
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ನರಮನುಷ್ಯ ಇರಬೇಕಾದ್ದೇ ಹೀಗೆ!!!
ಮೈಸೂರಿನಲ್ಲಿ ಓದುವಾಗ ಇವರುಗಳ ವಾಸದ ಮನೆಯಿದ್ದ ವಠಾರದ ಬದಿಯ ಗಟಾರಕ್ಕೆ ಭೇಟಿ ನೀಡುತಿದ್ದ ವರಾಹರಾಯನನ್ನು ಬೇಟೆಯಾಡಿದ್ದು, ಹಂದಿಯ ನಿಜವಾದ ಯಜಮಾನ ಇವರಿಬ್ಬರನ್ನೂ ಬೆರೆಸಾಡಿದ್ದು ಮುಂತಾದುವುಗಳನ್ನು ನೆನೆಸಿಕೊಂಡು ಶಾಮಣ್ಣ ಈಗಲೂ ಗತವೈಭವವನ್ನು ಮೆಲುಕು ಹಾಕುತ್ತಿರುತ್ತಾರೆ.
ಪರೀಕ್ಷೆ ಅಥವಾ ಪದವಿಗಾಗಿ ವ್ಯಾಸಾಂಗ ಮಾಡಬಾರದು ಎಂಬುದನ್ನು ಸಂದರ್ಭ ಸಿಕ್ಕಿದಾಗಲೆಲ್ಲ ಹೇಳುತಿದ್ದ ತೇಜಸ್ವಿ “ತೀರಾ ಫಾರ್ಮಲ್ ಆಗಿ ವಿಧ್ಯಾಭ್ಯಾಸ ಪಡೆಯುವುದನ್ನು ನಾವಂದುಕೊಂಡಿರುವಷ್ಟು ಮೂಲಭೂತ ಅವಶ್ಯಕತೆಯೆಂದೇನೂ ನಾನು ಭಾವಿಸಿಲ್ಲ. ಪ್ರಾಥಮಿಕ ಹಂತದಿಂದಲೇ ಕಲಿಕೆಯನ್ನು ನಿಗಧಿತ ಕ್ರಮದಿಂದಲೇ ಆರಂಭಿಸುವ ಅಗತ್ಯವಿಲ್ಲ. ತನ್ನ ಸಾಮರ್ಥ್ಯ ಹಾಗೂ ಗ್ರಹಿಕೆಯ ಅಗತ್ಯದಂತೆ ಜ್ಞಾನವನ್ನು ಪ್ರತಿಯೊಬ್ಬನೂ ತನಗೆ ಗ್ರಾಹ್ಯವಾದಲ್ಲಿಂದಲೇ ಆರಂಭಿಸಿ ಕಲಿಯಬಹುದಲ್ಲವೇ?” ಎಂದು ಪ್ರಶ್ನಿಸುತ್ತಾರೆ. ಇದು ಬಹುತೇಕ ಸಂಧರ್ಭದಲ್ಲಿ ವಾಸ್ತವವೂ ಹೌದು. ವಿಧ್ಯಾರ್ಜನೆಯ ಉದ್ದೇಶ ಜ್ಞಾನವನ್ನು ವಿಸ್ತರಿಸಿಕೊಳ್ಳುವುದು ಮತ್ತು ನಮಗೆಷ್ಟು ತಿಳಿದಿಲ್ಲ ಎಂಬುದನ್ನು ದಿನಗಳೆದಂತೆ ಅರಿಯುತ್ತಾ ವಿಕಸನ ಹೊಂದುವುದು ಎಂದು ವ್ಯಾಖ್ಯಾನಿಸುತಿದ್ದರು.
ಕಾಲೇಜಿಗೆ ಹೋಗಿ ಹಲವು ವರ್ಷ ತಿಣುಕಿದರೂ ಕಲಿಯಲಾಗದ್ದನ್ನು ಜೀವನ ಸಂದರ್ಭದಲ್ಲಿ ಕೆಲವೇ ದಿನಗಳಲ್ಲಿ ಸಹಜವಾಗಿಯೇ ಕಲಿಯುತ್ತೇವೆ. ನಮ್ಮ ಸುತ್ತಲಿನ ಸಮಾಜ ಹಾಗೂ ಬದುಕು ಎಂಬುದು ಒಂದು ವಿಶ್ವವಿಧ್ಯಾನಿಯವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಆಯ್ಕೆ, ಆಸಕ್ತಿ ಹಾಗು ಅಳವಡಿಕೆ ನಮ್ಮ ವಿವೇಚನೆಗೆ ಸಂಬಂಧಿಸಿದವು.
ನಮ್ಮ ಈಗಿನ ವಿಧ್ಯಾಭ್ಯಾಸ ಕ್ರಮ ಪರೀಕ್ಷಕರನ್ನು ವಂಚಿಸುವುದು ಹೇಗೆಂದು ಹೇಳಿಕೊಡುತ್ತದೆಯಲ್ಲವೇ ಎಂಬ ನನ್ನ ಕಾಮೆಂಟಿಗೆ, `ಅದ್ಭುತಗಳನ್ನು ಸಾಧಿಸೋಕೆ ಎಲ್ಲೋ ಒಂದು ಒಳ ದಾರಿಯಿದೇಂತ ಹೇಳಿ ನೋಡಿ, ಈ ಯಂಗ್ಸ್ಟರ್ಗಳು ಶ್ರಮವಹಿಸಿ ಸಾಧಿಸೋದನ್ನು ಬಿಟ್ಟು ಒಳದಾರಿಯನ್ನು ಹುಡುಕುತ್ತಾ ಹೊರಡುತ್ತಾರೆ. ಲಾಭ ಗಳಿಸಲು ಹೊಸ ಸವಲತ್ತಿನ ಮಾರ್ಗವೊಂದು ತೆರೆದಿದೆಯೆಂದರೆ ಜನ ವರ್ತಿಸುವ ರೀತಿಗೂ ಶ್ರಮವಹಿಸಿ ಲಾಭಗಳಿಸುವುದು ಸಾಧ್ಯ ಎಂದಾಗ ಪ್ರತಿಕ್ರಿಯಿಸುವ ರೀತಿಗೂ ಅಜಗಜಾಂತರ.’ ಎಂದು ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದರು.
ತಮ್ಮ ಶಿಕ್ಷಣದ ಅವಧಿಯಲ್ಲಿ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಅಕ್ಯಾಡೆಮಿಕ್ ಆಗಿ ಅಭ್ಯಸಿಸಲು ಬಹಳ ತಿಣುಕಾಡುತಿದ್ದ ತೇಜಸ್ವಿ ಒಂದು ಹಂತದಲ್ಲಿ ಈ ವಿಷಯಗಳ ಬಗ್ಗೆ ಅವೆರ್ಷನ್ ಬೆಳೆಸಿಕೊಳ್ಳಲಾರಂಭಿಸಿದರು. ಕುವೆಂಪುರವರು ತೇಜಸ್ವಿಯವರಲ್ಲಿನ ಈ ಬೆಳವಣಿಗೆಯನ್ನು ಕಂಡು ನಮ್ಮ ಅಗತ್ಯಗಳಿಗಾಗಿ ಇಂಗ್ಲಿಷ್ ಕಲಿಯಬೇಕಾಗಿದೆಯೇ ಹೊರತು, ಬೇರೇನಕ್ಕೂ ಅಲ್ಲ. ನಾಗಾಲೋಟದಲ್ಲಿ ಮುಂದೋಡುತ್ತಿರುವ ಪ್ರಪಂಚದಲ್ಲಿ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಅಗತ್ಯವಾಗಿದೆ. eಗತ್ತಿನಲ್ಲಿರುವ ಜ್ಞಾನ ಕನ್ನಡಕ್ಕೆ ಬರಲಿಕ್ಕಾಗಿಯಾದರೂ ನಾವು ಇಂಗ್ಲಿಷ್ ಮುಂತಾದ ಇನ್ನಿತರೆ ಭಾಷೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಗಣಿತ ಮತ್ತು ವಿಜ್ಞಾನವನ್ನು ಪಠ್ಯವಾಗಿ ಅಭ್ಯಾಸ ಮಾಡಲು ಹಿಂದೇಟು ಹಾಕುತಿದ್ದ ತೇಜಸ್ವಿ ಅನ್ವಯಿಕವಾಗಿ ಅವನ್ನು ಸಾಹಿತ್ಯದ ಮೂಲಕ ಕನ್ನಡದ ಮಟ್ಟಿಗೆ ಬಹು ಎತ್ತರಕ್ಕೆ ಕೊಂಡೋಯ್ದದ್ದು ನಮ್ಮೆಲ್ಲರಿಗೂ ಈಗ ತಿಳಿದ ವಿಷಯವೇ ಆಗಿದೆ. ಆ ಮೂಲಕ ಕನ್ನಡದ ಸಾಹಿತ್ಯವನ್ನು ಅದರಲ್ಲೂ ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಹೊಸ ಮಜಲೊಂದನ್ನು ಒದಗಿಸಿದ ಕೀರ್ತಿ ತೇಜಸ್ವಿಯವರಿಗೆ ಸೇರಬೇಕಾದ್ದು. ವಿಜ್ಞಾನವನ್ನು ಮತ್ತು ಪರಿಸರ ವಿಜ್ಞಾನವನ್ನು ತಮ್ಮ ಅದ್ಯಯನದ ಮುಖ್ಯ ವಿಷಯವನ್ನಾಗಿ ತೆಗೆದುಕೊಂಡವರು ಮಾಡದ, ಮಾಡಲಿಕ್ಕಾಗದ ಕೆಲಸವನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ಮಾಡಿದ್ದು ಸಾಧನೆಯೇ ಸರಿ.
ನಿಮ್ಮ ಬರಹಗಳು ವಿಜ್ಞಾನದ ಅನೇಕ ವಿಷಯಗಳನ್ನು ತೆರೆದಿಡುತ್ತವೆ. ಕಾದಂಬರಿಯಾಗಿರಲಿ, ಸಣ್ಣಕಥೆಯಾಗಿರಲಿ ತುಂಬಾ ಸೈಂಟಿಫಿಕ್ ಆಗಿ ಬರೆಯುತ್ತೀರಿ. ಸಾಹಿತ್ಯದ ಪದವೀಧರರಾದ ನೀವು ವಿಜ್ಞಾನದ ಸಂಶೋಧಕರಂತೆ ನಿರೂಪಣೆ ಮಾಡುತ್ತೀರಿ ಎಂಬ ಓದುಗರ ವಿಮರ್ಶೆಗೆ `ನರಮನುಷ್ಯ ಇರಬೇಕಾದ್ದೇ ಹೀಗೆ. ಹಾಗಾಗಿ ನನ್ನನ್ನು ಸೈಂಟಿಫಕ್ ರೈಟರ್ ಎಂದು ಕರೆಯಬೇಕಾದ ಅಗತ್ಯವಿಲ್ಲ. ಮಾನವ ಸಹಜ ಕುತೂಹಲ ಮತ್ತು ತಿಳಿಯುವ ಹಂಬಲ ಹಾಗೂ ತಿಳಿದಿರುವುದನ್ನು ಇತರರಿಗೆ ಹಂಚುವ ಆಶಯ ಯಾರನ್ನು ಬೇಕಾದರೂ ಹಾಗೆ ವರ್ತಿಸುವಂತೆ ಮಾಡುತ್ತದೆ”ಎನ್ನುತ್ತಾರೆ. ತೇಜಸ್ವಿ ಬರೆದದ್ದೇ ನಮ್ಮ ಭಾಗ್ಯ ಎನ್ನುವಷ್ಟರ ಮಟ್ಟಿಗೆ ಓದು ಬಳಗವನ್ನು ಸೃಷ್ಠಿಸಿದ ಗಾರುಡಿಗ. ಹೆಸರಾಂತ ಲೇಖಕರು ತಮ್ಮ ಜೀವನನುಭವವನ್ನು ಕ್ರೋಢೀಕರಿಸಿ ಬರೆದಂತೆ ನೀವೇನಾದ್ದರೂ ಆಟೋಬಯೋಗ್ರಫಿಯನ್ನು ಬರೆಯುತ್ತಿದ್ದೀರಾ ಎಂದು ಅಭಿಮಾನಿಯೊಬ್ಬರ ಪ್ರಶ್ನೆಗೆ `ಆತ್ಮಕಥೆ ಅದೂ ಇದೂಂತ ಮತ್ತೆ ಏನು ಬರೆಯೋದು? ನನ್ನದೇನಿದ್ರೂ ರಿಯಲ್ ಲೈಫ್ಸ್ಟೋರಿ, ಅದು ಮಾಯಾಲೋಕ!’ ಎಂದು ಪ್ರತ್ಯುತ್ತರಿಸಿದ್ದರು.
– ಮುಂದುವರೆಯುವುದು
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946