ಹೊಳೆನರಸೀಪುರ: ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ತಾಲೂಕು ಆಡಳಿತದ ಆಶ್ರಯದಲ್ಲಿ ಹಾಗೂ ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಟ್ರಸ್ಟ್ ಸಹಯೋಗದೊಂದಿಗೆ ಏಪ್ರಿಲ್ 14ರಂದು ವೈಭವಯುತವಾಗಿ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಎಚ್. ವೈ. ಚಂದ್ರಶೇಖರ್ ಮಾತನಾಡಿ, ಸಾವಿರಾರು ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ ಅಧ್ಯಕ್ಷ ತಾರೇಶ ಮಾತನಾಡಿ, “ಬಾಬಾಸಾಹೇಬರು ವಿಶ್ವದ ಅದ್ಭುತ ಚಿಂತಕ. ಅವರ ಜನ್ಮದಿನವನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಆಚರಿಸಬೇಕು” ಎಂದು ಕರೆ ನೀಡಿದರು.
ಟ್ರಸ್ಟ್ ಉಪಾಧ್ಯಕ್ಷ ಎಚ್.ಟಿ. ಲಕ್ಷ್ಮಣ ಮಾಹಿತಿ ನೀಡಿದ್ದು, ಕಳೆದ ವರ್ಷದಿಂದ ತಾಲೂಕು ಆಡಳಿತದೊಂದಿಗೆ ಸಹಯೋಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಜೊತೆಗೆ ಸಂಕಷ್ಟದಲ್ಲಿರುವ ಬಡವರು, ಅನಾರೋಗ್ಯ ಪೀಡಿತರ ನೆರವಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೆರವಣಿಗೆಗೆ ಸಾಂಸ್ಕೃತಿಕ ಮೆರುಗು
ನಾಳೆ ನಡೆಯುವ ಮೆರವಣಿಗೆಯಲ್ಲಿ ಮಂಗಳೂರಿನಿಂದ ಆಗಮಿಸುವ 15ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಲಿದ್ದು, ವಿವಿಧ ರೀತಿಯ ಕಲಾ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಆಕರ್ಷಣೆಯಾಗಲಿವೆ. ಬಾಬಾಸಾಹೇಬರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ಪಟ್ಟಣದ ಪ್ರಮುಖ ವೃತ್ತಗಳು ಈಗಾಗಲೇ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು, ಭಗವಾನ್ ಬುದ್ಧ ಹಾಗೂ ಜಗಜ್ಯೋತಿ ಬಸವೇಶ್ವರ ಅವರ ಭಾವಚಿತ್ರಗಳು ಬೆಳಕಿನಲ್ಲಿ ರಾರಾಜಿಸುತ್ತಿವೆ.
ವಿದ್ಯಾರ್ಥಿಗಳಿಗೆ ಸನ್ಮಾನ
ಮೆರವಣಿಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಡಾ. ಅಂಬೇಡ್ಕರ್ ಭವನದವರೆಗೆ ಸಾಗಲಿದೆ. ನಂತರ ಸಭಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳನ್ನು ಹಾಗೂ ತಾಲೂಕು ಮಟ್ಟದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಪುರಸಭೆ ಮಾಜಿ ಸದಸ್ಯರಾದ ಎಚ್.ಎನ್. ರಾಘವೇಂದ್ರ, ಎಚ್.ಡಿ. ಉಮೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
