
ಅಂದಿಗೆ ಊರಿಗೆ ಹೋಗಿ ಮೂರು ವರ್ಷಗಳೇ ಕಳೆದಿದ್ದವು, ಯೌವ್ವನದ ವಸಂತವು ತುಂಬಿ, ಕಾಲೇಜು ದಾಟಿದ ಮೇಲೆ ಜವಾಬ್ದಾರಿ ಎಂಬ ಭೂತ ಹೆಗಲ ಹತ್ತಿತ್ತು, ಮುಂದಿನ ಜೀವನಕ್ಕೆ ಬೆಂಗಳೂರಿಗೆ ಕೆಲಸ ಹುಡುಕಲು ಹೊರಟ ನಾನು ಮೂರು ವರ್ಷಗಳ ಸತತ ಅಲೆದಾಟದ ನಂತರ ಒಂದು ಕಂಪನಿಯಲ್ಲಿ ಕೈ ತುಂಬಾ ಅಲ್ಲದಿದ್ದರೂ ಜೀವನ ನಡೆಸಲು ಸಾಕಾಗುವಷ್ಟು ಸಂಬಳ ಸಿಗುವ ನೌಕರಿ ಹಿಡಿದಿದ್ದೆ.
ಇತ್ತ ಅಪ್ಪ ಅಮ್ಮ ಮತ್ತು ಮುದ್ದಿನ ತಂಗಿ ಪ್ರತಿದಿನ ಮನೆಗೆ ಬರಲು ಕಾಡಿಸುತ್ತಿದ್ದರು.
ಅಂತು ಇಂತು ಮನಸ್ಸು ಮಾಡಿ ಬೆಳ್ಳಂಬೆಳಗ್ಗೆ ಬೆಂಗಳೂರಿನ ಮೆಜೆಸ್ಟಿಕ್ ನಿಂದ ಹೊಳೇನರಸೀಪುರದ ಬಸ್ ಹತ್ತಿ ಕಿಟಕಿಯ ಬಳಿ ಸೀಟು ಹಿಡಿದು ಕುಳಿತೆ , ಸತತ ಐದು ಗಂಟೆಯ ಹರಸಾಹಸದ ಪ್ರಯಾಣದ ನಂತರ ಹೊಳೇನರಸೀಪುರಕ್ಕೆ ಬಂದು ಇಳಿದೆ..
ಇಲ್ಲಿ ನೋಡಿದರೆ ಎಲ್ಲವೂ ಬದಲಾಗಿದೆ , ನಾನು ಕಾಲೇಜು ಓದುತ್ತಿದ್ದಾಗ ಬಸ್ ನಿಲ್ದಾಣದ ಸುತ್ತ ಮುತ್ತ ಮರಗಿಡಗಳಿದ್ದವು , ಎಲ್ಲೆಲ್ಲೂ ಹಸಿರು ಕಣ್ಣಿಗೆ ರಾಚುತ್ತಿತ್ತು, ಈಗ ಬರೀ ಕಾಂಕ್ರೀಟ್ ರಸ್ತೆಗಳಿಂದ ನಗರವೆಲ್ಲಾ ಬಿಕೋ ಎನ್ನಿಸಿತು.
ಅಲ್ಲಿಂದ ನಮ್ಮೂರಿಗೆ 8 ಕಿಮೀ, ಒಂದು ಆಟೋ ರಿಕ್ಷಾ ಹಿಡಿದು ಊರಿಗೆ ಬರುವ ಹೊತ್ತಿಗೆ ಸಂಜೆಯಾಗಿತ್ತು, ಮನೆಯಲ್ಲಿ ಅದ್ದೂರಿ ಸ್ವಾಗತ, ಮಗ ಏನೋ ಸಾಧನೆ ಮಾಡಿ ಬಂದಿದ್ದಾನೆ ಎಂದು.
ನನಗೆ ಕೇವಲ ಎರಡು ದಿನ ರಜೆ ಸಿಕ್ಕಿತ್ತು. ಆದ್ದರಿಂದ ಮೊದಲು ನೆನಪಿಗೆ ಬಂದದ್ದು ನಮ್ಮ ಜಮೀನನ್ನು ನೋಡಬೇಕೆಂದು , ಅಪ್ಪನ ಹಳೆಯ ಅಟ್ಲಾಸ್ ಸೈಕಲ್ ಹತ್ತಿಕೊಂಡು ಜಮೀನು ನೋಡಲು ಹೊರಟೆ. ದಾರಿಯ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಹಿಂದೆ ಕಾಣಸಿಕ್ಕುತ್ತಿದ್ದ ದಟ್ಟವಾದ ಕಾಡು ಈಗ ಮಾಯವಾಗಿತ್ತು, ಮಣ್ಣಿನ ರಸ್ತೆಗಳು ಕಣ್ಮರೆಯಾಗಿ ಡಾಂಬರ್ ರಸ್ತೆಗಳು ನಮ್ಮ ಜಮೀನವರೆಗೂ ಮಾಡಲ್ಪಟ್ಟಿತ್ತು.
ಹಿಂದೆ ನಮ್ಮ ಜಮೀನಿನ ಹತ್ತಿರ ಹೋದರೆ ತಂಗಾಳಿ ಮೈ ಕೈಗೆ ಸೋಕುತಿತ್ತು ಆದರೆ ಇಂದು ಬೆಚ್ಚಗಿನ ಬಿಸಿ ಗಾಳಿ ಎದೆಗೆ ನಾಟುವಂತೆ ಬೀಸತೊಡಗಿತು, ಮನಸ್ಸಿಗೆ ಕಳವಳವಾಗಿ ನಾನು ನೆಟ್ಟು ಬೆಳೆಸಿದ್ದ ಮಾವಿನ ಮರದ ಕೆಳಗೆ ಹೋಗಿ ವಿಶ್ರಾಂತಿಗೆಂದು ಕುಳಿತುಕೊಂಡೆ.
ಇದ್ದಕ್ಕಿದ್ದಂತೆ ಅಶರೀರವಾಣಿ ತೇಲಿ ಬಂತು , ತಿರುಗಿ ನೋಡಿದರೆ ನನ್ನ ಮುದ್ದಿನ ಮಾವಿನ ಮರ ಮಾತನಾಡುತ್ತಿತ್ತು.
ಏನು ಗೆಳೆಯ ಮೂರು ವರ್ಷಗಳ ನಂತರ ನೆನಪಾಯಿದೆ ನಾನು ಎಂದಿತು, ಇಲ್ಲ ಗೆಳತಿ ಜವಾಬ್ದಾರಿಯ ನಡುವೆ ನಿನ್ನನ್ನು ಮರೆತೆ ಎಂದೆ ( ಹತ್ತು ವರ್ಷಗಳ ಹಿಂದೆ ಮಾವಿನ ಹಣ್ಣನ್ನು ತಿಂದು ಸುಮ್ಮನೆ ಬಿಸಾಡಿದ ಮಾವಿನ ಓಟೆ ಇಂದು ಹೆಮ್ಮೆರವಾಗಿ ಬೆಳೆದು ನಿಂತಿದೆ ) ಎಷ್ಟೋ ಹಕ್ಕಿ ಪಕ್ಷಿಗಳಿಗೆ, ಕ್ರಿಮಿ ಕೀಟಗಳಿಗೆ ವಾಸಸ್ಥಾನವಾಗಿದೆ.
ಯಾಕೆ ಗೆಳತಿ ತುಂಬಾ ಬೇಸರವಾಗಿರುವೆ ಎಂದೆ , ಏನು ಹೇಳಲಿ ನನ್ನ ವ್ಯಥೆಯನ್ನು, ಸುಮ್ಮನೆ ತಿರುಗಿ ಎಲ್ಲಾ ಕಡೆ ಕಣ್ಣು ಹಾಯಿಸು, ಸುತ್ತಮುತ್ತ ಯಾವುದೇ ಮರಗಳು ನಿನಗೆ ಕಾಣಸಿಗುವುದಿಲ್ಲ, ಎಲ್ಲವನ್ನೂ ಕಡಿದು ಹಾಕಿ ಜಮೀನನ್ನು ಮಾಡಿದ್ದಾರೆ, ಇಲ್ಲಿ ನನಗೆ ಒಬ್ಬಂಟಿ ಎನಿಸುತ್ತಿದೆ , ನೀನೆ ನೋಡು ಇಲ್ಲಿಯವರೆಗೂ ಡಾಂಬರ್ ರಸ್ತೆಯನ್ನು ಮಾಡಿದ್ದಾರೆ, ನನಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿದ್ದಾರೆ ಎಂದಿತು.
ಹಿಂದೆ ನನ್ನ ಹತ್ತಿರ ಹಲವಾರು ಹಕ್ಕಿ ಪಕ್ಷಿಗಳು ಬರುತ್ತಿದ್ದವು. ಅವುಗಳ ಚುವ್ ಗುಟ್ಟುವ ಓಂಕಾರದಲ್ಲಿ ನನ್ನ ಬೇಸರವನ್ನು ಕಳೆಯುತ್ತಿದ್ದೆ.
ಇಂದು ಪಕ್ಷಿಗಳೇ ಕಾಣೆಯಾಗಿವೆ ವರುಣ ಮುಂಗಾರಿನಲ್ಲಿ ಮಳೆಯನ್ನೇ ಸುರಿಸುತ್ತಿಲ್ಲ , ಅವನಿಗೂ ಬೇಜಾರಾಗಿದೆ ಈ ಮಾನವನ ದುರಾಸೆಯನ್ನು ಕಂಡು. ನನ್ನ ಕಾಲುಗಳು (ಬೇರು) ತೇವವಿಲ್ಲದೆ ಬರಡಾಗಿದೆ. ಕೆರೆಕಟ್ಟೆಗಳು ನೀರಿಲ್ಲದೆ ಬತ್ತುತ್ತಿವೆ , ಹಳ್ಳಿಗಳು ಪಟ್ಟಣವಾಗಿ ಮಾರ್ಪಟ್ಟಿವೆ , ಆಧುನಿಕತೆಯ ದುರಾಸೆಗೆ ಒಳಪಟ್ಟು ಮಾನವ ಎಲ್ಲವನ್ನೂ ನುಂಗುತ್ತಿದ್ದಾನೆ ಎಂದಿತು.
ಸುಮ್ಮನೆ ಯೋಚನೆ ಮಾಡು, ದೊಡ್ಡ ದೊಡ್ಡ ಕಟ್ಟಡಗಳನ್ನು ನೀವು ಸೃಷ್ಟಿಸಬಹುದು , ಆಸ್ಪತ್ರೆಗಳನ್ನು ನಿರ್ಮಿಸಬಹುದು , ಉಪಗ್ರಹಗಳ ಉಡಾವಣೆ ಮಾಡಬಹುದು , ಕೃತಕ ಬುದ್ಧಿಮತ್ತೆಯಿಂದ ಏನೆಲ್ಲಾ ಮಾಡಬಹುದು ನೀವು. ಆದರೆ ನಿಮಗೆ ಮಾಡಲಾಗದ ಕೆಲವೊಂದು ಕಾರ್ಯಗಳನ್ನು ಪ್ರಕೃತಿ ಮಾಡುತ್ತದೆ, ಮರಣವನ್ನು ತಡೆಯಲಾಗುವುದಿಲ್ಲ ಹಾಗೂ ಅದರ ಕಾಲವನ್ನು ನಿರ್ಧರಿಸಲಾಗುವುದಿಲ್ಲ. ಮಳೆಯನ್ನು, ಮಣ್ಣನ್ನು ,ನೀರನ್ನು, ಪ್ರಕೃತಿ ಸೌಂದರ್ಯವನ್ನು, ಖನಿಜಗಳನ್ನು ನೀವು ಸೃಷ್ಟಿ ಮಾಡಲಾಗುವುದಿಲ್ಲ ಎಂದಿತು.
ನನಗೂ ಮನಸ್ಸಿದೆ ಗೆಳೆಯ , ನಿನ್ನ ಜೊತೆ ತುಂಬಾ ಮಾತನಾಡುವ ಆಸೆಯಾಗುತ್ತಿತ್ತು. ಏಕೆಂದರೆ ನಾನು ಇಲ್ಲಿ ಒಬ್ಬಂಟಿ , ಆದರೆ ನೀನು ನನ್ನನ್ನು ಮರೆತೇ ಬಿಟ್ಟಿರುವೆ , ನನ್ನೊಬ್ಬಳನ್ನು ಏಕಾಂಗಿಯಾಗಿ ಬಿಟ್ಟು ನೀನು ದೂರವೇ ಉಳಿದುಬಿಟ್ಟೆ ಎಂದು ಕಣ್ಣೀರನ್ನು ಸುರಿಸಿತು.
ನನಗೂ ತಡೆಯಲಾಗಲಿಲ್ಲ ಹೋಗಿ ಗಟ್ಟಿಯಾಗಿ ತಬ್ಬಿಕೊಂಡೆ, ಸುಯ್ಯನೆ ತಂಗಾಳಿ ಬೀಸಿತು, ತನ್ನ ಪ್ರೀತಿಯನ್ನು ಹೀಗೆ ವ್ಯಕ್ತಪಡಿಸಿತು..!!
ಏನನ್ನೂ ನಿರೀಕ್ಷಿಸದೇ ಎಲ್ಲವನ್ನೂ ನೀಡುವ ಪ್ರಕೃತಿಯನ್ನು ನಾವು ಹಾಳು ಮಾಡುವುದು ಎಷ್ಟು ಸರಿ.?
ನಮ್ಮ ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮ ನಿಮ್ಮೆಲ್ಲರ ಹೊಣೆ..!!
– ಇಂತಿ ನಿಮ್ಮ ಪ್ರೀತಿಯ ಅಪರಿಚಿತ ಮೌನಿ