ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸಾವನ್ನು ಅರಿಯಲು ಇರುವ ಮಾರ್ಗವೆಂದರೆ ಬದುಕು ಮಾತ್ರ
ಅವರ ಕೃತಿಗಳಲ್ಲಿ ತೀರಾ ವಿರಳವಾಗಿ ಪ್ರಸ್ತಾಪವಾಗುವ ಸಾವಿನ ಕುರಿತು ಹೀಗೆ ಹೇಳುತ್ತಾರೆ- “ಸಾಯುವಾಗ ಮನುಷ್ಯ ಏನನ್ನು ಬಯಸುತ್ತಾನೋ ಅವನು ಅದೇ ಆಗಿರುತ್ತಾನೆ. ಜೀವನದಾದ್ಯಂತ ಏನನ್ನೋ ಬಯಸಿ ಸಾಯುವಾಗ ಇನ್ನೊಂದನ್ನು ಬಯಸಲು ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಒಂದು ಮಾತ್ರ ಅಭಿಪ್ರಾಯದ ವಿಷಯವೂ ಅಲ್ಲ, ಅನುಮಾನದ ಸಂಗತಿಯೂ ಅಲ್ಲ, ಅದೇ ಸಾವು. ಸಾವಿನ ಬಗೆಗಿನ ಅರಿವು, ಅರಿವಿನ ಸಾವಿನಲ್ಲಿ ಪರ್ಯಾವಸಾನವಾಗುತ್ತದೆ. ಅಂತಿಮ ಸತ್ಯವೆಂದರೆ ಸಾವನ್ನು ಅರಿಯಲು ಇರುವ ಒಂದೇ ಒಂದು ಮಾರ್ಗವೆಂದರೆ ಬದುಕು ಮಾತ್ರ”.
ಬರಹಗಾರ ಸಾಹಿತಿ ಎನಿಸಿಕೊಂಡ ದಿನ ಸಾಯುತ್ತಾನೆ ಎಂದು ಅಭಿಪ್ರಾಯಿಸಿದ ಅವರ ಈವರೆಗಿನ ಬರಹಗಳನ್ನು ಇಡೀಯಾಗಿ ಅವಲೋಕಿಸಿದಾಗ ಸತ್ಯದರ್ಶನಕ್ಕಾಗಿ ಸತತವಾದ ಹಾಗೂ ಪ್ರಾಮಾಣಿಕ ಹುಡುಕಾಟ ಸ್ಪಷ್ಠವಾಗಿ ಗೋಚರವಾಗುತ್ತದೆ.
ಮಿಲೆನಿಯಂ ಸರಣಿಯು ಅಂತರ್ಜಾಲದಲ್ಲಿನ ಮಾಹಿತಿಯ ರಿಮೇಕ್ ಎಂದು ಕಟಕಿಯಾಡಿದವರಿದ್ದರೂ ಕನ್ನಡದ ಮಟ್ಟಿಗೆ ಆ ಕೆಲಸವನ್ನು ಮಾಡುವ ಪ್ರಯತ್ನವನ್ನು ಬೇರಾರೂ ಮಾಡದಿದ್ದುದು ಗಮನಾರ್ಹ.
ತೇಜಸ್ವಿಯವರ ಸಾಹಿತ್ಯವು ಕೊಂಚ ಉತ್ಪ್ರೇಕ್ಷೆಯಿಂದ ಕೂಡಿರುತ್ತದೆ ಎಂಬ ಮಾತುಗಳು ಸಾಹಿತ್ಯ ವಲಯದಲ್ಲಿ ಅಲ್ಲಲ್ಲಿ ಕೇಳಿ ಬಂದಿರುವುದೂ ಉಂಟು. ಬಹುತೇಕ ಓದುಗರು ಅವರ ಬರಹವನ್ನು ಮೆಚ್ಚಿರುವಾಗ ಅಂತಹ ಉತ್ಪ್ರೇಕ್ಷೆಗಳಿಂದ ಯಾರಿಗೂ ತೊಂದರೆಯಾಗಿರಲಾರದು ಎನಿಸಿದೆ ನನಗೆ. ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಮೂಲ ಕೈಬರಹದ ಪ್ರತಿರೂಪದಲ್ಲೇ ಅಚ್ಚು ಹಾಕಿಸಿ ಪ್ರಕಟಿಸಿದಾಗ ತೇಜಸ್ವಿ ಅನೇಕರಿಂದ ವಿವಿಧ ಕಾರಣಗಳಿಗಾಗಿ ಟೀಕೆ ಎದುರಿಸಬೇಕಾಯಿತು. ಸಾಹಿತ್ಯ ವಲಯದಲ್ಲಿ ಈ ರೀತಿಯ ಕುಹುಕಗಳು ಸಾಮಾನ್ಯವೇ ಆಗಿರುವುದರಿಂದ ಈ ಕೆಳಗಿನ ಮಾತನ್ನು ನೆನಪಿಸಿಕೊಳ್ಳಬಹುದು. ಸಾಹಿತ್ಯ ತಿಳಿದಿರದ ರಾಜಕಾರಣಿ ಇರಬಹುದು ಆದರೆ ರಾಜಕಾರಣ ಮಾಡಿ ಗೊತ್ತಿಲ್ಲದ ಸಾಹಿತಿ ಇರಲಾರ.
ಸಾಹಿತ್ಯ ವಲಯದಲ್ಲಿ ಮತ್ಸರದಿಂದ ಈ ಟೀಕೆಟಿಪ್ಪಣಿಗಳು ತೀರಾ ಖಾಸಗೀ ಹಾಗೂ ಕೀಳುಮಟ್ಟಕ್ಕೂ ಇಳಿಯುವ ಸಾದ್ಯತೆಗಳು ಬಹಳವಿವೆ. ಶೂದ್ರ ಕುಟುಂಬದಲ್ಲಿ ಜನಿಸಿದ ಕುವೆಂಪುರವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಹೋರಾಟ, ಸಾಧನೆಗಳನ್ನು ಕಂಡ ಅಸೂಯೆಯ ಕೆಲ ಕುಹುಕಿಗಳು, ಕುವೆಂಪು ಹುಟ್ಟಿನ ಬಗ್ಗೆ ಸಲ್ಲದ ಅವಿವೇಕದ ಅಪದ್ಧವನ್ನು ಆಡಿದಾಗ ತೇಜಸ್ವಿ ” ಹಾಗಾದರೆ ಶೂದ್ರರಲ್ಲದವರ ಮನೆಗಳಲ್ಲಿ ಹುಟ್ಟಿರುವ ಪೆದ್ದರು, ಮೂರ್ಖರು, ಹೆಡ್ಡರ ಬಗ್ಗೆ ನಿಮ್ಮಭಿಪ್ರಾಯವೇನೋ?” ಎಂದು ಕಪಾಳಕ್ಕೆ ಹೊಡೆದಂತೆ ಪ್ರತ್ಯುತ್ತರ ನೀಡಿದ್ದರು.

ಕುವೆಂಪುರವರ ಕೊಳಲು ಕವನ ಸಂಕಲನದಲ್ಲಿದ್ದ “ಜಯ ಭಾರತ ಜನನಿಯ ತನುಜಾತೆ” ಗೀತೆಗೆ ಸಂಬಂಧಿಸಿದಂತೆ ಅನಗತ್ಯ ವಿವಾದವೊಂದು ಎದ್ದಾಗ, ತೇಜಸ್ವಿ “ಕುವೆಂಪು ಬದುಕಿದ್ದಾಗಲೇ ಅನೇಕ ಮರು ಮುದ್ರಣಗಳನ್ನು ಕಂಡಿದ್ದ ಈ ಗೀತೆಯಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಿರಲಿಲ್ಲ. ಈಗ ಇದು ನಾಡಗೀತೆಯಾಗಿ ಸರ್ಕಾರದಿಂದ ಅಂಗೀಕೃತವಾದ ಮೇಲೆ ಮದ್ವರ ಹೆಸರು ಸೇರಿಸಿ ತಿದ್ದುಪಡಿಮಾಡಲು ಹೊರಟಿರುವುದು ಕವಿಗೆ ಮಾಡುವ ಅಗೌರವವೇ ಸರಿ. ಕವಿಯ ಮರಣಾನಂತರ ಕವಿ ನನ್ನ ಬಳಿ ಹೀಗೆಂದಿದ್ದರು, ಮಧ್ವರ ಹೆಸರನ್ನು ಸೇರಿಸಲು ಒಪ್ಪಿದ್ದರು ಎಂದೆಲ್ಲಾ ಅಸಂಬದ್ಧವಾಗಿ ಹೇಳಿಕೆ ಕೊಡುವುದು ಕಲಹಪ್ರಿಯತೆಯೇ ಹೊರತು ಬೇರೇನೂ ಅಲ್ಲ. ಸನಾತನಿಯೊಬ್ಬ ಆಲೋಚನೆ ಮಾಡಿದಾಗ ಉಂಟಾಗದಿರುವ ಗೊಂದಲ, ಇಕ್ಕಟ್ಟು-ಬಿಕ್ಕಟ್ಟುಗಳು ಒಬ್ಬ ಶೂದ್ರ ಆಲೋಚನೆ ಮಾಡಲು ಪ್ರಾರಂಭಿಸಿದೊಡನೆ ಉಂಟಾಗಲು ತೊಡಗುತ್ತದೆ. ವೈದಿಕ ಸಂಸ್ಕೃತಿಯು ಭಾರತವೆಂಬ ಆಲದಮರಕ್ಕೆ ಹತ್ತಿಕೊಂಡಿರುವ ಸದಾ ಅವನತಿ ಹಾಗೂ ಸೃಷ್ಟಿ ವಿರೋಧಿಯಾದ ಒಂದು ಮುದಿ ಬಂದಳಿಕೆ.’’ ಎಂದು ಸ್ಪಷ್ಠನೆ ನೀಡಿದ್ದರು ತೇಜಸ್ವಿ.
ಭಾರತೀಯ ಸಂಸ್ಕೃತಿಯೆಂದರೆ ಕೇವಲ ವೈದಿಕ ಸಂಸ್ಕೃತಿಯಲ್ಲ. ಆಡಳಿತ ವ್ಯವಸ್ಥೆಯ, ಅಧಿಕಾರ ಚಲಾಯಿಸುವ, ಸರ್ಕಾರದ ನೀತಿನಿಯಮಗಳ ರೂಪುರೇಷೆ ತಯಾರಿಸುವ, ಮಾದ್ಯಮದ ಆಯಕಟ್ಟಿನ ಜಾಗಗಳಲ್ಲಿ ಯಾವಯಾವುದೋ ಕಾರಣಗಳಿಂದ ತಳಊರಿರುವ ಸನಾತನಿಗಳು ತಮ್ಮ ವಾದಕ್ಕೆ ವ್ಯತಿರಿಕ್ತವಾದ ವಿಚಾರಗಳು ಪ್ರಕಟವಾಗದಂತೆ , ಜನಮಾನಸವನ್ನು ತಲುಪದಂತೆ, ಕಾರ್ಯರೂಪಕ್ಕೆ ಬಾರದಂತೆ ವ್ಯವಸ್ಥಿತವಾಗಿ ತಡೆದು ವೈಚಾರಿಕ ಗೂಂಡಾಗಿರಿ ನಡೆಸುತ್ತವೆ. ತನ್ಮೂಲಕ ಈ ದೇಶದ ಹಣೆಬರಹವನ್ನು ತಮ್ಮ ಹಿತಾಸಕ್ತಿಗನುಗುಣವಾಗಿ ನಿರ್ಧರಿಸುತ್ತಾರೆ. ಹಿಂದೂ ಕೋಮುವಾದವೆಂದರೆ ಬ್ರಾಹ್ಮಣಶಾಹಿತ್ವ ಮಾತ್ರ ಎಂದು ನಂಬಿದ್ದ ತೇಜಸ್ವಿ ಫ್ಯಾಸಿಸಂನ ಇತರೇ ಕಾಂಪೋನೆಂಟ್ಗಳ ಬಗ್ಗೆ ತಮ್ಮ ಬರಹದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿಲ್ಲದಿರುವುದು ಅಚ್ಚರಿಗೆ ಕಾರಣವಾಗುತ್ತದೆ.
ತನಗೆ ಏನು ಅನಿಸ್ತಿಲ್ಲವೋ ಅದು ಅನಿಸ್ತ ಇದೆ ಎಂದು ಒಪ್ಪಿಕೊಳ್ಳುವುದು ಆತ್ಮವಂಚನೆ ಎಂಬುದನ್ನು ಸಂದರ್ಭಾನುಸಾರ ವ್ಯಕ್ತಪಡಿಸುತಿದ್ದ, ತೇಜಸ್ವಿ, ಮನು಼ಷ್ಯ ಸಹಜವಾಗಿ ಬದುಕಬೇಕು, ಕುತೂಹಲ, ಅನ್ವೇಷಣೆ, ಅರಿಯುವ ಹಂಬಲ, ತಿಳಿದಿದ್ದನ್ನು ಅನ್ವಯಗೊಳಿಸುವ ಸಂಕಲ್ಪ ಪ್ರಕೃತಿ ಸಹಜವಾಗಿ ಮಾನವನಲ್ಲಿರುತ್ತದೆ. ಯಾರಿಗೋ ನೋವಾಗುತ್ತದೆಯೆಂದು ವಾಸ್ತವಕ್ಕೆ ಅಪಚಾರವೆಸಗಬಾರದು’ ಎಂದು ನಂಬಿದ್ದರು. ಅವರ ಸಾಹಿತ್ಯದಲ್ಲಿ ನಮ್ಮದೇ ಜಗತ್ತಿನ ಅನೇಕ ಪಾತ್ರಗಳು ಪ್ರಾತಿನಿಧಿಕವಾಗಿ ಬರುತ್ತವೆ. ದೇಸೀ ಜ್ಞಾನದ ಪ್ರತೀಕ ಮಂದಣ್ಣ ಆಧುನಿಕ ವಿಜ್ಞಾನದ ರೂಪಕ ಕರ್ವಾಲೋರನ್ನು ಚಕಿತಗೊಳಿಸುವ ಸನ್ನಿವೇಶ ನಮ್ಮ ಮಟ್ಟಿಗೆ ಹೊಸಚಿಂತನೆಯ ಮೊದಲ ಮೆಟ್ಟಿಲಾಗುತ್ತದೆ. ಗ್ರಾಮೀಣ ಬದುಕು ತೀವ್ರಗತಿಯಲ್ಲಿ ಪಲ್ಲಟವಾಗುತ್ತಿರುವ ಈ ಕಾಲಘಟ್ಟದಲ್ಲಿ ವರುಷಗಳ ಹಿಂದೆಯೇ ಇದನ್ನೆಲ್ಲಾ ಸೂಕ್ಷ್ಮವಾಗಿ ಗ್ರಹಿಸಿದ್ದು ತೇಜಸ್ವಿಯವರ ಅವರ ಸಾಕ್ಷಿಪ್ರಜ್ಞೆಯ ಖಚಿತತೆ.
ಸೂರಾಚಾರಿಯೊಳಗಿನ ಕಲಾವಿದ ವಿಕಾರವಾದ ಮಾರಿ ಮಸಣಿಯ ಗೊಂಬೆ ಮಾಡುವುದಕ್ಕೆ, ಕುಬೇರನೊಳಗಿನ ಮಾನವೀಯ ವೈದ್ಯ ಪಂಜುರ್ಲಿ ಭೂತದ ಪ್ರತಿನಿಧಿಯಾಗುವುದಕ್ಕೆ, ಮಂದಣ್ಣನೊಳಗಿನ ಹುಟ್ಟಾ ನ್ಯಾಚುರಲಿಸ್ಟ್ ಬಟ್ಟಿಸಾರಾಯಿ ಕೇಸಿನಲ್ಲಿ ಸಿಲುಕಿ ಗೋಳಾಡುವುದಕ್ಕೆ, ಮೂರ್ಖತನದ ಮುಸುಗಿನಲ್ಲಿದ್ದ ಸೂಪರ್ ಇಂಟೆಲಿಜೆಂಟ್ ಮಾರ ತೋಟ ಕಾಯ್ದುಕೊಂಡು ಶಿಕಾರಿ ಮಾಡಿಕೊಂಡು ತಿರುಗಿಕೊಂಡಿರುವುದಕ್ಕೆ ಸೀಮಿತರಾಗಿ ಸೊರಗಿ ಹೋಗುವ ತರಹದ ವಿಪರ್ಯಾಸಗಳಿಂದಲೇ ಎಷ್ಟೋ ದೇಸೀ ಜ್ಞಾನ ಅಕಾಡೆಮಿಕ್ ವಲಯದಿಂದ ಅಸ್ಪೃಷ್ಯವಾಗಿ ದೂರ ಉಳಿದಿವೆ. ಮಾರ, ಮಂದಣ್ಣ, ಸೂರಾಚಾರಿ, ಕುಬೇರ ಇವರೆಲ್ಲಾ ನಮ್ಮ ಯೂನಿವರ್ಸಿಟಿಯೊಳಗೆ ಬರಬಹುದೇ? ಈಗಾಗಲೇ ಒಳಸೇರಿ ತಮ್ಮದೇ ಬಾವಿ ಕಪ್ಪೆಯ ವ್ಯವಸ್ಥೆಯನ್ನು ಸೃಷ್ಠಿಸಿಕೊಂಡು, ಜಾತಿ ರಾಜಕಾರಣ ಮಾಡುತ್ತಾ, ಸ್ವಹಿತಾಸಕ್ತಿಯ ಮೆಣಸಿನಘಾಟಿನ ಹೊಗೆ ಹಾಕಿರುವವರು ಅಮಾಯಕ ಸಹಜ ಜ್ಞಾನವನ್ನು ಒಳಬಿಟ್ಟುಕೊಳ್ಳುವರೇ? ಒಳಗೆ ಬಂದರೂ ನೆಮ್ಮದಿಯಾಗಿ ಇರಗೊಡುವರೇ?
ಯಾವಯಾವುದೊ ಕಾರಣಗಳಿಂದ ಸಾಂಸ್ಥಿಕ ವ್ಯವಸ್ಥೆಯೊಳಕ್ಕೆ ತೂರಿಕೊಂಡ ವ್ಯಕ್ತಿಗಳಿಂದ ಆ ಸಂಸ್ಥೆಗಳ ನಿಜ ಆಶಯವೇ ಬದಿಗೆ ಸರಿಸಲ್ಪಡುತ್ತದೆ. ವಿನಾಕಾರಣ ಯಾರದ್ದೋ ಮೆರವಣಿಗೆ ಮಾಡುವ, ಅಪಾತ್ರರಿಗೆ ಪಟ್ಟ ಕಟ್ಟುತ್ತಾ ಹೋಗುವ ಅನಪೇಕ್ಷಿತ ಚಟುವಟಿಕೆಗಳ ಕೇಂದ್ರವಾಗುವ ಸಂದರ್ಭದ ಸಮಕಾಲೀನತೆಯ ಅರಿವಿಲ್ಲದೇ ನಿಜ ಪ್ರತಿಭೆಗಳು ತಮ್ಮ ಜನಸಾಮಾನ್ಯ ಪಾತ್ರದಲ್ಲಿಯೇ ಎಂದಿನಂತೆ ದಿನ ಕಳೆಯುತ್ತವೆ ಈ ಜಗತ್ತಿನ ನಿಜವಾದ ಬೌದ್ಧಿಕಶಕ್ತಿ ಸಾರ್ವಜನಿಕವಾಗಿ ಪ್ರಕಟಗೊಳ್ಳದೇ ಎಲ್ಲೋ ಸುಪ್ತವಾಗಿ ತನ್ನ ಕೆಲಸದ ನಿಜ ಮೌಲ್ಯದ ಅರಿವಿಲ್ಲದೇ ಪ್ರವಹಿಸುತ್ತಾ ಅಮಾಯಕತೆಯಿಂದ ದುಡಿಯುತ್ತಿರುತ್ತದೆ.
ಏನನ್ನೂ ಮಾಡದೇ, ಮಾಡಲೇಬೇಕಿರುವ ಕೆಲಸಕ್ಕೆ ಹೊಸಾ ಸ್ಕೀಮೊಂದನ್ನು ಸೃಷ್ಠಿಮಾಡಿ, ಒಂದೇ ಕೆಲಸಕ್ಕೆ ಎರಡು-ಮೂರು ಸಂಭಾವನೆಯನ್ನು ಪಡೆಯುವ ನಾಚಿಕೆಗೆಟ್ಟಿರುವ ಘನವಿಧ್ವಾಂಸರುಗಳು ಇರುವವರೆಗೆ ಮಾರ-ಮಂದಣ್ಣಾದಿಗಳು ಹೇವರಿಕೆಯಿಂದ ಯೂನಿವರ್ಸಿಟಿಗಳಿಂದ ದೂರವೇ ಉಳಿಯುತ್ತಾರೆ ಹಾಗೂ ಇಂಥಾದ್ದೊಂದು ವ್ಯವಸ್ಥೆಯಿದೆ ಎಂದು ಅವರಿಗಾಗಲೀ, ಇಂಥಾ ಪ್ರತಿಭೆಗಳಿವೆ ಎಂದು ವ್ಯವಸ್ಥೆಗಾಗಲೀ ತಿಳಿಯವ ಸಂದರ್ಭ ನಿರ್ಮಾಣವಾಗುವುದೇ ಸಂದೇಹಾಸ್ಪದ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

