ಬೆಂಗಳೂರು: ವಿವಾದಗಳ ಮೂಲಕಲೇ ಹೆಚ್ಚು ಚರ್ಚೆಗೆ ಬರುವ ರಾಮ್ ಗೋಪಾಲ್ ವರ್ಮಾ (ಆರ್ಜಿವಿ) ಅವರು ಮತ್ತೊಮ್ಮೆ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಅವರು ಕನ್ನಡ ಚಿತ್ರರಂಗದ ಐಕಾನ್ ಡಾ. ರಾಜ್ಕುಮಾರ್ ಅವರನ್ನು ಟೀಕಿಸಿ ಬಿಸಿಗೆ ಸಿಕ್ಕಿದ್ದಾರೆ.
ಇತ್ತೀಚೆಗೆ ಮಾತನಾಡಿದ ಅವರು, “ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ರೀಮೇಕ್ ಮಾಡುವ ಮೂಲಕ ಡಾ. ರಾಜ್ಕುಮಾರ್ ಸೇರಿದಂತೆ ಹಲವರು ಖ್ಯಾತಿ ಪಡೆದರು” ಎಂಬ ಹೇಳಿಕೆಯಿಂದ ವಿವಾದ ಎಬ್ಬಿಸಿದ್ದಾರೆ. ಅವರ ಈ ಅಭಿಪ್ರಾಯವನ್ನು ಹಲವು ಕನ್ನಡಿಗರು ಮತ್ತು ಚಿತ್ರರಂಗದ ಗಣ್ಯರು ನಿಂದಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ‘ಥಗ್ ಲೈಫ್’ ಸಿನಿಮಾ ಕುರಿತಂತೆ ಕಮಲ್ ಹಾಸನ್ ಕುರಿತು ಹೇಳಿದ್ದರಿಂದ ವಿವಾದದ ಕೇಂದ್ರಬಿಂದುವಾಗಿದ್ದ ಆರ್ಜಿವಿ, ಇದೀಗ ಮತ್ತಷ್ಟು ಕಿಡಿಗೇಡಿತನದ ನುಡಿಗಳನ್ನು ಕನ್ನಡ ಚಿತ್ರರಂಗದ ದಿಕ್ಕು ತೋರಿದ ಅಣ್ಣಾವ್ರ ವಿರುದ್ಧ ಬಳಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಆರ್ಜಿವಿಯ ವಿವಾದಾತ್ಮಕ ಹೇಳಿಕೆ:
“ಅಮಿತಾಭ್ ಬಚ್ಚನ್ ಶೈಲಿಯ ಮಾಸ್ ಮಸಾಲಾ ಶೈಲಿಯ ಸಿನಿಮಾಗಳನ್ನು ದಕ್ಷಿಣದ ನಿರ್ದೇಶಕರು ನಿರಂತರವಾಗಿ ಅನುಸರಿಸಿದರು. ರಜನಿಕಾಂತ್, ಎನ್ ಟಿ ರಾಮರಾವ್, ಚಿರಂಜೀವಿ, ರಾಜ್ಕುಮಾರ್ರಂತಹವರು ರೀಮೇಕ್ಗಳ ಮೂಲಕ ಜನಪ್ರಿಯರಾದರು” ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, “ಅವಮಾನಕಾರಿ” ಎಂದು ವಿಶ್ಲೇಷಿಸಲಾಗಿದೆ. ಕನ್ನಡ ಚಲನಚಿತ್ರ ವಲಯದಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಆರ್ಜಿವಿಗೆ ಕ್ಷಮೆ ಕೇಳಬೇಕು ಎಂಬ ಒತ್ತಾಯವನ್ನೂ ಮುಂದಿಟ್ಟಿದ್ದಾರೆ.
ವಿವಾದವೆಂದರೆ ರಾಮ್ ಗೋಪಾಲ್ ವರ್ಮಾಗೆ ಹೊಸದೇನಲ್ಲ. ಆದರೆ ಈಗ ಅವರು ತಾವು ಇತರ ಭಾಷೆಯ ಐಕಾನ್ಗಳ ಕುರಿತು ಮಾಡಿದ ಕಟುವಾದ ಟಿಪ್ಪಣಿಗಳನ್ನು ಸಮರ್ಥಿಸಿಕೊಳ್ಳಲು ಕನ್ನಡದ ದಿಗ್ಗಜರನ್ನು ಹೊಡೆದಿದ್ದಾರೆ ಎಂಬ ಮಾತು ಪ್ರಚಲಿತವಾಗಿದೆ. ಇಂತಹ ಹೇಳಿಕೆಗಳು ಪ್ರಾದೇಶಿಕ ಭಾವನೆಗಳಿಗೆ ಆಘಾತ ಉಂಟುಮಾಡಬಹುದು ಎಂಬುದನ್ನು ಯಾರು ಅವರುಗೆ ಹೇಳಬೇಕು?
