ಬೆಂಗಳೂರು: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ವಾರದಲ್ಲಿ ಐದು ದಿನ ವಿತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಮೂರು ದಿನ ನೀಡಲಾಗುತ್ತಿದ್ದ ಈ ಯೋಜನೆಗೆ ವಿಸ್ತರಣೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಎಚ್.ಕೆ. ಪಾಟೀಲ್ ಅವರು ಮಾತನಾಡಿ, “ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆಎಂಎಫ್ ಸಹಕಾರದಲ್ಲಿ ನಡೆಯುತ್ತಿರುವ ಈ ಯೋಜನೆಯನ್ನು ಈಗ ಐದು ದಿನಗಳಿಗೆ ವಿಸ್ತರಿಸಲಾಗುತ್ತಿದೆ. ಇದರ ಶೇ.25ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ,” ಎಂದು ಹೇಳಿದರು.
ಒಟ್ಟು 27.02 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ 20.23 ಕೋಟಿ ರೂ. ಯೋಜನೆಗೆ ಹಾಗೂ 6.49 ಕೋಟಿ ರೂ. ಸಾಗಣೆಗೆ ಬಳಸಲಾಗುತ್ತದೆ. ಈ ಸಂಬಂಧ ತ್ರಿಪಕ್ಷೀಯ ಒಡಂಬಡಿಕೆಯನ್ನು ಮಾಡಲಾಗುತ್ತಿದೆ.
ಸಚಿವ ಸಂಪುಟವು ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ 148 ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್ಎಂಒ) ಸಂಗ್ರಹಣಾ ಟ್ಯಾಂಕ್ಗಳಿಗೆ ಟೆಲಿಮೆಟ್ರಿ ಯೂನಿಟ್ ಖರೀದಿಸಲು ಸಹ ಅನುಮೋದನೆ ನೀಡಿದೆ. ಇದಕ್ಕೆ 8.65 ಲಕ್ಷ ರೂ. ವೆಚ್ಚವಾಗಲಿದೆ.
ಈ ತೀರ್ಮಾನದಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಹೆಚ್ಚುವರಿಯಾಗಿ ಒದಗಿಸುವ ಮೂಲಕ ಅವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ.
