ಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ʼಸಾಹಿತ್ಯದಲ್ಲಿ ವಾಸ್ತವವಾಗಿ ಇರುವುದು ಗದ್ಯ ಮತ್ತು ಪದ್ಯ ಮಾತ್ರ’
ಆಧುನಿಕತೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ತಲೆಮಾರುಗಳನ್ನು ಹೊಸ ಚಿಂತನೆಗೆ ಹಚ್ಚಿ ಕನ್ನಡ ಭಾಷೆಯ ಸಾಹಿತ್ಯ ಸೃಷ್ಟಿಯಲ್ಲಿ ತನ್ನದೇ ಛಾಪು ಮೂಡಿಸಿದ ತೇಜಸ್ವಿ ಅಜರಾಮರ ಆಗಿರುತ್ತಾರೆ. ಅವರನ್ನು ಮಾದರಿಯನ್ನಾಗಿ ಇಟ್ಟುಕೊಂಡಿರುವ ನಮ್ಮಂಥ ಲಕ್ಷಾಂತರ ಜನ ಅವರಿಗೆ ಸದಾ ಋಣಿಗಳಾಗಿರುತ್ತೇವೆ. ನಮ್ಮ ಗಮನಕ್ಕೆ ಬಾರದ ಅನೇಕ ವಿಚಾರಗಳು ತೀರಾ ಸಾಮಾನ್ಯ ಅನಕ್ಷರಸ್ಥರಿಗೂ ತಿಳಿದಿರುವುದನ್ನು ಕಂಡು ವಿಸ್ಮಿತರಾಗಿ “ಆ ದನ ಮೇಯಿಸುವವರಿಗೆ ತಿಳಿದಿರುವಷ್ಟು ನಮ್ಮ ನಡುವಿನ ಎಷ್ಟೋ ಜನರಿಗೆ ಗೊತ್ತಿಲ್ಲವಲ್ಲಯ್ಯ” ಎಂದು ಜ್ಞಾನದ ವಿಶ್ವವ್ಯಾಪ್ತಿಯನ್ನು ತೆರೆದಿಡುತ್ತಿದ್ದರು.
ತಮ್ಮ ಮನೆಯಲ್ಲಿ ಟೀಟಿ ಅಂಕಣವನ್ನು ಇಟ್ಟುಕೊಂಡಿದ್ದ ತೇಜಸ್ವಿ “ಟೀಟಿ ಈಸ್ ಎ ಗೇಮ್ ಆಫ್ ಕಂಟ್ರೋಲ್ ಕಣಯ್ಯಾ, ಸೀಮಿತ ಸ್ಥಳಾವಕಾಶದಲ್ಲಿ ತನ್ನನ್ನು ತಾನು ನಿಯಂತ್ರ್ರಿಸಿಕೊಂಡು ಪುಟಿದೆದ್ದು ಬರುವ ಚೆಂಡನ್ನು ಸಂಬಾಳಿಸುವುದು ನಾವು ತಿಳಿದಷ್ಟು ಸುಲಭವಲ್ಲ.’’ ನಿಯಂತ್ರಂಣ, ಚುರುಕುತನ, ದೃಷ್ಠಿ, ಚಾಕಚಕ್ಯತೆಗಳೇ ಮೂಲವಾಗಿರುವ ಟೇಬಲ್ ಟೆನಿಸ್ಸನ್ನು ತೇಜಸ್ವಿಯವರು ಕ್ರೀಡೆಯಾಗಿ ಪ್ರೀತಿಸುತಿದ್ದರು. ಅವರ ಕಂಪ್ಯೂಟರ್ ಕೊಠಡಿಯಲ್ಲಿ ಕಂಪ್ಯೂಟರ್ ಟೇಬಲ್ ಆಗಿ ಅದೇ ಟೀಟಿ ಅಂಕಣವನ್ನೇ ಕೊನೆಯವರೆಗೂ ಉಪಯೋಗಿಸುತಿದ್ದರು.
ವಾಡಿಕೆಯಂತೆ ಪ್ರತಿ ಗುರುವಾರ ಸುಮಾರು ಹನ್ನೊಂದು ಗಂಟೆಗೆ ತೇಜಸ್ವಿ ಬ್ಯಾಂಕಿಗೆ ಬರುತ್ತಿದ್ದರು. ಶುಕ್ರವಾರ ಮೂಡಿಗೆರೆ ಸಂತೆಯಾದ್ದರಿಂದ ಅವರ ತೋಟದಲ್ಲಿನ ಕೆಲಸಗಾರರಿಗೆ ಗುರುವಾರ ಸಂಜೆ ಕೆಲಸವಾದ ನಂತರ ವಾರದ ಬಟವಾಡೆಯಾಗುತ್ತಿತ್ತು. ಸರ್ವೇಸಾಮಾನ್ಯವಾಗಿ ಪ್ರತಿ ಗುರುವಾರ ಬಟವಾಡೆಗಾಗಿ ಆರುಸಾವಿರ ಹಣ ಡ್ರಾ ಮಾಡುತ್ತಿದ್ದರು. ಅವರಿಗಾಗಿಯೇ ಐವತ್ತರದ್ದು ಒಂದು, ಹತ್ತರದ್ದು ಒಂದು ಕಟ್ಟು ಎತ್ತಿಡುತ್ತಿದ್ದೆ. ಕೆಲಸಗಾರರಿಗೆ ಹಂಚಿಕೆ ಸುಲಭವಾಗಲೆಂದು ಅವರು ಐವತ್ತು ಮತ್ತು ಹತ್ತರ ಕಟ್ಟುಗಳನ್ನೇ ಕೇಳಿ ಪಡೆಯುತ್ತಿದ್ದರು. ಒಂದು ದಿನ ಬಂದವರೇ “ನಿಮ್ಮಲ್ಲಿ ನನಗೆ ಕ್ರಾಪ್ ಲೋನ್ ಕೊಡುತ್ತೀರೇನಯ್ಯಾ?” ಎಂದರು. ಕೃಷಿ ವಿಭಾಗವನ್ನು ಆಗ ಕುಮಾರಸ್ವಾಮಿ ಎಂಬ ಅಧಿಕಾರಿ ನೋಡಿಕೊಳ್ಳುತ್ತಿದ್ದರು. ಅದಕ್ಕೇನಂತೆ ನಾವು ಕೊಡೋದು ಹೆಚ್ಚೋ, ನೀವು ಬರೋದು ಹೆಚ್ಚೋ ಎಂದು ತೇಜಸ್ವಿಯವರ ಅಭಿಮಾನಿಯಾಗಿದ್ದ ಕುಮಾರಸ್ವಾಮಿಯವರು ತ್ವರಿತವಾಗಿ ಕೆಲಸಗಳನ್ನು ಮಾಡಿಕೊಟ್ಟರು. ತಮಗೆ ಮಂಜೂರಾದ ಹಣವನ್ನು ತೇಜಸ್ವಿಯವರು ಉಪಯೋಗಿಸಿಕೊಳ್ಳಲೇ ಇಲ್ಲ. ನನ್ನ ಹಣ ಖಾಲಿಯಾದಾಗ ಕೇಳ್ತೀನಿ ಕಣಯ್ಯಾ ಈಗ ಅಗತ್ಯವಿಲ್ಲವೆಂದು ಬಳಸಲೇ ಇಲ್ಲ.
ಕರ್ವಾಲೋ ಪುಸ್ತಕ ಪಠ್ಯವಾದಾಗ ಪ್ರಕಾಶನಕ್ಕಾಗಿ ಸರ್ಕಾರೀ ಅಧಿಕಾರಿಗಳು ನಿರ್ಲಜ್ಜರಾಗಿ ಲಂಚ ಕೇಳಿದ್ದನ್ನು ಪ್ರಸ್ತಾಪಿಸಿದ್ದ ತೇಜಸ್ವಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಅನ್ನು ಸರ್ಕಾರ ಕೇವಲ ಹದಿನೈದು ರೂಪಾಯಿಗೆ ಸೌದೆ ಮಾರಿದಂತೆ ಮಾರಿದ್ದನ್ನು ಲೇವಡಿ ಮಾಡಿದ್ದರು. ಬರಹಗಾರ, ಪ್ರಕಾಶಕ, ವಿತರಕ, ಓದುಗ ಈ ರೀತಿ ಮೂಲಭೂತ ವ್ಯವಸ್ಥೆಯಲ್ಲಿ ವೃತ್ತಿಪರ ಬರಹಗಾರರಿಲ್ಲದೇ ಬಹುತೇಕ ಅಧ್ಯಾಪಕರೇ ತುಂಬಿಕೊಂಡಿರುವ ಸ್ಟಿರಿಯೋಟೈಪ್ ಸಾಹಿತಿ ವರ್ಗ, ಬರಹಗಾರನಿಗೆ ನಾಮಕಾವಸ್ಥೆ ಸಂಭಾವನೆ ನೀಡಿ ಸಾವಿರಾರು ಪ್ರತಿ ಮುದ್ರಿಸುವ ಮತ್ತು ಅದೇ ಹಳಸಲು ಹೂರಣದೊಂದಿಗೆ ರಕ್ಷಾಪುಟ ಬದಲಿಸಿ ಸರ್ಕಾರ ಹಾಗೂ ಓದುಗರಿಗೆ ಟೋಪಿಹಾಕಿ ಸಾಹಿತ್ಯ ಸೇವೆ ಮಾಡಲೆಣಿಸುವ ಪ್ರಕಾಶಕರ ನಡುವೆ ಹೊಸ ಬರಹಗಾರರನ್ನು ಗುರುತಿಸಿ ಉತ್ತೇಜಿಸುವ ಪ್ರಜ್ಞಾವಂತ ಪ್ರಕಾಶಕರೂ ಇದ್ದಾರೆ. ಹೊಸದನ್ನು ಬರೆದು ಅದರ ಮೂಲಕ ಜಗತ್ತಿನ ಸಕಾರಾತ್ಮಕ ಮುನ್ನೆಡೆಗೆ ಕಾರಣವಾಗುವ ಲೇಖಕ, ತನ್ನ ಮಿತಿಯಲ್ಲಿ ಪ್ರಾಮಾಣಿಕ ದುಡಿಮೆ ಮಾಡುತ್ತಲೇ ಲೇಖಕರ ಅಳಿವಿಗೋ ಉಳಿವಿಗೋ ಕಾರಣನಾಗುವ ವಿತರಕ, ಕೈಗೆಟಕುವ ಪುಸ್ತಕ ಕೊಂಡು ವಿವೇಚನೆಯಿಂದ ಗಟ್ಟಿಕಾಳು ಆಯ್ದುಕೊಳ್ಳುವ ಪ್ರಜ್ಞಾವಂತ ಓದುಗರೇ ಸಾಹಿತ್ಯವಿನ್ನೂ ತನ್ನ ಹೊಳಪನ್ನು ಕಳೆದುಕೊಳ್ಳದಿರಲು ಕಾರಣ. ಯಾರಿಗೂ ಬೇಕಿಲ್ಲದ ಕಸದ ರಾಶಿಯಂತಿರುವ ಪುಸ್ತಕಗಳು ಕಡೆಗೆ ಸರ್ಕಾರಿ ಗ್ರಂಥಾಲಯಗಳಲ್ಲಿ ಧೂಳು ಹಿಡಿದು ಕಡೆಗೊಮ್ಮೆ ರದ್ದಿಯಂಗಡಿ ಸೇರುತ್ತವೆ. ಪ್ರಕಟವಾಗಿ ರದ್ದಿಯಂಗಡಿ ಸೇರುವ ನಡುವೆ ಅನೇಕರ ಆದಾಯಕ್ಕೆ ಕಾರಣವಾಗುವುದೊಂದೇ ಈ ಪುಸ್ತಕಗಳ ಹೆಗ್ಗಳಿಕೆ.

“ಆತ್ಮಗೌರವವನ್ನು ಕಳೆದುಕೊಂಡು ಉಳಿಸಲೇಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ. ಅಧಿಕಾರಿಗಳಿಗೆ, ಮಂತ್ರಿಮಹೋದಯರಿಗೆ ಪೂಸಿ ಹೊಡೆದು, ಬೆಣ್ಣೆ ತಿಕ್ಕಬೇಕಾದ ಪರಿಸ್ಥಿತಿ ಯಾವ ಕಲಾವಿದನಿಗೂ ಬರಬಾರದು. ಹಾಗಾದಲ್ಲಿ ಅದು ನಮ್ಮ ಸಮಾಜದ ಅರ್ಧಪತನದ ಸಂಕೇತ. ಯಾವ ಕಲೆಯಾಗಲೀ, ಸಂಸ್ಥೆಯಾಗಲೀ ಸರ್ಕಾರೀ ಅಥವಾ ಖಾಸಗೀ ಅನುದಾನದಿಂದ ಪ್ರಾರಂಭವಾದರೂ ಅದು ಪ್ರಸ್ತುತ ಪರಿಸ್ಥಿತಿಗೆ ಅರ್ಥಪೂರ್ಣವಾಗಿದ್ದರೆ ಅದು ಬೆಳೆಯುತ್ತಾ ಹೋದಂತೆ ಅನುದಾನದ ಅಗತ್ಯ ಕಡಿಮೆಯಾಗಲೇಬೇಕು. ಅದು ಬಿಟ್ಟು ಭೂಮಿಯಿರುವವರೆಗೂ ಅನುದಾನದ ಹಂಗಿನಲ್ಲೇ ಇದ್ದು ಮಂತ್ರಿಗಳ, ಅಧಿಕಾರಿಗಳ ತಾಳಕ್ಕೆ ಕುಣಿಯುವ ಅಬ್ಬೆಪಾರಿಯಾದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ. ಅನುದಾನ ಬೇಕೇಬೇಕು, ಅದಿಲ್ಲದೇ ಕೆಲಸ ಕಾರ್ಯ ಸಾಧ್ಯವಿಲ್ಲವೆಂದರೆ ಅರ್ಯಾರೋ ಭ್ರಾಂತರು ಇಲ್ಲವೇ ಪಕ್ಕಾ ಕಳ್ಳರೇ ಇರಬೇಕು’’ ಎಂದಿದ್ದರು ತೇಜಸ್ವಿ.
ಬದುಕಿನೆಡೆಗೆ ಬೆರಗು, ಪ್ರಕೃತಿಯೆಡೆಗೆ ಕುತೂಹಲ, ಮಾನವಸಹಜ ವರ್ತನೆಗಳೆಡೆಗೆ ಸ್ಥಿತಪ್ರಜ್ಞತೆ ಇವುಗಳು ಸರ್ವೇಸಾಧಾರಣವಾಗಿ ಎಲ್ಲರಲ್ಲಿಯೂ ಇರಲೇಬೇಕಾದ ಮನೋಧರ್ಮ. ಇವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸಾಹಿತ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡವರು ತೇಜಸ್ವಿ. `ಕನ್ನಡ ಪುಸ್ತಕಗಳನ್ನು ಜನಾ ಓದ್ತಾ ಇಲ್ಲ, ಇನ್ನು ಕನ್ನಡ ಉದ್ಧಾರವಾಗುವುದಾದ್ರೂ ಹೇಗೆ? ಎಂದು ಆಲಾಪಿಸುತಿದ್ದ ಸಾಹಿತಿ ಮಹೋದಯರಿಗೆ “ನೀವು ಬರೆದ ಕಗ್ಗಳನ್ನೆಲ್ಲಾ ಓದಲಿಲ್ಲ ಅಂದ್ರೆ ಕನ್ನಡಿಗರಿಗೆ ಓದುವ ಅಭ್ಯಾಸವಿಲ್ಲ ಎಂದು ತೀರ್ಮಾನಿಸುವುದು ತಪ್ಪು. ಜನ ಬಯಸುವ ಹಾಗೂ ಅವರಿಗೆ ಅಗತ್ಯವಿರುವ ಬರಹವು ಎಂದಿಗೂ ತನ್ನ ಸತ್ವವನ್ನಾಗಲೀ, ಬೇಡಿಕೆಯನ್ನಾಗಲೀ ಕಳೆದುಕೊಳ್ಳುವುದಿಲ್ಲ.’’ ಗಂಭೀರ ವಿಚಾರಗಳ ಮೇಲೆ ಕುತೂಹಲಕರವಾಗಿ ತಿಳಿಹಾಸ್ಯದೊಂದಿಗೆ ಬರೆದ ಜನಪ್ರಿಯ ಲೇಖಕರಲ್ಲಿ ತೇಜಸ್ವಿಯವರು ಕರ್ನಾಟಕದ ಮಟ್ಟಿಗೆ ವಿಶೇಷವಾಗಿ ಕಾಣುತ್ತಾರೆ. ಕುವೆಂಪುರವರ ಪ್ರಕೃತಿಯ ಆರಾದನೆ ಮತ್ತು ಕಾರಂತರ ನಿಸರ್ಗ ಕುತೂಹಲ ಮಿಳಿತಗೊಂಡು ಬೆರಗಾಗಿ ಹೊರಹೊಮ್ಮುವಂತೆ ಬರೆದ ತೇಜಸ್ವಿ ತಮ್ಮ ವಿಶಿಷ್ಠ ನಿರೂಪಣಾ ಶೈಲಿಯಿಂದ ತೇಜಸ್ವಿ ಯುವಜನ ಮತ್ತು ಮಕ್ಕಳು ಸಾಹಿತ್ಯ ಮತ್ತು ಬದುಕಿನಲ್ಲಿ ವಿಭಿನ್ನ ಧೋರಣೆಯನ್ನ ಬೆಳೆಸಿಕೊಳ್ಳಲು ಕಾರಣರಾದರು ಎಂಬುದು ಎಲ್ಲಕ್ಕಿಂತ ಮುಖ್ಯ.
ತೇಜಸ್ವಿಯವರ ಸಾಹಿತ್ಯವನ್ನು ಯಾವ ಪ್ರಕಾರಕ್ಕೆ ಸೇರಿಬೇಕೆಂಬ ಗೊಂದಲದಲ್ಲಿಯೇ ಮುಳುಗಿಹೋಗಿದ್ದ ವಿಮರ್ಶಕ ಮಹಾಶಯರಿಗೆ, ” ವಿಮರ್ಶೆಗಳು ಓದುಗರ ಹಾದಿತಪ್ಪಿಸಿ ಕೃತಿಗಳ ಅಪಾರ್ಥಕ್ಕೆ ಕಾರಣವಾಗಬಾರದು. ಅಥವಾ ಪೂರ್ವಾಗ್ರಹದಿಂದ ಉತ್ಪ್ರೇಕ್ಷೆ ಮಾಡಿ ಕಿರಿದಾದ್ದನ್ನು ಹಿರಿದನ್ನಾಗಿಯೂ, ಅಸಾಧಾರಣವಾದದ್ದನ್ನು ಯಕಶ್ಚಿತ್ತನ್ನಾಗಿ ಅನಾವರಣಗೊಳಿಸುವುದೂ ಸಹಾ ತಪ್ಪು. ಸಾಹಿತ್ಯದಲ್ಲಿ ಪ್ರಕಾರ ವರ್ಗೀಕರಣವನ್ನು ವಿಮರ್ಶಕರ ವಿಮರ್ಶೆಯ ಅನುಕೂಲಕ್ಕೇ ಮಾಡಿಕೊಂಡಿರುವುದೇ ಹೊರತು ವಾಸ್ತವವಾಗಿ ಇರುವುದು ಗದ್ಯ ಮತ್ತು ಪದ್ಯ ಮಾತ್ರ’’ ಎಂದಿದ್ದರು ತೇಜಸ್ವಿ.
ಸಾಹಿತ್ಯದಲ್ಲಿ ಅಗೋಚರವಾದದ್ದು ಮತ್ತೊಂದೇನೋ ಇರುತ್ತದೆ. ನೇರವಾಗಿ ಹೇಳದ, ಹೇಳಬೇಕಾಗಿಲ್ಲದ್ದನ್ನು ಅಥವಾ ಹೇಳಲಾಗದ್ದನ್ನು ಇನ್ ಬಿಟ್ವೀನ್ ದ ಲೈನ್ಸ್ನಲ್ಲಿ ಸಹಜವಾಗಿ ಸ್ಪುರಿಸುವ ಅಂತಃಶ್ಯಕ್ತಿ ಸಾಹಿತ್ಯಕ್ಕಿದೆ. ಸೃಜನಾತ್ಮಕ ಸಾಹಿತಿಗೆ ಅನೇಕ ವೇಳೆ ಸಾಹಿತ್ಯಕ್ಕೆ ನೇರವಾಗಿ ಸಂಬಂಧಿಸದ ವ್ಯಕ್ತಿಗಳ ಅಭಿಪ್ರಾಯ, ಮೆಚ್ಚುಗೆ, ಟೀಕೆಗಳೇ ವಿಮರ್ಶಕರಿಗಿಂತ ಗಾಢವಾದ ಪರಿಣಾಮ ಬೀರುತ್ತವೆ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

