ಬೆಂಗಳೂರು, ಮೇ 28: ಬೆಂಗಳೂರು ಪೊಲೀಸರು ಡ್ರಗ್ಸ್ (Drugs) ಮಾರಾಟ ಮತ್ತು ಸೇವನೆ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್ ಮುಕ್ತ ಬೆಂಗಳೂರು ಮಾಡಲು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಮೃತಹಳ್ಳಿ ಭಾಗದಲ್ಲಿ ಎಂಡಿಎಂಎ ಕ್ರಿಸ್ಟಲ್, ಗಾಂಜಾ ಮಾರುತ್ತಿದ್ದ ನೈಜೀರಿಯಾ ಮೂಲದ ಪ್ರಜೆ ಪೆಪೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ಬಳಿ ಇದ್ದ 3 ಕೋಟಿ ಮೌಲ್ಯದ 3 ಕೆಜಿ ಡ್ರಗ್ಸ್ ಮತ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಡ್ರಗ್ಸ್ ಜಾಲ ಸಂಪೂರ್ಣವಾಗಿ ನಿರ್ನಾಮ ಮಾಡಲು ಪಣ: ಪರಮೇಶ್ವರ್
ಬೆಂಗಳೂರಿನಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಿದ್ದೇವೆ. ಇನ್ನೂ ಅನೇಕ ಕಡೆ ಡ್ರಗ್ಸ್ ಸಿಗುತ್ತಿದೆ. ಈ ಬಗ್ಗೆ ಮಾಹಿತಿ ಇದೆ. ಡ್ರಗ್ಸ್ ಮಾರಾಟ ಸಂಬಂಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಇನ್ಸ್ಪೆಕ್ಟರ್ಗಳು ಜವಾಬ್ದಾರಿಯಾಗಿರುತ್ತಾರೆ. ಡ್ರಗ್ಸ್ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಕೆಲವು ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು.
11 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಯುವಕ ಅರೆಸ್ಟ್
11.6ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮೂಲದ 23 ವರ್ಷದ ಯುವಕನನ್ನು ಗೋವಾ ಪೊಲೀಸರು ಬಂಧಿಸಿದ್ದರು. ಯುವಕನ ಬಳಿ ಇದ್ದ 11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದರು ಎಂದು ವರದಿಯಾಗಿತ್ತು. ಯುವಕ ನೇಪಾಳದಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದನು. ಈತನ ಚಲನವಲನದ ಮೇಲೆ ರಾಜ್ಯ ಗುಪ್ತಚರ ಇಲಾಖೆ ಕಳೆದೊಂದು ತಿಂಗಳಿನಿಂದ ನಿಗಾ ಇಟ್ಟಿತ್ತು. ಮಾದಕ ದ್ಯವ್ಯ ತೆಗೆದುಕೊಂಡು ಗೋವಾಕ್ಕೆ ಬಂದಿದ್ದ ಯುವಕನ ಬಗ್ಗೆ ರಾಜ್ಯ ಗುಪ್ತರಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧರಿಸಿ, ಗುಯಿರಿಮ್ನಲ್ಲಿ ಯುವಕನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು.
