ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ತೇಜಸ್ವಿ ಬರ್ತಾರಾ?
ಈಗ್ಗೆ ಮರ್ನಾಲ್ಕು ವರ್ಷಗಳ ಹಿಂದೆೆ ನನಗೆ ಪರಿಚಿತರಾದ ಅದ್ಯಾಪಕರೊಬ್ಬರು ಅವರ ಕಾಲೇಜಿನಲ್ಲಿ ತೇಜಸ್ವಿಯವರ ಪರಿಸರ ಚಿಂತನೆ ಕುರಿತಾದ ಸೆಮಿನಾರೊಂದನ್ನು ಏರ್ಪಡಿಸಲು ಪ್ರವೃತ್ತರಾದರು. ಪರಿಸರ, ಸಾಹಿತ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಹಲವು ಅಧ್ಯಾ ಪಕರಂತೆ ತಮ್ಮನ್ನು ನಂಬಿ ಬಂದಿದ್ದ ವಿದ್ಯಾರ್ಥಿಗಳಿಗೆ ತಮ್ಮ ಮಿತಿಯಲ್ಲಿ ಪಠ್ಯಪುಸ್ತಕದ ಹೊರಗಿನದ್ದೇನನ್ನಾದರೂ ಒದಗಿಸಿಕೊಡಬೇಕೆಂಬ ತುಡಿತದಲ್ಲಿದ್ದರು.
ಆಸಕ್ತ ವಿದ್ಯಾರ್ಥಿಗಳೊಂದಿಗೆ ಅವರ ಶಾಲಾ ಮುಖ್ಯಸ್ಥರಾದ ಪ್ರಾಂಶುಪಾಲರನ್ನು ಈ ವಿಚಾರವಾಗಿ ಸಂಪರ್ಕಿಸಿ ಇಂಥದೊಂದು ಕಾರ್ಯಕ್ರಮ ಮಾಡಲು ಯೋಜಿಸಿದ್ದೇವೆ, ಅನುಮತಿ ನೀಡಿ ಅಂದರಂತೆ. ಮುಖ್ಯಸ್ಥರು, ರ್ರೀ, ಸಿಲಬಸ್ ಪೋರ್ಷನ್ ಎಲ್ಲ ಮಾಡಿಯಾಯ್ತೇನ್ರೀ? ಅದೇನ್ರೀ ಅದು ಪರಿಸರ, ತೇಜಸ್ವಿ?” ಎಂದರಂತೆ.
“ಸರ್, ಕುವೆಂಪು ಮಗ ತೇಜಸ್ವಿ ಸಾರ್, ಅವರು ಸಾಹಿತಿ, ಪರಿಸರವಾದಿ, ಚಿಂತಕ……..” ಹೀಗೆ ಇನ್ನೂ ಹೆಚ್ಚಿನ ವಿವರ ನೀಡಿದರಂತೆ. ಅರೆ ಮನಸ್ಸಿನಿಂದ ಹ್ಞೂಗುಟ್ಟಿದ ಪ್ರಾಂಶುಪಾಲರು “ತೇಜಸ್ವಿ ಬರ್ತಾರೇನ್ರಿ ಪ್ರೋಗ್ರಾಮ್ಗೆ?” ಎಂದರಂತೆ. ಇದು ನಡೆದದ್ದು 2010ರಲ್ಲಿ, ತೇಜಸ್ವಿ ತೀರಿಕೊಂಡದ್ದು 2007ರಲ್ಲಿ. ಒಂದು ಕಾಲೇಜಿನ ಪ್ರಾಂಶುಪಾಲರಾಗಿದ್ದವರಿಗೆ ಕನ್ನಡದ ಓರ್ವ ಗುರುತರ ಸಾಹಿತಿಯ ಬಗ್ಗೆ ಮಾಹಿತಿಯೇ ಇರಲಿಲ್ಲವೆಂದರೆ ಇವರ ಬಳಿ ಕಲಿತ ಮಕ್ಕಳ ಬಗ್ಗೆ ಏನು ಹೇಳುವುದು?
ಇತ್ತೀಚೆಗೆ ನನ್ನನ್ನು ಓರ್ವ ವ್ಯಕ್ತಿ ಫೋನ್ ಮುಖಾಂತರ ಸಂಪರ್ಕಿಸಿದರು. “ಸರ್, ಪರಿಸರದ ಮೇಲೆ ಒಂದು ಭಾಷಣ ಮಾಡಬೇಕು. ನೀವು ಒಂದು ಗಂಟೆ ಮಾತಾಡಬೇಕು. ಈ ತಿಂಗಳ ಕೊನೆಯೊಳಗೆ ಮಾಡಬೇಕು. ಯಾವಾಗ ಇಟ್ಟುಕೊಳ್ಳೋಣ?” ಎಂದರು ಒಂದೇ ಉಸಿರಿನಲ್ಲಿ. “ಆಡಿಯನ್ಸ್ ಗ್ರೂಪ್ ಯಾವುದು?” ಎಂದೆ.
“ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳು” ಎಂದರು. ನನಗೂ ವಿದ್ಯಾರ್ಥಿಗಳ ಜೊತೆ ಪರಿಸರದ ಕುರಿತು ಸಂವಾದ ನಡೆಸುವುದು ಸಂತೋಷದ ವಿಚಾರವೇ ಆಗಿತ್ತು. ಹಲವಾರು ಶಾಲಾ ಕಾಲೇಜುಗಳಲ್ಲಿ ಪರಸರದ ಕುರಿತು ಅತಿಥಿ ಉಪಾನ್ಯಾಸಕನಾಗಿ ಆಗಾಗ ಮಾತನಾಡಿ ನನ್ನ ಮಿತಿಯಲ್ಲಿ ನನಗೆ ತಿಳಿದಷ್ಟನ್ನು ನನ್ನ ಕಿರಿಯರಿಗೆ ಮಾತಿನ ಮುಖಾಂತರ ದಾಟಿಸುತಿದ್ದೆ. ಹಾಗೆಯೇ ಹೋದ ಕಾಲೇಜುಗಳಲ್ಲಿ ಪರಿಸರ ತಂಡಗಳನ್ನು ರೂಪಿಸಲು ಸಲಹೆ ಸೂಚನೆ ನೀಡಿ ಸಣ್ಣ ಪ್ರಮಾಣದ ಆಂದೋಲನವನ್ನು ಹುಟ್ಟು ಹಾಕಲು ಪ್ರಯತ್ನಿಸಿ ಕೊಂಚಮಟ್ಟಿಗೆ ಯಶಸ್ವಿಯೂ ಆಗಿದ್ದೆ. ವಿದ್ಯಾರ್ಥಿಗಳು ಮತ್ತು ಯುವಜನಾಂಗ ಮನಸ್ಸು ಮಾಡಿದರೆ ಯಾವ ಕೆಲಸವೂ ಅಸಾಧ್ಯವಲ್ಲ ಮತ್ತು ಈ ಸಮಾಜದಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆಯಾಗುವುದಿದ್ದರೆ ಅದು ಈ ವಯೋಮಾನದವರಿಂದಲೇ ಎಂದು ನಂಬಿರುವವ ನಾನು.
“ಈ ಹಿಂದೆ ಈ ರೀತಿಯ ಕಾರ್ಯಕ್ರಮ ಮಾಡಿದ್ದೀರಾ?” ಎಂದೆ. “ಇಲ್ಲ ಇದೇ ಮೊದಲ ಸಲ ಮಾಡ್ತಿರೋದು, ನಮ್ಮ ಸುಬ್ಬಣ್ಣರನ್ನು ಕೇಳಿದೆ ಯಾರನ್ನು ಕರೆಯೋದು ಎಂದು ಅವರು ನಿಮ್ಮ ಹೆಸರನ್ನು ಸಜೆಸ್ಟ್ ಮಾಡಿದರು” ಎಂದರು. “ಈ ತಿಂಗಳು ನಾನು ಹಲವು ಕೆಲಸಗಳನ್ನು ಹಾಕಿಕೊಂಡಿದ್ದೇನೆ. ಮುಂದಿನ ತಿಂಗಳು ಮೊದಲನೇ ವಾರ ಮಾಡಿದರೆ ಹೇಗೆ?” ಎಂದೆ.
“ಅಯ್ಯಯ್ಯೋ ಹಾಗಾಗೋದೇ ಇಲ್ಲಾ. ಈ ತಿಂಗಳ ಒಳಗೆ ಪರಿಸರದ ಬಗ್ಗೆ ಯಾವುದಾದರೂ ಒಂದು ಕಾರ್ಯಕ್ರಮ ಮಾಡಿ ಮುಗಿಸಿಬಿಡಿ ಎಂದಿದಾರೆ ಸಾರ್ ನಮ್ಮ ಮೇಲಧಿಕಾರಿಗಳು. ಈ ಪಾಠಗಳ ಮದ್ಯೆ ಇವು ಬೇರೆ ತಲೆನೋವುಗಳು, ಮುಂದಿನ ತಿಂಗಳ ಎರಡನೇ ತಾರೀಖಿಗೇ ಬಿಲ್ ಸಬ್ಮಿಟ್ ಬೇರೆ ಆಗಬೇಕಂತೆ!” ಅಂದರು.
ನಾನು ಹೋಗಲಿಲ್ಲ. ಬೇರೆ ಯಾರನ್ನೋ ಕರೆಸಿ ಕಾರ್ಯಕ್ರಮ ಮಾಡಿದರಂತೆ. ಉದ್ದೇಶ, ಸಾರ್ಥಕತೆ, ಫಲಿತಾಂಶದ, ಪರಿಕಲ್ಪನೆಯೇ ಇಲ್ಲದೆ, ಮೇಲಾಧಿಕಾರಿಗಳ ಆದೇಶ ಪಾಲಿಸಲು ಮತ್ತು ಬಂದಿರುವ ಅನುದಾನಕ್ಕೆ ಬಿಲ್ ಒದಗಿಸಲು ಕಾರ್ಯಕ್ರಮ ಮಾಡಲು ಹೊರಟಿರುವ ಇವರುಗಳಿಂದ ಎಂಥಾ ಬದಲಾವಣೆ ನಿರೀಕ್ಷಿಸಬಹುದು?

“ವಕೀಲಿ ವೃತ್ತಿಯವರೇ ಬಹುಮಂದಿಯಿರುವ ರಾಷ್ಟ್ರೀಯ ರಾಜಕೀಯ ಹೇಗೆ ಸರ್ವರ ಆಶೋತ್ತರಗಳನ್ನು ಬಿಂಬಿಸಲು ಅಸಮರ್ಥವಾಗಿದೆಯೋ ಹಾಗೆಯೇ ಸಾರ್ವಜನಿಕ ಜೀವನ ಸುಗಮವೂ ಸರಳವೂ ಆಗುವ ಬದಲು ಕಾನೂನು ಗೋಂಡಾರಣ್ಯಗಳ ಮತ್ತು ಅಧಿಕಾರಶಾಹಿಯ ನಿರ್ಮಾಣವಾಗುತ್ತದೆ. ಇದರಂತೆಯೇ ಕೇವಲ ಉಪಾದ್ಯಾಯ ವೃತ್ತಿಯ ಸಾಹಿತಿಗಳು ಕರ್ನಾಟಕ ವ್ಯಾಪ್ತಿಯ ಜೀವನದ ವಕ್ತಾರರಾಗುವುದು ಹಾಸ್ಯಾಸ್ಪದವಾಗುತ್ತದೆ.
ಸಾಹಿತ್ಯ ಸಂಪ್ರದಾಯದ ಉತ್ತಮ ಲೇಖಕರೆಲ್ಲಾ ಬಹುಮಂದಿ ಮೇಷ್ಟಾçಗಿದ್ದಾರೆ. ಇವರಲ್ಲಿ ಬಹುಮಂದಿ ನಿರ್ದಿಷ್ಟ ಮತದವರೂ, ಈ ವರ್ಗದಲ್ಲಿ ಮುಕ್ಕಾಲು ಜನ ನಿರ್ದಿಷ್ಟ ಕೋಮಿಗೆ ಸೇರಿದವರೂ ಆಗಿದ್ದಾರೆ. ಕನ್ನಡ ಸಾಹಿತ್ಯದ ಸಂಪ್ರದಾಯಗಳು, ನವೋದಯಗಳು ಆ ಮೂಲಕ ಧರ್ಮದ ವಿರುದ್ಧ ಏಳುತಿದ್ದ ಸಾಮಾಜಿಕ ಕ್ರಾಂತಿಯೊಂದಿಗೇ ಸಂಭವಿಸುತ್ತಿದ್ದುದರಿಂದ ಸಾಮಾಜಿಕ ವ್ಯವಸ್ಥೆಯ ಹೋಯ್ದಾಟದೊಂದಿಗೇ ಹೊಸರೀತಿಯ ಅನುಭವಗಳೂ, ಕ್ವಚಿತ್ತಾಗಿ ಸಾಹಿತ್ಯ ಕ್ಷೇತ್ರಕ್ಕೆ ನುಗ್ಗಿ ಬರುವ ಸಾಧ್ಯತೆಗಳಿದ್ದವು. ಈಗ ಅಕಸ್ಮಾತ್ತಾಗಿ ಬೇರೆಯವನೇನಾದರೂ ಬರಹಗಾರನಾಗಿ ಬಂದರೂ ಅವನೂ ಸಹಾ ಅದೇ ಮಾಸ್ತರಿಕೆ ಮಾಡುತ್ತಾ ಅದೇ ಕಾಲೇಜು ಅದೇ ಹುಡುಗರ ಎದುರು ಅದೇ ಪಠ್ಯಪುಸ್ತಕವನ್ನು ವಿಮರ್ಶಿಸಿ ಪ್ರಶಂಸಿಸಿ ಕಾಲ ಕಳೆಯುವ ಅದೇ ಗಿಳಿಯೇ ಆಗಿರುತ್ತಾನೆ.” ಎನ್ನುತ್ತಾರೆ ತೇಜಸ್ವಿ.
ಇತರರಿಗೆ ಅರ್ಥವಾಗುವಂತೆ ಸರಳವಾಗಿ ಮಾತನಾಡಿದರೆ ಅಥವಾ ಬರೆದರೆ ನಮ್ಮ ಪಾಂಡಿತ್ಯ, ಘನತೆ-ಗಾಂಭರ್ಯತೆಗೆ ಎಲ್ಲಿ ಗೌರವ ಕಡಿಮೆಯಾಗುತ್ತದೋ ಎಂಬ ಅಭದ್ರತೆಗೆ, ಹುಸಿ ಪ್ರತಿಷ್ಠೆಗೆ ಭಾಜನರಾಗಿರುವ ನಮ್ಮೊಳಗಿನ ನಾಜೂಕಪ್ಪಗಳು ತಮ್ಮ ವೇಷ ಕಳಚಲೇಬೇಕಾಗುತ್ತದೆ. ಸಂದರ್ಭದ ಕಾವಿನಲ್ಲಿ ಅಡಗಿರುವ ನಿಜ ಬಣ್ಣ ಅನಾವರಣವಾಗಲೇ ಬೇಕಾಗುತ್ತದೆ, ಹಾಲು ಕುದಿಯುವಾಗ ಕೊಳೆ ಹೊರಬರುವಂತೆ. ಅಕ್ಷರ ಸಂಸ್ಕೃತಿಗೆ ಅಪರಿಚಿತವಾಗಿದ್ದ ಸಮಾಜದ ಸ್ತರದಿಂದ ಹೊಸಬರಹಗಾರರು ತಮ್ಮದೇ ಆದ ಅನುಭವ ಹಾಗೂ ಜೀವನದೃಷ್ಟಿಯೊಂದಿಗೆ ಕನ್ನಡ ಸಾಹಿತ್ಯದೊಳಗೆ ಇಪ್ಪತ್ತನೆ ಶತಮಾನದ ಎರಡನೇ ಭಾಗದಲ್ಲಿ ಕಾಲಿಟ್ಟಿದ್ದು ಕರ್ನಾಟಕದ ಒಂದು ದೊಡ್ಡ ಸಾಂಸ್ಕೃತಿಕ ಬದಲಾವಣೆಗೆ ಕಾರಣವಾಯ್ತು. ಅದು ಅರ್ಥವಾಗುತ್ತಾ ಹೆಚ್ಚು ಪ್ರಸ್ತುತವಾದ ಅಸಾಧಾರಣ ಸಂಕ್ರಮಣದ ಕಾಲ.
ಹಿರಿಯರ ಧ್ಯೇಯವನ್ನು ಗೌರವದಿಂದ ಮ್ಯೂಸಿಯಂನಲ್ಲಿಟ್ಟು, ಅವರ ನಿಜ ಶಿಷ್ಯರಿಗೆ ಮಾಸಾಶನ ನೀಡಿ, ತಲೆ ಸವರಿ ಹಾರ ಹಾಕಿ ಮೂಲೆಗುಂಪು ಮಾಡಿದ್ದೇವೆ. ಅಸಂಬದ್ಧ ಆಚರಣೆಗಳನ್ನು ಅವೇ ನಿಜವಿರಬಹುದೆಂದು ಅಂಧಾನುಕರಣೆ ಮಾಡುತ್ತಿದ್ದೇವೆ. ಅವೇ ಅಂತಿಮ ಸತ್ಯಗಳೆಂದು ಭ್ರಮೆ ಹಾಗೂ ಭಯದಲ್ಲಿ ಭಾವಿಯೊಳಗಿನ ಕಪ್ಪೆಗಳಂತೆ ಬದುಕುತ್ತಿದ್ದೇವೆ. ಹೊರ ಪ್ರಪಂಚ ಗೊತ್ತಿಲ್ಲದ ಹಾಗೂ ಗೊತ್ತಾಗಲೂ ಅವಕಾಶವಿಲ್ಲದ ಅಬ್ಬೇಪಾರಿಗಳಂತೆ ಅಸಹಾಯ ಮತ್ತು ಅಸಹನೀಯ ಬದುಕನ್ನು ಬಾಳುತ್ತಿದ್ದೇವೆ. ಕೇಳಿದರೆ ದೊಡ್ಡ ಆಚಾರ್ಯರೇ ಹೀಗೆ ಹೇಳಿದ್ದಾರೆ, ಶ್! ಪ್ರಶ್ನಿಸಬಾರದು… ಯಾರು ಯಾವಾಗ ಹೇಳಿದ ಮಾತಿಲ್ಲಿ ನಿಗದಿ? ವ್ಯಕ್ತ್ತಿಗತವಾಗಿರುವ ವೈಯಕ್ತಿಕ ವಿಶಿಷ್ಠತೆಯನ್ನು ಪ್ರಾಮಾಣಿಕವಾದ ಸೂಕ್ಷ್ಮ ಅವಲೋಕನದಿಂದಲೇ ಸಮಾಜದ ಒಟ್ಟಂದದ ಸಮಗ್ರತೆಯನ್ನು ಒಪ್ಪಿಕೊಳ್ಳುವ ಮನುಷ್ಯ ಸಹಜವಾದ ಜೀವಂತ ಗ್ರಹಿಕೆ ಅತ್ಯಗತ್ಯವಾಗಿದೆ.

ಜಾತಿ ಲಾಬಿನೇ ಪರಂಪರೆ, ಬೆಂಗಳೂರಲ್ಲಿ ಇರೋದೊಂದೇ ಮೇಜರ್ ಕ್ವಾಲಿಫಿಕೇಷನ್, ಮೀಡಿಯಾ ಸಂಪರ್ಕಗಳೇ ಬಂಡವಾಳ, ಇವರು ಹೊರಡಿಸೋ ಫರ್ಮಾನುಗಳೇ ಅಂತಿಮವಾಗಿ ಈ ನೆಲದ ನಿಜ ಮಿಡಿತ ಮತ್ತು ಸಂವೇದನೆಯು ಕಡೆಗಣಿಸಲ್ಪಟ್ಟಿರುವ ಬಗ್ಗೆ ದುಗುಡಗೊಳ್ಳುತ್ತಾರೆ ತೇಜಸ್ವಿ. ಮಾಧ್ಯಮಗಳಲ್ಲಿ ಪ್ರತಿಷ್ಠಾಪನೆಯಾಗಿರುವ ಸನಾತನೀ ಪಳೆಯುಳಿಕೆಗಳು ತಮ್ಮ ಪೂರ್ವಜರ ದತ್ತಿಯನ್ನೇ ಪರಂಪರಾಗತವಾಗಿ ಮುಂದುವರೆಸಿಕೊಂಡು ಹೋಗುವ ಸಂಪ್ರದಾಯಕ್ಕೆ ಕಟ್ಟುಬಿದ್ದಿರುವುದು ಕಣ್ಣಿಗೆ ರಾಚುವಂತೆ ಕಾಣುತ್ತದೆ. ಬಲಶಾಲಿಯಾದವನನ್ನು ಆಶ್ರಯಿಸುವ, ಧನವಂತನನ್ನು ಒಲೈಸುವ, ಅಧಿಕಾರ ಹೊಂದಿರುವವನನ್ನು ಹೊಗಳಿ ಅಟ್ಟಕ್ಕೇರಿಸುವ ಪರಾಕ್ ಶೂರರು ಯಾವುದೇ ಸಮಾಜಮುಖಿ ಹೋರಾಟದ ಮೂಲಕ ಹೊರಹೊಮ್ಮಿದವರಲ್ಲ.
ಕಟುವಾಸ್ತವದ ಹಿನ್ನೆಲೆಯಿಲ್ಲದೇ ಕೇವಲ ಬೌದ್ಧಿಕಜ್ಞಾನವನ್ನೇ ಬಂಡವಾಳಮಾಡಿಕೊಂಡಿರುವ ಈ ಕೂಚುಂಭಟ್ಟರು ನಿಜಹೋರಾಟಗಾರರೇ ನಾಚಿಕೆ ಪಟ್ಟು ಹಿನ್ನೆಲೆಗೆ ಸರಿಯುವಂತೆ ನಾತಾವರಣವನ್ನು ಸೃಷ್ಠಿಸಿಬಿಡುತ್ತಾರೆ ಮತ್ತು ಹಿಂದಿನ ಬಾಗಿಲಿನಿಂದ ನುಸುಳಿ ಕೇವಲ ಬಾಯಿಮಾತಿನಿಂದಲೇ ಪ್ರಭಾವಿಯಾಗಿ ಆಯಕಟ್ಟಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತಾರೆ. `ಅಜ್ಞಾನಿಗಳಾಗಿದ್ದ ನಿಮ್ಮನ್ನು ನಾವು ಸುಧಾರಿಸಿದೆವು ಎಂಬು ಹದ್ದುಬಸ್ತಿನಡಿ ಎಲ್ಲವನ ನೂ ನಿಯಂತ್ರಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಈಗ ನಮ್ಮ ಅಂಕೆಯನ್ನು ಮೀರಿ ಒಂದು ಹೆಜ್ಜೆಯನ್ನೂ ಮುಂದಿಡಬಾರದು’. ಇಂತಹ ಹೊಗಳಿಕೆ ಹಾಕುವವರನ್ನೇ ಅರಸುವ ಜಾಯಮಾನದ ಅಧಿಕಾರಸ್ಥರು ಪರಾಕುಗಳನ್ನು ಮೆಲುಕು ಹಾಕುತ್ತಲೇ ನಿದ್ದೆಗಣ್ಣಿನಲ್ಲಿ ಮಗ್ಗುಲು ಬದಲಿಸಿ ಹಾಸ್ಯಾಸ್ಪದವಾಗಿ ಜೀವಿಸುತ್ತಾರೆ.
ಭೂಮಿಯಿಂದ ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಮೈಲಿ ದೂರದಲ್ಲಿ, ಕತ್ತಲಲ್ಲಿ ಕತ್ತಲಾಗಿರುವ ಬಾಹ್ಯಾಕಾಶದಲ್ಲಿ ಚಂದ್ರನೆಡೆಗೆ ಸಾಗುತ್ತಾ ಹಿಂದೆ ತಿರುಗಿ ನೋಡಿದಾಗ ಬಾಹ್ಯಾಕಾಶ ಯಾತ್ರಿಗಳಿಗೆ ಒಂದು ಅವಿಸ್ಮರಣೀಯ ದೃಶ್ಯ ಕಾಣಿಸಿತು. ನೀಲಿ, ಹಸಿರು, ಕೆಂಪು ವರ್ಣದ ಭೂಮಿ ಹಿರಿದಾಗುತ್ತಿದ್ದ ಚಂದ್ರನ ಹಿಂಭಾಗದ ದಿಗಂತದಿಂದ ವಜ್ರದಂತೆ ಪ್ರಜ್ವಲಿಸುತ್ತಾ ಮೂಡುತಿತ್ತು. ಸುತ್ತ ಜೀವಕೋಟಿಯ ಸುಳಿವೂ ಇಲ್ಲದ ಚಂದ್ರ ಮತ್ತಿತರ ಬಂಜರು ಗ್ರಹಗಳು! ಮುಂದೆ ಅನಂತವಾಗಿ ಹಬ್ಬಿರುವ ಕರಿಯ ಶೂನ್ಯಾಕಾಶ! ಜೀವದ ಸುಳಿವಿಲ್ಲದ ಸೌರಮಂಡಲದ ನಡುವೆ ಹೊಳೆಯುತ್ತಿರುವ ನೀಲಿಯ ಏಕಮಾತ್ರ ಗ್ರಹ ಭೂಮಿ. ಇದಕ್ಕಿಂತ ಅನರ್ಘ್ಯವಾದದ್ದು, ಅಮೂಲ್ಯವಾದದ್ದು ಯಾವುದೂ ಇಲ್ಲ ಎನಿಸಿತು.

ಗಗನ ಯಾತ್ರಿಗಳಿಗೆ. ನಮ್ಮ ಸೀಬೆ ಗಿಡದ ಮೇಲಿನ ಅಳಿಲು, ಮುಬಿಯಾ ನದಿತೀರದ ಕಪ್ಪೆ, ಹಳ್ಳದ ಪಕ್ಕ ಅಡ್ಡಡ್ಡ ಓಡಾಡುವ ವಿಚಿತ್ರ ಏಡಿ, ಆಫ್ರಿಕಾದ ಯಾವುದೋ ಕಗ್ಗಾಡಿನಲ್ಲಿ ಗಾಳಿಯಲ್ಲಿ ತೇಲಾಡುವ ಇಲಿ, ಕೆರೆಯ ಕಲ್ಲಿನ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಆಮೆ, ಇವೆಲ್ಲದರ ಸಂಯೋಜನೆ ಎರಡು ಲಕ್ಷ ಮೈಲು ದೂರದಲ್ಲಿ ಗಗನಯಾತ್ರಿಗಳು ಕಂಡ ಕಾಣ್ಕೆ. ಈ ಸತ್ಯವನ್ನು ಅಷ್ಟು ದೂರ ಹೋಗದೇ ಇಲ್ಲಿದ್ದೇ ಸಾಕ್ಷಾತ್ಕರಿಸಿಕೊಂಡ ಮನುಷ್ಯ ಜೆರಾಲ್ಡ್ ಡ್ಯುರೆಲ್. ಈ ಭೂಮಿಯ ಅತಿ ಸಾಮಾನ್ಯವಾದುದು, ಸರಳವಾದುದೂ ಸಹ ಅತ್ಯಮೋಘ, ಅಸಾಮಾನ್ಯ ಎಂದು ನಾವು ತಿಳಿದಿರುವುದರಷ್ಟೇ ವಿಶ್ವಮಾನ್ಯ ಎಂದು ತೋರಿಸಿಕೊಟ್ಟಾತ ಜೆರಾಲ್ಡ್ ಡ್ಯುರೆಲ್. ಸಾಹಿತ್ಯದ ಸ್ವಾರಸ್ಯದಲ್ಲಿ ಕೃತಿಯಲ್ಲಿ ಅಂತರ್ಗತವಾಗಿರುವ ತಾತ್ವಿಕ ಎಳೆಯನ್ನು ಸಹಾ ಗ್ರಹಿಸುವುದು ಅವಶ್ಯ.
ಹೀಗೆ ತೇಜಸ್ವಿ ತಮ್ಮ “ನೆರೆಹೊರೆಯ ಗೆಳೆಯರು” ಪುಸ್ತಕದ ಮುನ್ನುಡಿಯಲ್ಲಿ ಇಪ್ಪತ್ತೊಂದನೆಯ ಶತಮಾನಕ್ಕೆ ದಾಟುವ ಮುನ್ನ ಎಂಬ ಮುನ್ನುಡಿಯಲಿ ಬರೆದಿದ್ದಾರೆ. ಇಲ್ಲಿ ಬರುವ ಜೆರಾಲ್ಡ್ ಡ್ಯುರೆಲ್ ಹೆಸರಿನ ಜಾಗದಲ್ಲಿ ನಿರ್ವಿವಾದವಾಗಿ ಪೂರ್ಣಚಂದ್ರ ತೇಜಸ್ವಿಯವರ ಹೆಸರನ್ನು ಸಂವಾದಿಯಾಗಿ ಸೇರಿಸುವುದು ಪ್ರಾಯಶ: ವ್ಯಕ್ತಿಪೂಜೆ ಎನಿಸಿಕೊಳ್ಳಲಾರದು; ಅನ್ನಿಸಿದರೂ ಅದು ನಮ್ಮ ಕಾಲದ ಜ್ಞಾನದ ಕಿಂಡಿಯೊಂದರ ಭಾಗಶ: ಅವಲೋಕನವಾಗಬಹುದೇನೋ!
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

