಂದಲೇ ಬಂದವರಾದರೂ ತಮ್ಮವನನ್ನು ಅವಮಾನಿಸುವ ಪರಿ ಅತ್ಯಂತ ಗಂಭೀರವಾದುದು.
ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿ ರೈತರ ನಿರ್ಧಾರ ತಪ್ಪೆಂದು ವಿ಼ಶ್ಲೇಷಿಸಿ, ” ರೈತನ ಪಡಿಪಾಟಲು ನೋಡಿದ ಸಾಲ ಕೊಟ್ಟವನು ಆತ್ಮಹತ್ಯೆ ಮಾಡಿಕೊಳ್ಳಬೇಕು, ತೆಗೆದುಕೊಂಡವನಲ್ಲ. ನಮ್ಮ ರೈತರ ಸ್ಥಿತಿ ಹಾಗಿದೆ” ಎಂದಿದ್ದರು.
ಒಂದು ದಿನ ರಜೆ ಹಾಕಿ ಮನೆಯಲ್ಲಿದ್ದವನಿಗೆ ನನ್ನಕ್ಕನ ಮಗಳು “ ಗುಂಡಣ್ಣಾ, ಯಾರೋ ಬಂದಿದ್ದಾರೆ ಸ್ಕೂಟರಲ್ಲಿ” ಎಂದಳು. ಅರೆ! ಇಲ್ಲಿ ಸುತ್ತಮುತ್ತಾ ಸ್ಕೂಟರ್ ಇರೋದು ಕೆಲವೇ ಜನರ ಬಳಿಯಲ್ಲಿ. ಯಾರಿರಬಹುದು? ಎಂದು ಹೊರ ಬಂದು ನೋಡಿದರೆ, ಸಾಕ್ಷಾತ್ ತೇಜಸ್ವಿ! ಬೆಚ್ಚಿಬಿದ್ದು “ಬನ್ನಿ ಬನ್ನಿ” ಏನ್ ಇಲ್ಲಿಯವರೆಗೆ? ಬನ್ನಿ ಒಳಗೆ” ಎಂದು ಗಾಬರಿಯಿಂದ ಕರೆದೆ. ಸ್ಕೂಟರಿನ ಹ್ಯಾಂಡಲ್ ಹಿಡಿದೇ ಕಾಲೆರಡನ್ನೂ ಸೀಟಿನ ಎರಡೂ ಬದಿಗೆ ಚಾಚಿ ನೆಲಕ್ಕೆ ಒತ್ತುಕೊಟ್ಟು ನಿಂತಿದ್ದ ತೇಜಸ್ವಿಯವರ ಮುಖ ದೂರ್ವಾಸನದಂತಿತ್ತು. ಏನೋ ಯಡವಟ್ಟಾಗಿದೆ ಎಂದುಕೊಂಡು ಅಲರ್ಟ್ ಆದೆ. ಹೊಸಬರನ್ನು ನೋಡಿ ಬಿಟ್ಟೂಬಿಡದೇ ಬೊಗಳುತ್ತಿದ್ದ ನಾಯಿಗಳಿಗೆ ಜೋರು ಮಾಡಿ ಸುಮ್ಮನಿರಿಸಬೇಕಾದರೆ ಸಾಕುಸಾಕಾಯಿತು. ತೇಜಸ್ವಿಯವರಿಗೆ ಒತ್ತಾಯ ಮಾಡಿ ಮನೆಯೊಳಗೆ ಕರೆದು ಕೂರಿಸಿದೆ.
“ನಿನ್ನ ಫೋನೆಲ್ಲಿ ಹಾಳಾಗಿದೆ?” ಎಂದರು. “ಸರ್ ಲ್ಯಾಂಡ್ಲೈನ್ ಹಾಳಾಗಿ ಎರಡು ದಿನ ಆಯ್ತು. ಅರ್ಧ ಗಂಟೆ ನೆಟ್ಟಗಿರುತ್ತೆ ಮತ್ತೆ ಏನೋ ಖಾಯಿಲೆ ಬಂದು ಅಡ್ಡ ಬೀಳುತ್ತೆ.” ಎಂದೆ.
ಈ ದೂರವಾಣಿಯವರು ಒಂದಲ್ಲಾ ಒಂದು ಕಾರಣಕ್ಕೆ ರಸ್ತೆ ಬದಿ ಅಗೆಯುವುದು, ಖಾಸಗಿಯವರು ಕೇಬಲ್ ಹಾಕುವುದು, ಅದೇ ಚೆರಂಡಿಯನ್ನು ರಸ್ತೆ ರಿಪೇರಿಯವರು ವಿನಾ ಕಾರಣ ಉದ್ಯೋಗ ಖಾತರಿಗಾಗಿ ಪ್ರತೀ ವರುಷವೂ ಕೆರೆಯುವುದು, ಪಂಚಾಯತಿಯವರು ನೀರಿನ ಪೈಪ್ ಹಾಕಲು ಬಗೆಯುವುದು, ಅವಾಂತರ ಒಂದೊಂದಲ್ಲ. ಕೇಳಿದರೆ,“ಸಾರ್, ನಾವೂ ಬದುಕೋದು ಬೇಡವಾ ಸಾರ್, ಶಾಶ್ವತ ಪರಿಹಾರ ಮಾಡಿದರೆ ಮುಂದಿನ ವರ್ಷ ಹೊಸಾ ಕೆಲಸವನ್ನ ಎಲ್ಲಿ ಅಂತ ಹುಡುಕೋದು?” ಅಂತಾರೆ. ಜೊತೆಗೆ ಅವರ ಪರ ವಕೀಲಿಕೆಗೆ ಗುತ್ತಿಗೆದಾರನ ನೆಂಟ ಬಾವಂದಿರು. ಇಲಾಖೆಗಳ ನಡುವೆ ಸಮನ್ವಯವಿಲ್ಲದೇ ಆಗುವ ಎಡವಟ್ಟುಗಳಿಗೆ `ಕೃಷ್ಣೇಗೌಡನ ಆನೆ’ಯೇ ಸೂಕ್ತ ಉದಾಹರಣೆ.
“ನಿನಗೂ ನಿನ್ನ ಫೋನ್ಗೂ ಸರೀಯಾಗಿದೆ. ಏನ್ ಮಾಡ್ತಿದ್ದೀಯ? ಅದೇನಯ್ಯ ಮೂಡಿಗೆರೆ ಟೌನ್ನವರಿಗೆ ಕಸ ಎಸೆಯಲು ಬೇರೆಲ್ಲೂ ಜಾಗನೇ ಸಿಗಲಿಲ್ವಾ? ನನ್ನ
ಮನೆ ಹಿಂದೆ ಈಚಲ ಹರದಲ್ಲಿ ಕಸ ಎಸೀಲಿಕ್ಕೆ ಸಿದ್ಧತೆ ಮಾಡಿದ್ದ್ದಾರಲ್ಲಯ್ಯ. ರೈತರು ಬೆಳೆ ಬೆಳೆದು ಜನ ತಿನ್ನಲೆಂದು ಪೇಟೆಗೆ ಕಳಿಸಿದರೆ, ಆ ಪೇಟೆಯವರು ಅದನ್ನು ತಿಂದು ಕಸ ಮಾಡಿ, ಊರಿನ ಎಲ್ಲಾ ಕಸವನ್ನೂ ಸೇರಿಸಿ ರೈತನ ಹಳ್ಳಿಗೆ ವಾಪಾಸ್ ಕಳಿಸ್ತಿದಾರಲ್ಲ, ಎಂಥಾ ಪ್ರತ್ಯುಪಕಾರಾನ್ರೀ ಇದು. ಇವರಿಗೇನು ಹೇಳುವವರು ಕೇಳುವವರು ಯಾರೂ ಇಲ್ವಾ? ಇನ್ನು ಸುಮ್ನೆ ಕೂತರೆ ಇವರು ಏನ್ ಬೇಕಾದ್ರೂ ಮಾಡ್ತಾರೆ. ನಡಿ ಹೊರಡು, ನೋಡುವಂತೆ’’ ಎಂದು ಕರೆದರು. ಲಗುಬಗೆಯಿಂದ ಸಿದ್ಧನಾಗಿ ಸ್ಕೂಟರ್ ಸ್ಟಾರ್ಟ್ ಮಾಡಿದೆ. ಮುಖ್ಯ ರಸ್ತೆಗೆ ಬಂದ ಕೂಡಲೇ ಕೆಂಜಿಗೆ ಕಡೆಗೆ ಸ್ಕೂಟರ್ ತಿರುಗಿಸಿದರು. “ಅರೇ ನಿಮ್ ಮನೆ ಕಡೆಗೆ ಹೋಗಬೇಕಲ್ವಾ?” ಎಂದೆ. “ಮತ್ತೆ ಹೋಗೋಣ, ಹೀಗೆ ದೇವರಮನೆ ಗುಡ್ಡಕ್ಕೆ ಹೋಗಿ ಬರೋಣ. ನಡೀ, ಪೆಟ್ರೋಲ್ ಇದೆಯೋ ಹೇಗೆ?” ಎಂದರು. ಕೆಂಜಿಗೆ, ಸಬ್ಬೇನಹಳ್ಳಿ, ಬೆಟ್ಟಗೆರೆ, ಗುತ್ತಿ ಮಾರ್ಗವಾಗಿ ದೇವರ ಮನೆ ಬೆಟ್ಟವನ್ನೇರಿದ ನಮಗೆ ನಿರಂತರವಾಗಿ ಎದುರಾದದ್ದು ಅಲೆಗಳೋಪಾದಿಯ ಚಾರ್ಮಾಡಿ ಪರ್ವತಗಳ ಸಾಲು.
ನೂರಾರು ಮೈಲು ದೂರದಿಂದ ಕರಾವಳಿಯ ಕುಳಿರ್ಗಾಳಿ ನಿರಂತರವಾಗಿ ಗಾಳಿಗಂಡಿ ಮಾರ್ಗವಾಗಿ ರಭಸವಾಗಿ ತೂರಿಬಂದು ದೇವರಮನೆ ಬಳಿ ಜ್ಜುಮ್ಮನೆ ಆಗಸಕ್ಕೆ ಚಿಮ್ಮಿ ನಿರ್ಮಿಸುವ ವಿಶಿಷ್ಟ ಅನುಭೂತಿಯನ್ನು ಬೆಟ್ಟದ ತುದಿಯೇರಿ ಅನುಭವಿಸಿಯೇ ತಿಳಿಯಬೇಕು. ಕಣ್ಣೆದುರಿನ ಕಣಿವೆ, ಕಮರಿಗಳು ಇದ್ದಕ್ಕಿದ್ದಂತೆ ಅಂತರ್ದಾನವಾಗುವುದು, ನೋಡ ನೋಡುತ್ತಿದ್ದಂತೆ ನಿರಭ್ರವಾಗಿ ಗೋಚರಿಸಿ ಶೋಲಾ ಕಾಡುಗಳ ದರ್ಶನ ಮಾಡಿಸುವ ಬಗೆ ರಮಣೀಯವಾದುದು. ತಲೆ ಎತ್ತಿದರೆ ಎಡಕ್ಕೆ ಒಲೆಕಲ್ಲುಗುಡ್ಡ, ಬಲಕ್ಕೆ ಕಾಟಿಹರ, ಮಧ್ಯದ ಕಣಿವೆ ನಡುವಿನ ಕಾರಿಕೂಲ್, ಅದರ ಬುಡದಲ್ಲಿರುವ ಅಡ್ಡಮನೇರಹಿತ್ಲು, ಹಿಂದಿರುಗಿ ನೋಡಿದರೆ ಬಾರಿಮಲೆ, ಅದರಾಚೆಯ ಬಾಂಜಾರ್ಮಲೆ ಇತ್ತ ತಿರುಗಿದರೆ ಅನಂತವಾಗಿ ಹರಡಿ ದಿಗಂತದಲ್ಲಿ ಶಿರಾಡಿಯೊಂದಿಗೆ ಲೀನವಾಗುವ ಭೈರಾಪುರ ಅರಣ್ಯ ಪ್ರದೇಶ.
ಕಾಡು, ಪ್ರಕೃತಿ ಮಾನವನ ಈವರೆಗಿನ ಬದುಕಿನ ಇತಿಹಾಸದಲ್ಲಿ ಹೇಗೆ ಹಂತಹಂತವಾಗಿ ಅನಾವರಣಗೊಂಡಿದೆಯೆಂದರೆ, ಗುರುವಾಗಿ, ತಾಯಿಯಾಗಿ, ತಂದೆಯಾಗಿ ಆಸರೆ ನೀಡಿದ ಪ್ರಕೃತಿ ಕ್ರಮೇಣ ಮನುಷ್ಯನ ಅಗತ್ಯಗಳ ಪೂರೈಕೆಗಾಗಿ ಹಲವಾರು ತ್ಯಾಗಗಳನ್ನು ಮಾಡಬೇಕಾಯ್ತು. ಆ ಸಂದರ್ಭದಲ್ಲಿ ನಿಸರ್ಗದೊಡನೆ ಹೋರಾಟವನ್ನು, ತಿಕ್ಕಾಟವನ್ನು ಹಲವಾರು ಬಾರಿ ಯುದ್ಧವನ್ನೂ ಮಾಡಬೇಕಾಯ್ತು. ನಮ್ಮನ್ನು ಸಲಹಿ, ನಮ್ಮೆಲ್ಲಾ ಅನಾಚಾರಗಳನ್ನು ಸಹಿಸಿದ ಭೂಮಿಯ ಇವತ್ತಿನ ದಾರುಣ ಪರಿಸ್ಥಿತಿಯು, ನಾವು ಮಾಡಿಕೊಂಡಿರುವ ಆತ್ಮವಂಚನೆಯನ್ನು, ನಮ್ಮೆಲ್ಲರ ಭವಿಷ್ಯದ ದುರಂತವನ್ನು ತೆರೆದಿಡುತ್ತದೆ. “ನಾವೀ ಪರಿಸರ ರಕ್ಷಣೆಗೆ ತವಕ ಪಡ್ತಿರೋ ಹಾಗೇ ನಮ್ಮ, ಬ್ರಹ್ಮಾಂಡದ ಅನೇಕ ಅದೃಷ್ಯ ಶಕ್ತಿಗಳೂ ತಮ್ಮದೇ ರೀತಿಯಲ್ಲಿ ಸಹಜವಾಗಿ ಕೆಲಸ ಮಾಡ್ತಿವೆ ಅನ್ನೋದನ್ನ ಮರೆಯಬಾರದು. ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರ ಸ್ಮಶಾನಕ್ಕಿಂತಲೂ ಭೀಕರ. ಒಂದು ಕಾಲದಲ್ಲಿ ಮಾನವರೆಲ್ಲಾ ಸಮಾನರೆಂದು ಮಾರ್ಕ್ಸ್ವಾದ ಹೇಳ್ತಿತ್ತು. ಈಗ ಇನ್ನೂ ಮುಂದೆ ಹೋಗಿ ಮನುಷ್ಯ ಮಾತ್ರವಲ್ಲ ಪಶು, ಪಕ್ಷಿ, ಕ್ರಿಮಿ-ಕೀಟ ಎಲ್ಲರೂ ಸಮಾನರು ಎಂಬ ವಾದ ಬಂದಿದೆ. ಅದೇ ಮಾನವತೆಯ ಬುನಾದಿಯಾಗಬೇಕಾಗಿರುವ ಪರಿಸರವಾದ.’’ ಎನ್ನುತ್ತಾರೆ ತೇಜಸ್ವಿ.
ಯಾವುದೇ ಅರಣ್ಯ ಪ್ರದೇಶ ಇಡೀ ವಿಶ್ವದ ಆಸ್ತಿ. ಬೆಟ್ಟ-ಗುಡ್ಡ , ಗಿಡ-ಮರಗಳಲ್ಲಿ, ನದಿ-ತೊರೆಗಳಲ್ಲಿ ದೇವರನ್ನು ಕಾಣುವುದೆಂದರೆ ಯಾವುದೋ ಒಂದು ಮರ, ಒಂದು ಕಲ್ಲಿನ ತುಂಡನ್ನು ಗುಡಿಯೊಳಗಿರಿಸಿ, ಕುಂಕುಮ ಹಚ್ಚಿ, ಗಂಟೆ ಬಾರಿಸಿ ಪೂಜಿಸುವುದಲ್ಲ. ನಿಸರ್ಗವನ್ನು ಗೌರವಿಸಬೇಕು ಎಂಬುದಕ್ಕೆ ಅದು ಸಂಕೇತ ಮಾತ್ರ. ಅನಗತ್ಯ ರಸ್ತೆಗಳು, ವಿವೇಚನಾರಹಿತ ಜಲವಿದ್ಯುತ್ ಯೋಜನೆಗಳು, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಖಾಸಗಿಯವರ ಬಂಡವಾಳ ಹೂಡಿಕೆಗಳು. ಆ ಮೂಲಕ ಸಮಸ್ತ ಜೀವಸಂಕುಲದ ಆಸ್ತಿಯನ್ನು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿರುವುದು ಅಕ್ಷಮ್ಯ. ಅರಣ್ಯವನ್ನು ಏಟಿಎಮ್ ಎಂದು ಭಾವಿಸಿ ದಿನನಿತ್ಯ ನಿರಂತರವಾಗಿ ಗೊತ್ತುಗುರಿಯಿಲ್ಲದೇ ದೌರ್ಜನ್ಯಕ್ಕೆ ಗುರಿಪಡಿಸಲಾಗುತ್ತಿದೆ. ರಸ್ತೆ, ಜಲಾಶಯಗಳು, ವಿದ್ಯುತ್ ಯೋಜನೆಗಳು ನಮಗೆ ಬೇಡವೆಂದಲ್ಲ. ಇವುಗಳು ನಿರ್ಮಾಣವಾಗುವ ಸಮಯದಲ್ಲಿ ಇದಕ್ಕಾಗಿ ನಿಸರ್ಗ ಮಾಡಬೇಕಾಗಿ ಬರುವ ಅಪಾರ ಪ್ರಮಾಣದ ತ್ಯಾಗವನ್ನು ಕಂಡರೆ ಎಂಥವರಿಗೂ ಆಘಾತವಾಗುತ್ತದೆ. ಇದಕ್ಕೆಲ್ಲ ಇರುವ ಒಂದೇ ಪರಿಹಾರವೆಂದರೆ ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಸರಳವಾಗಿ ವಿವೇಕದಿಂದ ಬದುಕುವುದು.
ಹತ್ತಾರು ನದಿಗಳಿಗೆ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳು ಪ್ರಪಂಚದ ಜೀವವೈವಿಧ್ಯದ ಹಾಟ್ಸ್ಪಾಟ್ ಆಗಿದೆ. ಇಲ್ಲಿರುವ ಇರುವೆ, ಗೆದ್ದಲು, ಹುಲ್ಲು, ಪೊಟರೆಯೊಳಗಿನ ಹಕ್ಕಿ, ಧರೆಗುರುಳಿದ ಮರ, ಕಲ್ಲು ಇವೆಲ್ಲವಕ್ಕೂ ಅವುಗಳದೇ ಆದ ಜೈವಿಕ ಮಹತ್ವ ಇದೆ. ನಮ್ಮ ಯಾವುದೇ ರೀತಿಯ ಮದ್ಯ ಪ್ರವೇಶವು ದೊಡ್ಡ ಜೈವಿಕ ದುರಂತಕ್ಕೆ ಕಾರಣವಾಗುತ್ತದೆ. ಅಭಿವೃದ್ಧಿಯೆಂದರೆ ಏನು? ಕಾಡಿನೊಳಗೆ ರಸ್ತೆ ಮಾಡಿಸಿ ಗುತ್ತಿಗೆದಾರರಿಗೆ ಕೆಲಸ ಒದಗಿಸುವುದಾ? ಪರ್ವತದ ಒಡಲು ಬಗೆದು ಖನಿಜ ಹೊರತೆಗೆಯುವುದಾ?, ಜೀವನದಿಗಳನ್ನು ಅಡ್ಡಗಟ್ಟಿ, ತಿರುವಿ, ಕಾಡು ಮುಳುಗಿಸಿ ಖಾಸಗಿಯವರಿಗೆ ಬಂಡವಾಳ ಹೂಡಲು ಅನುಕೂಲ ಮಾಡಿಕೊಡುವುದಾ?, ಕಾಡಿನಂಚಿನಲ್ಲಿರುವ ಒತ್ತುವರಿ ಕೃಷಿಭೂಮಿಗೆ ವಾಣಿಜ್ಯ ಬೆಲೆ ದೊರಕಿಸಿಕೊಡುವುದಾ? ಎಲ್ಲಿ ಪುಕ್ಕಟೆ ಸಂಪನ್ಮೂಲ ಹಾಗೂ ಹಣ ಓಡಾಡುತ್ತದೆಯೋ ಅಲ್ಲೆಲ್ಲ ಪ್ರಕೃತಿಯ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತದೆ. ಸೀಮಿತ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಉಳಿಸಿಕೊಂಡೇ ಹೆಜ್ಜೆ ಮುಂದಿಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದಿದೆ. ಅಲ್ಲಲ್ಲಿ ಉಳಿದಿರುವ ಅಲ್ಪಸ್ವಲ್ಪ ಕಾಡನ್ನು ವಿಚಲಿತಗೊಳಿಸದೇ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸದಿರುವುದೇ ನಮ್ಮ ದೌರ್ಬಲ್ಯ. ಅರಣ್ಯ ಮತ್ತು ಪರಿಸರವೆಂದರೆ ಮರಮುಟ್ಟು ನೀಡುವ ಅಕ್ಷಯ ಖಜಾನೆ ಎಂದುಕೊಂಡಿರುವ ನಾಯಕರು, ಬಂಜರು ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ, ಸಾಗುವಾನಿ ಗಿಡಗಳನ್ನು ನೆಡುವದರಿಂದಲೇ ಅರಣ್ಯ ಸೃಷ್ಟಿಮಾಡಿದೆವೆಂದು ಬೀಗುವ ಅಧಿಕಾರಿಗಳು ಸ್ವಲ್ಪ ಪರಿಸರ ಅದ್ಯಯನ ಮಾಡುವುದು ಒಳ್ಳೆಯದು. ಕಲ್ಲು ಕೀಳುವುದು, ಮರ ಉರುಳಿಸುವುದು, ಕಾಡು ಮುಳುಗಿಸುವುದು, ಪ್ರವಾಸಿಗರಿಂದ ದುಡ್ಡು ಪೀಕುವುದು, ರೈಲು ಹಳಿ ಹಾಕುವುದು, ಪೈಪ್ಲೈನ್ ಅಳವಡಿಸುವುದು, ವಿದ್ಯುತ್ ಸಾಗಣೆಗೆ ಲೈನ್ ಎಳೆಯುವುದು ಮಾತ್ರ ಅಭಿವೃದ್ಧಿಯಲ್ಲವೆಂದು ಅರಿಯುವುದು ಅಗತ್ಯವಾಗಿದೆ.
“ನೋಡೊದನ್ನೆಲ್ಲಾ ಈಗಲೇ ನೋಡಿಕೊಂಡು ಬಿಡಯ್ಯ, ಎಲ್ಲವನ್ನೂ ತಿಂದು ಹಾಕ್ತಿದ್ದಾರೆ, ನಾವು ಈಗ ಬಂದ ದಾರಿ ನೋಡಿದೆಯಾ? ಇಂತ ದುರ್ಗಮ ಪ್ರದೇಶಕ್ಕೆ ಟಾರು ರಸ್ತೆ ಬೇಕಾ? ನಿಜವಾಗಿಯೂ ಸಾಹಸ ಮಾಡಬೇಕು ಎಂದು ಬರುವವನಿಗೆ ಗಮ್ಯ ಸ್ಥಾನದವರೆಗೂ ರಸ್ತೆ ಯಾಕಯ್ಯ ಮಾಡಿಕೊಡಬೇಕು? ಇಲ್ಲಿ ಸುರಿಯುವ ಅಡಿಗಟ್ಟಲೆ ಮಳೆಗೆ ಇವರು ಕಡಿದಿರುವ ರಸ್ತೆ, ಚರಂಡಿಗಳೆಲ್ಲಾ ಈ ಮಳೆಗಾಲ ಮುಗಿಯುವ ಹೊತ್ತಿಗೆ ದೊಡ್ಡ ಕೊರಕಲುಗಳಾಗಿರುತ್ತದೆ. ಅಲ್ಲಿ ನೋಡು, ಏನು ಬಲವಾಗಿ ಗಾಳಿ ಬೀಸುತ್ತಿದೆ. ನಮಗೆ ನೆಟ್ಟಗೆ ನಿಲ್ಲಲೂ ಸಹ ಆಗ್ತಿಲ್ಲಾ. ಈ ಗುರುಗಿ ಗಿಡದ ಕುಶನ್ ಇಲ್ಲದೇ ಹೋಗಿದ್ದಲ್ಲಿ ಈ ಮಳೆಗಾಳಿಗೆ ಈ ಗುಡ್ಡಗಳೂ ಸಹ ರ್ತಿರಲಿಲ್ಲ. ನೆಲ ಇರೋದೆ ಅಗೆಯೋಕೆ ಎಂದುಕೊಂಡಿದ್ದ್ದಾರಲ್ಲ!. ಯಾರೋ ಕಂಟ್ರಾಕ್ಟರ್ಗೆ ಕೆಲಸ ಕೊಡೋದಿಕ್ಕಾಗಿ ಇಂತಹ ಸೂಕ್ಷö್ಮ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮಾಡ್ತಿದ್ದಾರೆ. ದೇವಾಲಯಕ್ಕೆ ಹೋಗುವವರಿಗೆ ದೇವರ ಬಗ್ಗೆ ಶ್ರದ್ಧೆ ಇದ್ದಲ್ಲಿ ನಾಲ್ಕು ಹೆಜ್ಜೆ ನೆಡೆದೇ ಹೋಗಲಿ. ದೇವಾಲಯದ ಹೆಬ್ಬಾಗಿಲವರೆಗೂ ಕಾರ್ನಲ್ಲೇ ಬರಬೇಕೆಂದು ಎಲ್ಲೋ ಅಲ್ಪಸ್ವಲ್ಪ ಉಳಿದಿರೋ ಈ ಕಾಡನ್ನೆಲ್ಲಾ ನುಂಗಿ ಹಾಕ್ತಿದ್ದರಲ್ಲಾ” ಎಂದು ವಿಷಾದಿಸಿದ್ದರು.
ಕಣ್ಣೆದುರೇ ಇದೆಲ್ಲಾ ಅನಾಚಾರ ನಡೆಯುತ್ತಿದ್ದರೂ ಏನೂ ಮಾಡಲಿಕ್ಕಾಗುತ್ತಿಲ್ಲವಲ್ಲ ಎಂಬ ಹತಾಶೆ ನಮ್ಮೆಲ್ಲರನ್ನೂ ಕಾಡುತ್ತಿತ್ತು. ಹಿಂದಿರುಗಿ ಬರುವಾಗ ತೇಜಸ್ವಿಯವರ ಬಹುಕಾಲದ ಗೆಳೆಯರಾದ ಗುತ್ತಿ ಭೈರೆಗೌಡರ ಮನೆಗೆ ಭೇಟಿ ನೀಡಿದೆವು. ಹೆಸಗೋಡು, ಪಟ್ಟದೂರು, ಬಿಳ್ಳೂರು, ದಾರದಹಳ್ಳಿ ಮಾರ್ಗವಾಗಿ ತೇಜಸ್ವಿಯವರ ಮನೆ ತಲುಪಿದೆವು. ಆಗಾಗಲೇ ಬೇಲಿ ಬದಿ ಕಸ ಸುರಿಯಲು ಮಾಡಿದ್ದ ಸಿದ್ಧತೆಯನ್ನು ತೋರಿಸಿ “ನೋಡಯ್ಯಾ ಮೂಡಿಗೆರೆಯವರು ಅವರ ಮನೆಯಂಗಳದ ಕಸ ತಂದು ನನ್ನ ಮನೆ ಬಳಿ ಸುರಿಯಲು ಮಾಡಿರೋ ಪ್ಲಾನ್ನ’’ ಎಂದು ಸಿಟ್ಟು ಮಾಡಿಕೊಂಡರು.
ಆ ನಂತರ ಹಾಸನದ ಮಾಲಿನ್ಯ ನಿಯಂತ್ರಣ ಮಂಡಳಿಯ ಶರತ್ಚಂದ್ರರನ್ನು ದೂರವಾಣಿ ಮೂಲಕ ಮಾತನಾಡಿಸಿ ಪರಿಸ್ಥಿತಿ ವಿವರಿಸಿದರು. ಕೆಲ ದಿನಗಳ ನಂತರ ಸ್ಥಳೀಯರ ಸಹಕಾರವನ್ನು ಪಡೆದು ಕಡೆಗೂ ಕಸ ವಿಲೇವಾರಿ ಘಟಕ ಅಲ್ಲಿ ತಲೆ ಎತ್ತದಂತೆ ಮಾಡಿದರು.
ಎಲ್ಲಾ ಊರಿನಲ್ಲಿದ್ದಂತೆ ಮೂಡಿಗೆರೆಯಲ್ಲೂ ಸಹ ಒಂದು ವಿದ್ಯಮಾನ ನಡೆಯುತ್ತೆ. ಅಂಗಡಿ, ಬಾರ್, ಆಸ್ಪತ್ರೆ ಮತ್ತು ಮನೆಯ ಕಸವನ್ನು ಚೀಲದಲ್ಲಿ ತುಂಬಿಸಿ ವಾಹನದಲ್ಲಿ ತಂದು ಊರಾಚೆಯಲ್ಲಿ ಜನರು ತಿರುಗಾಡದ ಸಮಯ ನೋಡಿ ಯಾರದ್ದಾದರೂ ಜಾಗದಲ್ಲಿ ಸುರಿದು ಏನೂ ನಡೆದಿಲ್ಲವೆಂಬಂತೆ ವಾಹನದೊಳಗೆ ಸೇರಿಕೊಂಡು ಪರಾರಿಯಾಗುವ ಜನರಿದ್ದಾರೆ. ತೇಜಸ್ವಿಯವರ ತೋಟದ ಬೇಲಿಯೊಳಗೂ ಯಾರೋ ಇಂತದ್ದೆ ಕೆಲಸ ಮಾಡಿಹೋಗಿದ್ದರು. ತೇಜಸ್ವಿಯವರು ತೋಟದ ಕೆಲಸದ ಜನರನ್ನು ಕರೆಸಿ, ಆ ಕಸದ ರಾಶಿಯನ್ನು ಕೆದಕಿಸಿ, ಕಸದ ಮೂಲವನ್ನು ಗುರುತಿಸಿ, ಪತ್ತೆ ಮಾಡಿ, ಅದೇ ಬಾರ್ನವರನ್ನು ಕರೆಸಿ, ಅವರಿಂದಲೇ ಕಸ ಎತ್ತಿಸಿದ್ದರು. ನಮ್ಮೆಲ್ಲರಿಗೂ ಇದೊಂದು ಮಾದರಿಯಾಗಬಲ್ಲದು.
ಹಲವಾರು ಬಾರಿ ಹೋದಂತೆ ನಾನು ಗೆಳೆಯರನ್ನೆಲ್ಲ ಕರೆದುಕೊಂಡು ಚಾರ್ಮಾಡಿ ಘಾಟಿಗೆ ಟ್ರ್ರೆಕ್ಕಿಂಗ್ ಹೋಗಿದ್ದೆ. ಅರಣ್ಯ ಇಲಾಖೆಯ ಗಾರ್ಡ್ ಒಬ್ಬರನ್ನು ಜೊತೆಗೆ ಕರೆದುಕೊಂಡು ಹೋಗಿದ್ದೆವು. ಹೆಜ್ಜೆ ಹಾಕಿದೆಡೆಯಲ್ಲೆಲ್ಲಾ ಜಿಗಣೆಗಳು!. ಪ್ರತಿ ಹೆಜ್ಜೆಗೆ ಎಂಟು-ಹತ್ತು ಜಿಗಣೆಗಳು ಸೊಂಡಿಲೆತ್ತಿಕೊಂಡು ನಿಮಿರಿ ನಿಲ್ಲುತ್ತಿದ್ದವು. ಜಿಗಣೆಯ ಹಾವಳಿಯ ಆ ಪ್ರದೇಶವನ್ನು ಓಡಿಯೇ ದಾಟಿದ ನಾವು ಅರಣ್ಯದ ಮಧ್ಯ ಭಾಗಕ್ಕೆ ಬಂದಿದ್ದೆವು. ಎತ್ತ ನೋಡಿದರೂ ಸುತ್ತಲೂ ಗೋಡೆ ಕಟ್ಟಿದ್ದಂತೆ ಎತ್ತರೆತ್ತರವಾದ ಪರ್ವತಗಳ ಬುಡಗಳು. ಹತ್ತಾರು ಬೆಟ್ಟಗಳ ಬುಡದಲ್ಲಿ ಹರಿಯುವ ಸೋಮನಹಳ್ಳದ ಬಂಡೆಗಲ್ಲುಗಳ ಮೇಲೆಯೇ ಕುಳಿತು ಮಧ್ಯಾಹ್ನದ ಊಟವನ್ನು ಮುಗಿಸಿದೆವು.
ನಮ್ಮೊಡನೆ ರೂಟ್ ಗೈಡ್ ಆಗಿ ಬಂದಿದ್ದ ಗುತ್ತಿ ಮೂಲದ ಗಣಪತಿ ಆಚಾರಿ ಅಲಿಯಾಸ್ `ಮೀಸೆ’ ಕಾಡು, ಕಾಡಿನ ಪ್ರಾಣಿ ಮುಂತಾದವುಗಳ ಕುರಿತು ಸಾಕಷ್ಟು ಮಾಹಿತಿ ನೀಡಿದರು. ತನ್ನ ಕತ್ತಿಯಂಥ ಮೀಸೆಯ ಮೇಲೆ ಕೈ ಆಡಿಸದೇ ಒಂದು ವಾಕ್ಯವನ್ನೂ ಆಡದ ಈ ಮನುಷ್ಯ ಆನೆಗಳೊಂದಿಗೆ ಅವುಗಳದ್ದೇ ಭಾಷೆಯಲ್ಲಿ ಮಾತನಾಡಬಲ್ಲೆ ಎಂದು ಹೇಳಿಕೊಳ್ಳುತ್ತಾರೆ. ಹೆಸರಾಂತ ಶಿಕಾರಿಯಾಗಿದ್ದ ಗಣಪತಿ ಆಚಾರಿಯವರನ್ನು ಯಾವುದಾದರೂ ಪ್ರಾಣಿ ಪಕ್ಷಿಗಳ ಕುರಿತು ಹೇಗಿರುತ್ತೆ ? ಎಷ್ಟು ದೊಡ್ಡದಿರುತ್ತೆ? ಎಂದು ಪ್ರಶ್ನಿಸಿದರೆ ಸುಮಾರು ಎಂಟರಿಂದ ಹತ್ತು ಕೆ.ಜಿ. ಮಾಂಸ ಇರುತ್ತೆ ಎಂದೇ ಉತ್ತರಿಸುತ್ತಿದ್ದರು! ಶಿಕಾರಿಯವರ ಮಾನದಂಡ ಪ್ರಾಣಿಗಳ ಮಾಂಸದ ತೂಕದಿಂದಲೇ ನಿರ್ಧಾರವಾಗುವಂತಹದ್ದು. ಎಷ್ಟು ವೇಗವಾಗಿ ಓಡುತ್ತವೆ ಅಥವಾ ನೆಗೆಯುತ್ತವೆ ಎಂದು ಕೇಳಿದರೆ ಹುಷಾರಿನವನಾದರೆ ಕೋವಿಗೆ ಬೇಗ ಬೇಗ ತೋಟಾ ತೆಗೆದು ಹಾಕಿದರೆ ಗುಂಪಿನಲ್ಲಿ ಮೂರು ನಾಲ್ಕನ್ನು ಹೊಡೆೆದು ಉರುಳಿಸಬಹುದೆಂದು ವಿವರಣೆ ಕೊಡುತ್ತಿದ್ದರು. ಪ್ರಾಣಿಗಳ ದನಿ ಅನುಕರಿಸಿ ಕರೆದು ಗುಂಡು ಹೊಡೆಯುವ ಬಗೆಯನ್ನು ವಿವರಿಸಿ ಹೇಳಿದರು. ಸರಿಯಾದ ಗೈಡೇ ಸಿಕ್ಕಿದರಲ್ಲಪ್ಪ್ಪಾ ಎಂದುಕೊಂಡು ಮುಂದುವರೆದೆವು.
ಈವರೆಗೆ ಪರ್ವತವಿಳಿದ ನಂತರ ಇನ್ನು ಮುಂದೆ ಮೇಲೇರುವ ಹಂತ. ಅಂತಹ ದುಗಮ ಕಾಡಿನ ನಡುವೆಯೂ ಬೃಹತ್ ಮರಗಳನ್ನು ಉರುಳಿಸಿ, ಮರದ ಕೊಂಬೆಗಳನ್ನೇ ಉಪಯೋಗಿಸಿ ದಡಾಯಿ ಹಾಕಿ, ಅದರ ಮೇಲೆ ದಿಮ್ಮಿಯೇರಿಸಿ ಗರಗಸದ ಸಹಾಯದಿಂದ ಕೈಗಳಿಂದಲೇ ಮರಗಳನ್ನು ಹಲಗೆ, ಪಕಾಸು, ಸೈಜ್ಗಳನ್ನಾಗಿ ಕುಯ್ದ ದೃಶ್ಯಗಳನ್ನು ನೋಡಿದೆವು. ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸುವಾಗ ಕೆಳಗಿನ ಪ್ರಪಾತವನ್ನು ನೋಡಿದರೆ ಎಂತಹ ದಟ್ಟ ಕಾಡು! ಎಂದು ವಿಸ್ಮಿತರಾಗುತ್ತೇವೆ. ಕೆಳಗಿಳಿದು ಸೂಕ್ಷ್ಮವಾಗಿ ನಿರುಕಿಸಿದರೆ ನೂರಾರು ಬುಡ ಕಡಿದ ಮರಗಳ ಕುಂಬಾದ ಬಡ್ಡೆಗಳನ್ನು ನೋಡಬಹುದು. . ಜೊತೆಯಲ್ಲಿದ್ದ ಗಾರ್ಡ್ ಅನ್ನು ಈ ಬಗ್ಗೆ ವಿಚಾರಿಸಿದರೆ “ಇಷ್ಟೆಲ್ಲಾ ಅರಣ್ಯಕ್ಕೆ ನಾವಿಬ್ಬರೇ ಕಾವಲು ಸರ್. ಇವತ್ತು ಇಲ್ಲಿ ಬೀಟ್ ಮಾಡುತ್ತಿದ್ದರೆ ರಸ್ತೆಯ ಅತ್ತ ಕಡೆ ಹತ್ತು ಮರ ಮಾಯವಾಗಿರುತ್ತೆ. ನಮ್ಮ ಕಷ್ಟಾನ್ನೂ ಅರ್ಥ ಮಾಡಿಕೊಳ್ಳಿ” ಎಂದರು. ಗುಡ್ಡವೇರಿ ಏರಿ ಬಸವಳಿದಿದ್ದೆವು. ಇಲ್ಲೇ ಅರ್ಧ ಗಂಟೆ, ಮುಕ್ಕಾಲು ಗಂಟೆ ಎಂಬ ಗಾರ್ಡ್ ಮಾತು ನಂಬಿ ಸಂಜೆ ನಾಲ್ಕರವರೆಗೂ ನಡೆದೂ ನಡೆದೂ ಸುಸ್ತಾಗಿದ್ದೆವು. ಕಡೆಗಂತೂ ಇನ್ನು ಸಾಧ್ಯವೇ ಇಲ್ಲ ಎಂದು ದೊಪ್ಪನೇ ಬಿದ್ದುಕೊಂಡೆವು. ಅಷ್ಟರಲ್ಲಿ ನಮ್ಮ ಎಡ ಭಾಗದ ಕೊರಕಲಲ್ಲಿ ಲಠ್ ಲಠಾರ್! ಎಂಬ ಸದ್ದಾಯಿತು. ಎಲ್ಲರೂ ದಡಬಡಿಸಿ ಎದ್ದು ಕುಳಿತೆವು. ಗಣಪರಿ ಅಚಾರಿ ಆನೆ! ಆನೆ!” ಎಂದು ಅಬ್ಬರಿಸಿದರು.
ನಮಗೋ ಕಾಡಾನೆಯನ್ನು ಹತ್ತಿರದಿಂದ ನೋಡುವ ಆಸೆ. ಜೊತೆಗೇ ಕಾಡಾನೆಯೆಂಬ ಆತಂಕ ಮತ್ತು ಗಾಬರಿ. ಗಾರ್ಡ್ “ಓಡಿ! ಓಡಿ!’ ಎಂದು ಕೂಗಿಕೊಳ್ಳುತ್ತಾ ನಮಗಿಂತ ಮುಂಚೆಯೇ ಕಾಡು-ಕಲ್ಲುಗಳನ್ನು ಹಾರುತ್ತಾ, ಮುಳ್ಳು ಕಂಟಿಗಳನ್ನೂ ಲೆಕ್ಕಿಸದೇ ಮಾಯವಾದ. ಕಾಲು ಎತ್ತಿಡಲೂ ಸಾದ್ಯವಿಲ್ಲದ ನಾವು ಓಡುವುದೆಲ್ಲಿಂದ? ಹೆದರಿಕೆಗೆ ಇದ್ದಬದ್ದ ಶಕ್ತಿಯೂ ಕುಂದಿ ಕುಸಿದು ಹೋದೆವು. ಗಣಪತಿ ಆಚಾರಿ ಎಲ್ಲರನ್ನೂ ಎಚ್ಚರಿಸಿ “ಇದು ಬಹಳಾ ರಾಂಗ್ ಆನೆ, ಬಹಳಾ ತಂಟೆಕೋರ, ಬೇಗ ಇಲ್ಲಿಂದ ಜಾಗ ಖಾಲಿಮಾಡಿದರೆ ಒಳ್ಳೆಯದು, ನಾನು ಶಿಕಾರಿಗೆ ಬಂದಾಗ ಇದೇ ಆನೆ ಸುಮಾರು ಸಲ ಅಡ್ಡ ಸಿಕ್ಕಿದೆ” ಎಂದು ಎಲ್ಲರನ್ನೂ ಒತ್ತಾಯಿಸತೊಡಗಿದರು. ಪ್ರಾಣಭಯದಿಂದ ಎಲ್ಲರೂ ಸತ್ತೆವೋ ಕೆಟ್ಟೆವೋ ಎಂದು ಓಡಿ ಓಡಿ ಏದುಸಿರು ಬಿಡಲಾರಂಬಿಸಿದೆವು. ಸುಮಾರು ದೂರ ಓಡಿದ ನಮಗೆ ವಿಸ್ತಾರವಾದ ಈಚಲ ಹರ ಎದುರಾಯಿತು. ಆ ಹರದ ಎತ್ತರದ ಜಾಗದಲ್ಲಿರುವ ಮುತ್ತುಗದ ಮರದ (ಬೇಸಿಗೆಯಲ್ಲಿ ಕೆಂಪಾದ ಹೂವು ಬಿಡುವುದರಿಂದ ಈ ಮರ ಇರುವ ಗುಡ್ಡಗಳು ದೂರದಿಂದ ಕಾಳ್ಗಿಚ್ಚು ಬಿದ್ದಿದೆಯೇನೋ ಎಂಬಂತೆ ಕಾಣಿಸುತ್ತವೆ. ಹಾಗಾಗಿ ಈ ಮರಕ್ಕೆ ಫಾರೆಸ್ಟ್ ಫ್ಲೇಮ್ ಎಂಬ ಇನ್ನೊಂದು ಹೆಸರಿದೆ. ಮತ್ತೊಂದು ಕುತೂಹಲದ ಮಾಹಿತಿಯೆಂದರೆ ಈ ಮರದ ಟೊಂಗೆಯ ಕಡ್ಡಿಯನ್ನು ಯಂತ್ರದಂತೆ ಹುಡುಗರು ಕೈಗೆ ಕಟ್ಟಿಕೊಂಡರೆ ಹುಡುಗಿಯರು ಸಾಲುಸಾಲಂತೆ. ಇನ್ನು ಈ ಮರವನ್ನು ಆ ದೇವರೇ ಕಾಪಾಡಬೇಕು.) ಮೇಲೆ ಗಾರ್ಡ್ ನಿಂತುಕೊಂಡು ನಮ್ಮ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ. “ಆ ದಾರಿ ಬೇಡವೆಂದರೂ ಕೇಳಲಿಲ್ಲ. ನೋಡಿ ಏನಾಯಿತು?’ ಎಂದು ಆಕ್ಷೇಪಿಸಿದ. (ಮರ ಕಡಿದು ಕೊಯ್ದ ದಾರಿ ಇರಬೇಕು!)“ ಬನ್ನಿ ಬನ್ನಿ ಇಲ್ಲೇ ಕ್ಯಾಂಟೀನ್ ಒಂದಿದೆ. ಒಳ್ಳೇ ಟೀ, ನೀರುದೋಸೆ, ಬಿಸ್ಕೆಟ್ ಸಿಗುತ್ತೆ” ಎಂದ. ಅರೇ! ನಾವೀಗ ಚಾರ್ಮಾಡಿ ಘಾಟಿಯ ಸರಿಸುಮಾರು ಮಧ್ಯದಲ್ಲಿದ್ದೇವೆ. ಇಲ್ಲೆಲ್ಲಿದೆಯಪ್ಪಾ ಕ್ಯಾಂಟೀನ್? ಎಂದುಕೊಂಡು `ಸರಿ ನೋಡೇ ಬಿಡೋಣ’ ಎಂದು ಮುಕ್ಕಿರಿದು ಪ್ರಪಾತವನ್ನು ಏರತೊಡಗಿದೆವು. ವಾಹನಗಳ ಸದ್ದು ಕೇಳತೊಡಗಿತು. ಅಂತೂ ಜನ ಸಾಮೀಪ್ಯಕ್ಕೆ ಬಂದೆವಲ್ಲಾ ಎಂದುಕೊಂಡು ನಡುಗುತ್ತಿದ್ದ ಮಂಡಿಚಿಪ್ಪನ್ನು ನೇವರಿಸಿಕೊಂಡು, ಜಾಮ್ ಆಗುತ್ತಿದ್ದ ದವಡೆಗಳನ್ನು ಸಾವರಿಸಿಕೊಂಡು, ಏದುಸಿರನ್ನೂ ನಿಧಾನವಾಗಿ ಬಿಡುತ್ತಾ ರಸ್ತೆಯಂಚಿಗೆ ಸೇರಿಕೊಂಡೆವು. ರಾಜ್ಯ ಹೆದ್ದಾರಿಯ ಬದಿಯಲ್ಲೇ ಆಸ್ಬೆಸ್ಟಾಸ್ ಶೀಟ್ ಹಾಕಿದ್ದ ಸೆಮಿ ಹೋಟೆಲ್ ಒಂದು ತಲೆ ಎತ್ತಿದೆ!
ಹಿಂದೆ ಕನ್ನಡ ಜಿಲ್ಲೆಯ ಬಸ್ಸುಗಳು ಇಲ್ಲಿಯವರೆಗೆ ಬಂದು ಪ್ರಯಾಣಿಕರನ್ನು ಇಳಿಸಿ ಹಿಂದಿರುಗಲು ಹಾಗೂ ಘಟ್ಟದ ಮೇಲಿನ ಬಸ್ಸುಗಳು ಆ ಪ್ರಯಾಣಿಕರನ್ನು ಹತ್ತಿಸಿಕೊಂಡು ಮೂಡಿಗೆರೆಗೆ ಕೊಟ್ಟಿಗೆಹಾರ ಮಾರ್ಗವಾಗಿ ಹಿಂದಿರುಗಲು ಆ ಸ್ಥಳವನ್ನು ಎಕ್ಸ್ಛೇಂಜ್ ಪ್ಲಾಟ್ಫಾರಂನಂತೆ ಬಳಸಿಕೊಳ್ಳುತ್ತಿದ್ದವು. ಸುಮಾರು ಎಂಟರಿಂದ ಹತ್ತು ಗುಂಟೆ ಸಮತಟ್ಟಾದ ಪ್ರದೇಶ ರಸ್ತೆಗೆ ಹೊಂದಿಕೊಂಡಿತ್ತು. ಕಾಲಾನಂತರ ಬಸ್ಸುಗಳು ನೇರಮಾರ್ಗವಾಗಿ ಸೀದಾಸೀದ ಸಂಚರಿಸಲು ಪ್ರಾರಂಭಿಸಿದ್ದರಿಂದ ಅಲ್ಲಿ ನಿಲ್ಲ್ಲುವ, ಜನರನ್ನು ಇಳಿಸುವ, ಹತ್ತಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗಾಗಿ ಆ ಜಾಗ ಹಾಗೆಯೇ ಖಾಲಿ ಬಿದ್ದಿತ್ತು.
ಯಾರೋ ಇದನ್ನು ಗಮನಿಸಿ ಆ ಆಯಕಟ್ಟಿನ ಸ್ಥಳವನ್ನು ವ್ಯಾಪಾರಕ್ಕೆ ಉಪಯೋಗಿಸಿದರೆ ಹೇಗೆಂದು ಆಲೋಚಿಸಿ ಹೋಟೆಲ್ ಪ್ರಾರಂಭಿಸಿದ್ದರು. ಅದಲ್ಲದೇ ಆ ಹೋಟೆಲ್ನ ಹಿಂಭಾಗದ ಕಾಡಿನಲ್ಲಿ ಅಲ್ಲಲ್ಲಿ ಕುಟೀರಗಳನ್ನು ನಿರ್ಮಿಸಲು ಪೂರ್ವಭಾವಿಯಾಗಿ ನೆಲವನ್ನು ಸಮತಟ್ಟು ಮಾಡಿ, ಅನೇಕ ಮರಗಿಡಗಳನ್ನು ಕಡಿದು ದೊಡ್ಡ ಯೋಜನೆಯನ್ನೇ ಹಾಕಿಕೊಂಡಂತಿತ್ತು. ಬೆಟ್ಟದಿಂದ ಹರಿಯುವ ಗ್ರ್ಯಾವಿಟಿ ವಾಟರನ್ನು ಪ್ಲಾಸ್ಟಿಕ್ ಪೈಪ್ ಹಾಕಿ ನೀರಿಗೆ ನಿರಂತರವಾದ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. ಅಷ್ಟರಲ್ಲಿ ಗಾರ್ಡ್, ಆಚರ್ರು ಹಾಗೂ ನಮ್ಮ ತಂಡದ ಒಂದೆರೆಡು ಜನ ಟೀ ಕುಡಿದು ಬನ್ ತಿಂದರು. ಇದೊಂದು ಅನಧಿಕೃತ ನಿರ್ಮಾಣ, ಅರಣ್ಯ ಕಾಯ್ದೆಗೆ ಹಾಗೂ ಸರ್ಕಾರಿ ನಿಯಮಕ್ಕೆ ವಿರೋಧವಾದುದ್ದು. ನಾವು ಇಲ್ಲಿ ವ್ಯಾಪಾರ ಮಾಡಿದರೆ ತಪ್ಪಿತಸ್ಥರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇಲ್ಲಿ ಟೀ ಕುಡಿಯುವುದು ಬೇಡವೆಂದೆ. ಎಲ್ಲರೂ ಸಮ್ಮತಿಸಿದರು. ಹತ್ತು ನಿಮಿಷದ ನಂತರ ಘಾಟಿ ಏರಿ ಬಂದ ಲಾರಿಯೊಂದನ್ನು ಹತ್ತಿ ಕೊಟ್ಡಿಗೆಹಾರಕ್ಕೆ ಬಂದೆವು. ಪರಿಚಿತರಾದ ಉದಯ ಕ್ಯಾಂಟೀನ್ನಲ್ಲಿ ನೀರುದೋಸೆ, ಬೂತಾಯಿ ಮೀನು ಸಾರು, ಕಾಯಿ ಚಟ್ನಿಯನ್ನು ಸಮ್ಮಾ ಬಾರಿಸಿದೆವು.
ಶಿರಾಡಿ ಘಾಟಿಯಲ್ಲಿ ಅಲ್ಲಲ್ಲಿ ಕೆಲವರು ಮನಬಂದಂತೆ ಅತಿಕ್ರಮವಾಗಿ ಗುಡಿಸಲು, ಶೆಡ್ಗಳನ್ನು ನಿರ್ಮಿಸಿ ಟೀ, ಬನ್ ಮಾರುತ್ತಾ, ಕ್ರಮೇಣ ಶಾಶ್ವತ ನಿರ್ಮಾಣಗಳನ್ನು ಮಾಡಿಕೊಂಡು ಕಳ್ಳಕಾಕರಿಗೆ, ದರೋಡೆಕೋರರಿಗೆ ಪರೋಕ್ಷವಾಗಿ ನೆರವಾಗಿರುವುದು ನಮ್ಮ ಕಣ್ಣ ಮುಂದಿದೆ. ಮಾದಕವಸ್ತು, ಮರಗಳ್ಳತನ, ರಸ್ತೆ ದರೋಡೆ, ವೇಶ್ಯಾವಾಟಿಕೆ ಮುಂತಾದುವುಗಳಿಗೆ ಮುನ್ನುಡಿಯಂತಿರುವ ಈ ಅನಧಿಕೃತ ವ್ಯಾಪಾರಿ ಕೇಂದ್ರಗಳು ಅನೇಕ ಅಪರಾಧಗಳ ತಾಣಗಳಾಗಿವೆ. ನಮ್ಮ ಕಣ್ಣೆದುರೇ ನಮ್ಮ ಚಾರ್ಮಾಡಿ ಹಾಳು ಬಿದ್ದು ಹೋಗುವುದು ಬೇಡವಾದ್ದರಿಂದ ಮೂಡಿಗೆರೆಯ ರೇಂಜ್ ಆಫೀಸರ್ ಮತ್ತು ಎಸಿಎಫ್ ಅವರನ್ನು ಸಂಪರ್ಕಿಸಿ ನನ್ನ ಆಕ್ಷೇಪಣೆ ತಿಳಿಸಿದೆ. ಮೂರು ನಾಲ್ಕು ತಿಂಗಳುಗಳಿಂದ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಈ ಸೆಮಿ ಹೋಟೆಲ್ ಇರ್ಯಾರ ಗಮನಕ್ಕೂ ಬಂದಿಲ್ಲವೆಂದು ಹೇಳಿದರು. ಶೀಘ್ರವೇ ಈ ಅನಧಿಕೃತ ನಿರ್ಮಾಣವನ್ನು ತೆಗೆಸುವ ಆಶ್ವಾಸನೆ ನೀಡಿದರು. ಒಂದು ವಾರ ಕಾಯ್ದೆ, ಹೋಟೆಲ್ ಯಥಾ ರೀತಿ ಕಾರ್ಯ ನಿರ್ವಹಿಸುತ್ತಿತ್ತು.
ಸೀದಾ ತೇಜಸ್ವಿಯವರನ್ನು ಕಂಡೆ. ವಿಷಯ ತಿಳಿದ ತೇಜಸ್ವಿ ನಖಶಿಖಾಂತ ಉರಿದೆದ್ದರು. “ ಇಷ್ಟು ದಿನ ಏನು ದನ ಕಾಯುತ್ತಿದ್ದೆಯಾ, ನಡೀ ನೋಡಿ ಬರೋಣ’ ಎಂದರು. ವಿಪರೀತ ಮಳೆ, ಐದಡಿ ದೂರದಲ್ಲಿ ನಿಂತಿದ್ದವರಿಗೆ ಸಹಾ ನಾವು ಮಾತನಾಡುವ ಮಾತು ಕೇಳಿಸುತ್ತಿರಲಿಲ್ಲ. ಕೊನೆ ಗಳಿಗೆಯಲ್ಲಿ ಪ್ರೋಗ್ರಾಮ್ ಕ್ಯಾನ್ಸಲ್ ಆಯ್ತು. ಜನವಾಹಿನಿ ಪತ್ರಿಕೆಯ ಇಸ್ಮಾಯಿಲ್ರವರಿಗೆ ಫೋನಾಯಿಸಿ ಬಂದು ಸಮೀಕ್ಷೆ ಮಾಡಿ ವರದಿ ಮಾಡಲು ತಿಳಿಸಿದರು. ಚಿಕ್ಕಮಗಳೂರಿನ ಗಿರಿಜಾ ಶಂಕರ್ ಮತ್ತು ಡಿ.ವಿ. ಗಿರೀಶ್ರವರಿಗೆ ಫೋನ್ ಮಾಡಿ “ಆ ಫಾರೆಸ್ಟ್ ಡಿಪರ್ಟ್ಮೆಂಟ್ನವರೇನು ಕತ್ತೆ ಕಾಯ್ತಾಇದ್ದ್ದಾರೋ ಕೇಳಿ. ಎಲ್ಲಾ ಸೂರೆ ಹೋದ ಮೇಲೆ ಮಹಜರು ಮಾಡಲಿಕ್ಕೆ ಬರುತ್ತಾರಾ?
ಆ ಶೆಡ್ ಎತ್ತಿಸಲಿಕ್ಕೆ ಏನು ಮಾಡುತ್ತಿರೋ ನೋಡಿ. ಯಾರು ಹೇಳೋರು ಕೇಳೋರು ಇಲ್ಲದಂಗೆ ಆಗಿದೆಯಲ್ಲ ಈ ಚಾರ್ಮಾಡಿ ಗತಿ” ಎಂದರು. ಅಂತೂ ಕಡೆಗೂ ತೇಜಸ್ವಿಯವರ ಪ್ರಯತ್ನದಿಂದ, ಗಿರಿಜಾ ಶಂಕರ್, ಗಿರೀಶ್ ಮತ್ತು ಜನವಾಹಿನಿಯ ವರದಿಯ ಒತ್ತಡದಿಂದ ಜೇಸಿಬಿಯೊಂದನ್ನು ತಂದ ಅರಣ್ಯ ಇಲಾಖೆಯವರು ಹೋಟೆಲ್ ತೆರವುಗೊಳಿಸಿ ಆ ಸ್ಥಳದಲ್ಲಿ ಅಕೇಶಿಯಾ ಗಿಡಗಳನ್ನು ನೆಟ್ಟರು. ಹೋಟೆಲ್ ಮಾಲೀಕ ಒಂದಷ್ಟು ದಿನ ತೇಜಸ್ವಿ ಹಾಗೂ ನನ್ನ ವಿರುದ್ಧ ಹೇಳಬಾರದನ್ನೆಲ್ಲಾ ಹೇಳಿಕೊಂಡು ತಿರುಗಿದ. ಹಾಗೇ ಮಾಡ್ತೀನಿ ಹೀಗೆ ಮಾಡ್ತೀನಿ ಎಂದು ದ್ವೇಷ ಕಾರಿದ. ದಿನಕಳೆದಂತೆ ನಮ್ಮ ಸದುದ್ದೇಶ ಅವನಿಗೂ ಮನವರಿಕೆಯಾಯಿತೇನೋ ಎಲ್ಲವೂ ಸುಖಾಂತವಾಯಿತು.
ಈ ನಡುವೆ ನನ್ನ ಗೆಳೆಯರಾದ ಹರ್ಷವರ್ಧನ್ “ಧನಂಜಯ್, ಒಮ್ಮೆ ತೇಜಸ್ವಿಯವರನ್ನು ಭೇಟಿಯಾಗಿ ಮಾತನಾಡಬೇಕಿತ್ತಲ, ಯಾವಾಗ ಹೋಗೋಣ?” ಎಂದರು. ಈ ಹರ್ಷನಿಗೆ ನಾವು ಕ್ಲೋರೋಫಿಲ್ ಹರ್ಷ ಎಂದೇ ಕರೆಯೋದು. ಎಂ.ಎಸ್ಸಿ.ಎಜಿ. ಮಾಡಿಕೊಂಡು ತೋಟ-ಗದ್ದೆ ನೋಡಿಕೊಳ್ಳುತ್ತಿರುವ ಅನೇಕ ಮಲೆನಾಡಿನ ಪ್ರಕೃತಿ ಪ್ರೇಮಿಗಳಲ್ಲಿ ಇವರೂ ಒಬ್ಬರು. `ಏನ್ ಸಮಾಚಾರ ಮಾರಾಯ್ರೇ’ ಎಂದೆ. “ಇನ್ನೇನಿಲ್ಲಾ ನಮ್ಮ ಹೇಮಾವತಿ ನದಿಯಿಂದ ಗೊತ್ತುಗುರಿಯಿಲ್ಲದೇ ಮರಳು ತೆಗೀತಿದ್ದಾರೆ. ಪ್ರತಿದಿನ ಇಪ್ಪತ್ತೆಂದು-ಮೂವತ್ತು ಟ್ರಾಕ್ಟರ್ ಮರಳು ತೆಗೀತಾರೆ. ಹೇಳೋರಿಲ್ಲ ಕೇಳೋರಿಲ್ಲ. ದಂಡೆಯಲ್ಲಿರೋ ಮರಳಲ್ಲದೆ ನದಿಯೊಳಗಿನ ಮರಳನ್ನು ಸಹ ಜೇಸಿಬಿ ಬಳಸಿ ತೆಗೆಯುತ್ತಿದ್ದಾರೆ. ನದಿ ಮೂಲ ಇಲ್ಲೇ ಹತ್ತಿರದ ಜಾವಳಿಯಲ್ಲಿ ಇರುವುದರಿಂದ ಇವರು ಮರಳು ತೆಗೀತಾ ತೆಗೀತಾ ನಮಗೆ ಕುಡಿಯಲಿಕ್ಕೂ ನೀರಿಲ್ಲದಂತೆ ಮಾಡೋ ಅಂದಾಜಿದು. ನದಿ ಅಕ್ಕಪಕ್ಕದ ಗದ್ದೆ ಏರಿಗಳು ಕುಸಿದು ನದಿಯೊಳಗೆ ಲೀನವಾಗುತ್ತಿದೆ. ಮೊನ್ನೆ ಮೊನ್ನೆ ಕಟ್ಟಿದ ಸೇತುವೆ ಪಕ್ಕದಲ್ಲೂ ಮರಳು ತೆಗೆದು ಸೇತುವೆ ಎರಡೂ ಬದಿಯ ಪ್ಯಾರಪೆಟ್ ಬೋಲ್ಡರ್ಗಳು ಜರೀತಾ ಇದಾವೆ. ಡಿ.ಸಿ.ಗೆ ಬರೆದಾಯ್ತು, ತಹಸೀಲ್ದಾರ್ಗೆ ದೂರು ಕೊಟ್ಟಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಗೂ ಹೇಳಾಯ್ತು. ದಿನದಿಂದ ದಿನಕ್ಕೆ ಟ್ರಾಕ್ಟರ್ಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಯಾರೂ ತಲೆ ಕೆಡಿಸಿಕೊಂಡಿಲ್ಲ. ತೇಜಸ್ವಿ ಅಭಿಪ್ರಾಯ ಏನು? ಏನಾದ್ರೂ ಪರಿಹಾರ ಸೂಚಿಸುತ್ತಾರೋ ನೋಡೋಣ ಅಂತ” ಎಂದರು. `ಸರಿ ನಡೀರಿ ಏನ್ ಹೇಳ್ತಾರೋ ನೋಡೋಣ’ ಎಂದು ಹೋದೆವು.
ತೇಜಸ್ವಿಯವರು ಸಂಜೆಯ ವಾಕಿಂಗ್ನಿಂದ ಇನ್ನೂ ಹಿಂದಿರುಗಿ ಬಂದಿರಲಿಲ್ಲ. ರಾಜೇಶ್ವರಿ ಆಂಟಿ `ಬನ್ನಿ ಕುಳಿತುಕೊಳ್ಳಿ’ ಎಂದು ಕಾಫಿ ಮತ್ತು ಖಾರ ನೀಡಿದರು. “ಇವರು ಹರ್ಷ ಅಂತ, ಚಕ್ಕಮಕ್ಕಿಯವರು, ನೇಚರ್ ಕ್ಲಬ್ ಮೆಂಬರ್” ಎಂದೆ. ಅಷ್ಟರಲ್ಲಿ ತೇಜಸ್ವಿ ಬಂದವರೇ `ಏನ್ರಯ್ಯಾ ಇಷ್ಟೊತ್ತಿನಲ್ಲಿ ಬಂದಿದಿರಲ್ಲಾ ಅನ್ನುತ್ತಲೇ ಮನೆಯೊಳಗೆ ಹೋದರು. ಹತ್ತು ನಿಮಿಷ ಕಳೆದು ಒಂದು ಫೋಟೋ ಆಲ್ಬಂನೊಂದಿಗೆ ಹೊರಗೆ ಬಂದರು. ಬಂದವರೇ “ಓಹೋ! ನೀವು ಹರ್ಷವರ್ಧನ್ ಅಲ್ಲವೇನ್ರೀ, ಕ್ಲೋರೋಫಿಲ್ ಹರ್ಷ” ಎಂದರು. “ನೋಡಯ್ಯಾ ಧನಂಜಯ, ಈ ಫೋಟೋಗಳು ಹೇಗೆ ಪ್ರಿಂಟ್ ಆಗಿವೆ ಅಂತ” ಎಂದು ಆಲ್ಬಂ ಕೈಗಿಟ್ಟರು. ಇವರ ಅದ್ಭುತ ಹಕ್ಕಿ ಫೋಟೋಗಾರಿಕೆಗೆ ಸರಿಯಾಗಿ ಮೆಟಾಲಿಕ್ಪ್ರಿಂಟ್ ಮಾಡಿಸಿದ್ದರು. ಪುಟ ತೆರೆದರೆ ಹಕ್ಕಿಗಳು ಎಲ್ಲಿ ಹಾರಿಹೋಗುತ್ತವೋ ಎನ್ನುವಷ್ಟರ ಮಟ್ಟಿಗೆ ನೈಜವಾಗಿ ಕಾಣುತ್ತಿದ್ದವು. ಅರ್ಧ ಗಂಟೆಗೂ ಮಿಕ್ಕಿ ಫೋಟೋಗಳನ್ನು ನೋಡಿ ವಿಸ್ಮಿತರಾದೆವು. ಪ್ರತಿಭೆ, ಅನುಭವ, ಬುದ್ಧಿವಂತಿಕೆಯ ಜೊತೆ ತಂತ್ರಜ್ಞಾನ ಸೇರಿದರೆ ಎಂತಹ ಕಲಾಕೃತಿ ಹುಟ್ಟುತ್ತದೆ ಎಂದು ಅಚ್ಚರಿಯಾಯಿತು.
ನಾವು ಮಾತನಾಡಲು ಬಂದಿದ್ದ ವಿಚಾರವನ್ನೇ ಮರೆತು ಹೆಚ್ಪಿಸಿಎಲ್ ಪೈಪ್ಲೈನ್, ಹೊಯ್ಸಳ ಮೂಲಸ್ಥಾನವಾದ ಅಂಗಡಿ ದೇವಾಲಯದ ಉತ್ಖ್ಖನನದ ಬಗ್ಗೆ ಮಾತನಾಡಿದೆವು. ಸಮಯ ಎಂಟು ದಾಟಲಾರಂಭಿಸಿತು. ನಾನೇ “ಹರ್ಷವರ್ಧನ್ ಒಂದು ಕಂಪ್ಲೆಂಟ್ ತಂದಿದ್ದಾರೆ.” ಎಂದು ಎಲ್ಲವನ್ನೂ ವಿವರಿಸಿದೆ. ಸಾವಧಾನವಾಗಿ ಕೇಳಿಸಿಕೊಂಡ ತೇಜಸ್ವಿ ನಿಟ್ಟುಸಿರು ಬಿಟ್ಟರು. “ನಿನ್ನೆ ಧನಂಜಯನೂ ಒಂದು ಸಮಸ್ಯೆ ಹೇಳಿದ್ದ. ಕಾಫಿ ಪಲ್ಪರ್ ನೀರಿನದು ಬೆಳೀಬೇಕಾದರೆ ವಿಷ ಸ್ಪ್ರೇ ಮಾಡಿ ನೀರು ಕುಡಿಯದ ಹಾಗೆ ಮಾಡುತ್ತಾರೆ. ಕಾಫಿ ಕೊಯ್ದು ಮಾರುವಾಗ ಬೀಜ ತೊಳೆದು ನೀರನ್ನೂ ವಿಷ ಮಾಡುತ್ತಾರೆ. ಬೇಜವಾಬ್ದಾರಿ ಜನಗಳು.’’
“ಈ ಮರಳಿನ ವಿಚಾರನ ಜೀಯಾಲಜಿ ಡಿರ್ಪಾಟ್ಮೆಂಟ್ನವರೊಡನೆ ಮಾತನಾಡಬೇಕು. ಅಲ್ಲಾ ಕಣ್ರ್ರಯ್ಯ ಎಲ್ಲಕ್ಕೂ ನನ್ನ ಬಳಿ ಬರ್ತೀರಲ್ಲಾ, ನಿಮಗೇನೂ ಕಾನೂನು ಗೊತ್ತಿಲ್ವಾ? ಏನ್ ತಿಳಿಯುತ್ತೋ ಮಾಡ್ರಯ್ಯಾ. ಹೇಮಾವತಿ ನದೀಲಿ ಎಂತೆಂಥ ಮೀನುಗಳು ಇರುತ್ತಾ ಇದ್ವು. ಈಗ ಒಂದೇ ಒಂದು ಗುಂಡಿ ಇಲ್ಲ. ಗೊರೂರಿನಲ್ಲಿ ಡ್ಯಾಂ ಕಟ್ಟಿ ಎಲ್ಲಾ ಗುಂಡಿಗಳು ಮುಚ್ಚಿಹೋದವು.” ಎಂದ ತೇಜಸ್ವಿ ಸ್ವಲ್ಪ ಸಮಯ ಮೌನವಾದರು.
“ಬೇಲೂರಿನ ಬಳಿಯಿರುವ ಯಗಚಿ ಜಲಾಶಯದಲ್ಲಿ ಮೀನುಗಳು ಹೊಳೆಹರಿವಿನಲ್ಲಿ ಹಿಮ್ಮೊಗವಾಗಿ ಚಲಿಸಲು ಸಾಧ್ಯವಾಗದೇ ಪಠಾರನೆ ಹಿಂದಿರುಗಿ ಗುಂಡಿಗೆ ಬೀಳುವುದನ್ನು ನಾವು ಈಗಲೂ ನಿಂತು ನೋಡಬಹುದು. ಎತ್ತರದ ಸಿಮೆಂಟ್ ಇಳಿಜಾರುಗಳು ಮತ್ಸ್ಯಗಳ ಸ್ವಾಭಾವಿಕ ಚಲನೆಯನ್ನೇ ನಿರ್ಬಂಧಿಸಿರುವುದು ವಿವೇಚನಾರಹಿತವಾದ ನೀರಾವರಿ ಯೋಜನೆಗಳ ಪರಿಣಾಮ.” ಎಂದೆ ನಾನು.
ಯಗಚಿ ಜಲಾಶಯ ನಿರ್ಮಾಣವಾಗುತಿದ್ದ ಸಮಯದಲ್ಲಿ ಜಲಾಶಯ ನಿರ್ಮಾಣಸ್ಥಳಕ್ಕೆ ಹೀಗೇ ಭೇಟಿನೀಡಿದ್ದಾಗ ಸುಮಾರು ಮೂವತ್ತು ಅಡಿ ಎತ್ತರದ ಸಿಮೆಂಟ್ ದಿಬ್ಬವನ್ನು ಏರಲಾಗದೇ ಚಡಪಡಿಸುತಿದ್ದ ಮೀನುಗಳನ್ನು ಕಂಡು ಮನುಷ್ಯನ ಅಗತ್ಯಕ್ಕೆ ಪ್ರಕೃತಿ ಮಾಡಬೇಕಾಗಿ ಬಂದಿರುವ ತ್ಯಾಗವನ್ನು ಕಂಡು ತೇಜಸ್ವಿ ಮರುಗಿದ್ದರು. ಭೂಮಿ ಮೇಲೆ ಜಲಚರಗಳು ಅವತರಿಸಿದಾಗಲಿಂದಲೂ ಸಂತಾನೋತ್ಪತ್ತಿ ಮತ್ತು ಇನ್ನಿತರೇ ಕಾರಣಗಳಿಗಾಗಿ ಕೆನ್ನೀರಿನಿಂದ ತಿಳಿನೀರಿಗೆ, ಎತ್ತರದ ಪ್ರದೇಶದಿಂದ ತೀರ ಪ್ರದೇಶಕ್ಕೆ ಸಹಜವಾಗಿ ಸಂಚರಿಸುತಿದ್ದ ಮೀನುಗಳೀಗ ತಮ್ಮ ವಲಸೆಗಾಗಿ ಸರ್ಕಾರದ ಇಂಜಿನಿಯರುಗಳಿಂದ ಪರವಾನಿಗೆ ಪಡೆಯಬೇಕಾಗಿದೆಯಲ್ಲ ಎಂದು ನಾನು ಹೇಳಿದಾಗ “ಹೌದಯ್ಯಾ ಈ ಜೀವಜಗತ್ತಿನ ಪ್ರತಿಯೊಂದು ಸಣ್ಣಪುಟ್ಟ ವಿದ್ಯಮಾನಗಳಿಗೂ ಅದರದ್ದೇ ಆದ ಕ್ರಮವಿರುತ್ತೆ. ಗಾಳಿ ತನ್ನ ಕ್ರಮದಂತೆ, ನೀರು ತನ್ನ ಸ್ವರೂಪದಂತೆ, ಮಣ್ಣು ತನ್ನ ಗುಣದಂತೆ ವರ್ತಿಸಲೇಬೇಕು. ಅದಕ್ಕೆ ತಕ್ಕಂತೆ ಸಮಸ್ತ ಜೀವವರ್ಗವೂ ಒಂದಕ್ಕೊಂದು ಪೂರಕವಾಗಿ ಬದುಕಬೇಕು. ಮಾನವನ ಅಗತ್ಯಗಳಿಂದ ಉಂಟಾಗುವ ಅಚಾತುರ್ಯಗಳಿಗೆ ಇದೊಂದು ಸಣ್ಣ ಉದಾಹರಣೆ. ಜೀವಜಲದ ಕೊಂಡಿಗಳು ಕಿತ್ತು ಇನ್ನಷ್ಟು ಪಾರಿಸರಿಕ ಅವಾಂತರಗಳಿಗೆ ಕಾರಣವಾಗುತ್ತವೆ. ಪರಿಸರಕೇಂದ್ರಿತ ವಿಚಾರಧಾರೆಯಿಲ್ಲದೇ ಕಾಂಕ್ರೀಟ್ ಅಭಿವೃದ್ಧಿಯನ್ನೇ ಗುರಿಮಾಡಿಕೊಳ್ಳಲು ಕಾರಣ ಸರಿಯಾದ ಸ್ಥಳದಲ್ಲಿ ಸರಿಯಾದವರು ಇಲ್ಲದಿರುವುದು.’’ ಎಂದು ಪ್ರತಿಕ್ರಿಯಿಸಿದ್ದರು.
“ಅದಕ್ಕೆ ಸರಿಯಾಗಿ ತೋಟ-ಗದ್ದೆಗಳಿಗೆ ಕೀಟನಾಶಕ, ಕಳೆನಾಶಕ ಎಲ್ಲಾ ಹೊಡೆದು ಮೀನಿರಲಿ, ಹಾವುಗಳೂ ಸಹ ಹೇಳ ಹೆಸರಿಲ್ಲದಂತಾದವು. ತೋಟದೋರು ಪಲ್ಪರ್ ನೀರು ಬಿಟ್ಟು ಹಳ್ಳದ ಬದಿ ಮೂಗು ಮುಚ್ಚಿಕೊಂಡು ನಡೆದಾಡುವಂತೆ ಮಾಡಿದ್ದಾರೆ. ತಹಸೀಲ್ದಾರ್ ಈ ಮರಳಿನವರ ಬಗ್ಗೆ ಏನೂ ಮಾಡಿಲ್ಲವೇನ್ರಯ್ಯ? ಸಾರ್ವಜನಿಕ ಸಂಪತ್ತೆಂದರೆ ಎಲ್ಲರಿಗೂ ಒಂದು ರೀತಿಯ ಸದರ. ನಿಮ್ಮ ಪ್ರಯತ್ನ ನೀವು ಮಾಡಿ. ಯಾವ ವ್ಯವಹಾರದಲ್ಲಿ ಪುಕ್ಕಟೆ ಸಂಪನ್ಮೂಲ ಮತ್ತು ಹಣ ಇನ್ವಾಲ್ವ್ ಆಗಿರುತ್ತೋ ಅವುಗಳ ಹಿಂದೆ ದೊಡ್ಡ ಮಾಫಿಯಾ ಕೆಲಸ ಮಾಡ್ತಿರುತ್ತೆ. ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರು, ಲೋಕಲ್ ಜನರು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಅವ್ಯವಹಾರದ ಫಲಾನುಭವಿಗಳೇ ಆಗಿರುತ್ತಾರೆ. ಆಕ್ಷೇಪಣೆ ಎತ್ತಿ ತಮಗೆ, ತಮ್ಮ ನೆಂಟ-ಭಾವಂದಿರಿಗೆ ಸಲೀಸಾಗಿ ಸಿಗುತ್ತಿರುವ ಲಾಭವನ್ನು ಯಾಕೆ ಹಾಳು ಮಾಡಿಕೊಳ್ಳುವುದು ಎಂದು ವರ್ತಿಸುತ್ತಾರೆ. ಇದೊಂದು ವಿಷವೃತ್ತ. ನನ್ನ ಅಗತ್ಯ ಬಂದಾಗ ನೋಡುವ” ಎಂದರು ತೇಜಸ್ವಿ.
ನಮಗೆ ತೋಚಿದೆಲ್ಲವನ್ನು ಮಾಡಿದೆವು. ಸಿಕ್ಕಿದ ಫಲಿತಾಂಶವೆಂದರೆ ಈವರೆಗೆ ಯಾವುದನ್ನು ನಿಯಮಬಾಹಿರವಾಗಿ ಮಾಡುತ್ತಿದ್ದರೋ ಈಗ ಅದನ್ನೇ ಸರ್ಕಾರೀ ಲೈಸೆನ್ಸಿನಡಿ ಕಾನೂನಿನ ಚೌಕಟ್ಟಿನ ಹೆಸರಿನಲ್ಲಿ ಮುಂಚಿಗಿಂತ ಅವ್ಯಾಹತವಾಗಿ ರಾಜಾರೋಷದಿಂದ ಮಾಡುತ್ತಿದ್ದಾರೆ. ತೇಜಸ್ವಿಯವರು ಹೇಳಿದಂತೆ ಇದೊಂದು ವಿಷವೃತ್ತ. ಸಣ್ಣ ಕಳ್ಳ ಹೋಗಿ ದೊಡ್ಡ ರಾಕ್ಷಸ ವಕ್ಕರಿಸಿಕೊಳ್ಳುತ್ತಾನೆ. ನಮಗಿರುವ ಒಂದೇ ಭೂಮಿಯನ್ನು ವಾಸಿಸಲು ಯೋಗ್ಯವಲ್ಲದಂತೆ ಮಾಡುವಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಿ ಹಾಳುಗೆಡವುತ್ತಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
Ecology is emerging as an alternative to philosophy. ಮಾನವರೆಲ್ಲರೂ ಸಮಾನರು ಎಂಬ ಪರಿಕಲ್ಪನೆ ಮುಂದುವರೆದು, ವಿಕಾಸಹೊಂದಿ ಜೀವಿಗಳೆಲ್ಲವೂ ಈ ಭೂಮಂಡಲದ ಮೇಲೆ ಜೀವಿಸಲು ಸಮಾನ ಅವಕಾಶ ಹೊಂದಿವೆ ಎಂಬ ವಿಚಾರಧಾರೆಯೊಂದು ಹೊರಹೊಮ್ಮಿದೆ. ಪ್ರಕೃತಿಯನ್ನು ಗಮನಿಸೋಕೆ ಯಾರೂ ಅದರ ಬಗ್ಗೆ ಸ್ಪೆಶಲಿಸ್ಟ್ ಆಗಿರಬೇಕಿಲ್ಲ. ಕಣ್ಣು ಸರಿಯಾಗಿ ಕಾಣಿಸ್ತಿರಬೇಕಷ್ಟೇ. ಕಣ್ಣಿಗೆ ಕಾಣುವುದು ಬೇರೆ, ನೋಡುವುದು ಬೇರೆ. ಕಾಣುವುದಕ್ಕೆ ನಿರ್ದಿಷ್ಠ ಉದ್ದೇಶವಿರುವುದಿಲ್ಲ. ಆದರೆ ನೋಡುವುದು ಸ್ವಯಂ ಪ್ರೇರಣೆಯಿಂದಾಗುವ ಪ್ರಕ್ರಿಯೆ. ಮಾನವ ಸಹಜ ಕುತೂಹಲ, ಆಸಕ್ತಿ, ಹಂಬಲ ಕ್ರಮೇಣ ಅವನನ್ನು ವಸ್ತು ವಿಷಯದಲ್ಲಿ ಮಾಗುವಂತೆ ರೂಪಿಸುತ್ತದೆ.
ನಮ್ಮ ಸಚೇತನ ಯುವಕ ಸಂಘದ ಸದಸ್ಯರೆಲ್ಲ ಒಮ್ಮೆ ಜೆ.ಪಿ. ರಸ್ತೆಯಲ್ಲಿ ಚರಂಡಿ ಶುದ್ಧಿ ಮಾಡುವ ಶ್ರಮದಾನ ನಡೆಸುತ್ತಿದ್ದೆವು. ಅದೆಲ್ಲಿಗೆ ಹೋಗುತ್ತಿದ್ದರೋ ತೇಜಸ್ವಿ, ತಮ್ಮ ಸ್ಕೂಟರಿನಲ್ಲಿ ಬಂದು ಸರಕ್ಕನೆ ನಿಲ್ಲಿಸಿ ‘ಇದೆಂತದೋ ಮಾರಾಯ ಗೊಚ್ಚೆ ಬಳಿಯುವ ಕೆಲಸ ಮಾಡ್ತಿದ್ದೀರಲ್ಲ’ ಎಂದು ನಗಾಡಿದರು. ‘ಇನ್ನೇನು ಮಾಡೋದು-ಕೆಲ್ಸ ಮಾಡಿಸಬೇಕಾದೋರು ನಿದ್ದೆ ಮಾಡ್ತಿದ್ರೆ ನಾವಾದ್ರೂ ಮಾಡಿ ಅವ್ರಿಗೆ ಸ್ವಲ್ಪ ನಾಚ್ಕೆಯಾಗುವಂತೆ ಮಾಡೋಣ ಅದಿಕ್ಕೆ’ ಎಂದೆವು. ಮೂಡಿಗೆರೆಯ ಮುನಿಸಿಪಾಲಿಟಿಯ ಬಗ್ಗೆ ತೇಜಸ್ವಿಯವರಿಗೆ ಸದಭಿಪ್ರಾಯವೇನೂ ಇರಲಿಲ್ಲ. ನಲ್ಲಿ ಪೈಪ್ ಹಾಕಲು ರಸ್ತೆ ಅಗೆಯುವುದು, ಸರಿಯಾಗಿ ಮುಚ್ಚದೇ ಅಪಘಾತಗಳಿಗೆ ಕಾರಣವಾಗುವುದು, ಕಸ ವಿಲೇವಾರಿಯ ನಿರ್ವಹಣೆಯಲ್ಲಿನ ಅಸಮರ್ಥತೆ, ಉದ್ಯಾನವನ, ಕ್ರೀಡಾಂಗಣವಿರಲಿ ಸಾರ್ವಜನಿಕ ಶೌಚಾಲಯಕ್ಕೂ ಜಾಗ ಉಳಿಯದಂತೆ ಇದ್ದ ಬದ್ದ ಜಾಗವನ್ನೆಲ್ಲಾ ಹರಾಜು ಹಾಕಿ ಮಾರಿರುವ ಬಗ್ಗೆ ಅಸಮಾಧಾನವಿತ್ತು.
‘ಆ ಬಡ್ಡಿ ಮಕ್ಳಿಗೆ, ನೀವು ಚರಂಡಿ ತೊಳೀತೀರಿ ಅಂತ ಗೊತ್ತಾದ್ರೆ ಊರಲ್ಲಿರೋ ಚೆರಂಡಿನೆಲ್ಲಾ ನಿಮ್ಕೈಲೇ ತೊಳಸ್ತಾರೆ. ಮಾನಮರ್ಯಾದೆ ಇಲ್ಲದ ಹೇತ್ಲಾಂಡಿಗಳು ಅವರು. ನಿಮ್ಮ ಪ್ರತಿಭಟನೆ ಸಾಂಕೇತಿಕ ಆಗರ್ಬೇಕು ಅಷ್ಟೇ. ಅವರಿಗೆ ಸಂಬ್ಳ ಕೊಡೋದು ದನ ಕಾಯಕ್ಕಲ್ಲ. ಎನಿ ಹೌ ಒಳ್ಳೆ ಕೆಲ್ಸ ಮಾಡ್ತಿದ್ದೀರಿ ಕಣ್ರ್ರಯ್ಯಾ ಹುಡುಗ್ರಂದ್ರೆ ನಿಮ್ಮ ಹಾಗರ್ಬೇಕು ಎಂದು ಹೊಗಳಿ ಅಟ್ಟಕ್ಕೇರಿಸಿದ ತೇಜಸ್ವಿಯವರೇ ಮುಂದೊಂದು ದಿನ ನಮ್ಮನ್ನು ತರಾಟೆಗೆ ತೆಗೆದುಕೊಂಡರು.
ನಾವು ಹುಡುಗರೊಮ್ಮೆ ತೇಜಸ್ವಿಯವರನ್ನು ಭೇಟಿಯಾಗಿ ‘ಸರ್ ನಮ್ಮ ಯುವ ಸಂಘದಿಂದ ಒಂದು ಸಾಹಸ ಮಾಡ್ಬೇಕು ಅಂತಿದ್ದೇವೆ. ನೋಡೋಕೆ ನೀವು ಬರ್ಬೇಕು’ ಅಂದೆವು. ‘ಹೌದೇನ್ರಯ್ಯಾ, ಎಲ್ಲಿ? ಯಾವಾಗ?’
‘ನಾಡಿದ್ದು ಭಾನುವಾರ ಸರ್, ನಾಡಿದ್ದು ೧೦-೦೦ ಗಂಟೆಗೆ ನೀವು ಬಂದ್ರೆ ನಮಗೆ ಒಂದು ಇನ್ಸಿಪಿರೇಷನ್ ಸರ್.’
ಆಯ್ತು ಕಣ್ರ್ರಯ್ಯ ಬರೋಣಾಂತೆ, ಏನು ಸಾಹಸ ಮಾಡ್ತಿದ್ದೀರಿ?’
‘ಕಣ್ಣಿಗೆ ಬಟ್ಟೆ ಕಟ್ಕೊಂಡು ಟೌನ್ ಒಳಗೆ ಬೈಕ್ ಓಡಿಸ್ತೀವಿ, ಭಾರೀ ಜನ ಸರ್ತಾರೆ. ಬೊಂಬಾಟಾಗಿರುತ್ತೆ.’
‘ವೆರಿಗುಡ್, ಮುಂಚೆನೇ ಹೇಳಿ ಒಳ್ಳೆ ಕೆಲ್ಸ ಮಾಡಿದ್ರಿ. ನಾನವತ್ತು ಮೂಡಿಗೆರೆ ಕಡೆ ತಲೇನೇ ಹಾಕಲ್ಲ. ಬಡ್ಡಿ ಮಕ್ಳ ಮೂಡಿಗೆರೆಯಲ್ಲಿ ಕಣ್ಣು ಬಿಟ್ಕೊಂಡೇ ನೆಟ್ಟಗೆ ಬೈಕ್ ಓಡ್ಸಲ್ಲ. ಇನ್ನು ಕಣ್ಣು ಮುಚ್ಕೊಂಡು ಓಡಿಸ್ತಾರಂತೆ. ಯರ್ನಾದ್ರು ಸಾಯಿಸ್ತೀರಿ. ಇಲ್ಲಾ ನೀವೇ ಕೈಕಾಲ್ ಮರ್ಕೋತೀರಿ ಅಯೋಗ್ಯರಾ! ನಿಮಗೆ ಸಾವಿರ ಥ್ಯಾಂಕ್ಸ್ ಮಾರಾಯರ-ಮುಂಚೇನೇ ಹೇಳಿದ್ದಕ್ಕೆ’ ಎಂದು ತಿರುಗಿ ಸಹ ನೋಡದೆ ಮನೆ ಸೇರಿಕೊಂಡರು.
ಹೇಳಬೇಕಾದ ವಿಚಾರವನ್ನು ವಿಡಂಬನಾತ್ಮಕವಾಗಿ, ನೇರವಾಗಿ ಹೇಳಿ ಚಕಿತಗೊಳಿಸುತ್ತಿದ್ದರು. ಇತ್ತೀಚಿನ ಕಾವೇರಿ ನೀರಿನ ವಿವಾದ, ಮೋರೆ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ನಾಡಿಗೇ ನಾಡೇ ಮುಂದೇನು ಎಂದು ಯೋಚಿಸುತ್ತಿದ್ದಾಗ ಸರಳವಾಗಿ, ನೇರವಾಗಿ ಕಡ್ಡಿ ಮುರಿದಂತೆ ಮಾತನಾಡಿದವರೆಂದರೆ ನಮ್ಮ ತೇಜಸ್ವಿ ಮಾತ್ರ.
ಮೂಡಿಗೆರೆಯಲ್ಲಿ ಕಲೆಯ ಪೋಷಣೆಗಾಗಿಯೇ ಸಂಸ್ಥೆಯೊಂದನ್ನು ಪ್ರಾರಂಭಿಸಬೇಕೆಂದು ಯೋಜನೆಯೊಂದು ನನ್ನ ತಲೆ ಹೊಕ್ಕಿತ್ತು. ಅದಕ್ಕೊಂದು ಇಮ್ಮಿಡಿಯೆಟ್ ಕಾಸ್ ಹೀಗಿತ್ತು. ನನಗೆ ಆಗ ಮೂಡಿಗೆರೆಯಿಂದ ಹನ್ನೆರಡು ಕಿಲೋಮೀಟರ್ ದೂರದ ಸತ್ತಿಹಳ್ಳಿಯಲ್ಲಿ ಕರ್ತವ್ಯ. ದಿನವೂ ಬೆಳಿಗ್ಗೆ ಸಂಜೆ ಕಾರ್ಯ ನಿಮಿತ್ತ ಡ್ರೈವ್ ಮಾಡುತ್ತಿದ್ದವನಿಗೆ ಕಾರಿನ ಮ್ಯೂಸಿಕ್ ಪ್ಲೇಯರ್ನಲ್ಲಿ ಕನ್ನಡಕ್ಕೇ ವಿಶಿಷ್ಟವಾದ ಭಾವಗೀತೆಗಳನ್ನು ಕೇಳುವ ಹುಚ್ಚು. ಸುಮಾರು ಎರಡು ವರ್ಷಗಳ ಕಾಲ ಹಾಡು ಕೇಳುತ್ತಾ ಹಿಂದೆಮುಂದೆ ತಿರುಗುತ್ತಿದ್ದವನಿಗೆ ಮೂಡಿಗೆರೆ ಸುತ್ತಮುತ್ತಲೇ ಎಷ್ಟೋ ಜನ ಹಾಡುಗಾರರಿದ್ದರಲ್ಲಾ, ಅವರೂ ಸಹ ಈ ಸಿ.ಡಿ.ಯಲ್ಲಿ ಹಾಡಿರುವ ಹಾಡುಗಾರರಷ್ಟೇ ಪ್ರತಿಭಾವಂತರು. ಶಾಸ್ತ್ರೀಯವಾಗಿ ಕಲಿತಿರುವುದಿಲ್ಲ ಅಷ್ಟೇ ಎಂದು ಅನಿಸಿತು.
ಸಹಜವಾಗಿಯೇ ಸಂಗೀತವನ್ನೂ ಪೋಷಿಸುತ್ತಿರುವ ಇವರಿಗೆ ಸಾಂಸ್ಥಿಕ ಪ್ರೋತ್ಸಾಹದ ಅಗತ್ಯವಿದೆ ಎಂದುಕೊಂಡೆ. ಅದಕ್ಕೆ ಸರಿಯಾಗಿ ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ “ಕನ್ನಡವೇ ಸತ್ಯ” ಎಂಬ ಅದ್ಭುತವಾದ ಕಾರ್ಯಕ್ರಮವನ್ನು ಸಿ.ಅಶ್ವತ್ಥ್ ತಂಡ ನಡೆಸಿಕೊಟ್ಟಿತ್ತು. ಅದನ್ನು ಕಂಡ ಮೇಲಂತೂ ಹೆಂಡ ಕುಡಿದ ಮಂಗನಂತಾಗಿದ್ದೆ. ಸಂಗೀತ ಒಂದೇ ಅಲ್ಲ ಕರಕುಶಲ ಕಲೆ, ಫೋಟೋಗ್ರಫಿ, ಪೈಂಟಿಂ ಗ್, ಮರಳು ಶಿಲ್ಪ್ಪ, ವಾಸ್ತುಕಲೆ, ನಟನೆ, ನೃತ್ಯ, ಕ್ಯಾಲಿಗ್ರಫಿ, ರಂಗಭೂಮಿ ಮುಂತಾದ ಪ್ರಕಾರಗಳಲ್ಲಿ ಆಸಕ್ತಿ ಇರುವ ಸ್ಥಳೀಯರನ್ನು ಸಂಪರ್ಕಿಸತೊಡಗಿದೆ.
ಈ ಬಗ್ಗೆ ತೇಜಸ್ವಿಯವರಲ್ಲೂ ಹೇಳಿದೆ. “ನಿಂಗೆ ಏನು ಬೇರೆ ಕೆಲಸ ಇಲ್ವಾ? ಹೀಗೇ ಆದರೆ ನಿನ್ನ ಬ್ಯಾಂಕಿನವರು ಡಿಸ್ಮಿಸ್ ಮಾಡ್ತಾರೆ ನೋಡ್ತಿರು” ಎಂದರು. ವೃತ್ತಿಗೆ ಅಡ್ಡಿಯಾಗದಂತೆ ಈ ಜವಾಬ್ದಾರಿಯನ್ನೂ ನಿರ್ವಹಿಸುತ್ತೇನೆ. ಈ ಕೆಲಸ ಮಾಡೋರು ಬೇರೆ ಎಷ್ಟು ಜನರಿದ್ದಾರೆ ಹೇಳಿ? ನನ್ನ ವೃತ್ತಿಯನ್ನು ನಾನಲ್ಲದಿದ್ದರೆ ಬೇರೆ ಯಾರಾದರೂ ಮಾಡುತ್ತಾರೆ. ಈ ಫೈನ್ ಆರ್ಟ್ಸ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ನ ಕೆಲಸವನ್ನು ಮಾಡಲು ಎಲ್ಲರೂ ಮುಂದೆ ಬರೋಲ್ಲವಲ್ಲ ಎಂದೆ. “ಏನಾದ್ರೂ ಮಾಡ್ಕೋ ನೀನಂದುಕೊಂಡಷ್ಟು ಸುಲಭವಲ್ಲ ತಿಳ್ಕೋ ಈ ಕೆಲ್ಸ” ಎಂದರು. ಸಮಾನ ಮನಸ್ಕರಾದ ಪ್ರಮೋದ್, ದೀಪಕ್, ಸತ್ಯನಾರಾಯಣ, ಶಾಂತಕುಮಾರ್, ಮನೋಜ್, ರಾಘವೇಂದ್ರ, ಅಡ್ಯಂತಾಯ, ಸಿದ್ಧಾರ್ಥ, ಮಲ್ಲೇಶ್, ಶುಭವಿ, ಮಯೂರ, ರೇಷ್ಮ, ರಾಧಿಕಾ ಮುಂತಾದವರು ನನ್ನ ಪ್ರಯತ್ನಕ್ಕೆ ಕೈ ಜೊಡಿಸಿದರು. ಪೈಟಿಂಗ್ ಕ್ಲಾಸ್ ಮತ್ತು ಸಂಗೀತ ಅಭ್ಯಾಸ ಪ್ರಾರಂಭವಾಗಿಯೇ ಬಿಟ್ಟವು. ಬಿ ಎಲ್. ಶಂಕರ್, ಟಿ.ಎನ್. ಸೀತಾರಾಂ, ಈಟೀವಿಯ ಸುರೇಂದ್ರನಾಥ್ ಮುಂತಾದವರನ್ನು ಆಹ್ವಾನಿಸಿ ಸಂಸ್ಥೆಯನ್ನು ವಿದ್ಯುಕ್ತವಾಗಿ ಆರಂಭಿಸಿಯೇಬಿಟ್ಟೆವು. ( ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮೀಜಿಯೊಬ್ಬರು ಮುಂದಿನ ದಿನಗಳಲ್ಲಿ ಕೊಲೆ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರಿದ್ದು ಬೇರೆಯೇ ಕಥೆ ಬಿಡಿ.)
– ಮುಂದುವರೆಯುವುದು
Super sir