
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಪಾಸಾದ್ರಾ?
“ಏನಯ್ಯ ಮೊನ್ನೆ ಹೈಸ್ಕೂಲಿನ ಫಂಕ್ಷನ್ನಲ್ಲಿ ಸರಿಯಾಗಿ ಬಾರಿಸುತ್ತಿದ್ದೆ. ಇದು ಬೇರೆ ಮಾಡ್ತೀಯಾ?’’ ಎಂದರು ತೇಜಸ್ವಿ. ನ್ಯೂಟನ್ ವಿಜ್ಞಾನ ಸಂಘದವರು ಕರೆದಿದ್ದ ಕಾರ್ಯಕ್ರಮದ ಕುರಿತು ಮಾತಾಡ್ತಿದ್ದಾರೆ ಎಂದು ತಿಳಿಯಿತು. “ನೀವೆಲ್ಲಿದ್ರಿ? ನಾನು ನೋಡಲಿಲ್ಲ. ಕಂಡಿದ್ದಿದ್ರೆ ಮಾತೆಲ್ಲ ಮರೆತೇ ಹೋಗಿ ಯಡವಟ್ಟು ಆಗುತ್ತಿತ್ತು. ನಾನು ಡಿಗ್ರಿ ಓದುತ್ತಿದ್ದಾಗ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯವರಿಗೆ ಪಾಠ ಮಾಡುತ್ತಿದ್ದೆ. ಆಗ ಬ್ರಿಲಿಯಂಟ್ ಇನ್ಸ್ಟಿಟ್ಯೂಟ್ ಅಂತ ಮಾಡಿದ್ದೆ. ಹಾಗಾಗಿ ಈ ಗೆಸ್ಟ್ಲೆಕ್ಚರ್ ಕೊಡೋದು ಅಭ್ಯಾಸ ಆಗಿದೆ” ಎಂದೆ.
“ಅಲ್ಲಾ ಮಾರಾಯ, ನಿನ್ನದೇ ಡಿಗ್ರಿ ಆಗಿರಲಿಲ್ಲ ಮತ್ತೆ ನೀನೆಂತ ಪಾಠ ಹೇಳಿ ಕೊಡುತ್ತಿದ್ದೆ. ಯಾರಾದರೂ ಪಾಸ್ ಆದ್ರಾ ಹೇಗೆ?” “ ನನ್ನ ಫೈನಲ್ ಇಯರ್ ಮುಗಿದ ಕೂಡಲೇ ಸಿವಿಲ್ ಸರ್ವಿಸಸ್ ಪರೀಕ್ಷೆ ತಗೋಬೇಕು ಅಂದ್ಕ್ಕೊಂಡಿದ್ದೆ. ಎಸ್.ಎಸ್.ಎಲ್.ಸಿ., ಪಿಯು.ಸಿ.ಯ ಎಲ್ಲಾ ಸಬ್ಜೆಕ್ಟ್ ರೆಫರ್ ಮಾಡಿದ್ರೆ ಬೇಕಾಗಿರೋ ಎಂಬತ್ತು ಪರ್ಸೆಂಟ್ ನಾಲೆಡ್ಜ್ ಬರುತ್ತೆ ಅಂತ ಒಂದು ಅಂದಾಜು. ನಾನೂ ಓದಿದ್ಹಾಗಾಯಿತು. ಸ್ಟೂಡೆಂಟ್ಗೆ ಹೇಳ್ತಾ ಇದ್ರೆ ರಿಫ್ರೆಶ್ ಆದ ಹಾಗೆ ಆಗುತ್ತೆ ಅಂತ ಪಾಠ ಮಾಡುತ್ತಾ ಇದ್ದೆ’.
“ಅದಿರಲಿ, ಯಾರಾದರೂ ಪಾಸ್ ಆದ್ರಾ ಅದು ಹೇಳು”
“ಸರ್ ನನ್ನ ಹತ್ರ ಪಾಠಕ್ಕೆ ಬಂದವರೆಲ್ಲಾ ಮೂರು ನಾಲ್ಕು ಸಲ ಮೂವತ್ತೈದನ್ನೂ ತೆಗೆದುಕೊಳ್ಳಲಾಗದೆ ಡುಮ್ಕಿ ಹೊಡೆದಿದ್ದವರು. ಎಪ್ಪತ್ತೈದು-ಎಂಬತ್ತು ಮಾರ್ಕ್ ತಗೋಳರನ್ನ ತೊಂಬತ್ತೈದರ ನೂರರ ಸ್ಟೇಜ್ಗೆ ತಗೊಂಡು ಹೋಗುವುದು ಅಂಥಾ ದೊಡ್ಡ ಕೆಲಸ ಅಲ್ಲ. ಆದರೆ ಈ ಮೂವತ್ತೈದನ್ನೂ ದಾಟಲಾಗದವರನ್ನು ಅರವತ್ತೈದಕ್ಕೆ ಮುಟ್ಟಿಸೋದು ಇದೆಯಲ್ಲ, ಅದು ಗ್ರೇಟ್. ಅದನ್ನು ನಾನು ಮಾಡಿದ್ದೀನಿ. ಜಂಬ ಕೊಚ್ಚಿಕೊಳ್ಳುತ್ತಾ ಇದ್ದೀನಿ ಅಂದ್ಕೊಬೇಡಿ. ಆ ಬಗ್ಗೆ ನನಗೆ ಹೆಮ್ಮೆ ಇದೆ. ಈ ರೆಪ್ಯೂಟೆಡ್ ಸ್ಕೂಲ್ನವರೆಲ್ಲಾ ಎಂಬತ್ತು ಮಾರ್ಕ್ ಮೇಲೆ ಸ್ಕೋರ್ ಮಾಡಿದವರನ್ನೇ ಎಂಟ್ರೆನ್ಸ್ ಲ್ಲಿ ಟೆಸ್ಟ್ ಮಾಡಿ ಅಡ್ಮಿಷನ್ ನೀಡಿ 1೦೦% ರಿಝಲ್ಟ್ ಬಂತು! ಅಂತ ಬೊಂಬಡ ಬಾರಿಸೋದನ್ನ ನೋಡಿ ಹಾಸ್ಯಾಸ್ಪದ ಅನ್ನಿಸುತ್ತೆ”.
“ಹೂಂ ಸಾಕ್ ಸಾಕ್ ನಿನ್ನ ಸೆಲ್ಫ್ ಟ್ರ್ರಂಪೆಟ್, ಎಲ್ಲೋ ಡಾವಿಂಚಿ ಕೋಡು?”
“ ಸರ್ ಈ ಗಾಳಿಗಂಟಲ್ಲಿ ಕೂತು ಓದೋಕ್ಕೇ ಆಗಿಲ್ಲ. ದಿನಾ ಹತ್ತು ಹದಿನೈದು ಪೇಜ್ ಓದೋದ್ ಅಷ್ಟೇ. ನೆಕ್ಸ್ ಟೈಮ್ ಬರಬೇಕಾದರೆ ತಂದು ಕೊಡ್ತೀನಿ” ಅಂದೆ.
“ನೀನೂ ಆ ವಿನಯನ ಕೇಸೇ, ನಿಮ್ ಕಾಲ್ ಮುರೀಬೇಕು ನೋಡು. ಬಡ್ಡೀಮಕ್ಳಾ, ಹುಹ್.” ಎಂದವರೇ ಕೆಲಸದಲ್ಲಿ ಮಗ್ನರಾದರು.
ಟಿ ವಿ ಒಳಗೆ ಹುದುಗಿ ಹೋಗಿರುವ ಜನ ಹೊರಗೆ ಅದ್ಭುತವಾದ ಜಗತ್ತಿದೆ ಎಂಬುದನ್ನೇ ಮರೆತಿದ್ದಾರೆ ಎಂದು ವಿಷಾದಿಸುವ ತೇಜಸ್ವಿ, `ಯಾವ ಯಾವ ಸ್ಕೂಲಿನಲ್ಲಿ ಹೆಚ್ಚೆಚ್ಚು ಹೋಮ್ವರ್ಕ್ ಕೊಟ್ಟು ಪ್ರಾಣ ತಿಂತಾರೋ ಅವೇ ಬೆಸ್ಟ್ ಸ್ಕೂಲೆಂದು ಪರಿಗಣಿಸಲ್ಪಟ್ಟಿವೆ. ಶಾಲೆಯ ನಾಲ್ಕು ಗೋಡೆಗಳ ನಡುವಿನ ಕಲಿಕೆಗಿಂತಲೂ ಕಾಡು, ಪ್ರಕೃತಿ ಹಾಗೂ ಸಮಾಜದ ಒಡನಾಟದಲ್ಲಿ ಅರಿಯುತ್ತಾ ಸಾಗುವುದು ನಿಜವಾದ ಬೆಳವಣಿಗೆ ‘ಎಂದು ಅಭಿಪ್ರಾಯಿಸುತ್ತಾರೆ. ಇಲ್ಲಿ ನನಗೆ ನೆನಪಾಗುವುದು He achieved inspite of schooling ಎಂಬ ಮಾತು.

ಮೈಸೂರಿನಲ್ಲಿ ಜ್ಯೂನಿಯರ್ ಇಂಟರ್ನಲ್ಲಿ ಫೇಲಾದ ತೇಜಸ್ವಿ ಫೇಲಿಗೆ ಕಾರಣ ಹೇಳುವುದು ಇಂಗ್ಲೀಷ್ ಮತ್ತು ಗಣಿತ. ಇಂಗ್ಲಿಷ್ನಿಂದ ತೊಂದರೆ ಅನುಭವಿಸಿದ ತೇಜಸ್ವಿ ಅದೇ ಕಾರಣದಿಂದ ೧೦ನೇ ತರಗತಿ ಹಾಗೂ ಇಂಟರ್ಮೀಡಿಯೇಟ್ನಲ್ಲಿ ನಪಾಸಾಗಿದ್ದರು. ಈ ವಿಚಾರವನ್ನು ತೇಜಸ್ವಿಯವರ ಸಹಪಾಠಿಯಾಗಿದ್ದ ಕಡಿದಾಳು ಶಾಮಣ್ಣ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಇವರನ್ನು ಮುಂದೆತಳ್ಳುವ ಉಪನ್ಯಾಸಕರ ಸರ್ವಪ್ರಯತ್ನವನ್ನೂ ಮೀರಿ ತೇಜಸ್ವಿ ಫೇಲಾಗುತ್ತಾರೆ. ಆಗಲೇ ಶಿವಮೊಗ್ಗದತ್ತ ಮುಖಮಾಡಿದ ತೇಜಸ್ವಿ, ಕೋಎಜುಕೇಷನ್ ಅನ್ನೇ ಕಾರಣವಾಗಿಟ್ಟುಕೊಂಡು ತರಗತಿಗಳಿಗೆ ಹೋಗದೇ ಕಾಡು-ಶಿಕಾರಿ ಮುಂತಾದ ತಂಟೆತಕರಾರುಗಳನ್ನೇ ಹಾಸಿಹೊದ್ದು ಉಂಡಾಡಿಗುಂಡನಂತೆ ತಿರುಗುತಿದ್ದರು. ಮನೆಗೆ ಗೊತ್ತಾಗಿ, ಹಗರಣವಾಗಿ ಕೊನೆಗೆ ಅನಿವಾರ್ಯವಾಗಿ ಕ್ಲಾಸಿಗೆ ಹೋಗಿ ಪಾಠಕೇಳಲು ಕೂರಲೇಬೇಕಾಯ್ತು. ಯಾವ ಕ್ಲಾಸಿನಲ್ಲಿ ತನ್ನ ಹೆಸರು ಕೂಗುತಿದ್ದಾರೆ ಎಂದು ಪತ್ತೆ ಮಾಡಿಕೊಂಡು ಒಲ್ಲದ ಮನಸ್ಸಿನಿಂದಲೇ ಕಲಿಯಲನುವಾದರು. ಅದೊಂದು ದಿನ ಎಂದೂ ಪ್ರಸೆಂಟ್ ಹೇಳದ ಹೆಸರಿಗೆ ಪ್ರಸೆಂಟ್ ಎಂದು ಯಾವುದೋ ದನಿ ಹೇಳಿದ್ದನ್ನು ಕೇಳಿ ಚಕಿತರಾಗಿ ತಲೆ ಎತ್ತಿದ ಉಪಾದ್ಯಾಯರಾದ ಜಿ.ಎಸ್. ಶಿವರುದ್ದರಪ್ಪನವರು ದನಿಯ ಮೂಲವನ್ನು ಹುಡುಕಿ “ಇಲ್ಲಿಗೆ ಏಕೆ ಬಂದಿದ್ದೀರ?” ಎಂದಾಗ “ಸುಮ್ಮನೆ” ಎಂಬ ಉತ್ತರ ಬಂದಿತಂತೆ. “ಓದಲು ಬಂದಿದ್ದರೆ ಏನಾದರೂ ಹೇಳಬಹುದಿತ್ತು, ಸುಮ್ಮನೆ ಬಂದವರಿಗೆ ಏನೂ ಹೇಳಲಾಗದು” ಎಂದು ಮುಂದಕ್ಕೆ ಹಾಜರಿ ಕೂಗುವತ್ತ ಗಮನ ಹರಿಸಿದರಂತೆ.
– ಮುಂದುವರೆಯುವುದು