ಶ್ರೀನಿವಾಸಪುರ/ಚಿಕ್ಕಬಳ್ಳಾಪುರ, ಮಾ.23:ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಚಿನ್ನದ ಮಾಂಗಲ್ಯ ಸರ ಕಳವು ಪ್ರಕರಣವನ್ನು ಭೇದಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಶ್ವಾನದಳದ “ಜಿಮ್ಮಿ” ಎಂಬ ಶ್ವಾನ ಮಹತ್ವದ ಪಾತ್ರವಹಿಸಿದ್ದು, ಅದರ ಹ್ಯಾಂಡ್ಲರ್ ಶ್ರೀ ಅರವಿಂದ್ ಬಿ.ಹೆಚ್. ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಐಪಿಎಸ್ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ಸಂ.62/2026, ಕಲಂ 309(6) ಬಿಎನ್ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಗಮನಾರ್ಹ ಸಾಧನೆ ನಡೆದಿದೆ.
ಮಾ.05ರಂದು ಬೆಳಗಿನ ಜಾವ ಸುಮಾರು 05:30 ಗಂಟೆ ವೇಳೆಗೆ ಹೂವಹಳ್ಳಿ ಗ್ರಾಮದ ರತ್ನಮ್ಮ ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ದೂರಿನ ಪ್ರಕಾರ, ಮಾ.04ರಂದು ರಾತ್ರಿ ಸುಮಾರು 10 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದ ವೇಳೆ, ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಪರಿಚಿತನಾಗಿರಬಹುದಾದ ಒಬ್ಬ ವ್ಯಕ್ತಿ ಮನೆಯ ಉತ್ತರ ಬಾಗಿಲನ್ನು ಬಲವಾಗಿ ತಳ್ಳಿ ಒಳನುಗ್ಗಿದ್ದಾನೆ.
ಆ ಬಳಿಕ ಆತ ಏಕಾಏಕಿ ರತ್ನಮ್ಮ ಅವರ ಬಾಯಿಗೆ ಬಟ್ಟೆ ತುರುಕಿ, “ಕಿರುಚಿದರೆ ಕೊಂದು ಬಿಡುತ್ತೇನೆ” ಎಂದು ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ನಂತರ ಕುತ್ತಿಗೆಯನ್ನು ಬಲವಾಗಿ ಹಿಡಿದು, ಕತ್ತಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಚೈನ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಕಳುವಾದ ಚೈನಿನ ಮೌಲ್ಯ ಸುಮಾರು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ವೇಳೆ ರತ್ನಮ್ಮ ಅವರ ಬಲಗಿವಿಗೆ ರಕ್ತಗಾಯವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಸುಳಿವು ಪತ್ತೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ವಾನದಳವನ್ನು ಘಟನಾ ಸ್ಥಳಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಶ್ವಾನದಳದ ಹ್ಯಾಂಡ್ಲರ್ ಶ್ರೀ ಅರವಿಂದ್ ಬಿ.ಹೆಚ್. (ಎಪಿಸಿ 198, ಡಿ.ಎ.ಆರ್., ಚಿಕ್ಕಬಳ್ಳಾಪುರ) ಅವರು ಕಳುವಾಗಿದ್ದ ಚೈನಿನ ವಾಸನೆಯನ್ನು ಶ್ವಾನ “ಜಿಮ್ಮಿ”ಗೆ ಗ್ರಹಿಸಲು ನೀಡಿದರು.
ವಾಸನೆ ಹಿಡಿದ ‘ಜಿಮ್ಮಿ’ ಶ್ವಾನವು ನೇರವಾಗಿ ಆರೋಪಿತನ ಮನೆವರೆಗೆ ತೆರಳಿ, ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಯಿತು. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವುದಲ್ಲದೆ, ಕಳುವಾಗಿದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು.
ಈ ಅತ್ಯುತ್ತಮ ಕಾರ್ಯ, ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ, ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಐಪಿಎಸ್ ಅವರು ಹ್ಯಾಂಡ್ಲರ್ ಅರವಿಂದ್ ಬಿ.ಹೆಚ್. ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಪ್ರಶಂಸನಾ ಪತ್ರದಲ್ಲಿ, “ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮುಂದುವರೆಸಿಕೊಂಡು ಹೋಗುವಿರೆಂದು ಆಶಿಸುತ್ತಾ ಈ ಪ್ರಶಂಸನಾ ಪತ್ರವನ್ನು ನೀಡಲಾಗಿದೆ” ಎಂದು ಉಲ್ಲೇಖಿಸಲಾಗಿದೆ.
ಈ ವೇಳೆ ASP ಸರ್ ಜಗನ್ನಾಥ್ ರೈ ಮತ್ತು DAR DYSP ನಾಗೇಂದ್ರ ಪ್ರಸಾದ್ ರವರು ಅಭಿನಂದಿಸಿದರು.
ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಶ್ವಾನದಳದ ಸೇವೆಯ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ.
