ಪ್ರವಾಸ ಹೋಗಿದ್ದ ನಾವು ಕುಲುವಿನಲ್ಲಿ ತಂಗಿದ್ದಾಗ ನನ್ನ ಕುಟುಂಬವಿನ್ನೂ ಆ ದಿನದ ಪ್ರಯಾಣಕ್ಕೆ ಸಜ್ಜಾಗುತಿತ್ತು. ಮೊದಲು ಸಿದ್ಧನಾಗಿ ಕೊಠಡಿಯಿಂದ ಹೊರಬಂದ ನಾನು ನಮ್ಮ ಕಾರ್ ಡ್ರೈವರ್ ಗೆ ತಿಂಡಿ ತಿನ್ನಲು ಹೇಳಿ, ವಿಸಿಟರ್ಸ್ ಲಾಬಿಯಲ್ಲಿ ಗೋಡೆಗೆ ಹಾಕಿದ್ದ ಭೂಪಠವನ್ನು ನಿರುಕಿಸುತ್ತಾ ನಿಂತಿದ್ದೆ. ಸುಮ್ಮನೇ ಕಣ್ಣಾಡಿಸುತಿದ್ದ ನನಗೆ ಯಾವುದೇ ಉದ್ದೇಶವಿರಲಿಲ್ಲ.
ಓದಲು, ಉಚ್ಚರಿಸಲು ಕ್ಲಿಷ್ಠವಾಗಿದ್ದ ಆ ಊರಿನ ಹೆಸರುಗಳನ್ನು ಮನದಲ್ಲಿ ಮೂಡಿಸಿಕೊಳ್ಳಲು ತಿಣುಕಾಡುತಿದ್ದೆ. ಇದ್ದಕ್ಕಿದ್ದಂತೆ ನನಗರಿವಿಲ್ಲದಂತೆ ನನ್ನ ದೃಷ್ಠಿಯನ್ನು ಛಕ್ಕನೆ ಹಿಂದೋಡಿಸಿದ್ದೆ, ಮಲಾನಾ!! ಛೇ ಛೇ ನಾನು ಏನೋ ಮಿಸ್ ಮಾಡಿಕೊಳ್ತಿದ್ದೇನೆ. ಇದು ಮಲಾನಾನೋ, ಮನಾಲಿಯೋ ಎಂದು ಗೊಂದಲವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸತೊಡಗಿದೆ. ಅಷ್ಟೊತ್ತಿಗಾಗಲೇ ನನ್ನ ಅಂಗಾಲಿನಡಿಯಿಂದ ಅವ್ಯಕ್ತವಾದ ವಿದ್ಯುತ್ ನೆತ್ತಿಯೆಡೆಗೆ ಪ್ರವಹಿಸಲು ಶುರುವಾಗಿತ್ತು.
ಎಷ್ಟು ಉದ್ವೇಗಗೊಂಡಿದ್ದೆನೆಂದರೆ ರೆಸೆಪ್ಷನಿಸ್ಟ್ ಬಳಿ ಹೋಗುವುದರಲ್ಲಿ ಅಡ್ಡ ಬಂದ ಯಾರಿಗೋ ಢಿಕ್ಕಿಯನ್ನೂ ಹೊಡೆದಿದ್ದೆ. ರೆಸೆಪ್ಷನ್ನಲ್ಲಿದ್ದ ಸೇಬಿನಂಥಾ ಹುಡುಗಿಯನ್ನು ಮಲಾನಾ ವಿಚಾರವಾಗಿ ಕೇಳಿ ಕುಣಿದಾಡುವಂತಾಗಿತ್ತು. ನನ್ನ ಉದ್ವೇಗವನ್ನು ನೋಡಿ ಆ ಸೇಬೂ ಕೂಡಾ ನನ್ನೆಡೆಗೆ ಪ್ರಶ್ಣಾರ್ತಕವಾಗಿ ನೋಡತೊಡಗಿತ್ತು. ಅದರೆ ಅವಳಿಗೆ ಮಲಾನಾ ವಿಚಾರವಾಗಿ ಹೆಚ್ಚೇನೂ ತಿಳಿದಂತಿರಲಿಲ್ಲ. ಅಲ್ಲದೇ ಮಲಾನಾ ಕುರಿತು ಮಾತನಾಡಲೂ ಹಿಂಜರಿದಳು.
ಹೋಟೆಲಿನ ವೇಯ್ಟರುಗಳನ್ನು ಮಲಾನಾ ಕುರಿತು ವಿಚಾರಿಸಿದೆ, ಅವರೂ ಸಹಾ ನನ್ನನ್ನು ಸ್ವಲ್ಪ ಸಂಶಯದಿಂದಲೇ ನೋಡಿದರು.
ಹೋಟೆಲಿನಿಂದ ಹೊರಬಂದು ಇತರೇ ವಾಹನಗಳ ಚಾಲಕರನ್ನು ವಿಚಾರಿಸಿದೆ. ಅರೆಬರೆ ಮಾಹಿತಿ ದೊರೆಯಿತು, ಆದರೆ ಗುಮಾನಿಯ ನೋಟ ಪೂರ್ಣವಾಗಿಯೇ ಸಿಕ್ಕಿತು.

ಎಂದೋ “ಸುಧಾ” ವಾರಪತ್ರಿಕೆಯಲ್ಲಿ ಈ ಪುರಾತನ ಗ್ರಾಮದ ಕುರಿತಾದ ಲೇಖನ ಓದಿದ್ದೆ. ಇವತ್ತು ನೋಡಿದರೆ ನನಗೇ ಗೊತ್ತಿಲ್ಲದಂತೆ ಆ ಭೂಲೋಕದ ಸ್ವರ್ಗದ(ಅಲೆಕ್ಸಾಂಡರನ ಪಕ್ಕದಲ್ಲೇ ನಿಂತಂತೆ ಹೆಮ್ಮೆಯ ಮೇಲೆ ಹೆಮ್ಮೆ) ಬಳಿಯಲ್ಲೇ ನಿಂತಿದ್ದೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಈ ದಿನದ ಪ್ರೋಗ್ರಾಮ್ ಮುಂದಕ್ಕೆ ಹಾಕೋಣ, ಇಲ್ಲದಿದ್ದರೆ ಕ್ಯಾನ್ಸಲ್ಲೇ ಮಾಡೋಣ ಎಂದುಕೊಂಡು ನಮ್ಮ ಕಾರಿನ ಚಾಲಕನ ಕಡೆಗೆ ಓಡಿದೆ. ಆಲೂ-ಪರಾಂಥಾ ತಿನ್ನುತಿದ್ದವನು ನನ್ನ ಉಧ್ವೇಗ ನೋಡಿ `ಕ್ಯಾ ಸಾಬ್? ಕ್ಯಾ ಹುವಾ??’ ಎಂದು ತಟ್ಟೆ ಬಿಟ್ಟು ಓಡಿ ಬಂದ.
ಉಧ್ವೇಗವಿದ್ದರೂ ಮಸ್ಕಾದಿಂದಲೇ ಮಾತನ್ನು ಶುರೂ ಮಾಡಿದೆ. `ಅರ್ಜುನನ ಸಾರಥಿಯಾದ ಶ್ರೀ ಕೃಷ್ಣನೇ…….’ ಎಂಬಂತೆ ರಮಿಸಿ `ಹೇಗಾದರೂ ಮಾಡಿ ಮಲಾನಾಕ್ಕೆ ಕರೆದುಕೊಂಡು ಹೋಗು ಮಾರಾಯಾ, ಇನ್ನೇನೂ ಬೇಡ’ ಎಂದು ಪುಸಲಾಯಿಸತಯೊಡಗಿದೆ. ಮಲಾನಾದ ಹೆಸರು ಕೇಳಿದೊಡನೆಯೇ ಪಾರ್ಥಸಾರಥಿಯ ಮುಖ ಸಣ್ಣದಾಯ್ತು. ನನ್ನೆಡೆಗಿನ ಅನುಮಾನ ಹೆಚ್ಚಾಯ್ತು. (ಈಗಾಗಲೇ ನಾಲ್ಕಾರು ದಿನಗಳಿಂದ ದಾರಿಯುದ್ದಕ್ಕೂ ಅಲ್ಲಿ ನಿಲ್ಲಿಸು, ಇಲ್ಲಿ ನಿಲ್ಲಿಸು, ಹಿಂದಕ್ಕೆ ಚಲಿಸು ಎಂದು ಜಬರ್ದಸ್ತ್ ಮಾಡುತ್ತಾ, ಸಾಮಾನ್ಯವಾಗಿ ಪ್ರವಾಸಿಗರು ನೋಡಬೇಕಿಲ್ಲದ ಜಾಗದ ಬಗೆಗೆಲ್ಲಾ ಅನಪೇಕ್ಷಿತ ಆಸಕ್ತಿಯನ್ನು ತೋರಿಸುತಿದ್ದೆ ನಾನು).

`ಅಲ್ಲಿಗೆ ಹೋಗಲು ಕಷ್ಠ ಸಾಬ್, ರಸ್ತೆ ಇಲ್ಲ, ಅದೊಂದು ನಿಷಿದ್ಧ ಪ್ರದೇಶ, ಅಲ್ಲಿಯ ಜನಾ ಸರಿಯಿಲ್ಲ ಸಾಬ್, ಸೇಫ್ ಅಲ್ಲ, ನಾನು ಇಪ್ಪತ್ತು ವರ್ಷದಿಂದ ಈ ಮಾರ್ಗದಲ್ಲಿಯೇ ವಾಹನ ಓಡಿಸುತಿದ್ದೇನೆ, ಒಮ್ಮೆಯೂ ಆ ಕಡೆಗೆ ಹೋಗಿಲ್ಲ, ರಿಮೋಟ್ ಜಾಗ, ಕಡೆಗೆ ಯಾರೂ ಅಲ್ಲಿಗೆ ಹೋಗೋದೇ ಇಲ್ಲಾ ಸಾಬ್’ ಎಂದೆಲ್ಲ ಹೇಳುತ್ತಾ ನನ್ನ ಪ್ಲಾನ್ಗೆ ಬ್ರೇಕ್ ಹಾಕಲು ಐಸ್ ನೀರನ್ನು ಬಕೆಟ್ಗಟ್ಟಲೆ ನನ್ನ ಮೇಲೆ ಸುರಿಯುತ್ತಲೇ ಹೋದ. ಅವನು ಹಾಗೆ ಹೇಳುತ್ತಾ ಹೋದಂತೆ ಹೋಗಲೇ ಬೇಕೆಂಬ ನನ್ನ ಅಭೀಪ್ಸೆ ಹೆಚ್ಚಾಗುತ್ತಲೇ ಹೋಯ್ತು. `ನಾನು ಹೇಳಿದಲ್ಲಿಗೆ ನೀನು ಬರಬೇಕು, ಅದೇನೇ ಸಮಸ್ಯೆಯಾದರೂ ನಾನೇ ಜವಾಬ್ದಾರಿ, ಆಯ್ತಾ? ಬೇಗ ತಿಂಡಿ ಮುಗಿಸು’ ಎಂದವನೇ ಕೊಠಡಿಗೆ ಹೋಗಿ, ಹೆಂಡತಿ, ಮಗ-ಮಗಳನ್ನು ಬೇಗಬೇಗ ಹೊರಡಲು ಇನ್ನಿಲ್ಲದಂತೆ ಅವಸರಿಸತೊಡಗಿದೆ.
ಎಲ್ಲರನ್ನೂ ಕರೆದುಕೊಂಡು ಗಡಿಬಿಡಿಯಲ್ಲಿ ತಿಂಡಿ ತಿನ್ನುತ್ತಲೇ `ಇಂದೇನೋ ಸಾಹಸ ಮಾಡೋಣ’ ಎನ್ನುವಂತೆ ಮಲಾನಾ ಕಥೆ ಹೇಳಿ ಅವರನ್ನೆಲ್ಲಾ ಹುರುಪುಗೊಳಿಸಿದೆ. ಕಾರಿನಲ್ಲಿ ಕೂರುತಿದ್ದಂತೆ ನೋಡುತ್ತೇನೆ, ಡ್ರೈವರ್ರಣ್ಣ ನನ್ನ ಹೆಂಡತೆ ಬಳಿ ಏನೋ ದೂರು ನೀಡುತಿದ್ದಾನೆ! ನನ್ನ ಹೆಂಡತಿ ನನ್ನ ಬಳಿ ಬಂದು `ನಿಮ್ಮ ಓವರ್ ಅ್ಯಕ್ಟಿಂಗ್ ಎಲ್ಲ ಬೇಡ, ಆ ಜಾಗ ತುಂಬಾ ಡೇಂಜರ್ ಅಂತೆ, ನಾವ್ಯಾರೂ ಬರಲ್ಲ, ಅಲ್ಲಿಗೆ ಸರಿಯಾದ ರಸ್ತೇನೇ ಇಲ್ವಂತೆ, ಆ ಜನಾ ಸರಿಯಿಲ್ಲವಂತೆ’ ಎಂದೆಲ್ಲ ಬರೀ ನೆಗೆಟಿವ್ ಪಾಯಿಂಟ್ಗಳನ್ನೇ ಹೇಳಿ ನನ್ನ ಐಡಿಯಾಗಳನ್ನೆಲ್ಲಾ ಹುಚ್ಚಾಟವೆಂಬಂತೆ ಭಿನ್ನಮತೀಯಳಾಗಹತ್ತಿದಳು.

`ಎಲಾ ಬಡ್ಡೀ ಮಗನೇ!!’ ಎಂದು ಡ್ರೈವರ್ನನ ಕಡೆಗೆ ತಿರುಗಿ ನೋಡುತ್ತೇನೆ, ಅವನು ನಂಗೊತ್ತಿಲ್ಲ, ನಂಗಾಗಲ್ಲ ಎನ್ನುವಂತೆ ಲಗೇಜುಗಳನ್ನು ಕಾರಿನ ಡಿಕ್ಕಿಯಲ್ಲಿ ಜೋಡಿಸುವುದರಲ್ಲಿ ಮಗ್ನನಾಗಿದ್ದ. ಮೊದಲೇ ವಾಂತಿ ಗಿರಾಕಿಯಾಗಿದ್ದ ನನ್ನ ಮಗನೂ ಗುಮ್ಮನಗುಸುಕನಂಥಾಡತೊಡಗಿದ. ನನಗೆ ಸಪೋರ್ಟ್ ಮಾಡಿದ್ದೆಂದರೆ ನನ್ನ ಮಗಳು ಮಾತ್ರ. `ನಾನು ಒಬ್ಬನೇ ಹೋಗೋದಿಲ್ಲ, ನೀವೆಲ್ಲರೂ ಬರಲೇಬೇಕು. ಹೆಗ್ಗಣಗಳಾ, ಏನ್ ನೋಡ್ಬೇಕು, ಏನನ್ನು ನೋಡೋ ಅಗತ್ಯ ಇಲ್ಲ ಎಂದೇ ಗೊತ್ತಿಲ್ಲ, ಮಾತಾಡ್ದೇ ಕಾರ್ ಹತ್ತಿ ಮೊದಲು.’ ಎಂದು ಗದರಿಸಿದಾಗ ಬಲಿಗೆ ಬಂದ ಹರಕೆಯ ಕುರಿಗಳು ಇನ್ನು ನಮ್ಮ ಕಥೆ ಮುಗಿದಂತೆಯೇ ಎಂದು ಕಾರು ಹತ್ತಿ ಕುಳಿತರು. ಡ್ರೈವರ್ ಕಡೆ ತಿರುಗಿ `ಮಲಾನಾ’ ಎಂದೆ.
ಅವನಿಗೂ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ, ರ್ರೊಯ್ಯನ ಹೊರಟ ನೋಡಿ. ದಾರಿಯಲ್ಲಿ ಅಲ್ಲಲ್ಲಿ ನಿಲ್ಲಿಸಿ ಮಾರ್ಗವನ್ನು ವಿಚಾರಿಸಿಕೊಂಡ. ಝರಿ ಎಂಬ ಗ್ರಾಮದಿಂದ ಎಡಕ್ಕೆ ತಿರುಗಿಸಿದ ನೋಡಿ, ನನ್ನ ಲೈಫ್ಟೈಮ್ ಮಲಾನಾ ಭೇಟಿ ಆರಂಭವಾಯ್ತು. ವರ್ಣಿಸಲಸದಳವಾದ ಜಲರಾಶಿ, ನಿರಂತರವಾಗಿ ಹಬ್ಬಿದ್ದ ವನ್ಯಸಂಪತ್ತು, ಚೂಪುಚೂಪಾಗಿ ಆಕಾಶವನ್ನೇ ತಿವಿಯುತ್ತಿದ್ದ ಪರ್ವತದ ನೆತ್ತಿಗಳು, ಶಾಲಾಮಕ್ಕಳ ಕಲ್ಲೇಟಿನಿಂದ ಜರ್ಜರಿತವಾಗಿ ಸಾಯಲು ಹೆಣಗುವ ಹಾವಿನಂತಹ ಕೊನೆಮೊದಲಿಲ್ಲದ ರಸ್ತೆಯೇ ಅಲ್ಲದ ರಸ್ತೆ, ಬೆಟ್ಟ ಜರುಗಿ, ಮುಂದೆ ಹೋಗುವುದಿರಲಿ, ಹಿಂದಕ್ಕೂ ಮಿಸುಗಲುಬಾರದಂತೆ ಬಂದ್ ಆಗಿದ್ದ ಕೊರಕಲು ಮಾರ್ಗ, ನಾನು ಬರೆಯುವುದೇನಿಲ್ಲಿ, ಹೋಗಿ ನೋಡಿ ನಿಮಗೇ ಗೊತ್ತಾಗುತ್ತೆ.

ಕುಲು ಎಂಬ ಪ್ರವಾಸಿ ಸ್ಥಳದಿಂದ ಮಲಾನಾ ಎಂಬ ಅಜ್ಞಾತ ಗ್ರಾಮಕ್ಕೆ ಹೋಗಲು ನಾಗರೀಕ ಪ್ರಪಂಚಕ್ಕೆ ತಿಳಿದಿರುವಂತೆ ಪಾರ್ವತಿ ಕಣಿವೆ ಮಾರ್ಗವಾಗಿ ರಾಷೋಲ್ ಪಾಸ್, ನಾಗೆರ್ ಕಣಿವೆಯ ಮಾರ್ಗವಾಗಿ ಚಂದರ್ಕಾನಿ ಪಾಸ್ ಮತ್ತು ಝರಿ ಮಾರ್ಗವಾಗಿ ಮಲಾನಾ-ಮಣಿಕರನ್ ಸಂಗಮದ ಮಾರ್ಗ ಮಾತ್ರ. ಝರಿ ಎಂಬ ಗ್ರಾಮದಿಂದ ಮಲಾನಾ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಚಲಿಸಿದಲ್ಲಿ ಎದುರಾಗುವ ಪರ್ವತಗಳನ್ನು ತಲೆ ಎತ್ತಿಯೇ ನೋಡಬೇಕು. ಕೊನೆಮೊದಲಿಲ್ಲದ ಪರ್ವತಗಳು ಸದಾ ಜರುಗುತ್ತಲೇ ಇರುತ್ತವೆ ಎಂದರೆ ಈ ಹಿಮಾಲಯದ ಬೆಟ್ಟಗಳು ಎಷ್ಟು ಚಲನಶೀಲವಾಗಿವೆ ಎಂದು ಕಲ್ಪಿಸಿಕೊಳ್ಳಿ. ಪವರ್ ಪ್ರಾಜೆಕ್ಟ್ ಸ್ಥಳವನ್ನು ದಾಟಿದ ನಂತರದ ಪ್ರಯಾಣ ಯಾರಿಗೇ ಆದರೂ ಒಂದು ಜೀವಮಾನದ ಅನುಭವ. ಹೇಳಲಾಗಲೀ ಬರೆಯಲಾಗಲೀ ಮೀರಿದ ಅನುಭವವದು. ಅಗಾಧವಾದ ಹಸಿರು, ನೋಡನೋಡುತ್ತಿದ್ದತೆ ಜರುಗುವ ಕಲ್ಲುಗಳು, ನಮ್ಮನ್ನು ತೋಯಿಸುವ ನೀರಿನ ಝರಿಗಳು, ಅಬ್ಭಾ ಏನೇನೆಲ್ಲಾ…..!!

ಕಾರು ಸಂಚರಿಸಲು ಸಾಧ್ಯವಿರುವಲ್ಲಿಯವರೆಗೆ ನಮ್ಮನ್ನು ಕರೆದೋಯ್ದ ನಮ್ಮ ಕಾರು ಚಾಲಕ, ದೂರದ ಬೆಟ್ಟದಂಚಿನ ಮೇಲಿನ ಗುಂಪು ಗುಂಪಾಗಿದ್ದ ಮನೆಗಳ ರಾಶಿಯನ್ನು ತೋರಿಸಿ `ಇಲ್ಲಿಂದ ಮುಂದೆ ನಾನು ಬರುವುದಿಲ್ಲ ಸಾಬ್’ ಎಂದುಬಿಟ್ಟ!!
ನನ್ನಲ್ಲಿ ಅದೆಂತದ್ದೋ ವಿಚಿತ್ರ ಕೆಟ್ಟ ಕುತೂಹಲವನ್ನು ಪ್ರಚೋದಿಸಿದ್ದ ಈ ಮಲಾನಾ ಇಲ್ಲಿಂದ ಮುಂದೆ ಅವ್ಯಕ್ತ ಭೀತಿ ಹುಟ್ಟಿಸಲಾರಂಬಿಸಿತು. ಸಾವಿರಾರು ಮೈಲುಗಳ ದೂರದಿಂದ ಬಂದಿದ್ದ ನಾವು, ಈ ದುರ್ಗಮವಾದ ಅಪರಿಚಿತ ಹಾಗೂ ಅಪಾಯದ ಎಲ್ಲಾ ಸಾಧ್ಯತೆ ಇರುವಲ್ಲಿ ನಿರಾಶ್ರಿತರಂತೆ ದಿಕ್ಕುತಪ್ಪಿ ನಿಂತೆವು.
ಹೋಟೆಲ್ ನಿಂದ ಹೊರಡುವಾಗ ನನ್ನಲ್ಲಿದ್ದ ಉತ್ಸಾಹ ಈಗ ಆತಂಕವಾಗಿ ಬದಲಾಗುತಿತ್ತು. ಡ್ರೈವರ್ ನಮ್ಮೆಡೆಗೆ `ನೀವಾಯಿತು, ನಿಮ್ಮ ಹುಚ್ಚಾಯಿತು, ಏನಾದ್ರೂ ಮಾಡಿಕೊಂಡು ಸಾಯಿರಿ ಈಗ’ ಎನ್ನುವಂತೆ ಕಾರಿಗೆ ಮೆತ್ತಿಕೊಂಡಿದ್ದ ಧೂಳು ಮತ್ತು ಮಣ್ಣನ್ನು ಒರೆಸುತಿದ್ದ. ಇಲ್ಲೀವರೆಗೆ ಬಂದದ್ದೇ ಆಗಿದೆ ಆದದ್ದಾಗಲಿ ಹೋಗೇ ಬಿಡೋದು ಎಂದು ನಿಶ್ಚಯಿಸಿಕೊಂಡೆ. ಇವರೆಲ್ಲಿ ಎಂದು ನನ್ನ ಕುಟುಂಬವನ್ನು ಹುಡುಕಿದರೆ, ನನ್ನ ಮಗ ಹಿಂದಿನ ಸೀಟಿನಲ್ಲಿ ಗಡದ್ದಾದ ನಿದ್ದೆಯಲ್ಲಿದ್ದಾನೆ. ಹೆಂಡತಿ ಮತ್ತು ಮಗಳು ಅಷ್ಟರಲ್ಲಾಗಲೇ ಮಲಾನಾದ ಕಡೆಗೆ ದಾಪುಗಾಲು ಹಾಕುತಿದ್ದಾರೆ! ಏನೋಪ್ಪ, ಹೇಗೋಪ್ಪ ಎಂದುಕೊಳ್ಳುತ್ತಾ ಗ್ರಾಮ ಪ್ರವೇಶಿಸಿದ ನಮಗೆ ಮೊದಲು ಎದುರಾದದ್ದು ಒಂದು ರೀತಿಯ ಮಂಪರಿನಲ್ಲಿದ್ದ ಸ್ಥಳೀಯ. ನಮಗೆ ಗೊತ್ತಿಲ್ಲದ ಭಾಷೆಯಲ್ಲಿ ಏನೋ ಪ್ರಶ್ನಿಸಿದ. ನನ್ನ ಹೆಂಡತಿ ಅವನೊಡನೆ ಮಾತನಾಡಬೇಡಿ, ಕುಡಿದು ಹೈಲಾಗಿ ಟೈಟ್ಟಾಗಿರುವಂತೆ ಕಾಣಿಸುತ್ತಾನೆ’ ಎಂದಳು. ಜೊತೆಯಲ್ಲಿದ್ದ ನನ್ನ ಮಗಳು ‘ಅಪ್ಪಾ, ಕುಡಿದರೆ ಲೂಸಾಗುವುದಲ್ವಾ? ಟೈಟಾಗುವುದು ಹೇಗೆ?’ ಎಂದಳು.

ಪುಟ್ಟ ಗ್ರೀಸ್ ಎಂದೇ ಖ್ಯಾತವಾಗಿರುವ ಮಲಾನಾ ನಮ್ಮನ್ನು ಚಕಿತಗೊಳಿಸುವ, ರೋಮಾಂಚನಗೊಳ್ಳುವಂತೆ ಮಾಡುವ ಇತಿಹಾಸದ ದಿನಗಳನ್ನು ನೆನಪಿಸಿ ಮೈನಡುಗಿಸುವ ಅನುಭವ ನೀಡುವ, ಬೆಟ್ಟಗಳ ಮೇಲಿನ ಕಿರು ಕಾಲ್ದಾರಿಗಳು, ನೋಡನೋಡುತಿದ್ದಂತೆ ಜರುಗಲಾರಂಬಿಸಿ ಗಾಬರಿ ಹುಟ್ಟಿಸುವ ತಲೆಯ ಮೇಲಿನ ಪರ್ವತಗಳು, ವಿಶೇಷವಾದ ತೆಳು ಕಲ್ಲು ಚಪ್ಪಡಿಗಳನ್ನೇ ಹೆಂಚುಗಳಂತೆ ಮಾಡು ಹೊಂದಿರುವ ಕಲ್ಲು-ಮರಗಳನ್ನು ಬಳಸಿ ಪೇರಿಸಿರುವ ಮನೆಗಳು. ಸೌದೆ, ಜಾನುವಾರುಗಳಿಗಾಗಿ ಭೂ ಮಟ್ಟದ ಗೃಹ, ತಾವೇ ವಾಸಿಸಲು ನಿರ್ಮಿಸಿರುವ ಮೊದಲನೇ ಮಹಡಿ ಹಾಗೂ ತೆರೆದ ಹಜಾರದಂತಿರುವ ಎರಡನೆಯ ಮಹಡಿಯ ಸಾಮಾನ್ಯ ಮನೆಗಳು ಮಾತ್ರ ಇಲ್ಲಿಯ ಟಿಪಿಕಲ್ ನಿರ್ಮಾಣಗಳಾಗಿವೆ. ಕಲ್ಲು ಹಾಗೂ ಮರದ ದಿಮ್ಮಿಗಳನ್ನು ಬಳಸಿ ನಿರ್ಮಿಸಿರುವ ಮನೆಗಳಿಗೆ ವಿಶೇಷವಾದ ಕಲ್ಲು ಹಾಸಿನ ಹೆಂಚಿನಂತಹ ಮುಚ್ಚಿಗೆ.
ಮಲಾನಾ ಎಂದರೆ ಪಾಲಿನೇಷಿಯನ್ ಅಥವಾ ಹವಾಯಿಯ ಭಾಷೆಯಲ್ಲಿ ಶಾಂತ ಅಥವಾ ವಿಶ್ರಾಂತವೆಂದೇ ಅರ್ಥ. ಬೇಸಿಗೆಯಲ್ಲಿ ಜುಳು-ಜುಳು ನಿನಾದದೊಂದಿಗೆ ಹರಿಯುವ, ಮಳೆಗಾಲದಲ್ಲಿ ಪ್ರಕ್ಷುಬ್ಧವಾಗುವ ಮಲಾನಾ ನದಿಯ ಹೆಗಲಿನಲಲ್ಲಿರುವ ಗ್ರಾಮ ಮಲಾನಾ. ಯುರೊಪಿಯನ್ ಮುಖ ಚಹರೆಯ ಇವರು ಗ್ರೀಕ್ ಮೂಲವೆಂದು ಹೇಳಿಕೊಂಡರೂ ಟಿಬೆಟೋ-ಬರ್ಮೀ ಒಳ ಪಂಗಡವಾಗಿರುವ ಸಾಧ್ಯತೆಯೂ ಇದೆ. ಜಗತ್ತಿನೆಲ್ಲರಿಗಿಂತಲೂ ಜನಾಂಗೀಯವಾಗಿ ತಾವು ಬಹಳ ಪರಿಶುದ್ಧರು ಎಂಬುದು ಮಲಾನಿಗರ ನಂಬುಗೆ. ಅನಗತ್ಯವಾದ ಮಡಿವಂತಿಕೆ!! ಆಚರಿಸುವ ಇವರು ನಮ್ಮ ಮೈಕೈ ತಮಗೆ ತಾಗೀತೆಂದು ಯಾವುದೇ ವಸ್ತುವನ್ನೂ ನೇರವಾಗಿ ನಮ್ಮ ಕೈಗೆ ನೀಡುವುದಿಲ್ಲ.

ನಾವು ನೀಡಲು ಹೋದ ಮಿಠಾಯಿಯನ್ನೂ ಅಲ್ಲಿನ ಮಕ್ಕಳು ಸ್ವೀಕರಿಸಲಿಲ್ಲ. ಪುರಾತನ ಮನೆಗಳ ನಡುವಿನಲ್ಲಿದ್ದ ಸಣ್ಣ ಮೈದಾನದಲ್ಲಿ ಕ್ರಿಕೆಟ್ ಅಡುತಿದ್ದ ಮಕ್ಕಳನ್ನು ಉದ್ದೇಶಿಸಿ `ನಾನೊಂದೆರಡು ಬಾಲ್ ಆಡಲೇ’ ಎಂದು ನನಗೆ ಗೊತ್ತಿರುವ ಹರುಕು ಮುರುಕು ಹಿಂದಿಯಲ್ಲಿ ಕೇಳಿದಾಗ, ಕತ್ತಿಯಲ್ಲಿ ಕೆತ್ತಿ ಹೊಂಕಪಂಕವಾಗಿದ್ದ ಮರದ ಹಲಗೆಯ ಬ್ಯಾಟನ್ನು ಅಳುಕಿನಿಂದ ಹಾಗೂ ಅರೆಮನಸ್ಸಿನಿಂದ ಬ್ಯಾಟನ್ನು ನನಗೆ ಕೊಡುವಂತೆ ಹುಡುಗನೊಬ್ಬ ದೂರದಿಂದಲೇ ನೆಲಕ್ಕೆ ಎಸೆದಿದ್ದ; ಕೈಗೆ ನೀಡಿದರೆ ನನ್ನನ್ನು ಮುಟ್ಟಿದಂತಾಗುತ್ತದೆ ಎಂದು! ಮಲಾನದಲ್ಲಿ ಮಲಾನಿಗರೊಡನೆ ನಾಲ್ಕಾರು ಚೆಂಡು ಕ್ರಿಕೆಟ್ ಆಡಿದ ಖುಷಿ ಈಗಲೂ ನನ್ನೊಳಗೆ ಪ್ರವಹಿಸುತ್ತದೆ.
ಕಾಲ್ದಾರಿಯಲ್ಲಿಯೇ ಹೊರಗಿನವರು ನಡೆದಾಡಬೇಕು, ಅಲ್ಲಿಂದ ಹೊರಗಡೆಗೆ ಒಂದು ಹೆಜ್ಜೆಯನ್ನೂ ಇಡುವಂತಿಲ್ಲ. ಇಟ್ಟರೆ ಮಲಾನಾದ ಸಂಪ್ರದಾಯವನ್ನು ಉಲ್ಲಂಘಿಸಿದಂತೆ. ಹೊರಗಿನಿಂದ ಹೋದವರಿಗೆ ಹಲವಾರು ನಿಷೇಧಗಳಿರುವುದರಿಂದ ಮಲಾನಾ ಗ್ರಾಮವನ್ನು ನಿಷಿದ್ಧ ಪ್ರದೇಶವೆಂದು ನಿರ್ವಿವಾದವಾಗಿ ಕರೆಯಬಹುದು.

ಇನ್ನೇನು ಗ್ರಾಮದ ಪ್ರವೇಶ ಮಾಡಬೇಕೆನ್ನುವಷ್ಟರಲ್ಲಿ ನಮಗೆದುರಾದದ್ದು ಬೆಟ್ಟದ ಮೇಲಿನಿಂದ ಹರಿಯುವ ತೊರೆಯ ಶಕ್ತಿಯನ್ನು ಬಳಸಿ ಹಿಟ್ಟು ಬೀಸುವ ಮರದ ಯಂತ್ರ! ಈಗ ಅದು ಉಪಯೋಗದಲ್ಲಿದ್ದಂತೆ ಕಾಣಲಿಲ್ಲ. ತನ್ನದೇ ಆದ ಆಡಳಿತ ವ್ಯವಸ್ಥೆ, ನ್ಯಾಯಾಂಗ, ವಾಸ್ತುಶಿಲ್ಪ, ಸಾಂಪ್ರದಾಯಿಕ ಆಚರಣೆಗಳು, ಹೊರಜಗತ್ತಿನ ನಾಗರೀಕತೆಯಿಂದ ಕಾಯ್ದಿರಿಸಿಕೊಂಡಿರುವ ಅಂತರ, ವನ್ಯ ಸಂಪತ್ತು ಇವಕ್ಕೆಲ್ಲ ಕಾರಣ ಆ ಗ್ರಾಮದ ಬೌಗೋಳಿಕ ಅಸ್ಥಿತ್ವ. ನೂರಾರು ಪರ್ವತಗಳ ನಡುವೆ ದಿಗ್ಭ್ರಮೆಗೊಳಿಸುವಂತೆ ನಮ್ಮನ್ನು ಎದುರುಗೊಳ್ಳುವ ಈ ಗ್ರಾಮವನು ಎತ್ತ ಕಡೆಯಿಂದ ನೋಡಿದರೂ ಇದೇ ಜಗತ್ತಿನ ಕಟ್ಟಕಡೆಯ ನಿಲ್ದಾಣವೇನೋ ಎಂಬ ಎದೆ ಧಸಕ್ಕೆನಿಸುವ ಆಘಾತದ ಹಾಗೂ ವಿಲಕ್ಷಣ ಭಾವ ನಮ್ಮನ್ನು ಆವರಿಸುವಂತೆ ಮಾಡುತ್ತದೆ.
ನಾವಲ್ಲಿ ಏದುಸಿರು ಬಿಡುತ್ತಾ ನಡೆಯುತ್ತಾ ಇರುವಾಗ ಇಬ್ಬರು ಹುಡುಗರು ಬೆಟ್ಟದ ಮೇಲಿನಿಂದ ಜೇನಿನ ಹುಟ್ಟೊಂದನ್ನು ಕೋಲು ಸಮೇತ ತರುತಿದ್ದರು. ಮಲಾನಾದ ಜೇನಿನ ರುಚಿ ಸವಿಯೋಣ ಎಂದು ಕೇಳಿದರೆ, ನಾವು ಅವರ ಅನ್ನವನ್ನು ಕಸಿಯ ಬಂದವರೆಂಬಂತೆ ದೂರದಿಂದಲೆ ದುರುಗುಟ್ಟಿ ಮುಖ ತಿರುಗಿಸಿಕೊಂಡು ಹೋಗುವುದೇ? ನನ್ನ ಹೆಂಡತಿ ನನ್ನೆಡೆಗೆ ತಿರುಗಿ `ಸಾಕಾ ಮಂಗಳಾರತಿ?’ ಎಂದಳು. ಆರು ವರ್ಷದ ನನ್ನ ಮಗಳು `ಸ್ನಾನಾನೇ ಮಾಡಲ್ವೇನೋ ಇವರು, ಅಪ್ಪಾ, ನೀವೇ ಅವರ್ಹತ್ರ ಮುಟ್ಟಿಸ್ಕೋಬೇಡಿ’ ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದಳು. ಬೆಟ್ಟದ ತಪ್ಪಲನ್ನು ಹಾಗೇ ನಿರುಕಿಸಿದರೆ ಅಲ್ಲಲ್ಲಿ ಬಿದಿರಿನ ಬೊಂಬು ಹಾಗೂ ಮರದ ಪೊಟರೆಯಂಥಾ ವಸ್ತುಗಳನ್ನು ಜೇನುಗಳನ್ನು ಸಾಕಲಿಕ್ಕಾಗಿಯೇ ಪೊದೆಗಳೊಳಗೆ ಇಟ್ಟಿರುವುದು ನಮ್ಮ ಕಣ್ಣಿಗೆ ಬಿತ್ತು. ಹಸಿ ಮರಗಳನ್ನು ಕಡಿಯದ ಇವರು, ಉರುವಲಿಗಾಗಿ ಒಣಗಿ ಬಿದ್ದ ಮರದ ಕೊಂಬೆರೆಂಬೆಗಳನ್ನು ಬಳಸುತ್ತಾರೆ. ಅನಿವಾರ್ಯವಾಗಿ ಜೀವಂತ ಮರವನ್ನು ಕಡಿಯಬೇಕಾದಾಗ ಅವರದ್ದೇ ಆದ ಆಚರಣೆಯಂತೆ ಜಮ್ಲು ದೇವತೆಗೆ ತಪ್ಪು ಕಾಣಿಕೆ ಸಲ್ಲಿಸಿ ಮರ ಕಡಿಯುತ್ತಾರೆ.

ಎರಡು ಬೇರೆ ಬೇರೆ ಎತ್ತರದ, ಒಂದನ್ನೊಂದು ತಬ್ಬಿದಂತೆ ನಿಂತಿರುವ ಬೆಟ್ಟಗಳ ಮೇಲೆ ಇತಿಹಾಸದ ಯಾವುದೋ ಹಂತದಲ್ಲಿ ಮೂಡಿರುವ ಸುಮಾರು 200 ಮನೆಗಳಿರುವ ಮಲಾನಾ ನಾಗರೀಕತೆಯ ನಾಗಾಲೋಟದಲ್ಲಿ ತಾನೂ ಅದೇ ವೇಗದಲ್ಲಿ ಭಾಗಿಯಾಗದೇ ಸ್ಲಾತ್ ಕರಡಿಯಂತೆ ಯಾಕೆ ನಿದಾನವಾಗಿ ತೆವಳುತ್ತಿದೆ ಎಂದು ವಿಸ್ಮಯವಾಗುತ್ತದೆ.
ಬಲಿ ನೀಡಿದ, ಬೇಟೆಯಾಡಿದ ಪ್ರಾಣಿಗಳ ಶಿರವನ್ನು ಗ್ರಾಮದ ಮುಖ್ಯ ದೇವಾಲಯದ ಹೊರಗೋಡೆಗೆ ಮೊಳೆ ಹೊಡೆದು ತೂಗು ಹಾಕಿರುವ ಇವರು ತಮ್ಮ ಭವಿಷ್ಯವನ್ನೂ ಹೀಗೆಯೇ ಹೊರಪ್ರಪಂಚದಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳಲೆಂದೇ ಹಾಗೂ ಕಾನೂನು ಬಾಹಿರವಾಗಿ ಜೀವನೋಪಾಯಕ್ಕಾಗಿ ಆಶ್ರಯಿಸಿರುವ ಹಷೀಷ್, ಮಾರಿಜುವಾನ ವ್ಯವಸಾಯ/ವ್ಯವಹಾರದಲ್ಲಿನ ಅಗತ್ಯ ನಿಗೂಢತೆಯನನ್ನು ಕಾಪಾಡಿಕೊಳ್ಳಲೆಂದೇ ನೇತು ಹಾಕಿದ್ದಾರೆನಿಸುತ್ತದೆ.
ಜೀವನೋಪಾಯಕ್ಕಾಗಿ ನಿಷಿದ್ಧ ಮಾದಕ ಪದಾರ್ಥದ ಕೃಷಿಯನ್ನು ಮಾಡುವುದು, ಪ್ರಪಂಚದ ಇತರರೊಡನೆ ಬೆರೆಯಲು ಇರುವ ಹಿಂಜರಿಕೆ ಹಾಗೂ ಹೊರ ಜಗತ್ತಿಗೆ ತೆರೆದುಕೊಳ್ಳದಿರುವುದು, ತಮ್ಮ ಸಂಪ್ರದಾಯ-ಆಚಾರ-ವಿಚಾರಗಳನ್ನು ಉಳಿಸಿಕೊಳ್ಳಲು ಇರುವ ಹಪಹಪಿಕೆ, ಪರಕೀಯರೆಡೆಗಿನ ಅಮಾಯಕ ಗುಮಾನಿ, ಆಸಕ್ತ ಪ್ರವಾಸಿಗರ ಮಲಾನಿಗರೆಡೆಗಿನ ಕುತೂಹಲ, ದುರ್ಗಮವಾದ ಬೆಟ್ಟಗುಡ್ಡಗಳಿಂದಾವೃತ್ತವಾದ ವಿಚಿತ್ರ ಸನ್ನಿವೇಶದ ಭೌಗೋಳಿಕತೆ, ತನ್ನದೇ ಆದ ಮಿತಿಗಳಿರುವ ಹವಾಮಾನದ ನಡುವಿನ ಸರಳ ಜೀವನ, ಪ್ರಾಪಂಚಿಕ ವಿದ್ಯಾಮಾನಗಳ ಸೀಮಿತ ಅರಿವು ಮತ್ತು ಅವುಗಳೆಡೆಗಿನ ಮಲಾನಿಗರ ಅತ್ಯಲ್ಪ ಆಸಕ್ತಿ ಅವರ ಶಕ್ತಿಯೂ ಹೌದು ಹಾಗೆಯೇ ದೌರ್ಬಲ್ಯವೂ ಹೌದೇ ಹೌದು.

ಇಲ್ಲಿ ದೊರೆಯುವ ಹಷೀಷ್ಗಾಗಿ ವಿದೇಶೀ ಪ್ರವಾಸಿಗರು ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಾರೆ. ಅವರನ್ನು ಇಲ್ಲಿಯ ನಿವಾಸಿಗಳು ಸಂತೋಷದಿಂದ ಬರಮಾಡಿಕೊಂಡು ಆತಿಥ್ಯ ನೀಡುತ್ತಾರೆ. ಇಲ್ಲಿನ ಭೂಗತ ಅಪರಾಧೀ ಜಗತ್ತು ಹಲವು ಪ್ರವಾಸಿಗರನ್ನು ಕಣ್ಮರೆಯಾಗಿಸಿದ ನಿದರ್ಶನಗಳೂ ಇವೆಯಂತೆ. ಭೇಟಿ ನೀಡಿ ಕಾಣೆಯಾದವರ ಪಟ್ಟಿ ಬಹಳ ಹಿಂದಿನಿಂದಲೂ ಬರೆಯಲ್ಪಟ್ಟಿದೆಯಂತೆ ಇಲ್ಲಿ. ಇಂಟರ್ಪೋಲ್ ದಾಖಲೆಯಂತೆ ಮಾದಕವಸ್ತುಗಳ ಮಾರಾಟದ ಜೇಡರಬಲೆಯ ಕೇಂದ್ರಸ್ಥಾನ ಈ ಮಲಾನಾ. ಮಾರಿಜುವಾನಾ, ಹಷೀಷ್ಗಳಿಗಾಗಿ ವಿದೇಶೀ ಪ್ರವಾಸಿಗರನ್ನು ಸೆಳೆಯುತ್ತಿರುವುದು ವಿಪರ್ಯಾಸ. ನಾವು ಬೇಟಿ ನೀಡಿದ್ದಾಗ ರಷಿಯಾ ಮೂಲದ ಮೂವರು ಯುವತಿಯರು ಈ ಗ್ರಾಮದ ಅತಿಥಿಗಳಾಗಿದ್ದರು.
ತಮ್ಮೊಳಗಿನ ಗ್ರಾಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇವರು ಹೊಂದಿರುವ ಪುಸ್ತಕವಿಲ್ಲದ, ಉಲ್ಲೇಖವಿಲ್ಲದ, ಲಿಖಿತ ಸಂವಿದಾನವಿಲ್ಲದ, ವಕೀಲಿಕೆಯಿಲ್ಲದ, ಪೋಲೀಸರಿಲ್ಲದ, ಕಾರಾಗೃಹವಿಲ್ಲದ, ಸಹಕಾರೀ ಸೌಹಾರ್ದತೆಯ ಸಮಾಜವೊಂದು ಆಧುನಿಕ ಜಗತ್ತಿನೊಡನೆ ಹೊಂದಿರುವ ಅಂತರವು ಎಂಥವರನ್ನೂ ಚಕಿತಗೊಳಿಸುತ್ತದೆ. ಪರಕೀಯರೂ ಸಹಾ ತಮ್ಮ ಸಂಪ್ರದಾಯವನ್ನು ಗೌರವಿಸಲಿ, ಸ್ಥಳೀಯರ ಖಾಸಗೀತನಕ್ಕೆ ಭಂಗ ತರದಿರಲಿ ಎಂಬುದು ಅವರ ಅಪೇಕ್ಷೆಯಾಗಿದೆ. ಬರ್ಮಾ ಮತ್ತು ನೇಪಾಳದ ಭಾಷೆಗಳ ಮಿಶ್ರಣದಂತಿರುವ ವಿಶಿಷ್ಠವಾದ ಭಾಷೆ ‘ಕಣಾಷಿ’ಯ ಬಳಕೆ ಈ ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ.

ಮಕ್ಕಳಿಗೆ ಅಗತ್ಯವಾಗಿರುವ ಶಿಕ್ಷಣಕ್ಕೆಂದು ಇಲ್ಲಿಯೇ ಸರ್ಕಾರಿ ಶಾಲೆಯೂ ಇದೆ. ನಮ್ಮ ಸಾಮಾನ್ಯ ನಿರೀಕ್ಷೆಯಂತೆ ಅದೇ ಶಿಕ್ಷಣದಿಂದ ಅವರ ಬದುಕಿನಲ್ಲಿ ಗಮನಾರ್ಹ ಸುಧಾರಣೆಯಾಗಿರುವಂತೆ ಕಾಣುವುದಿಲ್ಲ. ಮಾಸ್ತರರ ಮುಲಾಜಿಗೋ ಎಂಬಂತೆ ಕೊಳಕು ಬಟ್ಟೆ ಧರಿಸಿದ, ಸ್ನಾನ ಮಾಡಿ ಎಷ್ಟು ದಿನಗಳಾದವೋ ಎಂಬಂತಿರುವ ಮಕ್ಕಳು ಸಿಂಬಳ ತೀಡುತ್ತಾ, ಅಡ್ಡಾದಿಡ್ಡಿ ಚಲಿಸುತ್ತಾ ಶಾಲೆಗೆ ಬೇಕೋ ಬೇಡವೋ ಎಂಬಂತೆ ಹೋಗುವುದನ್ನು ನೋಡಿದರೆ ಜೀವನದಲ್ಲಿ ಇವರಿಗೆ ಯಾವುದು ಮುಖ್ಯವೋ ಎಂದು ಗುಮಾನಿ ಮೂಡುತ್ತದೆ.
ಅಗಾಧವಾದ ಅಸ್ಥಿರ ಬೆಟ್ಟಗಳು, ಭಯ ಹುಟ್ಟಿಸುವ, ದಿಕ್ಕು ತಪ್ಪಿಸುವ, ನಾವೇ ಕಳೆದು ಹೋಗಿದ್ದೇವೆಂಬ ಆತಂಕ ಹುಟ್ಟಿಸುವ, ಎದೆ ಢವಢವೆನಿಸುವಂತೆ, ತತ್ತರಿಸುವಂತೆ ಮಾಡುವ ಈ ಕುಗ್ರಾಮದ ಸುತ್ತಲಿನ ಬೆಟ್ಟಗಳು ಹಿಮದ ಟೊಪ್ಪಿಗೆ ಹೊದ್ದಿರುವುದು ಯಾವುದೋ ಒಂದು ರೀತಿಯ ವಿಷಣ್ಣಂತೆ ನಮ್ಮನ್ನು ಕಾಡುವಂತೆ ಮಾಡುತ್ತದೆ. ಪರ್ವತದ ಮೇಲೆ ಅಸಡ್ಡಾಳಾಗಿ ಮೂಡಿರುವ ಕಾಲುಹಾದಿ, ಕುದುರೆ-ಮೇಕೆಗಳು ಚಲಿಸಿ ಚಲಿಸಿ ಮೂಡಿರುವ ಕಾಡುಹಾದಿಯೇ ಕ್ರಮೇಣ ಮನುಷ್ಯರ ಅಧಿಕೃತ ಮಾರ್ಗಗಳಾಗಿ ಮಾರ್ಪಾಡಾಗಿರುವುದು ನಮ್ಮನ್ನು ಇನ್ನೂ ಕನಿಷ್ಠ ನೂರು ವರ್ಷ ಹಿಂದಿನ ದಿನಗಳಿಗೆ ಕೊಂಡೋಯ್ಯುತ್ತವೆ.

ಅಲ್ಲಿನ ಗಂಡಸರು ಅಂದರೆ, 15 ವರ್ಷ ಮೇಲ್ಪಟ್ಟ ಪುರುಷರು ನೋಡಲು ಸಿಗುವುದೇ ಅಪರೂಪ. ಗ್ರಾಮದಿಂದ ದೂರದ ಅಜ್ಞಾತ ಹಾಗೂ ಮಲಾನಿಗರಲ್ಲದವರಿಗೆ ತಲುಪಲು ಕಷ್ಠಸಾಧ್ಯವಾದ ಕಣಿವೆ ಪ್ರದೇಶಗಳಲ್ಲಿ ಕೃಷಿ ಮತ್ತಿತರ ಆರ್ಥಿಕ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ ಎಂದು ಅಲ್ಲಿನ ಸ್ತ್ರೀಯರನ್ನು ಮಾತನಾಡಿಸಿದಾಗ ತಿಳಿಯಿತು. ಹೊರಗಿನವರಾದ ನಮ್ಮನ್ನು ಅಸ್ಪೃಶ್ಯರಂತೆ ನೋಡುವ ಇವರು ಸ್ವತಃ ತಾವೇ ಶುಭ್ರವಾಗೇನೂ ಇಲ್ಲ. ಹಾಗೆಯೇ ಗ್ರಾಮವೂ ಸಹಾ ಬೆಟ್ಟದ ಮೇಲಿನ ಕೊಳಚೆ ಪ್ರದೇಶದಂತೆ ಭಾಸವಾಗುತ್ತದೆ. ತೀರಾ ಮಾಡಲು ಏನೂ ಕೆಲಸವಿಲ್ಲದವರಂತೆ, ಪ್ರಪಂಚದಲ್ಲಿ ಏನಾದರೇನಂತೆ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲದವರಂತೆ ನಿರ್ಬಾವುಕರಾಗಿರು ಇವರು ಭೇಟಿಗೆ ಬರುವ ಹೊರಗಿನವರ ಬಗ್ಗೆಯೂ ಸಹ ಒಂದು ರೀತಿಯ ಉಪೇಕ್ಷೆ, ಸಂಶಯ ತೋರಿಸುವುದನ್ನು ನೋಡಿದರೆ ಈ ಮನೋಭಾವವೇ ಅವರನ್ನು ಹೊರಪ್ರಪಂಚದಿಂದ ವಿಶೇಷವಾಗಿ ಬೇರ್ಪಡಿಸಿದೆಯೇನೋ ಅನಿಸುತ್ತದೆ.
ಆಧುನಿಕ ಪೋಲೀಸ್ ವ್ಯವಸ್ಥೆಯ ಸೌಲಭ್ಯ ಪಡೆಯಲು ಗ್ರಾಮಸ್ಥ ದಂಡ ತೆರಬೇಕಾದ ವಿಲಕ್ಷಣ ಕ್ರಮ ಇಲ್ಲಿದೆ. ತನ್ನದೇ ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು, ಪರಂಪರೆಯನ್ನು ಕಾಪಾಡಿಕೊಳ್ಳಲು ಈ ರೀತಿಯ ರೀತಿ ರಿವಾಜನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಗ್ರಾಮಸ್ಥರಿಂದ ನೇರವಾಗಿ ಚುನಾಯಿಸಲ್ಪಡುವ ಗ್ರಾಮಸಭೆಯ ತೀರ್ಮಾನವನ್ನು ಧಿಕ್ಕರಿಸಿದವರನ್ನು ಊರಿನಿಂದಲೇ ಹೊರಹಾಕುವ ಕ್ರಮ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಅಪರಾಧಿಯ ಕಾಲಿಗೆ ಕಲ್ಲನ್ನು ಕಟ್ಟಿ ಪ್ರಪಾತಕ್ಕೆ ತಳ್ಳುವ ಫ್ಯೂಡೆಲಿಸ್ಟಿಕ್ ತೀರ್ಮಾನದ ಅತಿರೇಕಗಳೂ ಜರುಗಿವೆಯಂತೆ.

ಗ್ರಾಮದೊಳಗೆ ಮುಂದೆ ಮುಂದೆ ಚಲಿಸಲು ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತದೆಯಾದರೂ ಅಲ್ಲಿಂದ ಹಿಂದಿರುಗಲೂ ಮನಸ್ಸು ಹಿಂದೇಟು ಹಾಕುತ್ತದೆ. ಬಾಲ್ಯದಲ್ಲಿ ಓದಿದ ಭಾರತದ ಇತಿಹಾಸ, ಪೌರವ- ಅಲೆಕ್ಸಾಂಡರನ ಕುರಿತಾದ ಪ್ರಕರಣಗಳು ಹೀಗೆ ಇವೆಲ್ಲ ಇತಿಹಾಸದ ಹರಿವಿನಲ್ಲಿ ನಾವೂ ಆ ಸಂಸ್ಕೃತಿಯ ಯಾವುದೋ ಒಂದು ಕವಲೊಡೆದ ಟಿಸಿಲಾಗಿರಬಹುದೇ? ಮಲಾನಿಗರೂ ಕಾಲದ ಅನಂತ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬೇರು ಕಿತ್ತ ಮರವೊಂದಕ್ಕೆ ಅನಿವಾರ್ಯವಾಗಿ ಜೋತು ಬಿದ್ದು ಅಲ್ಲಿಯೇ ಉಳಿದುಹೋದಂತೆ ಭಾಸವಾಗುತ್ತದೆ.
ಮಲಾನಿಗರಿಗೆ ತೀರಾ ಅಗತ್ಯವಾಗಿರುವ ವಿದ್ಯುತ್, ದೂರವಾಣಿ, ಟೀವಿ, ಆಧುನಿಕ ಉಡುಪುಗಳನ್ನು ಹೊರತುಪಡಿಸಿದರೆ ಇನ್ನಿತರೆ ನಾಗರೀಕ ಪ್ರಪಂಚದ ಸೌಲಭ್ಯಗಳನ್ನು ಒಳ ಬಿಟ್ಟುಕೊಳ್ಳಲು ಅವರು ಮನಸ್ಸು ಮಾಡಿದಂತಿಲ್ಲ. ಬೆಟ್ಟದ ಮೇಲಿನ ಆ ಗ್ರಾಮವೇ ಒಂದು ದ್ವೀಪದಂತಿದ್ದು, ನಾವಂದುಕೊಂಡಿರುವ ನಾಗರೀಕ ಸವಲತ್ತುಗಳು ಆ ಬೌಗೋಳಿಕ ಅಸ್ತಿತ್ವಕ್ಕೆ ಅನಪೇಕ್ಷಿತವೆಂದೋ, ಅಪಾಯಕಾರಿಯೆಂದೋ, ತಾವಾಯಿತು, ತಮ್ಮ ಆಚಾರ-ವಿಚಾರವಾಯಿತೆಂದೋ ತಮ್ಮ ಪಾಡಿಗೆ ತಾವಿದ್ದಾರೆ. ಬಹುತೇಕ ವೈವಾಹಿಕ ಸಂಬಂಧಗಳೂ ಸಹಾ ಅದೇ ಗ್ರಾಮದೊಳಗೇ ಗಿರಕಿ ಹೊಡೆಯುವುದರಿಂದ ತಾವು ಜನಾಂಗೀಯ ಪರಿಶುದ್ಧತೆ ಕಾಪಾಡಿಕೊಂಡಿದ್ದೇವೆಂದುಕೊಂಡಿದ್ದಾರೆ. ಪ್ರಾದೇಶಿಕ ಆಚರಣೆಗಳು, ಇನ್ನೂ ಅವರ ಮನದಲ್ಲಿ ಹುದುಗಿರುವ ಹೊರಗಿನವರ ಮೇಲಿನ ಅಪನಂಬಿಕೆ, ಜನಾಂಗೀಯ ಪರಿಶುದ್ಧತೆಗಿರುವ ತುಡಿತ, ಜೀವನ ನಿರ್ವಹಣೆಗೆ ಆಶ್ರಯಿಸಿರುವ ಕಸುಬುಗಳೇ ಮಲಾನಾವನ್ನು ನಾಗರೀಕತೆಯ ದ್ವೀಪವನ್ನಾಗಿಸಿದೆ.

ಅವರು ಹೀಗಿದ್ದಾರೆ ಎಂಬ ಟೀಕೆ, ಹೀಗಿರಬೇಕಿತ್ತು ಎಂಬ ವಿಮರ್ಶೆ, ಹೀಗಾಗಬೇಕು ಎಂಬ ಫರ್ಮಾನು ಹೊರಡಿಸಲು ನಾವಾದರೂ ಯಾರು? ಡೆಮಾಕ್ರಸಿ, ಸೀಕ್ರಸಿ, ಮಿಸ್ಟರಿ, ಹಿಸ್ಟರಿ, ಮಿಥ್, ಕಂಟ್ರಿ ಕಲ್ಚರ್, ವೈಲ್ಡ್ ರಿಚುವಲ್ಸ್, ಸ್ಟ್ರೇಂಜ್ ಡಯಲೆಕ್ಟ್ ಇವೆಲ್ಲವುಗಳ ಆಗರ ಈ ಮಲಾನಾ. ಐತಿಹಾಸಿಕ ಗ್ರಾಮಗಳು ಹಾಗೂ ದುರ್ಗಮ ಪ್ರದೇಶದ ನಾಗರೀಕತೆಗಳು ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವುದಕ್ಕೆ ಮಲಾನ ಒಂದು ಜೀವಂತ ಸಾಕ್ಷಿಯಾಗಿದೆ.
ಹಾಗೆಂದು ಹೊಸ ಸೌಲಭ್ಯಗಳನ್ನು ನೀಡುತ್ತಾ, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನೇನಾದರೂ ಮಾಡಲು ಹೋದರೆ, ಅಸಾಧಾರಣವಾದ ಸಂಸ್ಕೃತಿಯೊಂದನ್ನು ಹಾಳುಗೆಡವಿದ ಪಾಪಕ್ಕೆ ಕಾರಣವಾದೇವೆಂಬ ದ್ವಂದ್ವವೂ ಕಾಡುತ್ತದೆ. ಇಲ್ಲೊಂದು ನೈತಿಕತೆಯ, ಮಾನವೀಯತೆಯ, ಔಚಿತ್ಯದ ತಾಕಲಾಟ ಶುರುವಾಗುತ್ತದೆ. ಈಗಿರುವಂತೆಯೇ ಅವರು ಸಂತೋಷವಾಗಿರುವಂತೆ ಕಾಣುತ್ತದೆ.

ನಮ್ಮ ಅನುಕೂಲಗಳೇ ಅವರಿಗೆ ಅನಾನುಕೂಲಗಳಾಗಬಹುದು. ಅಲ್ಲಿಂದ ಹೊರ ಬರುವಾಗ ಕಾಡಿದ ಹಾಗೂ ಆವರಿಸಿದ ವಿಷಣ್ಣತೆ ನನ್ನನ್ನು ಇನ್ನೂ ಬಿಟ್ಟು ಹೋಗಿಲ್ಲ. ಹೋಗುವುದೂ ಇಲ್ಲ, ಹೋಗಲೂಬಾರದು. ಎಷ್ಟರ ಮಟ್ಟಿಗೆಂದರೆ ಅಲ್ಲೇ ನೆಲಸಿ, ಅವರಿಗಾಗಿ ಏನನ್ನಾದರೂ ಒಳಿತನ್ನು ಮಾಡುವ, ಅಲ್ಲಿನ ಮಕ್ಕಳಿಗೆ ಒಳ್ಳೆಯ ಬದುಕಿನ (ನಾವಂದುಕೊಂಡಿರುವ ಆಧುನಿಕತೆಯಲ್ಲ) ಹಾದಿಯಲ್ಲಿ ಜೊತೆಯಾಗಿ ನಡೆಯುವ ಅಭಿಲಾಷೆ ನನ್ನದು.
ವಿಪರ್ಯಾಸವೆಂದರೆ ನಮ್ಮನ್ನು ಕಂಡರೆ ದೂರ ನಿಲ್ಲುವ, ಮಾತನಾಡಲೂ ಹಿಂಜರಿಯುವ, ಸಂಶಯದಿಂದಲೇ ನೋಡುವ, ಅನಪೇಕ್ಷಿತ ಅಪರಿಚಿತರನ್ನು ದೂರವಿಡುವ ಇವರ ನಡವಳಿಕೆಯೇ ಅಂತಹ ಪ್ರಯತ್ನಕ್ಕೆ ತಣ್ಣೀರೆರಚುತ್ತದೆ. ನಾನು ನನ್ನ ಕುಟುಂಬದೊಡನೆ ಮಲಾನಾ ಗ್ರಾಮವನ್ನು ಆತಂಕದಿಂದ ಪ್ರವೇಶಿಸಿ, ಅಳುಕಿನಿಂದಲೇ ಸಂಚರಿಸಿ, ಅಪಾಯವಿಲ್ಲದೇ ನಿರ್ಗಮಿಸಿದ್ದು ಒಂದು ರೋಚಕ ಅನುಭವ. ಮತ್ತೊಮ್ಮೆ ಹೋಗಲು ಕಾತರಿಸುತಿದೆ ಮನ.
– ಧನಂಜಯ ಜೀವಾಳ ಬಿ.ಕೆ.
9448421946

