
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ನಮಸ್ಕಾರಾ ಸಾರ್!!
ಅರೇ ಈ ಪ್ರಶ್ನೆಯನ್ನು ತೇಜಸ್ವಿಯವರಲ್ಲೇ ಕೇಳಬೇಕಿತ್ತು.
ನನ್ನಲ್ಲಿ ಯಾಕೆ ಕೇಳಿದನೆಂದು ಚಕಿತಗೊಂಡೆ.
ಆದರೂ “ಹಂಗೆ ಅಂದ್ರೆ ಹ್ಯಂಗೆ? ಯಾಕೆ ಏನಾಯ್ತು?” ಎಂದೆ.
“ಅಲ್ಲ ಆ ಸ್ಪೇರ್ ಪಾರ್ಟ್ಸ್ ಅಂಗಡಿ ಮಂಜಣ್ಣ ನಮಸ್ಕಾರ ಎಂದದಕ್ಕೇ ಸ್ಕೂಟರ್ ನಿಲ್ಲಿಸಿ ಕರೆದು ನಿಮಗೇನು ಬೇರೆ ಕೆಲಸ ಇಲ್ಲವೇನ್ರೀ ಎಂದರಂತಲ್ಲ? ನಮಸ್ತೆ ಎಂದವರಿಗೆ ಪ್ರತಿ ನಮಸ್ಕಾರ ಹೇಳಿದರೆ ಏನಾಗುತ್ತೆ ಹೇಳು? ಈ ಸಾಹಿತಿಗಳೆಲ್ಲ ಹೀಗೇನಾ ಏನ್ ಕಥೆ” ಎಂದ.
ನಾನು ಏನೂ ಹೇಳಲಿಲ್ಲ. ನಾನು ವಿಷ್ ಮಾಡಿದಾಗಲೂ ನನಗೂ ಕೆಲವೊಮ್ಮೆ ಪ್ರತಿಕ್ರಿಯಿಸದ ಪ್ರಸಂಗಗಳೇ ಇದ್ದವು. ಈ ವಿಚಾರದಲ್ಲಿ ನಾನೂ ಸಂತ್ರಸ್ತನೇ. ಎರಡು ದಿನದ ನಂತರ ತೇಜಸ್ವಿಯವರ ಮನೆಗೆ ಹೋದಾಗ ಏನಾದರೂ ಅನ್ನಲಿ, ಬೈಯಲಿಕ್ಕಾದರೂ ಬೈಯಲಿ ಎಂದುಕೊಂಡು ಅಳುಕುತ್ತಲೇ “ಆ ಸ್ಪೇರ್ ಪಾರ್ಟ್ಸ್ ಅಂಗಡಿಯವರಿಗೆ ಸ್ಕೂಟರ್ ನಿಲ್ಲಿಸಿಕೊಂಡು, ಕರೆದು ಬೈದಿರಂತೆ ಹೌದಾ?” ಎಂದೆ.
“ಯಾವ ಸ್ಪೇರ್ ಪಾರ್ಟ್ಸ್ ಮಾರಾಯ?” “
“ಅದೇ ಪೆಟ್ರೋಲ್ಬಂಕ್ ಪಕ್ಕ ಇದೆಯಲ್ಲ ಅದೇ ಅಂಗಡಿ”
“ನಿನಗ್ಯಾವನು ಹೇಳಿದ್ದು?”
“ನನ್ ಫ್ರೆಂಡ್ ವಿನಯ”.
ಸುಮ್ಮನಾದರು. ಮುಖ ಗಂಭೀರವಾಯಿತು, ನನಗೆ ಮಂಗಳಾರತಿಯಾಗುವುದೆಂದು ಮಾರುತಿಯಂತೆ ಮೂತಿ ಮುಂದೆ ಮಾಡಿಕೊಂಡು ಪೂಜೆ ಸ್ವೀಕರಿಸಲು ಸಿದ್ಧನಾದೆ. “ಅವನಿಗೇನಾದ್ರೂ ಬುದ್ಧಿ ಉಂಟೇನಯ್ಯಾ? ಈಚೆಯಿಂದ ಮೂಡಿಗೆರೆಗೆ ಹೋಗಬೇಕಾದರೂ ನಮಸ್ಕಾರ, ಆಚೆ ಕಡೆಯಿಂದ ಬರುವಾಗಲೂ ನಮಸ್ಕಾರ! ಬೇರೆ ಕೆಲಸ ಇಲ್ವ? ಆಕಸ್ಮಿಕವಾಗಿ ಅರ್ಜೆಂಟ್ ಕೆಲಸ ಇದ್ದು ಇನ್ನೊಮ್ಮೆ ಮೂಡಿಗೆರೆ ಹೋಗೋಣ ಎಂದರೆ ನನಗೇ ಕಾಯುತ್ತಿದ್ದನೇನೋ ಎಂಬಂತೆ ಮತ್ತೆ ಬಗ್ಗಿ ನಮಸ್ಕಾರ! ಅವನು ನಮಸ್ಕಾರ ಮಾಡೋಕ್ಕೆ ನಿಂತಿರೋ ಜಾಗ ಮೋಸ್ಟ್ ಡೇಂಜರಸ್ ಕಣಯ್ಯ. ಎರಡೂ ಕಡೆ ನೇರ ರಸ್ತೆ. ಅದ್ದೇ ಜಾಗದಲ್ಲಿ ತಿರುವು.”
ಸುಮ್ಮನಾಗಿ ನನ್ನ ಮುಖವನ್ನೇ ನೋಡಿದರು.
“`ಈ ಮೂಡಿಗೆರೆಯಲ್ಲಿ ಡ್ರೈವ್ ಮಾಡೋ ಅರ್ಧ ಜನಕ್ಕೆ ಡಿಎಲ್ ಇಲ್ಲ. ಡಿಎಲ್ ಇದ್ದವರು ಅನೇಕರು ಮೊಬೈಲ್ ಹುಚ್ಚರು. ತಲೆ ಮತ್ತು ಭುಜ ಒಂದಕ್ಕೊಂದು ಅಂಟಿಕೊಂಡಂತೆ ಕುತ್ತಿಗೆಯನ್ನು ಓರೆ ಮಾಡಿಕೊಂಡು ಯಾರಾದ್ದಾದರೂ ಪ್ರಾಣ ತೆಗೆಯಲು ಅಥವಾ ತಾವೇ ಸಾಯಲು ಸ್ಪರ್ಧೆಗಿಳಿದಿರುತ್ತಾರೆ. ಡಿಎಲ್ ಮತ್ತು ಆರ್ಸಿ ಇರೋ ನಾನೇ ಅವರಿಂದ ತಪ್ಪಿಸಿಕೊಂಡು ಓಡಾಡಬೇಕು. ಅಂಥದರಲ್ಲಿ ಈ ಮನುಷ್ಯ ಕಾಯ್ಕೊಂಡು ಕೂತ್ಕೊಂಡು ನಮಸ್ಕಾರ ಮಾಡಿದ್ರೆ, ನಾನು ಈತನ ಕಡೆ ತಿರುಗಿ ಎಲ್ಲಾದರೂ ಯಾರಿಂದಲಾದ್ರೂ ಗುದ್ದಿಸಿಕೊಂಡ್ರೆ ಏನಯ್ಯಾ ಗತಿ? ಇಷ್ಟೆ ಇನ್ನೇನಿಲ್ಲ. ನೀನು ಅವನ ಪರವಾಗಿ ಲಾಯರಿಕೆೆ ಮಾಡೋದಿಕ್ಕೆ ಬಂದಿದ್ದೀಯಾ?” ಎಂದು ಗದರಿದರು.
ನಾನೇನೂ ಅವರ ಪರವಾಗಿ ಲಾಯರಿಕೆ ಮಾಡಲು ಹೋಗಿರಲಿಲ್ಲ ಅನ್ನಿ, ಅದು ಬೇರೆ ಪ್ರಶ್ನೆ.

ಅವರ ಬದುಕು-ಬರಹದಿಂದ ಪ್ರಭಾವಿತನಾಗಿದ್ದ ನನ್ನಿಂದ ಆಗಾಗ್ಗೆ ಅವರನ್ನು ಭೇಟಿ ಮಾಡಿ ಅವರ ಕೆಲಸ ಕಾರ್ಯಗಳನ್ನು ಡಿಸ್ಟರ್ಬ್ ಮಾಡುವ ಅನೇಕ ಸಂದರ್ಭಗಳು ಘಟಿಸುತ್ತಲೇ ಇದ್ದವು.
ಒಂದೊಮ್ಮೆ ಕಂಪ್ಯೂಟರ್ನಲ್ಲಿ ಅವರು ಸೃಷ್ಟಿಸುತ್ತಿದ್ದ ಫೋಟೋ ಇಮೇಜ್ಗಳು, ಅದನ್ನು ಉತ್ತಮಗೊಳಿಸುತ್ತಿದ್ದ ರೀತಿ ಮುಂತಾದವುಗಳನ್ನು ಗಮನಿಸುತ್ತಿದ್ದ ನಾನು ನನಗೂ ಹೇಳಿಕೊಡಬೇಕೆಂದು ಗಂಟುಬಿದ್ದೆ. ‘ಅಲ್ಲಯ್ಯಾ ಸರ್ಕಾರಿ ನೌಕರಿ ಎನ್ನುತ್ತೀಯ, ಸಂಘ ಸಂಸ್ಥೆ ಎನ್ನುತ್ತೀಯಾ, ಇದು ಬೇರೆ ಮಾಡ್ತೀನಿ ಅಂತೀಯ, ಅದೇನು ಮಾಡ್ಬೇಕು ಅಂತ ಮೊದ್ಲು ನಿರ್ಧಾರ ಮಾಡು ಕಂಡದ್ದೆಲ್ಲಾ ಮಾಡ್ತೀನಿ ಅಂದ್ರೆ ಅದೇನು ಬ್ಯಾಗ್ ಎತ್ಕೊಂಡು ಟ್ರೆಕ್ಕಿಂಗ್ ಹೋದಹಾಗೆ ಅಂದುಕೊಂಡಿದ್ದೀಯಾ?’ ಎಂದು ಗದರಿಸಿದರು. ‘ಏನಕ್ಕೂ ಮೊದಲು ಒಂದು ಕಂಪ್ಯೂಟರ್ ತಗೋ ಆಮೇಲೆ ನೋಡ್ತೀನಿ.’ ಅಷ್ಟೇ ಸಾಕು ಒಂದು ವಾರದೊಳಗೆ ಕಂಪ್ಯೂಟರ್ ತಂದಾಯ್ತು. ಎಡೆಬಿಡದ ಕೆಲಸದ ತೇಜಸ್ವಿಯವರೇ ಅಗತ್ಯವಾದ ಪ್ರೋಗ್ರಾಂಗಳನ್ನು ಹಾಕಿಕೊಟ್ಟು ಕಂಪ್ಯೂಟರ್ ಆಪರೇಷನ್ ಇಲ್ಲಿ ಕಲಿತುಕೋ ಎಂದು ಬೇಸಿಕ್ ವಿಚಾರಗಳನ್ನು ತಿಳಿಸಿಕೊಟ್ಟರು.
‘ಫೋಟೋಗ್ರಫಿ ಕೆಲಸವನ್ನು ಕಲಿಯಲು ಮನೆಗೇ ಬಾ. ನಾನೇನು ಮಾಡ್ತೀನಿ ಅದನ್ನು ಗಂಭೀರವಾಗಿ ನೋಡಿಕೋ, ಮುಂದೆ ನೋಡೋಣ’ ಎಂದು ಕಲಿಕೆಯ ನನ್ನ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಫೈಲ್ ಓಪನಿಂಗ್, ನ್ಯೂ ಡಾಕ್ಯುಮೆಂಟ್ ಕ್ರಿಯೇಷನ್, ಕಾಂಟ್ರಾಸ್ಟ್, ಗ್ರೇಸ್ಕೇಲ್, ಫಿಲ್ಟರ್, ಫ್ಲಾಟನ್, ಬ್ಲರ್, ಥ್ರಷ್ಹೋಲ್ಡ್, ಕಲರ್ ಬ್ಯಾಲೆನ್ಸ್, ಕಟ್, ಪೇಸ್ಟ್, ಮರ್ಜ್ ಮುಂತಾದ ಪೋಟೋಗ್ರಫಿಗೆ ಸಂಬಂಧಿಸಿದ ಅಗಾಧ ಮಾಹಿತಿಯನ್ನು ಅತ್ಯಂತ ಸರಳವಾಗಿ ಈ ಕ್ಷಣವೂ ನೆನಪಿರುವಂತೆ ಹಂತಹಂತವಾಗಿ ಕರಾರುವಕ್ಕಾಗಿ ಹೇಳಿಕೊಟ್ಟವರು ತೇಜಸ್ವಿ. ಇಷ್ಟಲ್ಲದೇ ನನ್ನ ಕಂಪ್ಯೂಟರ್ ಕೈಕೊಟ್ಟಾಗಲೆಲ್ಲಾ ಮೈನರ್ ರಿಪೇರ್ಗಳನ್ನು ಬೇಸರಿಸದೇ ಮಾಡಿಕೊಟ್ಟಿರುವ ಜೊತೆಗೆ ದುರಸ್ಥಿಯನ್ನು ನಿರ್ವಹಿಸುವ ಬಗ್ಗೆಯೂ ತಿಳಿಸಿ, ನನ್ನ ಕೈಯಿಂದಲೇ ಮಾಡಿಸುತ್ತಿದ್ದರು.
ಕಲಿಯುವ ಉತ್ಸಾಹವಿರುವವರಿಗೆ ತೇಜಸ್ವಿಯವರು ಯಾವುದೇ ಕ್ಲಿಷ್ಟ ವಿಚಾರಗಳನ್ನು ಅತ್ಯಂತ ಸಮರ್ಪಕವಾಗಿ, ಅರ್ಥಪೂರ್ಣವಾಗಿ ಮತ್ತು ಸರಳವಾಗಿ ವಿವರಿಸುತ್ತಿದ್ದರು. ಕಂಪ್ಯೂಟರ್, ಫೋಟೋಗ್ರಫಿ, ಗ್ರಾಫಿಕ್ಸ್ ಕಲೆಗಳ ಬಗ್ಗೆ ಏನೇನೂ ತಲೆಬುಡ ತಿಳಿಯದಿದ್ದ ನನಗೆ ಈಗೇನಾದ್ರೂ ಅಲ್ಪಸ್ವಲ್ಪ ತಿಳಿದಿದ್ದರೆ ಅದಕ್ಕೆ ತೇಜಸ್ವಿಯವರೇ ಕಾರಣ.
– ಮುಂದುವರೆಯುವುದು
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946
