ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಕನ್ನಡಿಯ ಮುಂದೆ
`ಜನರಲ್ಲಿ ಭ್ರಷ್ಠತೆ, ದುರ್ನಡತೆಯನ್ನು ಪ್ರಚೋದಿಸುವ ಈಗಿನ ಯಾವ ಅಭಿವೃದ್ಧಿ ಕಾರ್ಯಕ್ರಮಗಳಲ್ಲೂ ನನಗೆ ಗೌರವವಿಲ್ಲ’ ಎಂದದ್ದು ದಿನನಿತ್ಯವೂ ಸಾರ್ವಜನಿಕ ಜೀವನದಲ್ಲಿ ಹೆಚ್ಚಾಗುತ್ತಿರುವ ನೈತಿಕ ಅಧಃಪತನವನ್ನು ಕಂಡು. ಸರ್ಕಾರಿ ಯೋಜನೆಗಳು ಅಧಿಕಾರಸ್ಥರ ಹಾಗೂ ಅವರ ಬೆಂಗಾವಲಿಗರ ಅಭಿವೃದ್ಧಿಗೇ ಬಳಕೆಯಾಗುತ್ತಿರುವುದು ಮತ್ತು ಸಾರ್ವಜನಿಕ ಹಣ ಪಟ್ಟಭದ್ರರ ಸ್ವಂತ ಹಿತಕಾಯಲು ಬಳಕೆಯಾಗುತ್ತಿರುವುದು ಪ್ರಜಾಪ್ರಭುತ್ವದ ಚೋದ್ಯ.
ಸಾರ್ವಜನಿಕ ಕಾಮಗಾರಿಗಳ ಹೆಸರಿನಲ್ಲಿ ಖಾಸಗಿ ಕೆಲಸಗಳನ್ನು ಮಾಡಿಕೊಳ್ಳುತ್ತಿರುವ ಉದಾಹರಣೆಗಳು ಇವತ್ತಿಗೂ ಹಳ್ಳಿಹಳ್ಳಿಗಳಲ್ಲಿ ಬೀದಿಬೀದಿಗಳಲ್ಲಿ ಕಾಣಸಿಗುತ್ತವೆ. ನೂರು ರೂಪಾಯಿ ಹಣವನ್ನು ಅಧಿಕಾರಸ್ಥರು ಹೊಡೆಯುತ್ತಿರುವುದನ್ನು ಮೂರುಕಾಸಿನ ಆಸೆಗೆ ಅಮಾಯಕ, ಅಸಹಾಯ ಜನಸಾಮಾನ್ಯರು ನೋಡಿ ಸುಮ್ಮನಿರಬೇಕಾಗಿದೆ.
ಪರಿಸ್ಥಿತಿಯ ಲಾಭಪಡೆಯುವಲ್ಲಿ ಪೈಪೋಟಿ ನಡೆಸುವ ಜನರು ತಮ್ಮ ಕಿರಿಯರಿಗೆ ಎಂಥಾ ಸಮಾಜವನ್ನು ಹಸ್ತಾಂತರಿಸುತಿದ್ದೇವೆ ಎಂಬ ಕಲ್ಪನೆಯೂ ಇಲ್ಲದೇ ಬದುಕುತಿದ್ದಾರೆ. ಮಾನವೀಯ ಸಂಬಂಧಗಳು ಶಿಥಿಲವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿಯ ಉದಾಹರಣೆಯನ್ನು ನೀಡಿ `ಕಾಡು, ಗಿಡ-ಮರ-ಬಳ್ಳಿಗಳೇ ನಮಗೆ ಅಗತ್ಯವಾದ ಅನೋನ್ಯತೆಯನ್ನು, ಸಂವೇದನಾಶೀಲತೆಯನ್ನು ಕಲಿಸುತ್ತವೆ’ ಎನ್ನುತ್ತಾರೆ ತೇಜಸ್ವಿ.
ಅಧಿಕಾರದ ಸ್ಥಾನಗಳೆಲ್ಲಾ ನಿರಂತರವಾಗಿ ಅವಿವೇಕಿಗಳ, ಭ್ರಷ್ಠರ, ಕೊಲೆಗಡುಕರ ಕೈಗೇ ಹೋಗುತ್ತಿದ್ದರೆ ಸಭ್ಯರ ಮಾತು, ಚಿಂತನೆ, ಕಲಾಸೃಷ್ಠಿ, ಪ್ರಶಸ್ತಿ ಮತ್ತು ಸನ್ಮಾನಗಳು ಅಸಂಗತವಾಗುತ್ತಾ ಹೋಗುತ್ತವೆ. ಈ ನಿಟ್ಟಿನಲ್ಲಿ ಸಮಾಜ ಜಾಗೃತವಾಗಬೇಕು, ಯಾವುದು ಸರಿ, ಯಾವುದು ತಪ್ಪು, ಏನು ಬೇಕು, ಯಾವುದು ಬೇಡ ಎಂಬುದನ್ನು ವಿವೇಚಿಸುವ ಕನಿಷ್ಠ ಪ್ರಜ್ಞೆಯನ್ನು ಹೊಂದುವ ಮೂಲಕ ಪ್ರಭುದ್ಧತೆಯನ್ನು ಸಾಧಿಸಬೇಕು.
ನಮ್ಮ ಪ್ರಶ್ನೆಗಳಿಗೆ ಉತ್ತರ, ನಮ್ಮ ಸಮಸ್ಯೆಗಳಿಗೆ ಪರಿಹಾರ ನಮ್ಮ ಬಳಿಯೇ ಇರುತ್ತದೆಯಾದ್ದರಿಂದ ಹೊಸ ಸಾಧ್ಯತೆಗಳತ್ತ ತೆರೆದುಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹೆಚ್ಚಿಗೆ ಮಾತನಾಡಿದರೆ ನಿನ್ನ ವಿಷಯ ಬಹಿರಂಗಗೊಳಿಸುತ್ತೇನೆ ಎಂದು ಬ್ಲಾಕ್ ಮೈಲ್ ಮಾಡುವ ರಾಜಕಾರಣದ ಸ್ಥಿತಿಗೆ ಹೇಸಿಗೆಗೊಂಡ ತೇಜಸ್ವಿ `ಸಮಾಜವನ್ನು ರಿಪೇರಿ ಮಾಡಬೇಕಾದವರೇ ರಿಪೇರಿಗೊಳಪಡಬೇಕಾಗಿದೆ’ ಎಂದು ಪ್ರಿಸ್ಕಿçಪ್ಷನ್ ನೀಡುತ್ತಾರೆ.

ಜನರ ನಿಜವಾದ ನೋವು-ಸಂಕಟಗಳು ಅಗತ್ಯ ಕಿವಿಗಳನ್ನು ಹೇಗೆ ತಲುಪುತಿಲ್ಲವೋ ಹಾಗೆಯೇ ಸರ್ಕಾರದ ಅಭಿವೃದ್ಧಿ ಕಾರ್ಯಗಳೂ ಜನರನ್ನು ತಲುಪುತಿಲ್ಲ. ಯಾರಿಗಾಗಿ ಯೋಜನೆಗಳು ರೂಪಿಸಲ್ಪಡುತ್ತಿವೆ ಮತ್ತು ಈ ಯೋಜನೆ ಬಾರದಿದ್ದರೆ ಏನಾದರೂ ಅನಾಹುತವಾಗುತಿತ್ತೇ? ಎಂದು ಪರ್ಯಾವಲೋಚಿಸಬೇಕಾಗಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮತ್ತವರ ಹಿಂಬಾಲಕರುಗಳಿಗಾಗೇ ಯೋಜನೆಗಳು ರೂಪಿಸಲ್ಪಟ್ಟು ಅಮಾಯಕರ ಹೆಸರಿನಲ್ಲಿ ಇನ್ಯಾರೋ ಗಂಟುಮಾಡಿಕೊಳ್ಳುತ್ತಿರುವುದು ಎಂದೆಂದಿನಿಂದಲೂ ಇಂದಿನವರೆಗೂ ನಡೆಯುತ್ತಲೇ ಬರುತ್ತಿದೆ.
ಅನೀತಿ, ಅನ್ಯಾಯ ಹಾಗೂ ಭ್ರಷ್ಠ ವ್ಯವಸ್ಥೆಯಲ್ಲಿ ಹುಳುಗಳಂತೆ ಬದುಕುತ್ತಿರುವವರಿಗೆ ಕೈಯ್ಯಲ್ಲಿ ಶಸ್ತ್ರ ಹಿಡಿದು ಬದಲಾವಣೆಗೆ ಹಾತೊರೆಯುತ್ತಿರುವ ಉಗ್ರವಾದಿಗಳೇ ಅದರ್ಶಪ್ರಾಯರಾಗಿ ಕಾಣುತ್ತಾರೆ. ವಾಸ್ತವವನ್ನು ಆದರ್ಶೀಕರಿಸುವವನು ಅವಕಾಶವಾದಿಯಾಗುತ್ತಾನೆ, ವಾಸ್ತವವನ್ನು ತಿರಸ್ಕರಿಸಿ ಆದರ್ಶಕ್ಕೆ ಜೋತುಬೀಳುವವನು ಉಗ್ರವಾದಿಯಾಗುತ್ತಾನೆ. ಆದರ್ಶವನ್ನು ವಾಸ್ತವೀಕರಿಸುವ ಮಾರ್ಗದಲ್ಲಿ ವಾಸ್ತವದ ಅಪರಿಪೂರ್ಣತೆಯನ್ನು ಸಹಿಸಲೂ ಕಲಿಯುವವನು ಲಿಬರಲ್ ಆಗುತ್ತಾನೆ. ಭೀಕರ ವಾಸ್ತವದೆದುರು ಇಸಂಗಳು ನಗೆಪಾಟಲಿಗೀಡಾಗುತ್ತವೆ.
ಅದಕ್ಷತೆ, ಭ್ರಷ್ಠತೆ, ಸೋಮಾರಿತನಕ್ಕೆಲ್ಲಾ ಸಮಾಜವಾದ, ಸಮತಾವಾದಗಳನ್ನು ನೆಪವಾಗಿ ಹೆಸರಿಸುವುದೇ ಮೂರ್ಖತನ ಎಂಬುದನ್ನು ವಿಷದೀಕರಿಸುತ್ತಾರೆ ತೇಜಸ್ವಿ. “ಮಾರುಕಟ್ಟೆಯ ಒತ್ತಡಗಳಿಗನುಗುಣವಾಗಿ ಕೆಲಸ ಮಾಡುವ ಖಾಸಗೀ ಸಂಸ್ಥೆಗಳಿಗೆ ಒಂದು ಖಚಿತವಾದ ಹುಟ್ಟು-ಸಾವಿರುತ್ತದೆ. ಆದರೆ ಸರ್ಕಾರದ ನಿರಂತರವಾದ ಬಂಡವಾಳದಿAದಲೇ ನಡೆಯುವ ಸರ್ಕಾರೀ ಉದ್ದಿಮೆ ಹಾಗಲ್ಲ. ಉದ್ದಿಮೆಗಳ ಖಾಸಗೀಕರಣ ಮತ್ತು ಆಡಳಿತದ ವಿಕೇಂದ್ರೀಕರಣ ಈ ಸಮಸ್ಯೆಗೆ ಪರಿಹಾರವಾಗಬಹುದು. ಅಧಿಕಾರಶಾಹಿ, ಲಂಚದ ಸಕ್ಯೂರ್ಟ್, ಅತ್ಯುನ್ನತ ಸ್ಥಾನ ತಲುಪಿದ ನೀಚರು, ಲಂಪಟರು ಇಡೀ ವ್ಯವಸ್ಥೆಯನ್ನೇ ಭ್ರಷ್ಠಗೊಳಿಸುತ್ತಾರೆ.
ತಮ್ಮಲ್ಲಿ ಇಲ್ಲದ ಸಾಮಾಜಿಕ ಜವಾಬ್ದಾರಿ ಮತ್ತು ದೇಶಪ್ರೇಮವನ್ನು ಇತರರಲ್ಲಿ ನಿರೀಕ್ಷಿಸುವ ಆಷಾಡಭೂತಿಗಳು ಇವರು. ಹೆಚ್ಚಿನ ಸರ್ಕಾರೀ ಉದ್ದಿಮೆಗಳು ಯಾಕೆ ನಷ್ಟದಲ್ಲಿವೆಯೆಂದರೆ ಅದಕ್ಷತೆ, ಮೈ ನಡುಗಿಸುವ ಭ್ರಷ್ಠತೆ, ಸಿಕ್ಕಿದಷ್ಟನ್ನು ದೋಚಲು ಸದಾ ಹೊಂಚುಹಾಕುತ್ತಿರುವ ಅಧಿಕಾರಶಾಹಿ. ಪ್ರತಿಯೊಬ್ಬರೂ ಅದರ ಲಾಭವನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಡೆಯುತ್ತಿರುವುದರಿಂದ ಭ್ರಷ್ಠತೆ ಬಗ್ಗೆ ಮಾತನಾಡುವುದೇ ಒಂದು ಬಗೆಯ ಕ್ಲೀಷೆಯಾಗಿ ಯಾರಿಗೂ ಅದೊಂದು ಚರ್ಚಿಸಬೇಕಾದ ವಿಚಾರವೆಂದೆನಿಸುವುದೇ ಇಲ್ಲ. ಸರ್ಕಾರೀ ವ್ಯವಸ್ಥೆ ಉದ್ದೇಶಪೂರ್ವಕವಾದ ನಿಧಾನಗತಿಯಲ್ಲಿ ನಿಂತಲ್ಲೇ ನಿಂತಿದ್ದರೆ, ಖಾಸಗಿಯವರು ತ್ವರಿತಗತಿಯಲ್ಲಿ ಕೆಲಸ ಮಾಡಿ ಲಾಭಗಳಿಸುತ್ತಾರೆ.
ಸರ್ಕಾರಿ ವ್ಯವಸ್ಥೆಯಲ್ಲಿ ಸಂಭವಿಸುವ ನಷ್ಟಕ್ಕೆ ಯಾರೂ ಹೊಣೆಯಲ್ಲ ಮತ್ತು ಕಾನೂನುಬದ್ಧವಾಗಿರುವವರೆಗೆ ಎಂಥಾ ಅವಿವೇಕಕ್ಕೂ ಸಮರ್ಥನೆಯಿದೆ ಎಂಬ ಹುಂಬತನವೇ ಎಲ್ಲಾ ಅನರ್ಥಕ್ಕೆ ಕಾರಣ. ನ್ಯಾಯಬದ್ಧವಲ್ಲದ ದುಡಿಮೆಯೆಂಬುದು ಅತ್ಮವಂಚನೆ ಮತ್ತು ಅಪರಾಧವೆಂದು ಯಾರೂ ಪರಿಗಣಿಸುತ್ತಿಲ್ಲ. ಅನ್ಯಾಯವೇ ಜೀವನಕ್ರಮವಾದರೆ ಸಭ್ಯ ಜೀವನಕ್ಕಾಗಿ ಶ್ರಮಪಡುವವರು ಮೂರ್ಖರೆಂದು ಪರಿಗಣಿಸಲ್ಪಡುತ್ತಾರೆ.’’ ಎನ್ನುತ್ತಾರೆ. ಹಣವನ್ನೇ ಒಬ್ಬನ ಮೌಲ್ಯವನ್ನು ನಿರ್ಧರಿಸುವ ಮಾನದಂಡವನ್ನಾಗಿ ಪರಿಗಣಿಸುವುದು ಅನರ್ಥಕಾರಿಯಾದುದು. ಸಿರಿವಂತನಾಗಲು ಹಲವಾರು ವಾಮಮಾರ್ಗಗಳೂ ಇರುವುದರಿಂದ ಇದ್ದಕ್ಕಿದ್ದಂತೆ ಒಬ್ಬ ಆರ್ಥಿಕವಾಗಿ ಮೇಲ್ಮಟ್ಟಕ್ಕೆ ಹೋಗಿರುವನೆಂದರೆ ಅವನ ಹಿನ್ನೆಲೆ ಹಾಗೂ ಸಂಪತ್ತಿನ ಮೂಲವನ್ನು ಪರಾಮರ್ಶಿಸುವ ಅಗತ್ಯವಿದೆ.

“ಅಧಿಕಾರ ವಿಕೇಂದ್ರಿಕರಣದ ಗ್ರಾಮಸ್ವರಾಜ್ಯ ಪರಿಕಲ್ಪನೆಯು ಮೂಲತಃ ಪ್ರಗತಿಪರ ಚಿಂತನೆಯೇ ಆಗಿದ್ದರೂ ಅಧಿಕಾರದ ಜೊತೆಜೊತೆಗೆ ಅನಗತ್ಯ ವಿಳಂಬ ನೀತಿ, ಲಂಚಗುಳಿತನ, ಭ್ರಷ್ಠತೆ, ಸಂಪನ್ಮೂಲಗಳ ಲೂಟಿಕೋರತನ ದಿಲ್ಲಿಯಿಂದ ಹಳ್ಳಿ ತಲುಪಿದ್ದು ನಮ್ಮೆಲ್ಲರ ದೌರ್ಭಾಗ್ಯವೇ ಸರಿ. ಗ್ರಾಮ ಮಟ್ಟದ ಆಡಳಿತ ವ್ಯವಸ್ಥೆಯು ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರ ರೆಕ್ರೂಟ್ಮೆಂಟ್ ಕೇಂದ್ರಗಳಾದವೇ ಹೊರತು ರಾಜಕೀಯ ಪ್ರಜ್ಞೆಯ ಸಕಾರಾತ್ಮಕ ಬದಲಾವಣೆಯ ತೊಟ್ಟಿಲಾಗಲಿಲ್ಲ.
ಪ್ರಗತಿಪರ, ಸಜ್ಜನ, ಕ್ರಿಯಾಶೀಲ ರಾಜಕೀಯ ಮುತ್ಸದ್ಧಿಗಳು ನಮಗೆ ಮಾದರಿಯಾಗಬೇಕಾದ ಸಂದರ್ಭದಲ್ಲಿ, ಗೂಂಡಾ ಪ್ರವೃತ್ತಿಯ ಕುಟಿಲ ಲೂಟಿಕೋರರು ನಾಯಕರುಗಳಾಗಿ ಅವತರಿಸತೊಡಗಿದ್ದು ಪ್ರಜಾಪ್ರಭುತ್ವದ ಅಣಕವೂ ಇರಬಹುದು. ಬಂಡವಾಳ ಮತ್ತು ಅಧಿಕಾರವನ್ನು ಕಳೆದುಕೊಳ್ಳಬಹುದು ಮತ್ತು ಗಳಿಸಬಹುದು ಆದರೆ ಆತ್ಮಗೌರವ ಹಾಗೂ ಮರ್ಯಾದೆ ಹೋಗುವುದು ಒಂದೇ ಬಾರಿ’’ ಎಂದು ತೇಜಸ್ವಿ ಎಚ್ಚರಿಸಿದ್ದರು.
ಅನಾಚಾರಿಗಳನ್ನೇ ಬೆಳೆಸುತ್ತಾ, ಅವಿವೇಕದ ಆಡಳಿತವನ್ನೇ ನಡೆಸುವುದನ್ನೇ ನೋಡುತ್ತಾ ಕುಳಿತಿರುವುದು ನಮ್ಮೆಲ್ಲರ ಮೂರ್ಖತನ. ಒಬ್ಬ ಹಣವಂತ ಹೇಗಾದ? ಪರಿಶ್ರಮದಿಂದಲೇ ಅಥವಾ ವಾಮಮಾರ್ಗದಿಂದಲೇ? ಹಾಗಾಗಿದ್ದರೆ ತನ್ನ ಯಶಸ್ಸಿನ ಹಾದಿಯಲ್ಲಿ ಯರ್ಯಾರನ್ನು ಭ್ರಷ್ಠಗೊಳಿಸಿದ? ಟೈಕೂನ್ ಆದ ಸರಿ, ಸಂತೋ಼ಷ. ಆದರೆ ಹೇಗಾದನೆಂಬುದು ಮುಖ್ಯ. ಭ್ರಷ್ಠರ ಪರವಾಗಿ ಕೆಲಸ ಮಾಡುವುದೂ ಸಹಾ ಆತ್ಮಘಾತುಕವಾದದ್ದು.
ಭ್ರಷ್ಠಾಚಾರದ ವಿರುದ್ಧದ ಚಳುವಳಿಯಲ್ಲಿ ಭ್ರಷ್ಠರ ಗುರುಗಳೇ ಪ್ಲಕಾರ್ಡ್ ಹಿಡಿದುಕೊಂಡು ಹೋರಾಟ ನಡೆಸಿದ್ದು ಈ ಶತಮಾನದ ದೊಡ್ಡ ಚೋದ್ಯ! ಕೆಲಸಕ್ಕೆ ಬಾರದ ಎಸ್ಸೆಮ್ಮೆಸ್ಗೆ ಒಂದು ರೂಪಾಯಿ ಜಾಸ್ತಿಯಾದರೆ ಆಕಾಶವೇ ಕಳಚಿ ಬಿದ್ದಂತೆ ಕೂಗಾಡುವವರಿಗೆ ನಾವು ದಿನವೂ ತಿರುಗಾಡುವ ರಸ್ತೆ ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಕಣ್ಣೆದುರೇ ಗುಳುಂ ಆಗುತ್ತಿರುವುದು ಕಾಣುವುದಿಲ್ಲವೇ? ಲೋಕೋಪಯೋಗಿ ಕಟ್ಟಡಗಳ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು, ಇಂಜಿನಿಯರ್ಗಳು ತಮ್ಮ ಖಾಸಗಿ ಕಟ್ಟಡಗಳನ್ನು ಅಷ್ಟೇ ಕಳಪೆಯಾಗಿ ಕಟ್ಟಿಕೊಳ್ಳುತ್ತಾರೆಯೇ? ಪಕ್ಕದ ಮನೆಯಲ್ಲಿ ನಡೆದರೆ ಕಾಮಿಡಿ, ನಮ್ಮನೆಯಲ್ಲಾದರೆ ಮಾತ್ರ ಟ್ರಾಜಿಡಿ?
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

