ಗಾಂಧಿನಗರ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ)ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ 1,800 ಕೋಟಿ ರೂ. ಮೌಲ್ಯದ 300 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಡ್ರಗ್ಸ್ ಸಾಗಾಣೆದಾರರಿಂದ ಭಾರೀ ಪ್ರಮಾಣದ ಸರಕು ಪತ್ತೆಯಾಗಿದೆ, ಆದರೆ ಕಳ್ಳಸಾಗಣೆದಾರರು ತಪ್ಪಿಸಿಕೊಳ್ಳಲು ಪಾಕಿಸ್ತಾನ ಜಲ ಪ್ರದೇಶಕ್ಕೆ ಪರಾರಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಡ್ರಗ್ ಮುಕ್ತ ಭಾರತ ನಿರ್ಮಾಣ ಮಾಡುವ ದೃಷ್ಟಿಯಿಂದ ದೇಶಾದ್ಯಂತ ಕರೆ ನೀಡಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಡ್ರಗ್ ದಂಧೆಯನ್ನು ಭೇದಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಕಳೆದ ವಾರ ಅಸ್ಸಾಂನಲ್ಲಿ 24.32 ಕೋಟಿ ಮೌಲ್ಯದ 30.4 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗೆ ಕರೆ ನೀಡಿದ್ದರು. ಕೇಂದ್ರ ಸರ್ಕಾರದ ಪ್ರಕಾರ 2024ರ ವರ್ಷದಲ್ಲಿ ದೇಶಾದ್ಯಂತ ವಿವಿಧ ಎನ್ಸಿಬಿ ಮತ್ತು ಪೊಲೀಸ್ ಪಡೆಗಳು 16,914 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿವೆ.
ಇನ್ನೂ 2004 ರಿಂದ 2014ರ ವರೆಗೆ 3.63 ಲಕ್ಷ ಕೆಜಿಯಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ 2014 ರಿಂದ 2024ವರೆಗಿನ ಅವಧಿಯಲ್ಲಿ 24 ಲಕ್ಷ ಕೆಜಿ ಅಂದ್ರೆ ಹಿಂದಿನ ಸರ್ಕಾರದ ಅವಧಿಗಿಂತ 7 ಪಟ್ಟು ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
