
ಹಿಂದೂ ರಾಷ್ಟ್ರದ ಸಂವಿಧಾನದ ಚರ್ಚೆ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯೆ
ಬೆಂಗಳೂರು: ಬಹುಭಾಷಾ ನಟ ಕಿಶೋರ್ ತಮ್ಮ ವಿಚಾರಧಾರೆಗಳಿಂದಲೂ ಗಮನ ಸೆಳೆಯುತ್ತಾರೆ. ಕೇಂದ್ರ ಸರ್ಕಾರ, ಬಿಜೆಪಿ ಪಕ್ಷದ ವಿರುದ್ಧ ಕೂಡ ಹೇಳಿಕೆಗಳನ್ನು ಕೊಟ್ಟಿದ್ದಾರೆ. ದೇಶದ ಆಗುಹೋಗುಗಳ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲ ಹಿಂದೂಪರ ಸಂಘಟನೆಗಳು, ಬಿಜೆಪಿ ಹಾಗೂ ಆರ್ಎಸ್ಎಸ್ ನಡೆಯನ್ನು ಟೀಕಿಸುತ್ತಿರುತ್ತಾರೆ.
ಸದ್ಯ ಕಿಶೋರ್ ಹಿಂದೂ ರಾಷ್ಟ್ರದ ಸಂವಿಧಾನದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಿಶೋರ್ ನಟನೆಯ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ ಸುದ್ದಿಗೋಷ್ಠಿಗಳಲ್ಲಿ ಕಿಶೋರ್ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಹಿಂದೂ ರಾಷ್ಟ್ರದ ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ” ಎಂದು ಅವರು ಹೇಳಿರುವುದು ವೈರಲ್ ಆಗುತ್ತಿದೆ.
ಹಿಂದೂ ರಾಷ್ಟ್ರಕ್ಕೆ ಪ್ರತ್ಯೇಕ ಸಂವಿಧಾನ ರಚನೆಗೆ ರಹಸ್ಯವಾಗಿ ಸಿದ್ಧತೆ ನಡೀಯುತ್ತದೆ ಎನ್ನಲಾಗ್ತಿದೆ. ಈಗಾಗಲೇ 501 ಪುಟಗಳ ಸಂವಿಧಾನ ಸಿದ್ಧವಾಗಿದ್ದು ಶೀಘ್ರದಲ್ಲೇ ಹೊರಬರುತ್ತದೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕಿಶೋರ್ ಮಾತನಾಡಿ “ಇವರೆಲ್ಲಾ ಮನುವಾದವನ್ನು ಬೆಂಬಲಿಸಿಕೊಂಡೇ ಬಂದವರು. ಹಿಂದು ರಾಷ್ಟ್ರ ಮಾಡ್ತಾರೆ. ಮುಂದೇನು? ಮುಸ್ಲಿಂಮರು ಎರಡನೇ ದರ್ಜೆ ನಾಗರೀಕರು ಆಗ್ತಾರೆ. ಆಗ ಅವ್ರ ವಿರುದ್ಧ ಹೊಡೆದಾಡ್ಕೊಂಡೇ ಬಿದ್ದಿರ್ಬೇಕು ನೀವು. ಮುಂದೆ ದಂಗೆ ಏಳುವವರಿಗೆ, ಮಸೀದಿ ಮುಂದೆ ಡಿಜೆ ಹಾಕಿಕೊಂಡು ಕುಣಿಯುವವರಿಗೆ ಮಾತ್ರ ಕೆಲಸ ಇರುತ್ತೆ” ಎಂದಿದ್ದಾರೆ
ಸಂವಿಧಾನ ಬದಲಾವಣೆಯಿಂದ ಏನಾಗುತ್ತದೆ. ಏನೂ ಸಾಧ್ಯವಿಲ್ಲ. ಮನುಸ್ಮೃತಿಯಲ್ಲಿ ಏನಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ. ಯುಸಿಸಿ ಅಂತ ಇತ್ತು ಅಲ್ವಾ? ಇದು ಅದೇ ರೀತಿ ಆಗುತ್ತದೆ. ಇದು ಜನರ ದಿಕ್ಕು ತಪ್ಪಿಸುವ ಕೆಲಸ, ಅದು ಬಿಟ್ಟು ಬೇರೇನು ಇಲ್ಲ. ಇವರಪ್ಪ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕಾರಣ ಭಾರತದ ಜನರ ಪ್ರಜ್ಞೆ ಅಷ್ಟು ಹಾಳಾಗಿಲ್ಲ, ಇವರು ಏನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದರೂ ಅದು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಯಾವುದು ಜಾಸ್ತಿ ದಿನ ನಿಲ್ಲಲ್ಲ” ಎಂದು ನಟ ಕಿಶೋರ್ ತಿಳಿಸಿದ್ದಾರೆ.