ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಂಡಾಣು ಮಾರಾಟದ ಅಕ್ರಮ ಜಾಲ ಪತ್ತೆಯಾಗಿರುವ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಐವಿಎಫ್ ಕೇಂದ್ರಗಳು ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಬಡ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಹಣದ ಆಮಿಷ ಒಡ್ಡಿ ಅಂಡಾಣು ಹೊರತೆಗೆಯಲಾಗುತ್ತಿದೆ ಎಂಬ ಆರೋಪ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದ ಪ್ರಕರಣದ ಬಳಿಕ ಕರ್ನಾಟಕದಲ್ಲೂ ಎಚ್ಚರಿಕೆ ವಹಿಸಲಾಗಿದೆ. ಅಂಡಾಣು ಮಾರಾಟ ಜಾಲದ ಕುರಿತು ಹೆಚ್ಚಿನ ಮಾಹಿತಿಗಾಗಿ ಮಹಾರಾಷ್ಟ್ರ ಆರೋಗ್ಯ ಇಲಾಖೆಯೊಂದಿಗೆ ರಾಜ್ಯ ಅಧಿಕಾರಿಗಳು ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕೆಲವು ಆಸ್ಪತ್ರೆಗಳ ಜೊತೆಗೆ ತೆಲಂಗಾಣ, ಮಹಾರಾಷ್ಟ್ರದ ನಾಗಪುರ, ಪುಣೆ ಹಾಗೂ ನಾಸಿಕ ಪ್ರದೇಶಗಳವರೆಗೂ ಈ ಜಾಲ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ. ಕಾನೂನುಬಾಹಿರವಾಗಿ ಅಂಡಾಣು ಹೊರತೆಗೆಯಲಾಗುತ್ತಿದ್ದು, ಮಹಿಳೆಯರ ಆರೋಗ್ಯಕ್ಕೂ ಗಂಭೀರ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮಗ್ರ ತನಿಖೆಗೆ ಸೂಚನೆ ನೀಡಿದ್ದಾರೆ. ಸಂಬಂಧಿಸಿದ ಆಸ್ಪತ್ರೆಗಳು ಹಾಗೂ ವೈದ್ಯರ ಮಾಹಿತಿ ಸಂಗ್ರಹಿಸುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿದ್ದಲ್ಲಿ ಗೃಹ ಇಲಾಖೆಯಿಂದಲೂ ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದ್ದು, ಐವಿಎಫ್ ಕೇಂದ್ರಗಳ ಮೇಲ್ವಿಚಾರಣೆ ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ.
