ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ವಾಟ್ ಎ ಪ್ರೆಸೆನ್ಸ್ ಆಫ್ ಮೈಂಡ್!
ಕುಪ್ಪಳಿಯ ಕವಿಶೈಲದಲ್ಲಿ ಕುವೆಂಪುರವರನ್ನು ಅಗ್ನಿಗರ್ಪಿಸುವಾಗ ಅಲ್ಲಿ ಹಾಜರಿದ್ದ ಹಿರಿರ್ಯಾರೋ ಚಿತೆಗೆ ಅಗ್ನಿಸ್ಪರ್ಷವನ್ನು ಬಲಗೈಯಲ್ಲಿ ಮಾಡದೇ ಎಡಗೈನಲ್ಲೇ ಮಾಡಲು ಸೂಚಿಸಿದಾಗ ತೇಜಸ್ವಿ `ಕುವೆಂಪು ಯಾವುದರ ವಿರುದ್ಧ ತನ್ನ ಬದುಕಿನಿಡೀ ಹೋರಾಡಿದರೋ ಅದನ್ನು ತಿರಸ್ಕರಿಸಲು ನನ್ನಿಂದ ಸಾಧ್ಯವಿಲ್ಲ’ ಎಂದು ಬಲಗೈನಲ್ಲೇ ವಿಧಿವಿಧಾನಗಳನ್ನು ಪೂರೈಸಿದರು.
ಮುಂದೊಮ್ಮೆ ನೂರಾರು ಜನರು ಕುಪ್ಪಳಿಯ ಕುವೆಂಪು ಸ್ಮಾರಕಕ್ಕೆ ಹೂ ಪಕಳೆಗಳನ್ನು ಅರ್ಪಿಸುತಿದ್ದರೂ ಕವಿಶೈಲಕ್ಕೆ ಭೇಟಿ ನೀಡಿದ್ದ ತೇಜಸ್ವಿ ದೂರದಲ್ಲಿನ ಕಲ್ಲಿನ ಕಟ್ಟೆಯ ಮೇಲೆ ಅನ್ಯಮನಸ್ಕರಾಗಿ ನಿರ್ಬಾವುಕತೆಯಿಂದ ಕುಳಿತಿದ್ದರು. ಯಾರೋ ” ಏನ್ ಸಾರ್ ನಿಮ್ಮ ತಂದೆಯವರ ಸ್ಮಾರಕಕ್ಕೆ ನೀವು ಪುಷ್ಪಾರ್ಚನೆ ಮಾಡಲಿಲ್ಲವಲ್ಲ?” ಎಂದರು. ತೇಜಸ್ವಿ ” ನನ್ನ ತಂದೆ ನನ್ನೊಳಗೇ ಇದ್ದಾರೆ. ಈ ರೀತಿಯ ರಿಚ್ಯುಯಲ್ಗಳಲ್ಲಿ ನನಗೆ ಅಷ್ಟು ಆಸಕ್ತಿಯಿಲ್ಲ” ಎಂದು ನಸು ನಕ್ಕಿದ್ದರು.
ಕುಪ್ಪಳಿಯ ಕವಿಮನೆ ಪುನರ್ನಿರ್ಮಾಣದಲ್ಲಿ ಕೆ.ಟಿ. ಶಿವಪ್ರಸಾದ್ರವರ ಕೊಡುಗೆ ಅಪಾರವಾದುದು. ಕವಿಶೈಲದ ವಿಶಿಷ್ಠ ಕಲಾ ಪ್ರಕಾರದ ರಚನೆಗಳು ನೋಡುಗರನ್ನು ಚಕಿತಗೊಳಿಸಲು ಕೆಟಿಎಸ್ರವರ ಶ್ರಮ ಕೂಡಾ ಕಾರಣ. “ಲೋ ಶಿವಾ! ನಿರ್ಮಾಣ ಪೂರ್ಣಗೊಂಡ ಮೊದಲ ದಿನವೇ ನೂರು ವರ್ಷದ ಹಿಂದೆಯೇ ಕನ್ಸ್ಟ್ರಾಕ್ಟ್ ಆಗಿದೆಯೇನೋ ಎಂಬ ಲುಕ್ ಬರಬೇಕು ಕಣಯ್ಯಾ!”ಎಂದಿದ್ದರಂತೆ ಕವಿಶೈಲದ ಪರಿಕಲ್ಪನೆಯ ಹಿಂದಿನ ಶಕ್ತಿ ತೇಜಸ್ವಿ. ಕುಪ್ಪಳಿಯ ತೇಜಸ್ವಿ ಸ್ಮಾರಕ ನಿರ್ಮಾಣ ಕುರಿತಾದ ಚರ್ಚೆಯಲ್ಲಿ ಶಿವಪ್ರಸಾದ್ ಇದನ್ನು ಹೇಳಿ ತೇಜಸ್ವಿಯ ಇಮ್ಯಾಜಿನೇಷನ್ನ ಆಳ-ಅಗಲವನ್ನು ತೆರೆದಿಟ್ಟರು.

ಕುವೆಂಪುರವರಂತೆ ಪ್ರಕೃತಿಯನ್ನು ನೋಡಿ ಭಾವುಕರಾಗದ ತೇಜಸ್ವಿ ಏಕೆ? ಹೇಗೆ? ಎಂದು ಕುತೂಹಲಿಯಾಗುತಿದ್ದುದು ವಿಶೇಷವಾಗಿತ್ತು. ಈ ವಿಕಾಸ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬ ಪ್ರಶ್ನೆಯೊಂದಿಗೇ ಅನ್ವೇಷಣೆಗೆ ಹೊರಡುತಿದ್ದುದು ನವೀನ ಯೋಚನಾಲಹರಿಗೆ ಹಾಗೂ ವಿಶಿಷ್ಟ ಬರಹಕ್ಕೆ ನಾಂದಿಯಾಯಿತು. ಕುವೆಂಪುರವರ ಭಾವನೆ ಹಾಗೂ ಕಾರಂತರ ಶೋಧನೆಗಳ ಸಮರ್ಥ ಸಂಯೋಜನೆಯೇ ಅತ್ಯಂತ ಸಹಜವೆಂಬಂತೆ ಕ್ರಿಯೇಟಿವ್ ಆಗಿ ಹೊರಹೊಮ್ಮಿರುವ ಸೆನ್ಸಿಬಲ್ ಹಾಗೂ ಕ್ರಿಯೇಟಿವ್ ಕನ್ನಡಿಗ ತೇಜಸ್ವಿ.
ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ? ಎನ್ನುವಂತೆ ಅತ್ತ ಕುವೆಂಪು ಮೇರುಸಾಧನೆ ಮಾಡಿದರೆ, ಸಂವಾದಿಯಾಗಿ ನಾ ಮುಳುಗಿದಾಳಕ್ಕೆ ನೀ ಮುಳುಗಬಲ್ಲೆಯಾ? ಎಂಬಂತೆ ಇತ್ತ ಅಸಾಮಾನ್ಯವಾದ ಸಾಹಿತ್ಯ ಸೃಷ್ಠಿ ಮಾಡಿದರು ತೇಜಸ್ವಿ. ಲೋಹಿಯರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ ಹಾಗೂ ಕಾರಂತರ ಪ್ರಯೋಗಶೀಲತೆಗಳ ಪ್ರತಿನಿಧಿಯಂತಿದ್ದ ತೇಜಸ್ವಿಯವರ ಬದುಕು, ಬರಹ ಹಾಗೂ ಚಿಂತನೆಗಳು ಕನ್ನಡದ ಮಟ್ಟಿಗೆ ಮೂರು ಪೀಳಿಗೆಯ ಆಲೋಚನೆಯ ದಾಟಿಯನ್ನೇ ಬದಲಿಸಿದ್ದು ಒಂದು ರಚನಾತ್ಮಕ ಸ್ಥಿ ತ್ಯಂತರ.
ತೇಜಸ್ವಿಯವರಿಗೆ ಶಿವಪ್ರಸಾದರನ್ನು ಪರಿಚಯಿಸಿದವರೇ ಶ್ರೀ ನಂಜುಂಡಸ್ವಾಮಿಯವರು. ಸಾಹಿತ್ಯ, ಹೋರಾಟ, ಕಲೆ ಮತ್ತು ಕೃಷಿ ಹೇಗೆ ಒಂದಕ್ಕೊಂದು ಪೂರಕ ಎಂಬುದಕ್ಕೆ ಇದೊಂದು ಉದಾಹರಣೆ.
ತೇಜಸ್ವಿ ಮೈಸೂರಿಗೂ ಮೂಡಿಗೆರೆಗೂ ನಡುವೆ ಸ್ಕೂಟರಿನಲ್ಲಿ ಓಡಾಡುವಾಗ ಹಾಸನ ಬೇಲೂರಿನ ನಡುವೆ ಅಕಸ್ಮಿಕವೆಂಬಂತೆ ಸಿಕ್ಕಿದ್ದ ಕೆ.ಟಿ. ಶಿವಪ್ರಸಾದ್ರವರು ತೇಜಸ್ವಿಯವರಿಗೆ ಆಪ್ತ ಗೆಳೆಯರಾದರು. ಅವರ ನಡುವಿನ ಮಾತಿನಲ್ಲಿ ಮೊಲದ ಶಿಕಾರಿ, ಕಲಾ ಮೀಮಾಂಸೆ, ಬುದ್ಧಿಸಮ್, ನಾಗಾರ್ಜುನ, ಮುಂಬಯಿಯ ಮಟ್ಕಾ ಹೀಗೆ ಚರ್ಚೆಗೆ ಬಾರದ ವಿಚಾರವೇ ಇರಲಿಲ್ಲ. ಜಗತ್ತಿನ ಜ್ಞಾನಭಂಡಾರಗಳ ವಿಸ್ತರಣೆಗೆ, ಎಲ್ಲಾ ಆಕರಗಳು ಓದಲು ಕನ್ನಡದಲ್ಲಿ ದೊರೆಯಬೇಕು. ಹೀಗಾಗದೇ ಹೋದರೆ ಸಾಕ್ಷರತೆಗೂ ಅನಕ್ಷರತೆಗೋ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿ ಭಾರತದ ಮಟ್ಟಿಗೆ ಚಿರನೂತನ ವಾಸ್ತವವಾದವಾಗಿರುವ ಲೋಹಿಯಾ ಚಿಂತನೆಗಳ ಕೃತಿಗಳನ್ನು ಎಂ. ಡಿ. ನಂಜುಂಡಸ್ವಾಮಿಗಳ ಜೊತೆಗೂಡಿ ಕನ್ನಡಕ್ಕೆ ಅನುವಾದ ಮಾಡಿದರು. ಎಲ್ಲಿಯ ಶಿಕಾರಿ ಎಲ್ಲಿಯ ಅಹಿಂಸೆ, ಎಲ್ಲಿಯದೋ ಮೀಮಾಂಸೆ ಇನ್ನೆಲ್ಲಿಯದೋ ಮಟ್ಕಾ. ವೈವಿದ್ಯತೆ ಎಂದರೆ ಇದೇ ಅಲ್ಲವೇ?

ರೈತ ಸಂಘದಂಥ ಅಪ್ಪಟ ಮಣ್ಣಿನ ಹೋರಾಟವು ಪ್ರಾರಂಭವಾಗಿದ್ದೇ ತೇಜಸ್ವಿಯವರ ಮನೆಯಂಗಳದಲ್ಲಿ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಯಾವುದೇ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಗಳಿಗೆ ಮೂಲವಾಗುವಂತಹ ರೈತ ಸಮೂಹವನ್ನು ಕರ್ನಾಟಕದ ಮಟ್ಟಿಗೆ ಯೋಜಿತವಾಗಿ ಸಂಘಟಿಸಿ, ಮಣ್ಣಿನ ಮಕ್ಕಳ ಶಕ್ತಿ ಏನೆಂಬುದನ್ನು ಸಾಬೀತು ಪಡಿಸಲು ನಂಜುಂಡಸ್ವಾಮಿ, ಲಿಂಗಪ್ಪ, ಸುಂದರೇಶ್, ಶಾಮಣ್ಣ ಮುಂತಾದವರೊಂದಿಗೆ ಮೂಲ ರೂಪರೇಷೆಯನ್ನು ರೂಪಿಸಿದ ಕೀರ್ತಿ ಸಹಜ ಕೃಷಿಯ ಹರಿಕಾರ ತೇಜಸ್ವಿಯವರದು. ಆ ದಿನಗಳಲ್ಲೇ ಕಾಫಿ ಮಂಡಳಿಯ ಧೋರಣೆಯನ್ನು ಪ್ರತಿಭಟಿಸಿ, ಮೂಡಿಗೆರೆಯ ಸಂತೆಯಲ್ಲಿ ಕಾಫಿ ಮಾರುವ ವಿಶಿಷ್ಠ ನಿರ್ಧಾರವನ್ನು ಮಾಡಿದ್ದು ಸಾಕಷ್ಟು ಜನರಿಗೆ ತಿಳಿದಿಲ್ಲ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

