ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಸೆಕೆಂಡ್ ಇನ್ನಿಂಗ್ಸ್
ನಮ್ಮೂರಿನಲ್ಲೊಬ್ಬರು ಮಧ್ಯಪಾನ ವ್ಯಸನಿಗಳನ್ನು ಸುಧಾರಿಸಿ, ಅವರನ್ನು ಸಭ್ಯ ನಾಗರೀಕರನ್ನಾಗಿಸುವ ಕೆಲಸ ಕೈಗೆತ್ತಿಕೊಂಡಿದ್ದರು. ತೇಜಸ್ವಿಯವರ ತೋಟದ ಮುಂದಿನ ಮುಖ್ಯ ದಾರಿಯಲ್ಲೇ ಸಂಚರಿಸುತ್ತಿದ್ದ ಅವರು ತೇಜಸ್ವಿಯವರಿಗೆ ಪರಿಚಿತರಾಗಿದ್ದರು. ಹೀಗೇ ಅಮಲು ರೋಗಿಗಳನ್ನು ಬೈಕ್ನಲ್ಲಿ ಮೂಡಿಗೆರೆಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದವರಿಗೆ ಒಮ್ಮೆ ತೇಜಸ್ವಿ ಎದುರಾದರು. ಬೈಕ್ ನಿಲ್ಲಿಸಿದವರೇ “ನಮಸ್ಕಾರಾ ಸಾರ್” ಎಂದರು. ತಮ್ಮ ಹಿಂಬದಿ ಕುಳಿತಿದ್ದ ರೋಗಿಯೊಬ್ಬರನ್ನು ಪರಿಚಯಿಸಿ “ಸಾರ್ ಇವರು ಚಂದ್ರೇಗೌಡ ಅಂಥಾ. ಈಗ್ಗೆ ಎರಡು ತಿಂಗಳ ಹಿಂದೆ ನಮ್ಮ ಆಸ್ಪತ್ರೆಗೆ ಇವರನ್ನು ಇವರ ಹೆಂಡತಿ ಕರೆತಂದು ಸೇರಿಸಿದ್ದರು. ಹದಿನೈದೇ ದಿನದೊಳಗೆ ಕುಡಿತ ಬಿಟ್ಟು ಸರಿಯಾಗಿ ಮನೆಗೆ ಹೋದರು” ಎಂದರು.
ತೇಜಸ್ವಿ ಮೆಚ್ಚುಗೆಯಿಂದ ನೋಡಿದರು. ಜೊತೆಯಲ್ಲಿದ್ದ ಮನುಷ್ಯ ಮಾತ್ರ ಇವರಿಬ್ಬರ ಮಾತಿಗೂ ತನಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಅಲ್ಲೇ ಮೈಕೆರೆದುಕೊಳ್ಳುತ್ತಾ ಕುಳಿತಿದ್ದ ಬೀದಿಬದಿಯ ಕಂತ್ರಿ ನಾಯಿಯನ್ನು ನಿರಾಸಕ್ತಿಯಿಂದ ಗಮನಿಸುತ್ತಿದ್ದ. “ಹೋದ ಶುಕ್ರವಾರ ಇವನ ಹೆಂಡತಿ ಮತ್ತೆ ಫೋನ್ ಮಾಡಿ ನನ್ನ ಗಂಡ ಎರಡನೇ ಇನ್ನಿಂಗ್ಸ್ ಶುರುಮಾಡಿ ಗಂಗನಮಕ್ಕಿ ಸರ್ವಿಸ್ ಸ್ಟೇಷನ್ ಪಕ್ಕದ ಮೋರಿಯೊಳಗೆ ಬಿದ್ದಿದ್ದಾರೆ ಎಂದರು. ಈಗ ಮತ್ತೆ ಅಡ್ಮಿಟ್ ಮಾಡಿಕೊಂಡಿದ್ದೀನಿ ಸರ್” ಎಂದರು.
ಈ ಕುಡುಕರು ತಮ್ಮ ಹೆಂಡತಿಯರಿಗೆ ಕೊಡುತ್ತಿದ್ದ ಕಾಟ ಮತ್ತು ಅಪ್ಪನ ದೆಸೆಯಿಂದ ಮಕ್ಕಳು ಅನುಭವಿಸುತ್ತಿದ್ದ ಕೀಳರಿಮೆ ಮುಂತಾದುವೆಲ್ಲ ಮನಪಟಲದಲ್ಲಿ ಮೂಡಿ ಕೆಂಡಾಮಂಡಲರಾದ ತೇಜಸ್ವಿ ಆ ಅಮಲು ರೋಗಿಯನ್ನು ತಿರುಗಿಯೂ ನೋಡದೇ “ಈ ಅಯೋಗ್ಯರನ್ನೆಲ್ಲಾ ……… …………… ……..”ಎಂದು ಸಿಟ್ಟಿನಿಂದ ಸ್ಕೂಟರ್ ಓಡಿಸಿದರು.
2೦೦೦ನೇ ಇಸವಿಯಲ್ಲಿ `ಮಿಲೆನಿಯಂ ಚಾರಣ’ಎಂಬ ಕಾರ್ಯಕ್ರಮ ಆಯೋಜಿಸಿದ್ದೆವು. ಮಿಲೆನಿಯಂ ಎಂಬ ಪ್ರಿಫಿಕ್ಸ್ ನೋಡಿದ ತೇಜಸ್ವಿ `ಏನಯ್ಯ ಹೀಗೆ ನಾಮಕರಣ ಮಾಡಿದ್ದೀಯಲ್ಲ‘ ಎಂದರು.
`ಏನಿಲ್ಲ, 2೦೦೦ ಎಂಬುದು ಸಂಖ್ಯಾದೃಷ್ಟಿಯಿಂದ ನಮ್ಮ ಜೀವಿತಾವಧಿಯಲ್ಲಿ ವಿಶಿಷ್ಟವಾದ ವರ್ಷವಾದುದರಿಂದ ಹಾಗೆ ಹೆಸರಿಟ್ಟಿದ್ದೇನೆ’ ಎಂದೆ.
ನೇಚರ್ ಕ್ಲಬ್ನ ಎಲ್ಲಾ ಮೂವತ್ತೈದು ಜನ ಸದಸ್ಯರೂ ಭಾಗವಹಿಸಿದ್ದರು. ಬೆಳಿಗ್ಗೆ ಏಳು ಗಂಟೆಗೆ ಭೈರಾಪುರದ ದೇವಾಲಯದ ಆವರಣ ತಲುಪಿದ ನಾವು ರಾತ್ರಿಯಿಡೀ ಸುರಿದಿದ್ದ ಇನ್ನೂ ತಿಳಿಯಾಗದ ಮಂಜಿನ ನಡುವೆ ನಮ್ಮನ್ನೇ ನಾವು ಹುಡುಕಾಡಿಕೊಳ್ಳತೊಡಗಿದೆವು. ಪಕ್ಕದಲ್ಲೇ ಇದ್ದ ನಮ್ಮ ತಂಡದ ಸದಸ್ಯರನ್ನು ದನಿಯೇರಿಸಿ ಕೂಗಿ ಕರೆದು ಮಾತನಾಡಿಸಲಾರಂಬಿಸಿದೆವು. “ಏ ಧನಂಜಯಾ ಎಲ್ಲೋ ಮಾರಾಯ ಕಾಫಿ!”ಎಂಬ ದೊಡ್ಡ ದನಿಯ ಗದರಿಕೆಗೆ ಬೆಚ್ಚಿಬಿದ್ದು ತಿರುಗಿ ನೋಡಿದರೆ, ಅಗಲ ಭುಜದ ಆಜಾನುಬಾಹು ತೇಜಸ್ವಿ ಅಸ್ಪಷ್ಠವಾಗಿ ಗೋಚರಿಸಿದರು.

ನಮ್ಮ ತಂಡದ ಕೇಟರಿಂಗ್ ಪ್ಲಾನರ್ ಸುರೇಂದ್ರನಾಥ್ರದವರಿಗೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಅಡುಗೆ ತಯಾರಿಯ ಉಸ್ತುವಾರಿ ವಹಿಸಿಕೊಳ್ಳುವುದೆಂದರೆ ಎಲ್ಲಿಲ್ಲದ ಉತ್ಸಾಹ. ನಾನು ವಿಧ್ಯಾರ್ಥಿಯಾಗಿದ್ದಾಗ ಹೈಡ್ರೋಕಾರ್ಬನ್ ಮತ್ತು ಕಾರ್ಬೋಹೈಡ್ರೇಟ್ ನಡುವಿನ ವ್ಯತ್ಯಾಸ ತಿಳಿಸಿಕೊಟ್ಟವರು ಇವರು. ಬಿಸ್ಸಿಬಿಸಿ ಕಾಫಿ ಮಾಡಿ ತಂಡದ ಎಲ್ಲರಿಗೂ ತಮ್ಮ ನಳಪಾಕದ ಪರಿಚಯ ಮಾಡಿಕೊಟ್ಟರು. ಆ ಅಪ್ಯಾಯಮಾನವಾದ ಕಾಫಿ ಜೊತೆಗೆ ಸೂರ್ಯನ ಹದವಾದ ಬೆಚ್ಚಗಿನ ಬೆಳಗಿನ ಬಿಸಿಲು ನೀಡುವ ಆನಂದವನ್ನು ಅನುಭವಿಸಿಯೇ ತಿಳಿಯಬೇಕು.
ಸ್ಟಾರ್ಟಿಂಗ್ ಪಾಯಿಂಟ್ ಆಗಿದ್ದ ದೇವಾಲಯದ ಆವರಣದಲ್ಲಿ ಕೆಲ ಸಮಯ ಅಡ್ಡಾಡಿದೆವು. ಮೂಡಿಗೆರೆಯಿಂದ ಪರ್ಸೆಲ್ ತಂದಿದ್ದ ಉಪ್ಪಿಟ್ಟು-ಕೇಸರಿಬಾತ್ನ ಡಬ್ಬ ತೆರೆದಿದ್ದೇ ತಡ ಘಮ್ಮನೆಯ ಸ್ವಾದ ನಮ್ಮೆಲ್ಲರನ್ನೂ ಮತ್ತೆ ದೇವಾಲಯದ ಗರುಡಗಂಬದ ಬಳಿಗೆ ಎಳೆದು ತಂದಿತು. ಅವಲಕ್ಕಿ ಭಟ್ಟರ ಹೆಂಡತಿ ತಯಾರಿಸಿ ಕೊಟ್ಟಿದ್ದ ತಿಂಡಿಯನ್ನು ಪ್ರಶಂಸಿಸುತ್ತಾ ಗಡದ್ದಾಗಿ ತಿಂದೆವು. ತೇಜಸ್ವಿಯವರು ನಮ್ಮ ತಂಡದ ಹುಡುಗರನ್ನು ಪ್ರೀತಿಯಿಂದ ರೇಗಿಸುತ್ತಾ, ಗದರಿಸುತ್ತಾ ಹಾಸ್ಯಚಟಾಕಿಗಳನ್ನು ಹಾರಿಸುತಿದ್ದರು.
ಎತ್ತಿನಭುಜ ಶಿಖರವನ್ನು ಏರಲು ಸಿದ್ದವಾಗಿ ಬಂದಿದ್ದ ನಾವು ತಿಂದಿದ್ದು ಹೆಚ್ಚಾಗಿ ಹೊಟ್ಟೆ ಭಾರದಿಂದ ಫಸ್ಟ್ ಗೇರ್ನಲ್ಲಿಯೇ ಮುಕ್ಕಿರಿಯತೊಡಗಿ ತೇಜಸ್ವಿಯವರಿಂದ ಉಗಿಸಿಕೊಂಡದ್ದೂ ಆಯಿತು. ಬೇಸಿಗೆಯಾಗಿದ್ದರೂ ಕಾಡಿನ ನಡುವೆ ತೇವಾಂಶವಿದ್ದುದರಿAದ ಜಿಗಣೆಗಳು ಹೇರಳವಾಗಿದ್ದವು. ತಂಡದಲ್ಲಿದ್ದ ಹುಡುಗಿಯರು ಜಿಗಣೆಯನ್ನು ಕಂಡು ಹಾವನ್ನೇ ತುಳಿದವರಂತೆ ಬೊಬ್ಬೆ ಹೊಡೆಯಲಾರಂಭಿಸಿದರು. ಮದ್ಯಾಹ್ನದ ಊಟಕ್ಕೆಂದು ಮೊಸರನ್ನ, ಪುಳಿಯೊಗರೆ ತಂದಿದ್ದೆವು. ದೈಹಿಕವಾಗಿ ಬಲವಾಗಿದ್ದ ನಾವು ಕೆಲ ಹುಡುಗರು ಸರದಿಯಂತೆ 200-300 ಮೀಟರ್ ದೂರದವರೆಗೆ ಕಡಾಯಿಗಳನ್ನು ಹೊತ್ತು ನಡೆಯುತ್ತಿದ್ದೆವು. ಪುಳಿಯೊಗರೆಗಿಂತ ಈ ಮೊಸರನ್ನದ ಪರ್ಸೆಲ್ ವಿಪರೀತ ಭಾರವಾಗಿತ್ತು.
“ನಿಮಗೇನಾದ್ರೂ ಬುದ್ಧಿಗಿದ್ದಿಯಿದೆಯೇನ್ರಯ್ಯಾ? ಎಷ್ಟೂ ಅಂತ ಹೊರ್ತೀರಿ. ಸಪರೇಟ್ ಪ್ಯಾಕ್ ಮಾಡಿಸಿ ಅವರವರಿಗೆ ಕೊಡೋದು ಬಿಟ್ಟು, ಎಲ್ಲರದನ್ನು ಒಬ್ಬೊಬ್ಬರೇ ಹೊತ್ತುಕೊಂಡು ರ್ತಿದ್ದೀರಲ್ಲ. ಟ್ರೆಕ್ ಮಾಡ್ತೀರೋ ಇಲ್ಲಾ ಹಮಾಲಿ ಕೆಲಸ ಮಾಡ್ತೀರೋ?” ಎಂದು ತೇಜಸ್ವಿ ಬೆರೆಸಾಡಿದರು. ಸಪರೇಟ್ ಪ್ಯಾಕ್ ಮಾಡಲೆಂದೇ ನಾವೂ ಪ್ಲಾನ್ ಮಾಡಿದ್ದೆವು. ಹಿಂದಿನ ದಿನವೇ ಪ್ಯಾಕ್ ಮಾಡಲು ಮುತ್ತುಗದ ಎಲೆ ಹಾಳೆ ಮತ್ತು ಪೇಪರ್ ತಂದು ಅಡುಗೆಯವರಿಗೆ ನೀಡಿದ್ದೆವು.
ಬಿಸಿಯಾಗಿದ್ದ ಅಡುಗೆ ಪ್ಯಾಕ್ ಮಾಡಿದರೆ ಮದ್ಯಾಹ್ನದ ವೇಳೆಗೆ ಬಿಸಿಲಿಗೆ ಹಾಳಾಗುವುದೆಂದು ಬಾಕ್ಸ್ ನಲ್ಲಿ ಹಾಕಿ ಹಾಗೆಯೇ ಕಳುಹಿಸಿಕೊಟ್ಟಿದ್ದರು. ತೇಜಸ್ವಿಯವರಿಗೆ ಇದನ್ನು ಹೇಳಿದೆ. ‘ನಿನ್ನ ಮ್ಯಾನೇಜ್ಮೆಂಟ್ನಲ್ಲಿ ಇಂಥವೇ ಆಗುವುದು, ಕಂತ್ರಿ ನೀನು’ ಎಂದರು. ಅಲ್ಲಲ್ಲಿ ನಿಂತು ದಣಿವಾರಿಸಿಕೊಂಡು ತಮಾಷೆ, ಹರಟೆ, ಅನುಭವಗಳ ಮೆಲುಕು, ಕಂಡ ಸಸ್ಯಗಳ ಕುರಿತಾದ ಮಾಹಿತಿ ಪಡೆಯುತ್ತ್ತಾ ನಡೆದಿದ್ದ ನಾವು ಸುಮಾರು ಮೂರು ಕಿಲೋಮೀಟರ್ ನಡೆದಿದ್ದೆವು.
ಸೂರ್ಯ ಬಿರಬಿರನೆ ನೆತ್ತಿಯ ಮೇಲೆ ಬಂದಿದ್ದ. ಕಾಡನ್ನು ದಾಟಿ ಬಟಾಬಯಲು ಪ್ರದೇಶಕ್ಕೆ ಬಂದಿದ್ದ್ದೆವು. ಸುಮಾರು ಹನ್ನೆರಡೂವರೆಯ ಸಮಯ. ತಂಡದವರ ನಡಿಗೆ ಕ್ರಮೇಣ ನಿಧಾನವಾಯ್ತು. ಸೂರ್ಯ ಬೇರೆ ಬೆಳಗಿನ ಮಂಜಿನ ಮೇಲೆ ಸೇಡು ತೀರಿಸುವವನಂತೆ ಕರುಣೆಯಿಲ್ಲದೇ ನಮ್ಮನ್ನು ಹಣಿಯುತಿದ್ದ. ಕಡಾಯಿ ಹೊತ್ತ್ತಿದ್ದವರ ಗೋಳಾಟ ನೋಡಲಾರದೇ ತೇಜಸ್ವಿ “ನಿಲ್ರಯ್ಯ ಎಲ್ಲರೂ ಸ್ವಲ್ಪ ಹೊತ್ತು. ಉಪ್ಪಿಟ್ಟು-ಕೇಸರಿಬಾತು ಪವರ್ ಕಳ್ಕೊಂಡಿರೋ ಹಾಗೆ ಕಾಣಿಸುತ್ತೆ. ಹೇಗಿದ್ದರೂ ತಿನ್ನೋಕ್ಕೇ ತಾನೇ ಮೊಸರನ್ನ ತಂದಿರೋದು. ಇಲ್ಲಿಂದ ಆ ನೆತ್ತಿಯವರೆಗೆ ಯಾಕಯ್ಯಾ ಕಡಾಯಿ ಹೊರಬೇಕು? ಇಲ್ಲೇ ತಿಂದು ಬಿಡೋಣ, ಎಲ್ಲರೂ ಅವರವರ ಲಗೇಜು ಅವರವರೇ ಹೊತ್ತುಕೊಂಡಂತೆ ಆಗುತ್ತೆ. ನನಗೆ ಇವರ ಪರದಾಟ ನೋಡೋಕ್ಕೆ ಆಗ್ತಿಲ್ಲ.” ಎಂದು ನಮ್ಮ ಹೆಗಲ ಮೇಲಿದ್ದ ದೊಡ್ಡ ಬಾರವನ್ನು ಉಪಾಯವಾಗಿ ಕೆಳಗಿಳಿಸಿದ್ದರು. ತೇಜಸ್ವಿಯವರ ಕಾಲಾನಂತರ ಇದೇ ಸ್ಥಳಕ್ಕೆ ಚಾರಣ ಬಂದಿದ್ದ ನಮ್ಮ ವಿಸ್ಮಯ ತಂಡ ತೇಜಸ್ವಿಯವರ ಕರ್ವಾಲೋದಲ್ಲಿ ಕಾಣಿಸಿಕೊಂಡಿದ್ದ ಬಿರಿಯಾನಿ ಕರಿಯಪ್ಪನವರಿಂದಲೇ ಬಿರಿಯಾನಿ ಮಾಡಿಸಿ ತಿಂದದ್ದು ಒಂದು ಅಪೂರ್ವ ಅನುಭವ. ಈ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆಮೂಲೆಯಿಂದ ಅಬಾಲವೃದಂದರಾದಿಯಾಗಿ ಸುಮಾರು ನೂರಾ ಇಪ್ಪತ್ತು ಜನ ಭಾಗವಹಿಸಿದ್ದರು.

ತೇಜಸ್ವಿಯವರು ತೀರಿ ಹೋದ ಕೆಲ ದಿನಗಳ ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ರಾಜೇಶ್ವರಿ ಆಂಟಿಯನ್ನು ಮಾತನಾಡಿಸಿಕೊಂಡು ಬರಲು ಹೋಗಿದ್ದೆವು. ಶ್ರೀಮತಿ ತಾರಿಣಿಯವರು ಸಹ ಇದ್ದರು. ಕೆಲ ಸ್ಥಳೀಯರು ಆಗಲೇ “ಇನ್ನು ಇಲ್ಲಿ ಇದ್ದು ನೀವು ಏನು ಮಾಡ್ತೀರಿ? ಮೈಸೂರೋ ಬೆಂಗಳೂರೋ ಸೇರಿಕೊಂಡು ಇದ್ದು ಬಿಡಿ. ನಿಮ್ಮ ತೋಟ ಮಾರುವಿರಾ? ಹಾಗಿದ್ದರೆ ನಮಗೇ ಕೊಡಿ” ಎಂದು ಪೀಠಿಕೆ ಹಾಕಿದ್ದು ನನ್ನ ಗಮನಕ್ಕೆ ಬಂದಿತ್ತು.
ಈ ಜನರ ಬಗ್ಗೆ ತೀವ್ರ ವಿಷಾದ ಹುಟ್ಟಿಸಿತ್ತು ನನಗೆ. ಮೂಡಿಗೆರೆಯಂತ ಊರನ್ನು ಜಗತ್ತಿಗೇ ಪರಿಚಯಿಸಿದ್ದ ಚೇತನ ಅಗಲಿದ ಕೆಲವೇ ದಿನಗಳಲ್ಲಿ ತಮ್ಮ ಹಿತಾಸಕ್ತಿಗಳ ಬಗ್ಗೆ ಯೋಚಿಸಿದ್ದು ಅಕ್ಷಮ್ಯ ಎಂದು ನನಗನಿಸಿತು. ತೇಜಸ್ವಿಯವರ ಕುಟುಂಬದವರಿಗೂ ಇದರಿಂದ ನೋವಾದದ್ದು ಸತ್ಯ. “ಈ ಮೂಡಿಗೆರೆ, ಈ ಹ್ಯಾಂಡ್ಪೋಸ್ಟ್, ಈ ಸ್ಥಳವನ್ನು ನಾವು ತೇಜಸ್ವಿಯವರ ಹೊರತಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ಈ ಸ್ಥಳವನ್ನು ಬಿಟ್ಟು ಹೋಗಬೇಡಿ. ಮೊದಲೇ ತೇಜಸ್ವಿಯವರ ಅಗಲಿಕೆಯಿಂದ ಕಂಗೆಟ್ಟಿರುವ ನಾವು ಮತ್ತೆ ದಿಕ್ಕು ಕಾಣದಂತೆ ಆಗುತ್ತೇವೆ.” ಎಂದು ಆಂಟಿಯವರಲ್ಲಿ ಹೇಳಿದೆ. ಅವರೂ ಸಹ ಈ ಮುಂಚೆಯೇ ಈ ಕುರಿತು ದೃಢ ನಿರ್ಧಾರ ತೆಗೆದುಕೊಂಡಿದ್ದರು. ತಾವು ಅದೇ ಸ್ಥಳದಲ್ಲಿ ನೆಲೆಸುವ ತಮ್ಮ ಪೂರ್ವ ಯೋಜನೆ ತಿಳಿಸಿ ತೇಜಸ್ವಿಯವರ ಆಶಯಗಳ ಸಾಕಾರದ ಭರವಸೆ ನೀಡಿದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

