ವಾಷಿಂಗ್ಟನ್: ಕೆರಿಬಿಯನ್ನ ಪ್ರಸಿದ್ಧ ಮಾದಕವಸ್ತು ಕಳ್ಳಸಾಗಣೆ ಮಾರ್ಗದಲ್ಲಿ ಅಮೆರಿಕದ ತೀರಗಳ ಕಡೆಗೆ ಸಾಗುತ್ತಿದ್ದ ಶಂಕಿತ ಮಾದಕವಸ್ತು ಸಾಗಿಸುವ ಜಲಾಂತರ್ಗಾಮಿ ನೌಕೆಯನ್ನು ಅಮೆರಿಕ ಸೇನೆ ನಾಶಪಡಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.
“ಪ್ರಸಿದ್ಧ ಮಾದಕವಸ್ತು ಕಳ್ಳಸಾಗಣೆ ಸಾರಿಗೆ ಮಾರ್ಗದಲ್ಲಿ ಯುನೈಟೆಡ್ ಸ್ಟೇಟ್ಸ್ ಕಡೆಗೆ ಸಾಗುತ್ತಿದ್ದ ಅತಿ ದೊಡ್ಡ ಮಾದಕವಸ್ತು ಸಾಗಿಸುವ ಸಬ್ ಮರೈನ್ನನ್ನು ನಾಶಪಡಿಸುವುದು ನನಗೆ ತುಂಬಾ ಗೌರವ ತಂದಿದೆ” ಎಂದು ಟ್ರಂಪ್ ಶನಿವಾರ (ಅ.18) ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಹಡಗಿನಲ್ಲಿ ಹೆಚ್ಚಾಗಿ ಫೆಂಟನಿಲ್ ಮತ್ತು ಇತರ ಅಕ್ರಮ ಮಾದಕ ದ್ರವ್ಯಗಳು ತುಂಬಿದ್ದವು ಎಂದು ಯುಎಸ್ ಗುಪ್ತಚರ ಇಲಾಖೆ ದೃಢಪಡಿಸಿದೆ.
ಜಲಾಂತರ್ಗಾಮಿಯಿಂದ ಉಂಟಾಗುವ ಮಾರಕ ಬೆದರಿಕೆಯ ಬಗ್ಗೆ ಟ್ರಂಪ್ ಎಚ್ಚರಿಸುತ್ತಾ, “ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ನಾನು ಈ ಜಲಾಂತರ್ಗಾಮಿಯನ್ನು ದಡಕ್ಕೆ ಬರಲು ಬಿಟ್ಟರೆ ಕನಿಷ್ಠ 25,000 ಅಮೆರಿಕನ್ನರು ಸಾಯುತ್ತಾರೆ. ಬದುಕುಳಿದ ಇಬ್ಬರು ಭಯೋತ್ಪಾದಕರನ್ನು ಬಂಧನ ಮತ್ತು ವಿಚಾರಣೆಗಾಗಿ ಅವರ ಮೂಲ ದೇಶಗಳಾದ ಈಕ್ವೆಡಾರ್ ಮತ್ತು ಕೊಲಂಬಿಯಾಕ್ಕೆ ಹಿಂತಿರುಗಿಸಲಾಗುತ್ತಿದೆ” ಎಂದು ಹೇಳಿದರು.
“ಈ ದಾಳಿಯಲ್ಲಿ ಯಾವುದೇ ಅಮೇರಿಕನ್ ಪಡೆಗಳಿಗೆ ಹಾನಿಯಾಗಿಲ್ಲ. ನನ್ನ ಕಣ್ಗಾವಲಿನಲ್ಲಿ ಅಮೆರಿಕದೊಳಗೆ ಭೂಮಿ ಅಥವಾ ಸಮುದ್ರದ ಮೂಲಕ ಅಕ್ರಮ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವುದನ್ನು ಸಹಿಸುವುದಿಲ್ಲ” ಎಂದು ಟ್ರಂಪ್ ಹೇಳಿದರು.
