ನನಗೆ ಹತ್ತನೆ ತರಗತಿಯವರೆಗು ಪಠ್ಯಪುಸ್ತಕಗಳೇ ಓದುವ ಪುಸ್ತಕಗಳಾಗಿದ್ದವು. ಪದವಿಪೂರ್ವ ಕಾಲೇಜಿನಲ್ಲೂ ನಾನು ಯಾವುದೇ ಕಾದಂಬರಿ ಓದಿದ್ದು ಜ್ಞಾಪಕವಿಲ್ಲ. ರಜಾದಿನಗಳಲ್ಲಿ ಸಮಯ ಸಿಕ್ಕಿದಾಗ ಜೇಮ್ಸ ಹಾರ್ಡ್ಲಿ ಚೇಸ್, ಆರ್ಥರ್ ಹ್ಯಾಲಿ, ಸರ್ ಕಾನನ್ ಡೈಲ್ ಇತ್ಯಾದಿ ಪತ್ತೆದಾರಿ ಪುಸ್ತಕಗಳನ್ನು ಓದುತ್ತಿದ್ದೆ. ಈ ಪುಸ್ತಕಗಳನ್ನು ಓದುತ್ತಿದ್ದಾಗ ಲೀಲಾಜಾಲವಾಗಿ ಸಮಯ ಹೋಗುತ್ತಿತ್ತು. ಕಾರಣ, ತಿಳಿದುಕೊಳ್ಳುವಂತಾದ್ದು ಏನು ಇರಲಿಲ್ಲ. ಇನ್ನು ವೈದ್ಯಕೀಯ ವಿಧ್ಯಾಭ್ಯಾಸ ಮಾಡುತ್ತಿದ್ದಾಗ ಬೇರೆ ಪುಸ್ತಕಗಳನ್ನು ಓದುವುದಕ್ಕೆ ಸಮಯವೇ ಸಾಕಾಗುತ್ತಿರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಬೆಳಗ್ಗೆ ಆಟ, ದಿನ ನಿತ್ಯ ಖಾಸಗಿ ವೃತ್ತಿ ಮತ್ತು ಸಂಸಾರ.
ನನ್ನ ಈ ಓದು ಕೆಲವು ವರ್ಷಗಳ ಹಿಂದಿನಿಂದ, ಅಲ್ಪ ವಿರಾಮ ಕಂಡುಕೊಂಡ ನಂತರ. ಒಂದು ದಿವಸ ನನ್ನ ವೈದ್ಯ ಮಿತ್ರರೊಬ್ಬರು ನನ್ನ ಸಲಹಾ ಕೊಠಡಿಗೆ ಬಂದು ಉಭಯ ಕುಶಲೋಪರಿ ವಿಚಾರಿಸಿ ಸ್ವಲ್ಪ ಸಮಯದ ನಂತರ ಅವರು ತಮ್ಮ ಜೊತೆಗೆ ತಂದಿದ್ದ ಪುಸ್ತಕ ಒಂದನ್ನು ಕೊಟ್ಟು “ಡಾಕ್ಟ್ರೇ ನಿಮಗೆ ಸಮಯವಿದ್ದಾಗ ಈ ಪುಸ್ತಕವನ್ನು ಓದಿ” ಅಂತ ಹೇಳಿ ಹಿಂತಿರುಗಿದರು. ಅವರು ತಂದಿದ್ದ ಪುಸ್ತಕ ಅಧ್ಯಾತ್ಮಿಕ ಪುಸ್ತಕವಾಗಿತ್ತು. ನಿಜ ಹೇಳಬೇಕು ಅಂದರೆ ನನಗೆ ಅಧ್ಯಾತ್ಮ ವಿಚಾರ ಅಷ್ಟಕಷ್ಟೆ. ನನಗೆ ಅಂದು ಅಷ್ಟು ಪೇಷಂಟ್ಸ ಇಲ್ಲದೇ ಇದ್ದಿದ್ದರಿಂದ ಈ ಪುಸ್ತಕವನ್ನು ತಿರುವು ಹಾಕಿದೆ.
ಇದನ್ನು ಓದಿ: “ಮಹಿಳೆ – ಚಾರ್ಲ್ಸ ಡಾರ್ವಿನ್ – ಓಶೋ – ಮುಕ್ತಾನಂದ”
ಓದುತ್ತಿದ್ದಾಗ ಆ ಪುಸ್ತಕದಲ್ಲಿ ಬರುವ ಒಂದು ಸನ್ನಿವೇಶ ನನ್ನ ಗಮನ ಸೆಳೆಯಿತು. ಸೂಕ್ಷ್ಮವಾಗಿ ಈ ವಿಷಯ ಹೇಗಿತ್ತು ಎಂದರೆ, ಒಬ್ಬ ಸಂಗೀತ ವಿದ್ವಾಂಸರು ತಮ್ಮ ಕಚೇರಿಯನ್ನು ದೊಡ್ಡದಾದ ವೇದಿಕೆಯ ಮೇಲೆ ನೆಡೆಸುತ್ತಿರುತ್ತಾರೆ. ಅದೇ ಸಮಯದಲ್ಲಿ ಆ ವೇದಿಕೆಯ ಕೆಳಗೆ ಕೆಲವು ಮರದ ಕಂಬಗಳು ಸಡಿಲ ಆಗಿದ್ದನ್ನು ಅಲ್ಲಿಯ ಪ್ರಾಯೋಜಕರು ಗಮನಿಸುತ್ತಾರೆ. ಕಚೇರಿ ನಡುಸುತ್ತಿದ್ದ ವಿದ್ವಾಂಸರಿಗೆ ಮತ್ತು ವೃಂದದವರಿಗೆ ತಮ್ಮ ವೇದಿಕೆ ಕುಸಿಯುವ ಗ್ರಹಿಕೆ ಇರುವುದಿಲ್ಲ. ಆಯೋಜಕರು ತುರ್ತಾಗಿ ಒಬ್ಬ ಬಡಗಿಯನ್ನು ಕರೆಸುತ್ತಾರೆ. ಅಯೋಜಕರು ಆ ಕಂಬಗಳಿಗೆ ಮೊಳೆ ಹೊಡೆದು ಸರಿ ಮಾಡು ಅಂದಾಗ ಒಂದು ಉಭಯಸಂಕಟ ಶುರು ಆಗುತ್ತೆ. ಸುತ್ತಿಗೆಯಿಂದ ಮೊಳೆ ಹೊಡೆದರೆ ವಿದ್ವಾಂಸರಿಗೆ ಭಂಗ ಬರುತ್ತದೆ ಮತ್ತು ಕಚೇರಿ ಹಾಳಾಗುತ್ತದೆ. ಮೊಳೆ ಹೊಡೆಯದ್ದಿದ್ದರೆ ವೇದಿಕೆ ಕುಸಿಯುತ್ತದೆ. ವಿದ್ವಾಂಸರ ಸಂಗೀತ ಅರ್ಥಾತ್ ಅವರ ವೃತ್ತಿ ಮುಖ್ಯವೋ ಅಥವ ಬಡಗಿಯ ವೃತ್ತಿ ಮುಖ್ಯವೋ? ಈ ಪ್ರಶ್ನೆಯ ಉತ್ತರವನ್ನು ಓದುಗರಿಗೆ ಬಿಡುವೆನು.

ಇಲ್ಲಿಂದಲೆ ನನ್ನ ಆತ್ಮಾವಲೋಕನ ಶುರು ಆಗಿದ್ದು. ಅಂದೇ ಕೆಲವು ಪುಸ್ತಕಗಳನ್ನು ಕೊಳ್ಳುವ ಮನಸ್ಸು ಮಾಡಿದೆ. ಬೆಂಗಳೂರು ಅಧ್ಯಾತ್ಮಿಕ ಪುಸ್ತಕ ಮಳಿಗೆಗೆ ಭೇಟಿ ನೀಡಿದಾಗ ಅಲ್ಲಿಯ ಮಾಲಿಕರು “ನೀವು ಸ್ವಾಮಿಜಿ ಆಗಬೇಕೆಂಬ ಆಸೆ ಇದೆಯಾ?” ಎಂದು ಕೇಳಿದರು. ನಾನು “ಇಲ್ಲ, ಯಾಕೆ?”ಎಂದೆ. ಆವರು ಕೊಟ್ಟ ಉತ್ತರ “ನೀವು ಆರಿಸಿಕೊಳ್ಳುತ್ತಿರುವ ಪುಸ್ತಕಗಳನ್ನು ಇಂದಿನ ಶ್ರೇಷ್ಠ ಸ್ವಾಮಿಜಿಗಳು ಸಹ ಕೊಂಡಿದ್ದಾರೆ ಸರ್” ಎಂದರು. ನಾನು ಯಾವ ಪ್ರತಿಕ್ರಿಯೆ ನೀಡದೆ ಅವರಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ.
ನನ್ನ ಹಳೆ ಮನೆಯ ಪಕ್ಕದ ಮನೆಯವರ ಮಾರ್ಗದರ್ಶನದಿಂದ ಅಧ್ಯಾತ್ಮಿಕ, ಸಂದಿಗ್ಧ, ತಾರ್ಕಿಕ, ವೈಜ್ಞಾನಿಕ, ವಿರೋಧಾಭಾಸ, ವಿಕಸಿಕ, ರೂಪಕ ಹೀಗೆ ಹಲವಾರು ಚರ್ಚಾ ಸಂಬಂಧಿತ ಪುಸ್ತಕಗಳನ್ನು ಕೊಂಡು ಅವುಗಳ ಹಾಳೆಗಳನ್ನು ತಿರುವುತ್ತಾ ಹೋದೆ. ನನ್ನ ಗಮನ ಸೆಳೆದ ಪುಸ್ತಕಗಳ ಕಡೆ ಸಮಯ ಕೊಟ್ಟು ಓದ ತೊಡಗಿದೆ.
ನಾನು ನಿಜ ಹೇಳಬೇಕಾದರೆ ಓದಿದ್ದು ಕಮ್ಮಿ, ಬರೆದಿದ್ದು ಹೆಚ್ಚು. ಗಮನ ಕೊಟ್ಟು ಓದಿದ ಪುಸ್ತಕವೆಂದರೆ ಅಮೇರಿಕಾದ ವಿಕಸಿಕ ತಜ್ಞ, ತಾರ್ಕಿಕ ತಜ್ಞ, ಜೀವ ಶಾಸ್ತ್ರಜ್ಞ, ಅರಿವಿನ ತಜ್ಞ ಡೇನಿಯಲ್ ಡೆನ್ನೆಟ್ (1942 – 2024) ರ ಪುಸ್ತಕ “ಫ್ರಮ್ ಬ್ಯಾಕ್ಟೀರಿಯ ಟು ಬ್ಯಾಛ್ ಅಂಡ್ ಬ್ಯಾಕ್”. ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದರೂ ನನಗೆ ಈ ಪುಸ್ತಕದ ಮೇಲೆ ಆಸಕ್ತಿ ಹುಟ್ಟಿಸಿತ್ತು. ಈ ಪುಸ್ತಕದ ವಿಚಾರಗಳು ನನ್ನ ವಿಷಯವಾದ “ತಂತ್ರ” ದ ರಸಾನುಭವಕ್ಕೆ ನಾಂದಿ ಹಾಡಿದೆ. ಈ ಪುಸ್ತಕ ಸುಮಾರು ನಾನೂರು ಪುಟಗಳಿದ್ದು ಓದುವುದಕ್ಕೆ ಒಂದು ವರ್ಷವನ್ನು ತೆಗದುಕೊಂಡಿದ್ದೇನೆ.
ಇದನ್ನು ಓದಿ: “ ಅರಿವು – ಆತ್ಮ- ಮೆದುಳಿನ ತರಂಗ – ಆದಿ ಶಂಕರಾಚಾರ್ಯರು”
“ಡೆನ್ನೆಟ್” ಅರಿವಿನ ಬಗ್ಗೆ “ಮನಸ್ಸಿನ ಇಚ್ಛೆ ಮತ್ತು ಅರಿವು ಎರಡು ಸಹ ಭೌತಶಾಸ್ತ್ರದ ನಿಯಮಾನುಸಾರವಿದೆ. ಅರಿವು ಮೆದುಳಿನಲ್ಲಿ ಆದ ಭೌತಿಕ ಉತ್ಪನ್ನ. ಅರಿವಿನ ಮಾಧ್ಯಮ ಭ್ರಮೆಯ ಲೋಕ ಎಂದು ಹೇಳಿದರೆ ತಪ್ಪು ಆಗಲಾರದು. ಭಾವನೆಯ ನಿಜ ಸ್ಥಿತಿ ಮತ್ತು ಹೊರ ವಾಸ್ತವ್ಯ ಲೋಕಗಳ ಮಧ್ಯೆ ಗಣಕ ಕ್ರಮಾವಳಿಯಿಂದ ಆದ ಕಾರ್ಯ ರೂಪಾ ರೇಖೆಗಳೇ “ಅರಿವು” ಎಂದು ಕರೆಯಬಹುದು”.
ಈ ವಿವರಣೆಯನ್ನೆ ನಾನು ನಮ್ಮ ಬದುಕನ್ನು “ಜೀವನದ ಯಂತ್ರ ಶಾಸ್ತ್ರ ಅಥವ ಮೆಕಾನಿಕ್ಸ ಆಫ್ ಲೈಫ್” ಎಂದು ಕರೆದಿರುವೆನು. ಆದಿ ಶಂಕರಾಚಾರ್ಯರು ಎಂಟನೆ ಶತಮಾನದಲ್ಲೇ ಈಗ ಡೆನ್ನೆಟ್ ತರ್ಕಸಿರುವ ಅರಿವನ್ನು ಒಂದು ಭ್ರಮೆ ಅಂತ ಹೇಳಿದ್ದನ್ನು ಅವರ ದೃಷ್ಟಾಂತ ಅಥವ ಶಾಸ್ತ್ರದಲ್ಲಿ ಓದಲು ಸಿಗುವುದು.
ನಾನು ವಿವರಿಸುವ ಡೆನ್ನೆಟ್ ಅವರ ಹೋಲಿಕೆಯ ಸಾದೃಶ್ಯ(analogous) ವನ್ನು ಓದುಗರಿಗೆ ತಿಳಿಸುವುದು ಸ್ವಲ್ಪ ಕಷ್ಟ ಆದರೂ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡುವೆ. “ಯಾರು ಯಾವಾಗ ವಿಶ್ವವನ್ನು ಹೊರಗಿನಿಂದ ಒಳಗೆ ಉಲ್ಟ ಮಾಡಿದ ಅಂದು ಒಬ್ಬ ಬುದ್ದಿವಂತ ವಿನ್ಯಾಸಗಾರ ಅಥವ ಚಿತ್ರಗಾರ ಮೆದುಳೆಂಬ ಅದ್ಭುತ ವಸ್ತುವನ್ನು ಸಿದಾ ಇಟ್ಟು ಒಳಗಿಂದ ಹೊರಗೆ ತಯಾರಿಸಿದ” ಎಂಬುದು ಇವರ ವಾದ. ಇಂತಹ ಅತೀಂದ್ರಿಯ ವಸ್ತುವನ್ನು ಯಾವುದೇ ಸ್ಪರ್ಧೆ (ಕಾಂಪಿಟೇಶನ್) ಇಲ್ಲದೆ ತಯಾರಿಸಲಾಗಿದೆ. ಇಂದಿನ ವಿವೇಕವುಳ್ಳ ಮಾನವನಿಗೆ ಈ ವಿನ್ಯಾಸ ತನ್ನ ಗ್ರಹಿಕೆಗೆ (ಕಾಂಪ್ರಹೆನ್ಶನ್) ಬರದೇ ಇರುವಂತಾದ್ದು.

ಅಮೇರಿಕದ ಪ್ರಸಿದ್ಧ ನಟ ಮ್ಯಾಕ್ಡೋನಾಲ್ಡ್ ಕರ್ರೇ (1913 – 1994) ಇವರು 1965 ರಲ್ಲಿ ಅಲ್ಲಿಯ ದೂರದರ್ಶನ ವಾಹಿನಿಯಲ್ಲಿ ಸುಮಾರು ಮೂರು ದಶಕಗಳು ಸೋಪ್ ಅಪೇರಾದ ಕೇಂದ್ರ ಪಾತ್ರವನ್ನು ವಹಿಸಿ “ಮರಳು ಗಡಿಯಾರದ ಮರಳಿನಂತೆ ನಮ್ಮ ಜೀವಮಾನದ ದಿನಗಳು” ಎಂದು ನುಡಿದಿದ್ದರು. ಇವರ ವಾದ ನಮ್ಮ ಬದುಕಿನ ಒಂದೊಂದು ದಿನವು ಮರಳಿನ ಗಡಿಯಾರ (ಹವರ್ ಗ್ಲಾಸ್) ದ ಮರಳಿಗೆ ಸಮ. ಅಂದರೆ ಜೀವನ ಸ್ಥಿರವಾಗಿರುವುದಿಲ್ಲ. ಮನುಷ್ಯನ ವಿನ್ಯಾಸ ಬಂದು ಹೋಗುವನೇ ಆಗಿರುತ್ತಾನೆ.
ಇದನ್ನು ಓದಿ:“ಶಿವ – ಪಾರ್ವತಿ – ಸ್ಕಿಜೋಫ್ರೇನಿಯ ಮತ್ತು ಕೆಟಟೋನಿಯಾ”
ಇನ್ನು ಸುಲಭವಾಗಿ ಈ ವಿನ್ಯಾಸವನ್ನು ಹೇಳಬೇಕೆಂದರೆ ಒಂದು ಸೀಲ್ ಮಾಡಿದ ಡಬ್ಬಿಯಲ್ಲಿ ಸಂರಕ್ಷಕ ಇಲ್ಲದ ಪುಡಿ ಮಾಡಿದ ಧಾನ್ಯಗಳನ್ನು ಇಟ್ಟು ಯಾರೂ ನೋಡದಂತಾ ಸ್ಥಳದಲ್ಲಿ ಇಟ್ಟು ಮರೆತು ಬಿಡೋಣ. ಹಲವಾರು ವರ್ಷಗಳ ನಂತರ ಈ ಡಬ್ಬಿಯನ್ನು ತೆರೆದಾಗ ನಮ್ಮ ಆಶ್ಚರ್ಯಕ್ಕೆ ಹುಳುಗಳು ಕಾಣುತ್ತವೆ. ಇವುಗಳು ಹೇಗೆ ಬಂದವು ಎಂಬುದೇ ಬಿಡಿಸಲಾಗದ ಒಗಟು. ಯಾವುದೇ ಪವಾಡವಿಲ್ಲ. ಯಾವುದೇ ಸ್ಪರ್ದೆ ಇಲ್ಲ. ಹಾಗಾದರೆ ಈ ಹುಳುಗಳನ್ನು ತಯಾರಿಸಿದಾತ?…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] ಇದನ್ನು ಓದಿ: “ಉಭಯಸಂಕಟ-ಡೇನಿಯಲ್ ಡೆನ್ನೆಟ್ – ಸಾದೃಶ್ಯ- … […]