ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಕೊಟ್ಟುಬಿಡಿ – ಸಬ್ಸಿಡಿ
ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗಲೆಂದು ಹಲವಾರು ಸಹಾಯಧನ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಈ ಸಬ್ಸಿಡಿ ಯೋಜನೆಗಳ ನಿಜವಾದ ಫಲಾನುಭವಿಗಳು ಯಾರು? ಯಂತ್ರೋಪಕರಣಗಳ ಬೆಲೆಯ ಶೇಖಡಾ 5೦ರಷ್ಟನ್ನು ಸರ್ಕಾರ ಸಹಾಯಧನದ ರೂಪದಲ್ಲಿ ನೀಡುತ್ತಿರುವುದು ಯಾರನ್ನು ಉದ್ಧಾರಗೊಳಿಸಲು ಎಂದು ಅರ್ಥವೇ ಆಗುತ್ತಿಲ್ಲ. ವಾಸ್ತವವಾಗಿ 5೦೦೦/- ರೂ. ಬೆಲೆಯ ವಸ್ತುವನ್ನು ಸಬ್ಸಿಡಿ ಯೋಜನೆಗೆ ಸರ್ಕಾರ ಸೇರಿಸಿದ ಕೂಡಲೇ ತಯಾರಕರು, ಮಾರಾಟಗಾರರು ಹಾಗೂ ಅಧಿಕಾರಿಗಳು ಸೇರಿ ಅದೇ ವಸ್ತುವಿನ ಬೆಲೆಯನ್ನು 1೦೦೦೦/- ರೂ. ಎಂದು ಏಕಪಕ್ಷೀಯವಾಗಿ ನಿಗಧಿಗೊಳಿಸುತ್ತಾರೆ.
ಸಬ್ಸಿಡಿ ಆಸೆಗೆ ಮೂರುಕಾಸಿನ ವಸ್ತುವಿಗೆ ಆರು ರೂಪಾಯಿ ನೀಡಿದ ರೈತ ಅರ್ಧಹಣ ಸರ್ಕಾರ ಕೊಡುತ್ತೆ, ನನಗೆ ಅರ್ಧ ರೇಟಿಗೆ ಯಂತ್ರೋಪಕರಣ ಸಿಕ್ಕಿದೆ ಎಂಬ ಭ್ರಮೆಯಲ್ಲಿರುತ್ತಾನೆ. ಸಬ್ಸಿಡಿ ಪಡೆದರೂ ಆ ವಸ್ತುವಿನ ನಿಜವಾದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚು ವ್ಯಯ ಮಾಡಿದ್ದೇನೆಂಬ ಕಲ್ಪನೆಯೇ ಇಲ್ಲದ ರೈತ ಈ ರೀತಿ ಮೋಸಹೋಗಲು ಯರ್ಯಾರಿಗೋ ಮಸ್ಕಾ ಬೇರೆ ಹೊಡೆದಿರುತ್ತಾನೆ. ರೈತರ ಅನುಕೂಲಕ್ಕೆ ಯಾವುದಾದರೂ ಹೊಸ ಸಬ್ಸಿಡಿ ಯೋಜನೆ ಬಂತೆದಂರೆ ಸಂಬಂಧಿಸಿದ ಇಲಾಖೆಯ ನೌಕರರಿಗೆ ಹಬ್ಬವೋ ಹಬ್ಬ. ಬಹುಪಾಲು ರೈತ ಸಮೂಹ ನಿಜವಾಗಿಯೂ ನಾವು ಏನಕ್ಕೆ ಅರ್ಹರು ಎಂಬುದನ್ನು ತಿಳಿಯುವ ಗೋಜಿಗೇ ಹೋಗುವುದಿಲ್ಲ. ತಿಳಿ ಹೇಳಬೇಕಾದವರು ತಾವೂ ದೊಡ್ಡ ವಶೀಲಿ ಬಾಜಿ ನಡೆಸಿ ದೊಡ್ಡ ಪಾಲನ್ನು ಪಡೆದು ತಮ್ಮದೇ ಕೃಷಿಕ ಬಂಧುಗಳನ್ನು ಶೋಷಿಸಿರುತ್ತಾರೆ.
ಈ ಯೋಜನೆಯಡಿ ವಿತರಿಸಿದ / ಖರೀದಿಸಿದ ಯಂತ್ರೋಪಕರಣವನ್ನು ಕುತೂಹಲಕ್ಕಾದರೂ ಬಿಚ್ಚಿ ಬಿಡಿಸಿ ನೋಡಿ, ಅದರಲ್ಲಿರುವ ಸ್ಪೇರ್ ಪಾರ್ಟ್ಸಗಳನ್ನು ಬೆಲೆಕಟ್ಟುತ್ತಾ ಹೋದರೆ ನಾವು ಹೇಗೆ ಮತ್ತು ಯಾವ ಮಟ್ಟದವರೆಗೆ ಮೋಸಹೋಗಿದ್ದೇವೆಂದು ಅರಿವಾಗುತ್ತದೆ. ರೈತರು ಕೊಡುವ ನಿವ್ವಳಹಣ (ಸಬ್ಸಿಡಿ ಕಳೆದು) ಆ ವಸ್ತುವಿನ ನಿಜವಾದ ಮಾರುಕಟ್ಟೆ ದರ ಎಂದುಕೊಂಡರೂ, ಉಳಿದ 5೦% ( ಸಬ್ಸಿಡಿ ಪಾಲು) ಹಣ ಯಾಕೆ, ಯಾರಿಗೆ ಮತ್ತು ಎಲ್ಲಿಗೆ ಹೋಗುತ್ತಿದೆ? ರೈತರ ಹೆಸರಿನಲ್ಲಿ ಕೋಟ್ಯಾಂತರ ಹಣವನ್ನು ಸಹಾಯಧನದ ರೂಪದಲ್ಲಿ ಅಧಿಕಾರಿಗಳು, ಉದ್ಯಮಿಗಳು, ವ್ಯಾಪಾರಿಗಳು ದರೋಡೆ ಮಾಡುತಿದ್ದಾರೆ. ತನಗೆ ಅಗತ್ಯವಿರುವ ಸಲಕರಣೆಗಳನ್ನು ಕೊಳ್ಳಲು ಹೊರಟವನಿಗೆ ಈ ಸಬ್ಸಿಡಿಯ ಆಮಿ಼ಷ ತೋರಿಸಿ ಆ ಹಣವನ್ನು ರೈತರ ಹೆಸರಿನಲ್ಲಿ ಯರ್ಯಾರೋ ಹೊಡೆದುಕೊಳ್ಳುತಿದ್ದಾರೆ.
ಇಂಥದೇ ಕಂಪನಿಯ ಇದೇ ಮಾಡೆಲ್ ನ ಯಂತ್ರೋಪಕರಣಗಳನ್ನೇ ಕೊಂಡರೆ ಮಾತ್ರ ಸಬ್ಸಿಡಿ ಕೊಡುತ್ತೇವೆ ಎಂದು ನಿಗಧಿ ಪಡಿಸಿ ರೈತರಿಗೆ ತಾಕೀತು ಮಾಡಲು ಈ ಅಧಿಕಾರಿಗಳಿಗೆ ಯಾರು ಹೇಳಿದ್ದಾರೆ? ಉಧ್ಯಮಿ-ಅಧಿಕಾರಿ, ವ್ಯಾಪಾರ- ನೌಕರರ ನಡುವಿನ ಒಳ ಒಪ್ಪಂದಕ್ಕೆ ರೈತ ಅರಿವಿಲ್ಲದೇ ಕೆಲವೊಮ್ಮೆ ಮೂರ್ಖನಾಗಿ ಬಲಿಬಿದ್ದಿದ್ದಾನೆ. ನಿಜವಾದ ಬೆಲೆಯಲ್ಲಿನ ಲಾಭದ ಜೊತೆಗೆ ಯಾವುದೇ ಕಾರಣವಿಲ್ಲದೆ ರೈತರ ಹೆಸರಿನಲ್ಲಿ ನಿಗಧಿ ಮಾಡಿರುವ ಕೋಟ್ಯಾಂತರ ರೂಪಾಯಿ ಸಬ್ಸಿಡಿಯನ್ನು ತಯಾರಕರು, ಅಧಿಕಾರಿಗಳು ಮತ್ತು ವ್ಯಾಪಾರಿಗಳು ವ್ಯವಸ್ಥಿತವಾಗಿ ಕುಡಿ ಬಾಳೆಲೆ ಹಾಸಿಕೊಂಡು ಚಕ್ಕಳಂಬಕ್ಕಳ ಹಾಕಿಕೊಂಡು ಪಟ್ಟಾಗಿ ಹೊಡೆಯುತಿದ್ದಾರೆ.
ಮೋಸಹೋಗುವವರಿರುವ ವರೆಗೆ ಮೋಸ ಮಾಡುವವರೂ ಇರುತ್ತಾರೆ. ಕಂಪನಿ/ಮಾಡೆಲ್ ಗಳನ್ನು ನಿಗಧಿ ಮಾಡಲು ಇವರ ಮಾನದಂಡವೇನು? ನಿಗಧಿ ಮಾಡುವಾಗ ನಡೆಯುವ ಡೀಲ್ಗಳು ಎಂಥಹವು, ಮತ್ತು ಎಷ್ಟರವು ಎಂಬುದು ಯಾರಿಗೂ ಗೊತ್ತಿಲ್ಲವೇ? ಅಥವಾ ಗೊತ್ತಿದ್ದರೂ ಸುಮ್ಮನಿರುವ ಜಾಣ ಕುರುಡೇ? ಈ ರೀತಿ ಕೋಟ್ಯಾಂತರ ಹಣ ಲೂಟಿಯಾಗುತ್ತಿರುವಾಗ ಬೆಳೆಗಾರರ ಸಂಘ ಮತ್ತು ರೈತಸಂಘಗಳು ಯಾಕೆ ಸುಮ್ಮನಿವೆ? ಮೇಲ್ಮಟ್ಟದ ಲಾಬಿಯಿಂದ ಬಿಲಿಯನ್ ಲೆಕ್ಕದಲ್ಲಿ ಲೂಟಿಯಾಗಿರುವ ಈ ಯೋಜನೆಯ ಕುರಿತು ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಕಳಪೆ ಬೀಜ, ನಕಲಿ ರಸಗೊಬ್ಬರ, ಮಳೆಯಾಧಾರಿತ ಕೃಷಿ, ಬೆಳೆನಾಶ, ನೆರೆ-ಬರ, ವಿವೇಚನಾರಹಿತ ಸಾಲ ಬಳಕೆ, ಅನಗತ್ಯ ಯಾಂತ್ರೀಕರಣದಿಂದ ದಿಕ್ಕೆಟ್ಟಂತಾಗಿರುವ ರೈತ ಸಮುದಾಯವನ್ನು ಕಂಡು “ಕುಡಿಯಲು ವಿಷ ಕೂಡಾ ಸಬ್ಸಿಡಿಗೆ ದೊರೆಯುತ್ತೆ ಅಂದರೆ ಎರಡು ಬಾಟಲ್ ಜಾಸ್ತಿಯೇ ಇರಲಿ ಎಂಬ ಮನಸ್ಥಿತಿಯಲ್ಲಿದ್ದಾನೆ ಅಮಾಯಕ ರೈತ. ದುರ್ಬಲರಿಗೆ ಸಬಲರು ಮಾಡಬಹುದಾದ ದೊಡ್ಡ ಸಹಾಯವೆಂದರೆ ಅನಗತ್ಯ ನೆರವನ್ನ ನಿಲ್ಲಿಸುವುದು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸ್ವಾವಲಂಬನೆಯ ಬದುಕನ್ನು ನಡೆಸಲು ಅಗತ್ಯವಾಗಿರುವ ಆತ್ಮವಿಶ್ವಾಸವನ್ನು ತುಂಬುವುದು. ಚೀನಾದ ರೇಷ್ಮೆಯನ್ನು ಅವರು ಕಡಿಮೆ ಖರ್ಚಿನಲ್ಲಿ ಬೆಳೆದು ಇಲ್ಲಿಗೆ ತಂದು ಇಲ್ಲಿಯೂ ಕಡಿಮೆ ಬೆಲೆಗೆ ಮಾರುತ್ತಾರೆಂದರೆ ನಮಗೇಕೆ ಹಾಗೆ ಮಾಡಲು ಸಾಧ್ಯವಿಲ್ಲ? ಸಬ್ಸಿಡಿ ಪಡೆದು ಆರಾಮ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಸವಾಲುಗಳೊಡನೆ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.’’ ಎಂದು ಸಲಹೆ ನೀಡಿದ್ದರು ತೇಜಸ್ವಿ.
ರೈತ ಆತ್ಮಹತ್ಯೆ ಮಾಡಿಕೊಂಡಮೇಲೆ ಪರಿಹಾರ ಕೊಡುವುದಕ್ಕಿಂತ ಸಾಯದಂತೆ ಜೀವನ ಸಾಗಿಸುವ ಮಾರ್ಗವನ್ನು ಸೂಚಿಸಿ ಎಂದು ಆಡಳಿತವನ್ನು ತರಾಟೆಗೆ ತೆಗೆದುಕೊಳ್ಳುವ ತೇಜಸ್ವಿ, “ಬೆಳೆೆ ಬೆಳೆಯುವುದನ್ನು ಯಾಕೆ ಹೇಳಿಕೊಡ್ತಾರೆ ಎಂದರೆ ಕೃಷಿ ಇನ್ಪುಟ್ಗೆ ಮರ್ಕೆಟ್ ಬೇಕು. ಮರ್ಕೆಟಿಂಗ್ ಯಾಕೆ ಬೇಕಂದ್ರೆ ರೈತರನ್ನು ಸಾಯಿಸಬೇಕು. ನೂರಕ್ಕೆ ನೂರು ವಿಜ್ಞಾನಿಗಳು ಗ್ರಾಮೀಣ ಪರಿಸರದಿಂದಲೇ ಬಂದವರು. ಆದರೆ ಅವರು ಕೊಡುತ್ತಿರುವ ಔಟ್ಪುಟ್ ಗ್ರಾಮಗಳನ್ನು ಉದ್ದೇಶಿಸಿ ಇರುವುದೇ ಇಲ್ಲ. ಅವರು ನಡೆಸಿದ ಅದ್ಯಯನ ಅವರನ್ನು ಆ ರೀತಿ ಮಾರ್ಪಾಟು ಮಾಡಿರುತ್ತದೆ. ಈ ವಿರೋದಾಭಾಸಕ್ಕೆ ಕಾರಣವೇನು? ತಾವು ತಿರಸ್ಕರಿಸಿದ, ರೂಢಿಸಿಕೊಳ್ಳದ ಆದರ್ಶವನ್ನು ಇವರು ಹೇಗೆ ಬೇರೆಯವರಿಗೆ ಮನದಟ್ಟುಮಾಡಿಕೊಡುತ್ತಾರೆ?’’ ಎಂದು ಪ್ರಶ್ನಿಸುತ್ತಾರೆ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

