
ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ನಮಗೆ ಗೊತ್ತಿಲ್ಲದಿರುವುದು ಏನು ಎಂದು ಗೊತ್ತಾಗೋದು ಆಗಲೇ…!
ಕಂಪ್ಯೂಟರ್ನ ಸಾಧ್ಯತೆಗಳು ಅಗಾಧವಾಗಿರುವುದರಿಂದ ಚಿತ್ರಕಲೆಯಲ್ಲಿ ಪರಿಶ್ರಮ ಮತ್ತು ತಮ್ಮ ಮಿತಿಯ ಅರಿವು, ಫೊಟೋಗ್ರಫಿಯ ಅನುಭವ, ಕಂಪ್ಯೂಟರ್ನ ಪರಿಣತಿ, ಗಣಿತ ತಜ್ಞರು ಮತ್ತು ಸಾಫ್ಟ್ ವೇರ್ ಇಂಜಿನಿಯರ್ಗಳೇ ರೂಪಿಸಿರುವ ಈ ತಂತ್ರಾಂಶಗಳನ್ನು ಕಲಾಕೃತಿಗಳ ರಚನೆಯಲ್ಲಿ ಹೇಗೆ ಬಳಸಿಕೊಳ್ಳಬಹುದೆಂಬ ಕಲ್ಪನೆಯ ಕ್ರಮಬದ್ಧ ಯೋಜನೆ, ನಮ್ಮ ಅಗತ್ಯ ಮತ್ತು ಅಳವಡಿಕೆಯ ಸಾಧ್ಯತೆಗಳೇ ಕಂಪ್ಯೂಟರ್ ಚಿತ್ರಕಲೆಯ ಮೂಲನೆಲೆಗಳಾಗಿವೆ ಎನ್ನುತ್ತಾರೆ ತೇಜಸ್ವಿ.
ಅಕ್ಯಾಡೆಮಿಕ್ ಆಗಿ, ಕ್ರಮಬದ್ಧವಾಗಿ ಗೆರೆಯೆಳೆದು ಸಾಂಪ್ರದಾಯಿಕ ಶೈಲಿಯಿಂದ ಅಭ್ಯಾಸಮಾಡುವುದು ಅಸಹನೀಯವಾಗಿದ್ದರಿಂದ ತೇಜಸ್ವಿ ಚಿತ್ರಕಲಾಶಾಲೆಗೆ ಕೆಲವೇ ದಿನಗಳಲ್ಲಿ ಶರಣು ಹೊಡೆದಿದ್ದರು. ನಮ್ಮಲ್ಲೂ ಅನೇಕರು ಈ ಸಿದ್ಧಸೂತ್ರದ ಕಲಿಕೆಗೆ ಒಗ್ಗಿಕೊಂಡಿಲ್ಲ. ಪ್ರಯೋಗಶೀಲತೆ, ಸ್ವಾತಂತ್ರ್ಯ , ಕಲ್ಪನಾವ್ಯಾಪ್ತಿ, ಸರಳತೆ, ಸೃಜನಶೀಲತೆ ಇವು ಯಾವುದೇ ಕಲಾಭಿವ್ಯಕ್ತಿಗೆ ಮೂಲ ಸ್ಪೂರ್ತಿಗಳಾಗಿವೆ.
ಕಂಪ್ಯೂಟರ್ ಮೂಲಕ ಚಿತ್ರರಚನೆ ಮಾಡುತಿದ್ದ ತೇಜಸ್ವಿ ಅದಕ್ಕೂ ಮೊದಲು ಪುಸ್ತಕದ ರಕ್ಷಾಪುಟ ಒಳಪುಟಗಳ ಚಿತ್ರಗಳಿಗೆ ಮತ್ತು ಶೀರ್ಷಿಕೆಗಳಿಗೆ ಬಹಳ ಸಂದರ್ಭಗಳಲ್ಲಿ ಚಿತ್ರಕಲಾವಿದರನ್ನೇ ಆಶ್ರಯಿಸುತ್ತಿದ್ದರು. ಲೇಖಕರ ಕಲ್ಪನೆ, ಲೇಖನದ ವಸ್ತು ಮುಂತಾದುವುಗಳನ್ನೆಲ್ಲಾ ಕಲಾವಿದರಿಗೆ ವಿವರಿಸಿ, ಅರ್ಥೈಸಿ ಹೇಳುವುದೇ ಕಡುಕಷ್ಟವೆಂದು ಹೇಳಿಕೊಂಡಿದ್ದಾರೆ. “ನಾನು ಹೇಳಿದ್ದೊಂದು ಅವರು ತಿಳಿದದ್ದೇ ಒಂದು, ಕೊನೆಗೆ ಅವರು ಬರೆದದ್ದೇ ಮತ್ತೊಂದು, ಕಡೆಗೆ ಆದದ್ದು ಇನ್ನೇನೋ ಒಂದು. ಶೀತಲ ಸಮರ ಆರಂಭವಾಗಿ ತಲೆ ತಪ್ಪಿಸಿಕೊಂಡು ತಿರುಗುವಂತಾಗುತ್ತದೆ.’’ ಹಾಗಾಗಿ ಈ ಮಿಸ್ಸಿಂಗ್ ಕಮ್ಯುನಿಕೇಷನ್ ಲಿಂಕ್ನಿಂದ ಮುಕ್ತಿ ಪಡೆಯಲು ತಾವೇ ಚಿತ್ರರಚನೆಗೆ ಕೈಹಾಕಿದ್ದರು. “ಮತ್ತೊಬ್ಬರ ಜೊತೆ ಕೆಲಸಮಾಡುವುದೆಂದರೆ ಅದು ನನಗೆ ವಿಪರೀತ ಕಷ್ಟ. ನನಗೆ ಸಾಧ್ಯವೇ ಇಲ್ಲದ ಮಾತು ಅದು. ನಾನೇ ಪ್ರಯೋಗ ಮಾಡಿ ನಿಧಾನವಾಗಿ ಕಲಿಯಬೇಕಾಗಿ ಬಂದದ್ದರಿಂದ ಸಾಕಷ್ಟು ಸಮಯ ಹಿಡಿದಿದೆ. ಕಂಪ್ಯೂಟರ್ ಒಂದು ಸಾಧನವೇ ಹೊರತು, ಕಲಾವಿದನ ಪ್ರತಿಭೆಗೆ ಎಂದೆಂದೂ ಪರ್ಯಾಯವಾಗದು. ಜ್ಞಾನವನ್ನು ಪಡೀತಾ ಪಡೀತಾ ಒಂದು ದಿನ ಪರಿಪೂರ್ಣರಾಗುತ್ತೇವೆ ಎಂಬುದು ಸುಳ್ಳು. ಯಾವುದೇ ಬಗೆಯ ಜ್ಞಾನವೇ ಆಗಿರಲಿ ಅದು ಅಜ್ಞಾನದ ಜ್ಞಾನವೂ ಆಗಿರುತ್ತದೆ. ಏನಾದ್ರೂ ಗೊತ್ತಾಗುತ್ತಿದ್ದಂತೆ, ಗೊತ್ತಾಗೋದು ಅಂದ್ರೇನು? ನಮಗೆ ಏನು ಗೊತ್ತಿಲ್ಲ ಎಂದು ಗೊತ್ತಾಗೋದು. ಇದೊಂದು ನಿರಂತರವಾದ ಪ್ರಕ್ರಿಯೆ. ನನಗೇನು ತಿಳಿದಿಲ್ಲ ಎಂದು ತಿಳಿಯುವುದಿದೆ ನೋಡು ಅದೂ ಸಹ ಜ್ಞಾನದ ವಿಸ್ತರಣೆಯೇ ಆಗಿರುತ್ತದೆ ನಿನಗ್ಗೊತ್ತಾ?’’ ಎಂದು ತಿಳಿಹೇಳಿದ್ದರು ತೇಜಸ್ವಿ.
ಒಮ್ಮೆ ಫೋಟೋಗ್ರಫಿ ಕೆಲಸ ಮಾಡುವಾಗ ನನ್ನ ಕಂಪ್ಯೂಟರ್ ಸರಿಪಡಿಸಲಾಗದ ಸ್ಥಿತಿಯಲ್ಲಿ ಹಾಳಾಯಿತು. “ಕೀಬೋರ್ಡ್, ಡಾಟಾ ಕೇಬಲ್ ಸಮೇತ ತಗೋಂಡು ಬಾ, ಕೆಲವು ಕೀಬೋರ್ಡ್ ಸ್ಪೆಸಿಫಿಕ್ ಸಿಪಿಯುಗಳಿರುತ್ತವೆ. ಮತ್ತೆ ಹಿಂದೆ ಮುಂದೆ ತಿರುಗೋದಾಗುತ್ತೆ’ ಎಂದರು.
ತಾವು ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೇ ನಿಲ್ಲಿಸಿ ನನ್ನಿಂದಲೇ ಸಿಪಿಯುವನ್ನು ಬಿಚ್ಚಿಸಿ, ಪ್ರತಿ ಸಾಕೆಟ್ ಕನೆಕ್ಷನ್ಅನ್ನು ಪರಿಶೀಲಿಸಿ ಅವರಿಗೆ ತಿಳಿದಂತಹ ಎಲ್ಲಾ ಸಾಧ್ಯತೆಗಳನ್ನು ಪ್ರಯೋಗಿಸಿ ನೋಡಿದರು. ‘ಏನ್ ಪ್ರಯತ್ನ ಮಾಡಿದ್ರೂ ಕೆಲ್ಸ ಮಾಡ್ತಿಲ್ವಲ್ಲಯ್ಯಾ. ಬೀಳಿಸಿ ಗೀಳಿಸಿದೆಯೇನೋ ಮಾರಾಯ?’ ಎಂದರು.
‘ಸರ್ ನೀವು ಬೈಯಲ್ಲಾ ಅಂದ್ರೆ ಹೇಳ್ತೀನಿ.’
ಹುಬ್ಬು ಗಂಟಿಕ್ಕಿ ಕಳ್ಳನ್ನ ಹಿಡಿದ ಗತ್ತಿನಲ್ಲಿ ‘ನನಗೊತ್ತು ಏನೋ ತಲೆಹರಟೆ ಮಾಡಿರ್ತೀಯ, ಮೊನ್ನೆಮೊನ್ನೆ ಕಂಪ್ಯೂಟರ್ ನೋಡಿದೀಯ, ತಾನೇ ರಿಪೇರ್ ಮಾಡೋಕ್ಹೋಗಿ ಹಾಳ್ಮಾಡ್ಕೊಂಡು ಈಗ ನನ್ ತಲೆ ತಿಂತಿದೀಯಾ? ಏನ್ ಮಾಡಿದೀಯ ಹೇಳು?’
‘ಪದೇ ಪದೇ ಹ್ಯಾಂಗ್ ಆಗ್ತಿತ್ತು. ನಾನು ಅರ್ಧ ಕೆಲ್ಸ ಮಾಡೋದು, ಸೇವ್ ಮಾಡೋಕಾಗ್ತರ್ಲಿಲ್ಲ, ಮತ್ತೆ ಹ್ಯಾಂಗ್, ಹೀಗೆ ಆರೇಳು ಬಾರಿ ಆಯ್ತು. ಹಳೇ ಟ್ರಾನ್ಸಿಸ್ಟರ್ಗಳು ಸರಿಯಾಗಿ ಕೆಲಸ ಮಾಡದಿದ್ರೆ ಆಚೀಚೆ ತಟ್ಟಿ ತಲೆಯ ಮೇಲೆ ಕುಟ್ಟಿ ಹಾಡು ಕೇಳಿ ಅಭ್ಯಾಸವಿದ್ದ ನಾನು ಟೇಬಲ್ ಅಡಿಯಿದ್ದ ಸಿಪಿಯುಗೆ ಮೆತ್ತಗೆ ಒದ್ದೆ. ಮಾನಿಟರ್ನಲ್ಲಿ ಚಿತ್ರವಿಚಿತ್ರ ಚಿತ್ರಗಳು ಬಂದು ಕುಂಯ್ ಎಂದು ಶಬ್ದ ಮಾಡಿ ಒಂದೇ ಸಲಕ್ಕೆ ಆಫ್ ಆಯ್ತು.’
‘ಥೂ ಶನಿ, ನಿನ್ನ ಮೂತಿಗೆ, ಕಂಪ್ಯೂಟರ್ ತಗೋ ಅಂತ ಬೇರೆ ಹೇಳಿದ್ನಲ್ಲ, ದನ ಕಾಯೋಕ್ಹೋಗು ಗಮಾರ, ತಿಕದ್ಮೇಲೆ ನಾಲ್ಕು ಒದೀಬೇಕು ನೋಡು ನಿನಗೆ. ಏನಾದ್ರೂ ಮಾಡ್ಕೊಂಡು ಸಾಯಿ, ನನಗೆ ಬೇರೆ ಕೆಲ್ಸ ಇದೆ ’ಎಂದವರೇ ಎಲ್ಲಾ ಬಿಸಾಕಿ ಅವರ ಕಂಪ್ಯೂಟರ್ ಮುಂದೆ ಕುಳಿತು ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಮುಂದುವರೆಸಿದರು.
ನಾನು ಪ್ಯಾಕಪ್ ಆಗಲು ಶುರು ಮಾಡಿದೆ. ವಾರೆಗಣ್ಣಲ್ಲಿ ನನ್ನನ್ನೇ ನೋಡ್ತಾ ಇದ್ದ್ದದ್ದು ನನ್ನ ಗಮನಕ್ಕೆ ಬರ್ತಾ ಇತ್ತು. ಇನ್ನೇನು ಮಣ್ಣು ತಿನ್ನೋ ಕೆಲ್ಸ ಮಾಡ್ಕೊಂಡಿದ್ದೇನೆ ಜೊತೆಗೆ ಇವರ ಅಮೂಲ್ಯ ಸಮಯ ಬೇರೆ ಹಾಳ್ಮಾಡಿದೀನಿ, ಹೊರಡ್ತೀನಿ ಎಂದವನೇ ಮೆಟ್ಟಿಲಿಳಿಯತೊಡಗಿದೆ.
‘ಏ ಧನಂಜಯ, ಬಾ ಇಲ್ಲಿ’ ಎಂದು ವಾಪಾಸ್ ಕರೆದರು.
‘ಆ ಟೇಬಲ್ ಮೇಲೆ ಎಲ್ಲಾ ಬಿಡಿಸಿಡು. ಅದ್ಯಾಕಾಗಲ್ಲ ನೋಡೇ ಬಿಡೋಣ’ ಅಂದವರೇ ಅವರು ಈ ಹಿಂದೆ ಉಪಯೋಗಿಸುತ್ತಿದ್ದ ಕಂಪ್ಯೂಟರ್ಗಳ ಸ್ಪೇರ್ಪಾರ್ಟ್ಗಳನ್ನು ತಂದು ಚುಚ್ಚಿ, ಕಿತ್ತು ಬದಲಿಸಿ ಹಾಗೂ ಹೀಗೂ ಮಾಡಿ ಸತ್ತಿದ್ದ ಕಂಪ್ಯೂಟರ್ ಕಣ್ಬಿಡುವಂತೆ ಮಾಡಿ ‘ಇನ್ನೊಂದ್ಸಲ ಇಂತಹ ಯಡವಟ್ಟನ್ನೆನಾದ್ರೂ ಮಾಡ್ಕೊಂಡ್ರೆ ಗ್ರಹಚಾರ ಬಿಡಿಸ್ತೀನಿ. ನಾಳೆ ಭಾನುವಾರ ಅಲ್ವಾ? ಚಾರ್ಮಾಡಿಗೆ ಹೋಗ್ಲಿಕ್ಕಿದೆ, ಹೊರಟು ಬೆಳಗ್ಗೆ ಏಳು ಗಂಟೆಗೆ ಇಲ್ಲಿಗೆ ಬಾ, ಲ್ಯಾಂಡ್ಸ್ಕೇಪ್ ಫೋಟೋಗ್ರಫಿ ಮಾಡ್ಕೊಂಡು ಬರೋಣ’ ಎಂದರು.
ಸಿಪಿಯು ಅನ್ನು ಒದ್ದ ಕಾರಣವಾಗಿ ಎರಡು ವಾರದ ನಂತರ ಕಂಪ್ಯೂಟರ್ನ ಮದರ್ಬೋರ್ಡನ್ನೇ ಬದಲಾಯಿಸುವ ಮೇಜರ್ ಸರ್ಜರಿಯನ್ನೇ ಮಾಡಿಸಬೇಕಾಗಿ ಬಂತು. ಮತ್ತೆಲ್ಲಿ ಮಂಗಳಾರತಿ ಮಾಡ್ತಾರೋ ಎಂದು ಅವರಿಗೆ ಹೇಳಲೇ ಇಲ್ಲ.
- ಮುಂದುವರೆಯುವುದು