ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಗಂಧದ ಚಕ್ಕೆ
ಕುವೆಂಪುರವರ ನಿಧನದ ಸಂದರ್ಭದಲ್ಲಿ ಅನೇಕ ಕನ್ನಡಪರ ಹೋರಾಟಗಾರರು ಮತ್ತು ಕುವೆಂಪು ಅಭಿಮಾನಿಗಳು ಅಗಲಿದ ಸಾಹಿತಿಯ ಅಂತಿಮ ಸಂಸ್ಕಾರವನ್ನು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಆವರಣದಲ್ಲಿಯೇ ಮಾಡಿ, ಅಲ್ಲಿಯೇ ಸ್ಮಾರಕ ಒಂದನ್ನು ನಿರ್ಮಿಸುವ ಯೋಜನೆಯೊಂದನ್ನು ಮುಂದಿಟ್ಟರು. ಅದಕ್ಕಾಗಿ ಧರಣಿಯನ್ನೂ ಕುಳಿತು ಆಗ್ರಹಿಸಿದರು. ವಿಶ್ವವಿದ್ಯಾನಿಲಯ ವಿಶ್ವವಿದ್ಯಾನಿಲಯವಾಗಿಯೇ ಇರಬೇಕು ಹೊರತು ಗೋರಿ ತರಾ ಆಗಬಾರದು. ಕುವೆಂಪುರವರನ್ನು ಇಲ್ಲಿ ಸಂಸ್ಕಾರ ಮಾಡಿ ಸಮಾಧಿ ನಿರ್ಮಿಸಿದರೆ ಮುಂಬರುವ ಎಲ್ಲಾ ಕುಲಪತಿಗಳನ್ನು ಇಲ್ಲಿಯೇ ಸಾಲುಸಾಲಾಗಿ ಮಲಗಿಸುತ್ತಾ ಹೋಗಬೇಕಾಗುತ್ತದೆಯೆಂದು ಎಚ್ಚರಿಸಿದ್ದರು ತೇಜಸ್ವಿ.
ಕುವೆಂಪುರವರ ಶವ ಸಂಸ್ಕಾರದ ಸಂದರ್ಭ. ಸಾವಿರಾರು ಜನ ಸಾಗರದೋಪಾದಿಯಲ್ಲಿ ಸೇರಿದ್ದರು. ಎಲ್ಲರ ಮುಖದಲ್ಲೂ ವಿಷಾಧ ಮತ್ತು ವ್ಯಥೆಯ ಛಾಯೆ. ತೇಜಸ್ವಿಯವರು ಅನ್ಯಮನಸ್ಕರಾಗಿ ನಿಂತಿದ್ದರು. ಚಿತೆಗೆ ಬೆಂಕಿಯಿಡುವ ಸಮಯದಲ್ಲಿ ಯಾರೋ ತೇಜಸ್ವಿಯವರನ್ನು ಅಗ್ನಿಸ್ಪರ್ಷ ಮಾಡಲು ಕರೆದರು. “ಯಾರು ಬೆಂಕಿ ಇಟ್ಟರೂ ಒಂದೇ, ಯಾರೊ ಒಬ್ಬರು ಕೊಡ್ರೀ” ಎಂದರು ತೇಜಸ್ವಿ.

ತಂದೆಯನ್ನು ಕಳೆದುಕೊಂಡ ವೇದನೆ ಅವರಿಂದ ಆ ರೀತಿ ಮಾತನಾಡಿಸಿತ್ತು. ಕಡೆಗೂ ಬಂಧುಗಳ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದಲೇ ನೋವಿನ ಮುಖಭಾವದಿಂದ ಚಿತೆಗೆ ಬೆಂಕಿ ಕೊಟ್ಟಿದ್ದು ಅವರ ವಿಭಿನ್ನ ವ್ಯಕ್ತಿತ್ವಕ್ಕೆ ಕನ್ನಡಿ.
ಅಷ್ಟು ಜನರ ನಡುವಿನಲ್ಲೇ “ರೀ!………………….. ಬನ್ರೀ ಇಲ್ಲಿ” ಎಂದು ಕೂಗಿದರು. ಕರೆಸಿಕೊಂಡವರು ಐ.ಎ.ಎಸ್. ಶ್ರೇಣಿಯ ಹಿರಿಯ ಅಧಿಕಾರಿಗಳಾಗಿದ್ದರು. ಆ ಅಧಿಕಾರಿಗೆ ಆ ಸಂದರ್ಭದಲ್ಲಿ ಆ ಜನಜಂಗುಳಿಯ ನಡುವೆ ಸರಿಯಾಗಿ ಕೇಳಿಸಿತೋ ಬಿಟ್ಟಿತೋ ಗೊತ್ತಿಲ್ಲ ಸುತ್ತ ಒಮ್ಮೆ ತಿರುಗಿ ನೋಡಿ ತಮ್ಮ ಕೆಲಸದಲ್ಲಿ ಮಗ್ನರಾದರು. ತೇಜಸ್ವಿ ದೊಡ್ಡ
ದನಿಯಲ್ಲಿ ಇನ್ನೊಮ್ಮೆ” ರೀ, …………………………… ನಿಮ್ಮನ್ನೇ ಕಣ್ರೀ ಕರೆದದ್ದು, ಬನ್ರೀ ಇಲ್ಲಿ, ಸುಡಕ್ಕೆ ಹಾಕಿರೊ ಗಂಧದ ಚಕ್ಕೆಯೆಲ್ಲಾ ಕೊಂಡು ತಂದಿದ್ದೋ ಅಥವಾ ಗಂಧಕಳ್ಳರಿಂದ ಸೀಝ್ ಮಾಡಿದ್ದೋ?” ಎಂದು ಪ್ರಶ್ನಿಸಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

